ಶನಿವಾರ, ಫೆಬ್ರವರಿ 15, 2025

ಶರಣರಿಗೆ ಶರಣು ಮಾಡಿದುದಕ್ಕಾವುದು ಸಾಟಿ?

ಅಯ್ಯಾ! 
ಒಂದು ಕೋಟಿ ವರುಷ ತಲೆ ಕೆಳಗಾಗಿ ತಪವ ಮಾಡಿದಕಿಂದಲು 
ಒಂದು ದಿನ ಶಿವಭಕ್ತರಲ್ಲಿ ನಿರಹಂಕಾರವಾಗಿರ್ದಡೆ ಸಾಕು ನೋಡಾ. 
ಒಂದು ಕೋಟಿ ವರುಷ ಊರ್ಧ್ವಮುಖವಾಗಿ ಸೂರ್ಯನ ನೋಡಿದ ಫಲವು 
ಒಂದು ದಿನ ಸದಾಚಾರ ಸದ್ಧರ್ಮರಪ್ಪ ಶಿವಭಕ್ತರ ನೋಡಿದುದಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು 
ಒಂದು ದಿನ ಶರಣರಿಗೆ ಶರಣು ಮಾಡಿದುದಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಅರವತ್ತಾರು ಕೋಟಿ ನದಿಗಳ ಮಿಂದು ಮುಡಿಯಿಟ್ಟ ಫಲವು, 
ಒಂದು ದಿನ ಸದ್ಭಕ್ತ ಜಂಗಮ ಶರಣಗಣ ತೀರ್ಥಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಚಾಂದ್ರಾಯಣವ್ರತ ಮೊದಲಾದ ಸರ್ವವ್ರತಂಗಳ ನಡಸಿದ ಫಲವು 
ಒಂದು ದಿನ ಗುರು - ಲಿಂಗ - ಜಂಗಮ - ಪ್ರಸಾದಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ವೇದಾಗಮ ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು 
ಒಂದು ದಿನ ಶಿವಭಕ್ತಶರಣರ ಸಂಭಾಷಣಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಮಹಾಯೋಗವ ಮಾಡಿದ ಫಲವು 
ಒಂದು ದಿನ ಶ್ರೀಗುರು ಲಿಂಗ ಜಂಗಮ ಧ್ಯಾನಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಷೋಡಶ ಮಹಾದಾನಂಗಳ ಮಾಡಿದ ಫಲವು 
ಒಂದು ದಿನ ಸದ್ಧರ್ಮಿ ಶಿವಯೋಗಿಗೆ ನೀಡಿದ ತೃಪ್ತಿಯ ಮಾಡಿದುದಕ್ಕೆ ಸರಿಯಲ್ಲ ನೋಡಾ. 
ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ ಸರಿಯಲ್ಲ ನೋಡಾ. 
ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು 
ಒಂದು ವೇಳೆ ಗುರು-ಲಿಂಗ-ಜಂಗಮಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ ಸನ್ನಿಧಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ. 
ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರಾ].
-ಅಲ್ಲಮಪ್ರಭು

ಬುಧವಾರ, ಫೆಬ್ರವರಿ 12, 2025

ಇಷ್ಟಲಿಂಗದ ಅವಶ್ಯಕತೆ

ಇಷ್ಟಲಿಂಗ ಎಂಬುದು ಯಾವುದೋ ದೊಡ್ಡ ದೇವರೋ ರುದ್ರನೋ ಶಂಕರನೋ ಅಲ್ಲ!! ಅದೊಂದು ಕುರುಹು / symbol ಅಷ್ಟೇ... ಸಾಧನೆಗೆ ಬಳಸುವ ಸಾಧನ!
ಪುಸ್ತಕವೇ ಬೇರೆ, ಪುಸ್ತಕದಿಂದ ಸಿಗುವ ಜ್ಞಾನವೇ ಬೇರೆ. ಮೊಬೈಲೇ ಬೇರೆ, ಮೊಬೈಲ್ ಬಳಸಿ ದೂರದವರೊಡನೆ ಮಾತಾಡುವುದೇ ಬೇರೆ!! ಸಾಧನವೇ ಬೇರೆ, ಸಾಧ್ಯವೇ ಬೇರೆ.
ಸಾಧನ = ಇಷ್ಟಲಿಂಗ
ಸಾಧಕ = ಶಿವಪೂಜೆ / ಶಿವಯೋಗ ಮಾಡುವವನು.
ಸಾಧನೆ = ಶಿವಯೋಗ / ಲಿಂಗಾಂಗಯೋಗ
ಸಾಧ್ಯ = ಬಯಲು / ಐಕ್ಯ

೧. ಏಕೆ ಇಷ್ಟಲಿಂಗ ಬೇಕು?
ಉತ್ತರ:: 
ಅರಿಯದ ಕಾರಣ ಕುರುಹುವಿಡಿವೆನಲ್ಲದೆ ಅರಿದ ಬಳಿಕ ಇನ್ನೇನೊ?
ಬಿಟ್ಟಡೆ ಸಮಯ ವಿರೋಧ, ಬಿಡದಿದ್ದರೆ ಜ್ಞಾನ ವಿರೋಧ.
ಗುಹೇಶ್ವರಲಿಂಗವು ಉಭಯದಳದ ಮೇಲೈದಾನೆ ಕಾಣಾ ಸಿದ್ಧರಾಮಯ್ಯಾ.
---- ಅಲ್ಲಮಪ್ರಭುಗಳು. 

2. ಉಭಯದಳಕ್ಕೂ ಹೊಂದುವುದು ಯಾವುದು? 
ಉತ್ತರ: 
ಇಷ್ಟಲಿಂಗದ ಆಕಾರ / ಅಂದ / ರೂಪ / ನಿರ್ಮಾಣ ವನ್ನು ಗಮನಿಸಿದರೆ -- 
√ ಆಕಡೆ ಸಾಕಾರವೂ ಅಲ್ಲ.... ಈ ಕಡೆ ನಿರಾಕಾರವೂ ಅಲ್ಲ!! ಎರಡರ ನಡುವಿನದ್ದು! 
√ ಕಡೆ ಮೂರ್ತಿ ಅಂತಾನೂ ಹೇಳಕ್ಕೆ ಆಗಲ್ಲ... ಈ ಕಡೆ ಮೂರ್ತಿ ಅಲ್ಲ ಅಂತಾನೂ ಹೇಳಕ್ಕೆ ಆಗಲ್ಲ!!

