ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತ್ತು,
ಆಚಾರವೆಂಬ ಕಾಯಾಯಿತ್ತು. ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ!
ಬಸವಣ್ಣನವರ ವಚನಗಳಲ್ಲಿ #ಶಬ್ಧಾಲಂಕಾರ ಗಳಯ ಕಂಡುಬರುತ್ತವೆ ಆದರೂ.. ಬಸವಣ್ಣ #ಅರ್ಥಾಲಂಕಾರ ಗಳನ್ನು ಬಳಸುವುದರಲ್ಲಿ ಎತ್ತಿದ ಕೈ. ಉಪಮೆ / ರೂಪಕ/ ಹೋಲಿಕೆಗಳನ್ನು ಕಟ್ಟಿಕೊಡುವುದರಲ್ಲಿ #ಬಸವಣ್ಣ ನಿಗೆ ಸಾಟಿಯಿಲ್ಲ. ಬಸವಣ್ಣನ ಹೆಚ್ವಿನ ಎಲ್ಲಾ analogies ಬರುವುದು ಜನಸಾಮಾನ್ಯರ ಬದುಕಿನ ನಡುವಿನಿಂದ... ಕಲ್ಪನೆಯ ಪುರಾಣಗಳಿಂದಲ್ಲ! ವಾಸ್ತವಿಕ ನೆಲಗಟ್ಟಿನಲ್ಲಿ ಧರ್ಮವನ್ನು ಕಟ್ಟಿದವ ಬಸವಣ್ಣ.
ಬಸವಣ್ಣನವರು ಭಕ್ತಿಯನ್ನು ಅಲ್ಲಲ್ಲಿ ಹಲವು ವಿಶಯಗಳಿಗೆ ಹೋಲಿಸಿದ್ದಾರೆ.
೧. ಭಕ್ತಿಯೆಂಬ #ಪಂಜರ ದೊಳಗಿಕ್ಕಿ ಸಲಹು
೨. ಭಕ್ತಿಯೆಂಬ #ಭಾಂಡ ಕ್ಕೆ ಜಂಗಮವೇ ಸುಂಕಿಗ,
೩. ಭಕ್ತಿಯೆಂಬ #ನಿಧಾನ ವ ಸಾಧಿಸುವರೆ ಶಿವಪ್ರೇಮವೆಂಬಂಜನವ ನೆಚ್ಚಿಕೊಂಬುದು
೪. ಭಕ್ತಿಯೆಂಬ #ಒಡವೆ ಯ ದಿಟಮಾಡಿ ತೋರಿದರು ಕಾಣಾ
೫. ಭಕ್ತಿಯೆಂಬ #ಮೃಗ ವೆನ್ನನಟ್ಟಿ ಬಂದು ನುಂಗಿತ್ತಯ್ಯಾ!
೬.ಭಕ್ತಿಯೆಂಬ #ಪಿತ್ತ ತಲೆಗೇರಿ ಕೈಲಾಸದ ಬಟ್ಟೆಯ ಹತ್ತುವ ವ್ಯರ್ಥರ ಕಂಡು ಎನ್ನ ಮನ ನಾಚಿತ್ತು, ನಾಚಿತ್ತು.
೭.ಭಕ್ತಿಯೆಂಬುದು ಅನಿಯಮ ನೋಡಯ್ಯಾ, ಅದು #ವಿಷದಕೊಡ;
ಈ ವಚನದಲ್ಲಿ ನೆಲದಲ್ಲಿ ಬೀಜವು ಚಿಗುರಿ ಆರೈಕೆಗೊಂಡು ಹಣ್ಣಾಗಿ ಒಡೆಯನನ್ನು ಸೇರುವ ರೂಪಕವನ್ನು - ಒಬ್ಬ ಮನುಜನು ಭಕ್ತಿಯೆಂಬ ನೆಲಗಟ್ಟಿನಲಿ ಸೆಳೆಗೊಂಡು ಲಿಂಗ ವಿಚಾರಗಳನ್ನು ಧರಿಸಿ ಆಚಾರವನ್ನು ಕೊಟ್ಟು ಮುಂದೆ ಸಾಧನೆಯಿಂದ ನಿಷ್ಪತ್ತಿ ಯಾಗಿ ಲಿಂಗೈಕ್ಯವಾಗುವದಕ್ಕೆ ಹೋಲಿಸಿಲಾಗಿದೆ.
ಪೃಥ್ವಿ ಮತ್ತು ಭಕ್ತಿಗಳ ನಡುವೆ ಹೋಲಿಕೆ ತರಲಾಗಿದೆ.
ಭಕ್ತಿ = ನೆಲ /ಪೃಥ್ವಿ
ಗುರು = ಚಿಗುರಿದ ಬೀಜ
ಲಿಂಗ = ಎಲೆ
ವಿಚಾರ = ಹೂವು
ಆಚಾರ = ಕಾಯಿ
ನಿಷ್ಪತ್ತಿ = ಹಣ್ಣು
ಕೂಡಲಸಂಗಯ್ಯ = ಹಣ್ಣಿನ ಒಡೆಯ
ನೆಲವೇ ಬೀಜಕ್ಕೆ (ಬೆಳೆದು ದೊಡ್ಡದಾಗಿ ಫಲ ನೀಡಲು) ಆಧಾರ. ಮನುಜನ ಭಕ್ತಿಯೇ ಅವನ ಮುಕ್ತಿಗೆ ಆಧಾರ.