3. ಈ ಆದ್ಯಾತ್ಮ ಸಾಧನೆಯನ್ನು ಬೇರೆಯವರ ಕೈಯಲ್ಲಿ ನಾವ್ಯಾಕೆ ಮಾಡಿಸಬಾರದು? ಮಾಡಿಸಬಹುದಲ್ವಾ?
ಉತ್ತರ:
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನು ತಾ ಮಾಡಬೇಕಲ್ಲದೆ,
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ?
-ಬಸವಣ್ಣ

4. ಇಷ್ಟಲಿಂಗ ಪೂಜೆಯ ಗುರಿ ಏನು?
ಉತ್ತರ : ಕುರುಹು ಅಳಿಯುವುದು!! ಅರಿವ ಅರಿವುದು! 

ಕುರುಹಳಿದು ಕುರುಹನರಿಯ ಬಲ್ಲಡೆ
ಗುಹೇಶ್ವರಲಿಂಗದಲ್ಲಿ ಉಭಯಗೆಟ್ಟಲ್ಲದೆ ಪ್ರಸಾದವಿಲ್ಲ,
ಕಾಣಾ ಮಡಿವಾಳ ಮಾಚಯ್ಯಾ.
-ಅಲ್ಲಮಪ್ರಭು

ಅರಿವರತು, ಮರಹರತು, ಕುರುಹಳಿದು, ನಿರುಗೆಗಂಡು ಬೆರಗುವಡೆದು,
ಹೃದಯಾಕಾಶದ ಬಟ್ಟಬಯಲೊಗೆ ಭರಿತವಾಗಿರ್ದ
ಮಹಾಶರಣರ ತೋರಿಸಿ ಬದುಕಿಸಾ,
ಸೌರಾಷ್ಟ್ರ ಸೋಮೇಶ್ವರಾ. ನಿಮ್ಮ ಧರ್ಮ, ನಿಮ್ಮ ಧರ್ಮ,
-ಆದಯ್ಯ

5. ಈ ಇಷ್ಟಲಿಂಗವನ್ನು ಬಳಸು ಮಾಡುವ ಲಿಂಗಾಂಗಯೋಗ / ಶಿವಯೋಗ ದಲ್ಲಿನ ಮುಖ್ಯವಾದ ಮೂರು ಕ್ರಮಗಳೇನು?

ನಮ್ಮಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರ ಗಳು ಎಂಬುವು ಇವೆ. ಇದೇ ಆಧಾರದಲ್ಲಿ, ಇವಕ್ಕೆ ಹೊಂದುವಂತೆ 
ಇಷ್ಟಲಿಂಗ - ಪ್ರಾಣಲಿಂಗ - ಭಾವಲಿಂಗ ಗಳಿವೆ.ಇವುಗಳಿಗೆ ಹೊಂದುವಂತೆ ಲಿಂಗಾರ್ಚನೆ - ಲಿಂಗನಿರೀಕ್ಷಣೆ - ಲಿಂಗಧ್ಯಾನ ಎಂಬ ಮೂರು ಸಾಧನಾಕ್ರಮದ ಮೆಟ್ಟಿಲುಗಳಿವೆ.

ಇವೆಲ್ಲವೂ ಕ್ರಮದಲ್ಲಿ ಒಂದಕ್ಕೊಂದು ಸಂಬಂಧವುಳ್ಳವು.


https://www.facebook.com/share/v/19x6JmzF6a/

ಭಾನುವಾರ, ಫೆಬ್ರವರಿ 02, 2025

ಜಂಗಮ ಪದದ ವ್ಯುತ್ಪತ್ತಿ!

"ಜಂಗಮ" ಪರಿಕಲ್ಪನೆ ಭಾರತೀಯ ಆದ್ಯಾತ್ಮ ಕ್ಷೇತ್ರಕ್ಕೆ ಶರಣರು ಕೊಟ್ಟ ವಿಶೇಷ ಕೊಡುಗೆ. ಶರಣರು ಜಂಗಮ ಪದವನ್ನು ಹಲವು ಆಯಾಮಗಳಿಂದ ಬಳಸುತ್ತಾರೆ. ಕೆಳಗಿನ ಬಳಕೆಗಳನ್ನು ಗಮನಿಸಿದರೆ ಒಂದೊಂದರಲ್ಲೂ ಜಂಗಮ ಪದಕ್ಕೆ ಬೇರೆಯದೇ ಆದ ಹುರುಳು ಹೇಳಬಹುದು. ‌

  1. ಗುರು - ಲಿಂಗ - ಜಂಗಮ 
  2. ಸ್ಥಾವರ - ಜಂಗಮ
  3. ಜಂಗಮ ಸ್ಥಲ
  4. ಜಂಗಮ ಕುಲ
  5. ತ್ರಿವಿಧ ಜಂಗಮ

ಜಂಗಮ ಪದದ etymology / ನಿರುಕ್ತ / ಬೇರರಿಮೆ ಈತರ ವಚನಗಳಲ್ಲಿ ‌ಮೂಡಿ ಬಂದಿದೆ‌.

ಜಕಾರಂ ಜನನಂ ನಾಸ್ತಿ ಗಕಾರಂ ಗಮನವರ್ಜಿತಂ| 
ಮಕಾರಂ ಮರಣಂ ನಾಸ್ತಿ ಏತದ್ಭವ್ಜೇಂಗಮಂ||
-- ಅಲ್ಲಮಪ್ರಭುಗಳು

ಜಕಾರಂ ಹಂಸವಾಹಸ್ಯಾ ಗಕಾರಂ ಗರುಡಧ್ವಜಂ | 
ಮಕಾರಂ ರುದ್ರ ರೂಪಂ ಚ ತ್ರಿಮೂರ್ತ್ಯಾತ್ಮಜಂಗಮಂ ||

ಜಕಾರೇ ಜನನಂ ಪೃಥ್ವೀ ಗಕಾರೇ ಆಕಾಶೋದ್ಭವಂ |
ಮಕಾರೇ ಮರ್ತ್ಯಲೋಕಂ ಚ ಜಂಗಮಂ ಜಗದೀಶ್ವರಂ | 
ಜಂಗಮಸ್ಯ ತ್ರಿಯಕ್ಷರಂ ಭುವನಾನಿ ಚತುರ್ದಶಂ |
- ಬಾಲಸಂಗಯ್ಯ ಅಪ್ರಮಾಣ ದೇವ

ಜಕಾರಂ ಹಂಸವಾಹಸ್ಯ ಗಕಾರಂ ಗರುಢಧ್ವಜಂ | 
ಮಕಾರಂ ರುದ್ರರೂಪಂ ಚ ತ್ರಿಮೂರ್ತ್ಯಾತ್ಮಕಜಂಗಮಃ || 
ಎಂದೆಂಬ ಜಂಗಮವು.
-- ಹೇಮಗಲ್ಲ ಹಂಪ

ಜಂಗಮ ಜನನಮರಣವಿರಹಿತನಂದೆಂತೆಂದಡೆ: 
ಜಕಾರಂ ಜನನಂ ದೂರಂ ಗಕಾರಂ ಗಮನವರ್ಜಿತಃ |
ಮಕಾರಂ ಮರಣಂ ನಾಸ್ತಿತ್ರಿವರ್ಣಮಭಿಧೀಯತೇ ||
-- ನಂಜುಂಡಶಿವ

ಜಕಾರವೆ ಗುರು, ಗಕಾರವೆ ಲಿಂಗ, ಮಕಾರವೆ ಚರಲಿಂಗವಯ್ಯ.
-- ಶೂನ್ಯನಾಥ/ಶೂನ್ಯನಾಥಯ್ಯ ಅಂಕಿತದ ವಚನಗಳು

ಜಂಗಮ ಎಂಬ ಶಬ್ದದಲ್ಲಿರುವ 
ಜಂ ಎಂಬುದಕ್ಕೆ ಜನನಾಭಾವವೂ, 
ಕಾರಕ್ಕೆ ಸಂಸಾರದಲ್ಲಿ ಹೊಂದಬೇಕಾದ ಗಮ್ಯಸ್ಥಾನಾಭಾವವೂ, 
ಕಾರಕ್ಕೆ ಮರಣಾಭಾವವು 
ಎಂದು ಅರ್ಥವಿರುವುದರಿಂದ ಮೂರು ಅಕ್ಷರಗಳಿಂದ ಕೂಡಿದ ಈ ಜಂಗಮ ಶಬ್ದಕ್ಕೆ ಪುನರ್ಜನ್ಮ, ಗಮ್ಯಸ್ಥಾನ, ಮರಣ ಇವು ಮೂರೂ ಇಲ್ಲದವ ನೆಂದು ಅರ್ಥವಾಗುವದು.
--

ತ್ರಿವಿಧ ಜಂಗಮ
(೧)ಪಟ್ಟ - (೨)ಚರ - (೩)ನಿರಂಜನ ಜಂಗಮ
(೧)ಸ್ವಯ ಜಂಗಮ - (೨)ಚರ ಜಂಗಮ  - (೩)ಪರ ಜಂಗಮ
---

ಪ್ರಭುದೇವರ ವಚನದಿಂದ-- 
೧. ಸ್ವಯ, ಚರ, ಪರವೆಂಬ ತ್ರಿವಿಧ ಜಂಗಮವು
೨. ಧರ್ಮಾಚಾರ, ಭಾವಾಚಾರ, ಜ್ಞಾನಾಚಾರವೆಂಬ ತ್ರಿವಿಧ ಜಂಗಮವು
೩.‌ ಶಿಷ್ಯ, ಶುಶ್ರೂಷ, ಸೇವ್ಯವೆಂಬ ತ್ರಿವಿಧ ಜಂಗಮವು
೪. ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯ ಪ್ರಸಾದಿಯೆಂಬ ತ್ರಿವಿಧ ಜಂಗಮವು
೫. ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶವೆಂಬ ತ್ರಿವಿಧ ಜಂಗಮವು
೬. ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ತ್ರಿವಿಧ ಜಂಗಮವು.

ಗುರುವಾರ, ಜನವರಿ 30, 2025

ಶರಣರನರಿಯದವರ ಕೈಯಲ್ಲಿ ಲಿಂಗವಿರ್ದು ಫಲವೇನು?!


ಅರ್ಥರೇಖೆಯಿದ್ದು ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕ? 
ಹಂದೆಯ ಕೈಯಲ್ಲಿ ಚಂದ್ರಾಯುಧವಿರ್ದು ಫಲವೇನು? 
ಅಂಧಕನ ಕೈಯಲ್ಲಿ ದರ್ಪಣವಿರ್ದು ಫಲವೇನು? 
ಮರ್ಕಟನ ಕೈಯಲ್ಲಿ ಮಾಣಿಕ್ಯವಿರ್ದು ಫಲವೇನು? 
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ 
ಲಿಂಗವಿರ್ದು ಫಲವೇನು ! ಶಿವಪಥವನರಿಯದನ್ನಕ್ಕ?
-ಬಸವಣ್ಣ

೧. ಆಯುಸ್ಸು ಇಲ್ಲದೇ ಹಣ ಪ್ರಯೋಜನ ಕ್ಕೆ ಬಾರದು. ಹಣ ಐಶ್ವರ್ಯ ಲಕ್ಷ್ಮಿಯಿಂದ ಸಿಗಬಹುದಾದ ಸುಖವನ್ನು ಅನುಭವಿಸಲು ಮೊದಲು ಬದುಕಿರಬೇಕು.

೨. ಕಲಿತನ ಇಲ್ಲದಿದ್ದರ, ಆಯುಧಗಳನ್ನು ಬಳಸುವುದು ತಿಳಿದಿರದಿದ್ದರೆ ದೊಡ್ಡ ಆಯುಧಗಳೂ ನೆರವಿಗೆ ಬಾರದು. ಅವು ಇದ್ದೂ ಇಲ್ಲದಂತೆ.

೩. ಕಣ್ಣೇ ಕಾಣದಿದ್ದರೆ ಕನ್ನಡಿಯೂ ಇದ್ದೂ ಇಲ್ಲದಂತೆ.

೪.ಮಂಗನ ಕೈಲಿ ಮಾಣಿಕ್ಯ ಕೊಟ್ಟರೆ ಎಲ್ಲೋ (ತಿ*ಕ್ಕೆ) ಮುಟ್ಟಿಸಿಕೊಂಡು 😉 ಮೂಸಿ ನೋಡಿ ಒಗೆಯಿತಂತೆ! ಮಾಣಿಕ್ಯದ ಬೆಲೆ ತಿಳಿಯದಿದ್ದರೆ ಅದೊಂದು ಕಲ್ಲು ಅಷ್ಟೇ. ಏನೋನೋ ಕೆರೆದುಕೊಳ್ಳಲು ಬಳಸುವ ಕಲ್ಲು!! 

೫. ಲಿಂಗ ಎನ್ನುವುದು ಐಕ್ಯ ಸಾಧಿಸಲು - ಬಯಲು ಕಾಣಲು ಇರುವ ದೊಡ್ಡ ಅಣಿಗೆ / ಸಾಧನ / tool. ಆದರೆ ಅದನ್ನು ಬಳಸಲು ಶರಣನ್ನು ಅರಿಯಬೇಕು, ಶರಣರ ಮೂಲಕ ಶಿವಪಥವನ್ನು ಅರಿತಬೇಕು. ಶರಣರಷ್ಟೇ ಇದನ್ನು‌ ಸರಿಯಾಗಿ ಬಳಸಲು ಅರಿತವರು. ಶರಣರನ್ನರಿಯದಿದ್ದವರ ಕೈಲಿದ್ದ ಲಿಂಗವೂ (ಅದರ‌ ಮಹತ್ವ ಅದೆಷ್ಟೇ ದೊಡ್ಟದಿದ್ದರೂ) ಬಳಕೆಗೆ ಬಾರದು.