ಮನುಜ ಸಂಗಯ್ಯನ ಭಕ್ತಿಯಲ್ಲಿ ತಲ್ಲೀನನಾಗಲು ಅಲ್ಲೊಬ್ಬ ಗುರುವು ಅಂಕುರಿಸುವನು. ಬೀಜಕ್ಕೆ ಮೊಳಕೆ ಬರುವಂತೆ, ಬೀಜ ಚಿಗುರುವಂತೆ. "ತನ್ನ ತಾನರಿದಡೆ ತನ್ನರಿವೇ ಗುರು" ಎಂಬ ಮಹಾವಾಕ್ಯದಂತೆ ಈ ಗುರು ತನ್ನರಿವೇ!
ಬೀಜ ಮೊಳಕೆವೊಡೆದ ಮೇಲೆ ಬೆಳೆದು ಎಲೆ ಹೂವುಗಳನ್ನು ಬಿಡುವುದು. ಭಕ್ತನೂ ತನ್ನರಿವಿನ ಗುರು ಅಂಕುರಗೊಂಡು ಲಿಂಗ ಮತ್ತು ವಿಚಾರಗಳು (ಕ್ರಿಯೆ ಮತ್ತು ಜ್ಞಾನಗಳು) ಮೂಡಿಬರುವವು. ವಿಚಾರಗಳು ಒಳಗಿನಿಂದಲೇ ಮೂಡಿಬರುವವು. ಲಿಂಗವೂ ಒಳಗಿಂದಲೇ ಬರುವುದು! (ನಿರ್ಮಲನಾದ ಶಿಷ್ಯನ ಉತ್ತಮಾಂಗದಲ್ಲಿಹ ಪರಮಚಿತ್ಕಳೆಯನು ಹಸ್ತಮಸ್ತಕಸಂಯೋಗದ ಬೆಡಗಿನಿಂದ ತೆಗೆದು, ಆ ಮಹಾಪರಮ ಕಳೆಯನು ಸ್ಥಲದಲ್ಲಿ ಕೂಡಿ,
ಮಹಾಲಿಂಗವೆಂದು ನಾಮಕರಣಮಂ ಮಾಡಿ).
ಇವೇ ಮುಂದೆ ಹೊರಗಿನ ಪ್ರಪಂಚಕ್ಕೆ ಕಾಣುವ ದಾರಿದೀಪವಾಗಬಲ್ಲ ಆಚಾರ / ಕಾಯಿ ಆಯಿತು. ತಾನು ನಡೆದ ದಾರಿಯೂ ಆಯಿತು.
ಗಿಡದ ಬೆಳವಣಿಗೆ / ಶರಣನ ಸಾಧನೆಯು ಮುಂದುವರೆದಂತೆ ಅಲ್ಲಿ ನಿಷ್ಪತ್ತಿ ಎಂಬ ಹಣ್ಣು ಮೂಡಿತು. ಇಲ್ಲಿ ಆಧ್ಯಾತ್ಮ /ಸಾಧನೆಯ ಫಲ ನಿಷ್ಪತ್ತಿ ಗೂ, ಗಿಡ ಅರೈಕೆಗೊಂಡು ಬೆಳೆದದ್ದರ ಫಲ ಹಣ್ಣು ಗೂ ಅಬೇಧವಿದೆ. ಉತ್ಪತ್ತಿ ಎಂದರೆ 'ಮೇಲೆ" ಹುಟ್ಟಿಬರುವುದು. ಈ ನೋಟದಿಂದ ನಿಃಪತ್ತಿ ( = ನಿಷ್ಪತ್ತಿ) ಎಂದರೆ ಹುಟ್ಟು ಇಲ್ಲದಂತಾಗುವುದು ಎಂದು ನಾನು ಅರ್ಥ ಮಾಡಿಕೊಳ್ಳುವೆ. ಹಣ್ಣು ಗಿಡದಲ್ಲೇ ಮಾಗಿ ತಾನಾಗೇ ತೊಟ್ಟುಕಳಚುವ ತರದಿ, ಶರಣನೂ ಸಾಧನೈದು ಹಣ್ಣಾಗಿ / ನಿಷ್ಪತ್ತಿ ಹಂತವನ್ನು ತಲುಪಿ ಜನನಮರಣಗಳ ಸರಪಳಿಯಿಂದ ತೊಟ್ಟು ಕಳಚುಕೊಂಡು ಬೀಳುವ ಹಂತ ತಲುಪಿದಾಗ... ಕೂಡಲಸಂಗಯ್ಯ - ಇಂತ ಮಾಗಿದ ಹಣ್ಣು / ನಿಷ್ಪತ್ತಿ ಹಂತ ತಲುಪಿದ ಶರಣ - ತನಗೆ ಬೇಕೆಂದು ಎತ್ತಿಕೊಳ್ಳವನು. ಈ ಎತ್ತಿಕೊಳ್ಳುವುದು ಲಿಂಗೈಕ್ಯದ / ಬಯಲಿನ ರೂಪಕ.