 "ಕ್ರಿಯಾಜ್ಞಾನ ಸಮಾಯುಕ್ತಂ ವೀರಶೈವಸ್ಯ ಲಕ್ಷಣಂ" ಎಂಬ ಸಾಲಿದೆ. ಮಾಡುವ ಕ್ರಿಯೆ (ಲಿಂಗಾಂಗಯೋಗ) ಮತ್ತು ಅದನ್ನು ಮಾಡುವ ಅರಿವು ಸಮವಾಗಿರಬೇಕು. ಬರಿಯ ಕ್ರಿಯೆಯಿಂದ ಅಂದುಕೊಂಡು ಕೆಲಸ ಸಾಧ್ಯವಾಗದು.

ಹೋಲಿಕೆಗಳ ಮೂಲ‌ಕ ಈ ಸಾಲನ್ನು ಮನಮುಟ್ಟುವಂತೆ ಹೇಳಲಾಗಿದೆ ಈ ವಚನದಲ್ಲಿ.  ಶರಣರ ಅರಿವು ಮತ್ತು ಲಿಂಗದ ಅನುಭಾವ ಎರಡೂ ಬೇಕು.


ಕ್ರಿಯಾಜ್ಞಾನಸಂಬಂಧವೆಂದು ನುಡಿವರು - 
ಕ್ರಿಯಾಜ್ಞಾನಸಂಬಂಧವೆಂತಿರ್ಪುದೆಂದರಿಯರು. 
ಕ್ರೀಯಲ್ಲಿ ಅಂಗಲಿಂಗಸಂಬಂಧವನರಿಯರು, 
ಜ್ಞಾನದಲ್ಲಿ ಲಿಂಗಜಂಗಮಸಂಬಂಧವನರಿಯರು. 
ಕ್ರೀಯಲ್ಲಿ ಅರ್ಪಿತಪ್ರಸಾದಸಂಬಂಧವನರಿದು, 
ಜ್ಞಾನದಲ್ಲಿ ತೃಪ್ತಿಪರಿಣಾಮವನರಿದು. 
ಕ್ರೀಯೊಳಗಿರ್ದು ಜ್ಞಾನಸಂಪನ್ನನಾಗಿರಬಲ್ಲ ಶರಣಂಗೆ 
ಕ್ರಿಯೆಯೆ ತನು, ಜ್ಞಾನವೆ ಪ್ರಾಣ. 
ತನು ಲಿಂಗವಾಗಿ, ಪ್ರಾಣ ಜಂಗಮವಾಗಿ, 
ತನುವ ಸಯನಮಾಡಿ, ಪ್ರಾಣವ ಲಿಂಗಜಂಗಮಕ್ಕರ್ಪಿಸಿ, 
ನಿರಂತರ ಸಾವಧಾನಿಯಾಗಿರಬಲ್ಲ ಪ್ರಸಾದಿಗಳ 
ಎನಗೊಮ್ಮೆ ತೋರಿ ಸಲಹಾ, ಕೂಡಲಸಂಗಮದೇವಾ.
-ಬಸವಣ್ಣ

ಸೋಮವಾರ, ಜನವರಿ 27, 2025

ತ್ರಿವಿಧ ದಾಸೋಹ

#ತ್ರಿವಿಧ ಗಳಾವು?

#ಅನ್ನ_ಅಕ್ಷರ_ಅರಿವು ಗಳೇ ಆ ಮೂರುತರಗಳು 

#ದಾಸೋಹ ಎಂದರೆ?

ದಾಸೋಹಂ ಎನ್ನುವ ದೇಹಕೇಂದ್ರಿತ ತತ್ವವನ್ನ ಸಮಾಜಮುಖಿಯಾಗಿಸಿದರದುವೇ ದಾಸೋಹ. ಭಕ್ತಸ್ತಲದಲ್ಲಿ ದಾಸೋಹಂ ( ದ್ವೈತ ಭಾವ) ಕಂಡುಬಂದರೆ ಪ್ರಾಣಲಿಂಗಿ ಸ್ಥಲದಲ್ಲಿ ಸೋಹಂ (ಅದ್ವೈತ) ಭಾವ ಗುರ್ತಿಸಬಹುದು. ದಾಸೋಹ ಭಾವ ಎರಡನ್ನೂ ಮೀರಿದ್ದು. ಇದು ಶರಣ ಸ್ಥಲ. ಹರನಿಗೋ ಹರಿಗೋ ದಾಸ ಅನ್ನೋ ಭಾವನೆ ಶರಣ ಸ್ಥಲವಲ್ಲ... ಈ ಸಮಾಜದ ಒಳಿತಿನ ಜವಬ್ಧಾರಿ ತನ್ನ ಮೇಲಿದೆ ಅನ್ನೋ ಅರಿವು ಮತ್ತು ಅದಕ್ಕೆ ಬೇಕಿರುವ ಕಸುವು ಶರಣ ಸ್ತಲ. 

#ತ್ರಿವಿಧದಾಸೋಹ ಎಂದರೆ?

ಅನ್ನ ಅಕ್ಷರ ಅರಿವು (ಆಶ್ರಯ?) ಗಳೆಂಬವು ಎಲ್ಲ ಮಂದಿಗೂ ಕಡ್ಡಾಯವಾಗಿ ಬೇಕಿರುವಂತವು. ಏನಿರುತ್ತೋ ಇಲ್ಲವೋ ಇವಂತೂ ಎಲ್ಲರಿಗೂ ಸುಳುವಾಗಿ ಸಿಗಬೇಕು. ಆಗಲೇ ಈ‌ ನಾಡು ನಾಡವರ ನಲಿವು ಒಲವು ಚೆಲುವು. ಕೂಡಣಕ್ಕೆ / ಸಮಾಜಕ್ಕೆ ಈ ಮೂರುತರನ ಕಡ್ಡಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಿಸುವುದೇ ತ್ರಿವಿಧದಾಸೋಹ. 

ಶರಣ ಸಂಸ್ಕೃತಿಯಲ್ಲಿ ಈ ತ್ರಿವಿಧದಾಸೋಗಳ ಪಾತ್ರ?

ಶಾಸ್ತ್ರಘನವೆಂಬೆನೆ ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತಿದೆ.
ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
#ತ್ರಿವಿಧದಾಸೋಹ ದಲಲ್ಲದೆ ಕಾಣಬಾರದು ಕೂಡಲಸಂಗಮದೇವನ. 
- ಬಸವಣ್ಣ

#ತ್ರಿವಿಧದಾಸೋಹಿ

ಜನ್ಮದ ಪರಿಭವ!

ಮನವೇ, ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ, ಮನವೇ!
ಲಿಂಗವ ನಂಬು ಕಂಡಾ, ಮನವೇ;  ಜಂಗಮವ ನಂಬು ಕಂಡಾ, ಮನವೇ;
ಕೂಡಲಸಂಗಮದೇವರ ಬಿಡದೆ ಬೆಂಬತ್ತು, ಕಂಡಾ, ಮನವೇ.  
                              -- ಬಸವಣ್ಣ - Basavanna 

ಇಹಪರಗಳೆರಡರಲ್ಲೂ ಸಲ್ಲುವುದೇ ಶರಣಧರ್ಮದ  ಪರಮೋದ್ದೇಶ. #ಕಾಯಕ #ದಾಸೋಹ ತತ್ವಗಳು, ಕಳಬೇಡ‌ ಕೊಲಬೇಡ ಮುಂತಾದ ಬದುಕಿನ ಸೂತ್ರಗಳು "ಇಹದಲ್ಲಿ ಸಲ್ಲುವ ದಾರಿ" ಗಳಾದರೆ, "ಪರದಲ್ಲಿ ಸಲ್ಲಲು‌‌" ಇರುವ ಏಕೈಕ ದಾರಿ #ಲಿಂಗಾಂಗಯೋಗ. 

ಭವಿ-ಭಕ್ತ, ಇಹ-ಪರ, ಇಲ್ಲಿ-ಅಲ್ಲಿ ಪದಗಳಂತೆ ಅರಿವು-ಮರೆವು ಗಳು ಶರಣರು ಬಳಸುವ ಎರಡು ವಿರುದ್ದ ಕಲ್ಪನೆಗಳು. ಮೋಡ  ಸೂರ್ಯ(ಅರಿವು) ನನ್ನು 'ಕೆಲಕಾಲ' 'ಮರೆ'ಮಾಡಿದಂತೆ ಈ‌ ಮರೆವು.

ಜಂಗಮ ಕಾಣದ ಶಕ್ತಿ. ಆ ಜಂಗಮವೇ ಕುರುಹಾಗಿ (symbol ಆಗಿ) ಕಾಣುವಂತೆ ಬಂದದ್ದು ಲಿಂಗ. ಮುಕ್ತಿಗೆ ಮಾರ್ಗ‌ ಲಿಂಗಜಂಗಮಗಳನ್ನು ನಂಬುವುದೇ! ಇಹದಲ್ಲಿನ ಲಿಂಗಾಂಗ ಸಾಮರಸ್ಯ ಪರದಲ್ಲಿ ಲಿಂಗೈಕ್ಯವ ನೀಡುವುದು. ಮರೆಯದೆ ಧೃತಿಗೆಡದೆ ದಾರಿತಪ್ಪದೇ ನಿಷ್ಠೆಯಿಂದ ಕೂಡಲ ಸಂಗಯ್ಯನ ಬೆನ್ನು ಹತ್ತು‌ (ಲಿಂಗಪೂಜೆ / ಶಿವಯೋಗದಲ್ಲಿ ತೊಡಗು) ಆಗ ಈ ಪರಿಭವಗಳು ನೀಗುವವು ಎನ್ನುವರು ಬಸವಣ್ಣ. ಇದನ್ನು‌ ಮಾಡದಿದ್ದಕ್ಕೇನೇ ಹಿಂದಿನ ಪರಿಭವಗಳು‌ ಉಂಟಾದವು ಎಂಬುದನ್ನು ಮರೆಯದಿರು ಮನವೇ ಎನ್ನುವರು‌.
---
ಪರಿಭವ ಎಂದರೆ ಮರುಹುಟ್ಟು / ಪುನರ್ಜನ್ಮ. ಆತ್ಮನು ನಾನಾ ಯೋನಿಗಳಲ್ಲಿ ಸಾಗುತ್ತಾ ಅಲೆಯುವ ಪರಿಪಾಟಲು. ಪರಿಭವಸುಖಕ್ಕೆ‌ ಈಡಾಗು, ಪರಿಭವಕ್ಕೆ ಒಳಗಾಗು, ಪರಿಭವಕ್ಕೆ ಗುರಿಯಾಗು ಮುಂತಾದ ಪದಗಳನ್ನು, ಪರಿಭವದ ತಡಿ, ಪರಿಭವದಲ್ಲಿ ತೊಳಲು, ಪರಿಭವಭಾದೆ ಮುಂತಾದವನ್ನು, ಪರಿಭವವ ದಾಟಿಸು, ಪರಿಭವಂಗಳ ಅಳಿವು, ಪರಿಭವಂಗಳ ನೀಗು ಮುಂತಾದ ಪದಗಳನ್ನು ಶರಣರು ಮತ್ತೆ ಮತ್ತೆ ಬಳಸುವರು.

ನಿಮ್ಮನರಿದು ತನ್ನ ಮರೆದ ಪರಮ ಶಿವಯೋಗಿಗೆ ಪರಿಭವಂಗಳುಂಟೆ ಗುಹೇಶ್ವರಾ? ಎನ್ನುವರು ಪ್ರಭುದೇವರು. ಎನ್ನ ಪರಿಭವದ ದಂದುಗ ಹರಿಯಿತ್ತಯ್ಯಾ ಎನ್ನುವರು ಸಿದ್ದರಾಮೇಶ್ವರ. ಎನ್ನ ಪರಿಭವವ ತಪ್ಪಿಸಿದ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ ಎನ್ನವರು ಷಣ್ಮುಖ ಸ್ವಾಮಿ.

ಕರ್ಮದಿಂದವು ಮನಸ್ಸು ಜ್ಞಾನವಿಲ್ಲದ ಭ್ರಮೆಯಿಂದವು, ತನುವಿನ ದೆಸೆಯಿಂದಲು ನಾನಾ ಪರಿಭವಂಗಳಲ್ಲಿ ಬಂದೆನಯ್ಯ ಎನ್ನುವನು ಶೂನ್ಯನಾಥಯ್ಯ. ಲಿಂಗಭಕ್ತಿಯನರಿಯದೆ, ಬರಿದೆ ಶಿವಭಕ್ತರೆಂದು ಬೊಗಳುವ ಕುನ್ನಿಗಳು ಪರಿಭವಕ್ಕೆ ಒಳಗಾಗುವರೆಂದಾತನಂಬಿಗರ ಚೌಡಯ್ಯನು.

ಗುರುವಾರ, ಜನವರಿ 16, 2025

ಧ್ಯಾನಾದೇವ ತು ಕೈವಲ್ಯಂ

"ಜ್ಞಾನಾದೇವ ತು ಕೈವಲ್ಯಂ ಪ್ರಾಪ್ಯತೇ ಯೇನ ಮುಚ್ಯತೇ, 
ತಮೇವ ವಿದಿತ್ವಾ ಅತಿಮೃತ್ಯುಮೇತಿ, ಜ್ಞಾತ್ವಾ ದೇವಂ ಮುಚ್ಛತೇ ಸರ್ವಪಾಪೈಃ'' 

ಎಂಬುದು ಶ್ವೇತಾಶ್ವತರ ಉಪನಿಷತ್ ನ ಸಾಲು‌

"ಜ್ಞಾನಾತ್ ಏವ ತು ಕೈವಲ್ಯಂ" ನಲ್ಲಿನ #ಜ್ಞಾನ ವನ್ನು #ಆತ್ಮಜ್ಞಾನ ಎಂದೇ ಹೆಚ್ಚಿನವರು ತಿಳಿವರು. ಹಾಗಾಗಿ ಈ ಸಾಲನ್ನು "ಆತ್ಮಜ್ಞಾನದಿಂದಲೇ ಮುಕ್ತಿ" ಎಂದು ಅನುವಾದ ಮಾಡಿದ್ದಾರೆ. 

---
ಇದೇ ಸಾಲನ್ನು ತುಸು ಬದಲಿಸಿ "ಧ್ಯಾನಾತ್ ಏವ ತು ಕೈವಲ್ಯಂ" ಎಂಬುದಾಗಿ ಬದಲಿಸಿದರೆ ಅದನ್ನು ಅರ್ಥ ಮಾಡಿಕೊಳ್ಳವುದು ಹೇಗೆ?. ಈ ಸಾಲನ್ನು ಅರ್ಥ ಮಾಡಿಕೊಳ್ಳಲು #ಅಲ್ಲಮ ನ ಈ ವಚನ ಓದಿ ತಿಳಿದು ಅನುಭವಕ್ಕೆ ತರಬೇಕು!

ಅರಿವಿನ ನಿರಿಗೆಗಾಣದೆ ಗಿರಿಯ ಕೋಡುಗಲ್ಲ ಮೇಲೆ
ತಲೆಯೂರಿ ತಪಸ್ಸು ಮಾಡಿದಡಿಲ್ಲ,
ಇಲ್ಲದ ಕಾಲಕ್ಕಿಲ್ಲ, ಗಾತ್ರವ ದಂಡಿಸಿದಡಿಲ್ಲ, ಪೃಥ್ವಿಯ ತಿರುಗಿದಡಿಲ್ಲ,
ತೀರ್ಥಂಗಳ ಮಿಂದು ನಿತ್ಯನೇಮಂಗಳ ಮಾಡಿ, ಜಪಸಮಾಧಿಯಲ್ಲಿ ನಿಂದಡಿಲ್ಲ,
``ಪೂಜಾಕೋಟಿಸಮಂ ಸ್ತೋತ್ರಂ, ಸ್ತೋತ್ರಕೋಟಿಸಮಂ ಜಪಃ|
ಜಪಕೋಟಿ ಸಮಂ ಧ್ಯಾನಂ, ಧ್ಯಾನಕೋಟಿರ್ಮನೋ ಲಯಮ್||
ಎಂದುದಾಗಿ,
ಸುತ್ತಿಸುಳಿವ ಮನವ ಚಿತ್ತಿನಲ್ಲಿರಿಸಿ, ಚಿತ್ತು ಲಯವಾದಡೆ ನಿತ್ಯಪ್ರಕಾಶ!
ಗುಹೇಶ್ವರಲಿಂಗವ ಮತ್ತೆ ಅರಸಲುಂಟೆ?

-ಅಲ್ಲಮಪ್ರಭು

ಬುಧವಾರ, ಜನವರಿ 15, 2025

ರುದ್ರ / ಮಹೇಶ ಗಾಯತ್ರಿ

೧. ಗಾಯತ್ರಿ ಮಂತ್ರ :

ತತ್‌ಸವಿತುರ್‌ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋ ನಃ ಪ್ರಚೋದಯಾತ್‌

ಇದೇ ಮೂಲದ ಸವಿತೃವಿನ ಮಂತ್ರ / ಸಾವಿತ್ರ ಮಂತ್ರ. ವಿಶ್ವಾಮಿತ್ರನ ಕೊಡುಗೆ. ಮೊದಲು ಋಗ್ವೇದದಲ್ಲಿ ಬರುವದು. ಉಳಿದ ವೇದಗಳಲ್ಲೂ ಬರುವುದು. ಪುರಾಣಗಳಲ್ಲೂ ಮತ್ತೆ ಮತ್ತೆ ಬರುವುದು.

ಗಾಯತ್ರಿ ಎನ್ನುವುದು ವೇದಗಳಲ್ಲಿ ಬರುವ ಒಂದು ಛಂದಸ್ಸು ಆಗಿದ್ದರೂ ಈ ಮಂತ್ರವೇ ಗಾಯತ್ರಿ ಮಂತ್ರ ಎಂದು ಹೆಸರಿವಾಸಿ.

ಓಂ ಎಂಬ ಪ್ರಣವ ವನ್ನೂ ಮತ್ತು ಭೂರ್ ಭುವಃ ಸ್ವಃ ಎಂಬ ಮೂರು ವ್ಯಾಹೃತಿ ಗಳನ್ನೂ ಮೊದಲಿಗೆ ಸೇರಿಸಿಕೊಂಡು ಈ ಮಂತ್ರವನ್ನು ಹೇಳುವ ಪರಿಪಾಠ ಬೆಳೆದುಬಂದಿದೆ.

ಪೂರ್ಣ ಪಾಠ ಈ ಕೆಳಗಿನಂತಿದೆ
ಓಂ ಭೂರ್‍ಭುವಃಸ್ವಃ
ತತ್ಸವಿತುರ್‍ವರೇಣ್ಯಂ 
ಭರ್ಗೋ ದೇವಸ್ಯ ಧೀಮಹಿ! 
ಧಿಯೋ ಯೋ ನಃ ಪ್ರಚೋದಯಾತ್‌ ॥

----
೨. ಗಾಯತ್ರಿ ಛಂದಸ್ಸು.
ಇದು ಮೂರು ಮೂರು ಸಾಲುಗಳನ್ನು ಹೊಂದಿರುವ ಛಂದಸ್ಸು. ಒಂದೊಂದು ಸಾಲಿನಲ್ಲೂ ಎಂಟು ಅಕ್ಷರಗಳು ಇರುತ್ತವೆ.  ಒಟ್ಟು ೨೪ ಅಕ್ಷರಗಳು ಉಳ್ಳದ್ದು. ಕೆಳಗಿನ ಸವಿತೃಮಂತ್ರವು ಗಾಯತ್ರಿ ಛಂದಸ್ಸಿನಲ್ಲಿ ಬರೆಯಲ್ಪಟ್ಟಿದೆ.

ಸಾಲು ೧:: (೮ ಅಕ್ಷರಗಳು)
ತತ್ + ಸ + ವಿ + ತುರ್ + ವ + ರೇ + ಣಿ + ಯಂ

ಸಾಲು ೨:: (೮ ಅಕ್ಷರಗಳು)
ಭರ್ + ಗೋ + ದೇ + ವ + ಸ್ಯ + ಧೀ + ಮ + ಹಿ

ಸಾಲು ೩:: (೮ ಅಕ್ಷರಗಳು)
ಧಿ + ಯೋ + ಯೋ + ನಃ + ಪ್ರ + ಚೋ + ದ + ಯಾತ್ 

----
೩. ಗಾಯತ್ರಿ ದೇವತೆ:: 
ಒಂದು ದೇವತೆಯಾಗಿ ಗಾಯತ್ರಿ ಯ ಕಲ್ಪನೆ ತುಂಬಾ ಇತ್ತೀಚಿನದ್ದು. ೧೬ - ೧೭ ನೇ ಶತಮಾನಕ್ಕೂ ಇತ್ತೀಚಿನದ್ದು‌ ಮತ್ತು ಈ‌ ಕಲ್ಪನೆ ಆಂಧ್ರಪ್ರದೇಶದಲ್ಲಿ ಹುಟ್ಟಿತು ಎನ್ನುವರು.

----
೪. ಮಂತ್ರ - ಗಾಯತ್ರಿ ಪದಗಳ ಬೇರರಿಮೆ.
"ಮನನಾತ್ ತ್ರಾಯತೇ ಇತಿ‌ ಮಂತ್ರಃ" ಎಂದು ಮಂತ್ರಕ್ಕೆ ನಿರುಕ್ತ (ಬೇರರಿಮೆ / Etymology) ಹೇಳಲಾಗಿದೆ.  "ಮನನಾತ್‌ತ್ರಾಯತೇ ಯಸ್ಮಾತ್ತಸ್ಮಾನ್ಮಂತ್ರೋ಼sಯಮೀರಿತಃ" ಎಂಬ ಸ್ಕಾಂದಪುರಾಣದ ಸಾಲೂ ಇದೆ. ಮನನ ಎಂದರೆ ಮೇಲಿಂದ ಮೇಲೆ ಯುಕ್ತಿಯಿಂದ ಧ್ಯಾನಿಸುವುದು. ಮನನ‌ದಿಂದ ನಮ್ಮನ್ನು ರಕ್ಷಿಸುವುದರಿಂದ / ಕಾಪಾಡುವುದರಿಂದ ಇದು ಮಂತ್ರವೆನಿಸಿಕೊಳ್ಳುವುದು. 

ಗಾಯತ್ರಿ / ಗಾಯತ್ರ ಕ್ಕೂ ಇದೇ ತರದ ಬೇರರಿಮೆಯನ್ನೇ ಹೇಳಲಾಗಿದೆ. ಗಾಯತ್ರಕ್ಕೆ  "ಗಾಯಂತಾಂ ತ್ರಾಯತೇ ಯಸ್ಮಾತ್ ಇತಿ ಗಾಯತ್ರಾ" ಎನ್ನುವ ನಿರುಕ್ತ / ಬೇರರಿಮೆ ಹೇಳಲಾಗಿದೆ. ಯಾವುದನ್ನು ಉಲಿಯುವುದರಿಂದ ನಾವು ಕಾಪಾಡಲ್ಪಡುತ್ತೇವೋ ಅದು ಗಾಯತ್ರಿ. 

೫. ರುದ್ರ / ಶಿವ / ಮಹೇಶ ಗಾಯತ್ರಿ ಗಳು 
ಈ ಗಾಯತ್ರಿಮಂತ್ರ (ಮೂರು ಸಾಲಿನ ಪದ್ಯ) ಅದೆಷ್ಟು ಹೆಸರುವಾಸಿ ಎಂದರೆ ಇದೇ ದಾಟಿಯಲ್ಲಿ ಹಲವಾರು ಮಂತ್ರಗಳ ಹುಟ್ಟಿಗೆ ಕಾರಣವಾಯ್ತು. ಕೆಲವು ರುದ್ರ / ಶಿವನ ಮತ್ತವನ ಪರಿವಾರದದವರ ಮೇಲಿನ ಗಾಯತ್ರಿಮಂತ್ರಗಳನ್ನು ಇಲ್ಲಿ ‌ಪಟ್ಟಿಮಾಡುತ್ತಿರುವೆ. ಇವನ್ನು ಲಿಂಗಪುರಾಣ ದಿಂದ ತೆಗೆದುಕೊಂಡಿದ್ದೇನೆ.

೧. ಮಹೇಶ_ಗಾಯತ್ರಿ

ತನ್ಮಹೇಶಾಯ ವಿದ್ಮಹೇ 
ವಾಗ್ವಿಶುದ್ಧಾಯ ಧೀಮಹಿ |
ತನ್ನಃ ಶಿವಃ ಪ್ರಚೋದಯಾತ್‌ ||

೨. ರುದ್ರ_ಗಾಯತ್ರಿ

ತತ್ಪುರುಷಾಯ ವಿದ್ಮಹೇ 
ಮಹಾದೇವಾಯ ಧೀಮಹಿ |
ತನ್ನೋ ರುದ್ರಃ ಪ್ರಚೋದಯಾತ್‌ ||

೩. 
ತತ್ಪುರುಷಾಯ ವಿದ್ಮಹೇ 
ವಾಗ್ವಿಶುದ್ಧಾಯ ಧೀಮಹಿ ।
ತನ್ನಃ ಶಿವಃ ಪ್ರಚೋದಯಾತ್‌ ||

೪. 
ಸರ್ವೇಶ್ವರಾಯ ವಿದ್ಮಹೇ 
ಶೂಲಹಸ್ತಾಯ ಧೀಮಹಿ |
ತನ್ನೋ ರುದ್ರಃ ಪ್ರಚೋದಯಾತ್‌ ||

ಉಳಿದ ಮೂಲದಿಂದ: 
೫. ಓಂ
ಮಹಾದೇವಾಯ ವಿದ್ಮಹೇ, 
ರುದ್ರ‌ಮೂರ್ತಯೇ ಧೀಮಹಿ
ತನ್ನೋ ಶಿವಃ ಪ್ರಚೋದಯಾತ್ ||

೬. ಓಂ
ಸದಾಶಿವಾಯ ವಿದ್ಮಹೇ,  
ಸಹಸ್ರಾಕ್ಷಾಯ ಧೀಮಹಿ |
ತನ್ನಃ ಸಾಂಬಃ ಪ್ರಚೋದಯಾತ್ ||

ಈ‌ ಕೆಳಗಿನವು ನೋಡಲು ಗಾಯತ್ರಿ ಛಂದಸ್ಸಿನಲ್ಲಿ ಇರುವಂತೆ ಕಂಡರೂ ಕೆಲಸ ಸಾಲುಗಳಲ್ಲಿ ಎಂಟರ ಬದಲು ಒಂಬತ್ತು ಅಕ್ಷರಗಳಿವೆ.

೭. ಓಂ 
ಮಲ್ಲಿಕಾರ್ಜುನಾಯ ವಿದ್ಮಹೇ,  (೯)
ಶ್ರೀ ಶೈಲನಾಥಾಯ ಧೀಮಹಿ | (೯)
ತನ್ನೋ ರುದ್ರಃ ಪ್ರಚೋದಯಾತ್ || 

----
೬. ಶಿವನ ಪರಿವಾರ ದೇವತೆಗಳ ಮೇಲಿನ ಗಾಯತ್ರಿ ಗಳು

ಗಣಾಂಬಿಕಾಯೈ ವಿದ್ಮಹೇ ಕರ್ಮಸಿದ್ಧ್ಯೈ ಚ ಧೀಮಹಿ ।
ತನ್ನೋ ಗೌರೀ ಪ್ರಚೋದಯಾತ್‌ ||

ಕಾತ್ಯಾಯನ್ಯೈ ವಿದ್ಮಹೇ ಕನ್ಯಾಕುಮಾರ್ಯೈ ಧೀಮಹಿ ।
ತನ್ನೋ ದುರ್ಗಾ ಪ್ರಚೋದಯಾತ್‌ ||

ವೀರಭದ್ರಾಯ ವಿದ್ಮಹೇ ಮಹಾನಾದಾಯ ಧೀಮಹೇ |  
ತನ್ನಃ ಶಾಂತಃ ಪ್ರಚೋದಯಾತ್ ||

ತತ್ಪುರುಷಾಯ ವಿದ್ಮಹೇ ವಕೃತುಂಡಾಯ ಧೀಮಹಿ ।
ತನ್ನೋ ದಂತಿಃ ಪ್ರಚೋದಯಾತ್‌ ||

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ I 
ತನ್ನೊ ದಂತೀ ಪ್ರಚೋದಯಾತ್‌ ॥

ಮಹಾಸೇನಾಯ ವಿದ್ಮಹೇ ವಾಗ್ವಿಶುದ್ಧಾಯ ಧೀಮಹಿ ।
ತನ್ನಃ ಸ್ಕಂದಃ ಪ್ರಚೋದಯಾತ್‌ ||

ಹರಿವಕ್ತ್ರಾಯ ವಿದ್ಮಹೇ ರುದ್ರ ವಕ್ತ್ರಾಯ ಧೀಮಹಿ । 
ತನ್ನೋ ನಂದೀ ಪ್ರಚೋದಯಾತ್‌

ತೀಕ್ಷ್ಣ ಶೃಂಗಾಯ ವಿದ್ಮಹೇ ವೇದಪಾದಾಯ ಧೀಮಹಿ।
ತನ್ನೋ ವೃಷಃ ಪ್ರಚೋದಯಾತ್ ||

ಶಿವಾಸ್ಯಜಾಯೆ ವಿದ್ಮಹೇ ದೇವರೂಪಾಯೈ ಧೀಮಹಿ  |
ತನ್ನೋ ವಾಚಾ ಪ್ರಚೋದಯಾತ್‌  ||


ಗುರುವಾರ, ಜನವರಿ 09, 2025

ಸಾರಾಯ

ತನುಸಾರಾಯರ, ಮನಸಾರಾಯರ, 
ಜ್ಞಾನಸಾರಾಯರ ತೋರಯ್ಯಾ, ನಿಮ್ಮ ಧರ್ಮ!
ಭಾವಸಾರಾಯರ ಭಕ್ತಿಸಾರಾಯರ ತೋರಯ್ಯಾ, ನಿಮ್ಮ ಧರ್ಮ!
ಕೂಡಲಸಂಗಮದೇವಯ್ಯಾ, ನಿಮ್ಮನರಿಯದವಗುಣಿಗಳ ತೋರದಿರಯ್ಯಾ, ನಿಮ್ಮ ಧರ್ಮ!

ತನು-ಮನ-ಜ್ಞಾನ -ಭಾವ-ಭಕ್ತಿ ಗಳು‌ ಮುಖ್ಯವಾದವು! 
--
ಹಿನ್ನೆಲೆ ಯಾಗಿ ಈ‌ ಕೆಲವು ವಚನಗಳ ಸಾಲುಗಳನ್ನು ಇಟ್ಟುಕೊಳ್ಳೋಣ. 
೧. #ತನು ಕರಗಿ #ಮನ ಕರಗಿ ನೋಡಿ, ಮಾಡುವುದು ಭಕ್ತಿಸ್ಥಲ.
೨. ಕೂಡಲಸಂಗಮದೇವಾ, ನಿಮ್ಮನರಿಯದ #ಜ್ಞಾನ ವೆಲ್ಲಾ ಅಜ್ಞಾನ!
೩. #ಭವಜ್ಞಾನ ವ ಕೆಡೆಮೆಟ್ಟಿ, #ಭಕ್ತಿಜ್ಞಾನ ವ ಗಟ್ಟಿಗೊಳಿಸಿ,
೪. ಜ್ಞಾನವಿಲ್ಲದನ್ನಕ್ಕರ ತಲೆಯಿಲ್ಲದ ಮುಂಡದಂತೆ
೫. #ಭಾವ ಶುದ್ಧವಾದೊಡೆ, ಕೂಡಲಸಂಗಯ್ಯನು ʼಇತ್ತ ಬಾʼ ಎಂದೆತ್ತಿಕೊಳ್ಳನೇಕಯ್ಯಾ?
೬. ಭಾವತಪ್ಪಿದ ಬಳಿಕ ಏಗೆಯ್ದೊಡಾಗದು.
---
ಸಾರಾಯ ಎಂದರೆ ತಿರುಳು, ಸತ್ವ, ಅನುಭಾವ. ಹಣ್ಣುಗಳನ್ನು "ಕಳಿ"ಸಿ ಬಟ್ಟಿ ಇಳಿಸಿ‌ ಒಳಗಿನ ಸಾರ / ಸಾರಾಂಶ ವನ್ನು ಹೊರೆತೆಗೆದದ್ದೇ (ಬಟ್ಟಿ ಇಳಿಸಿದ್ದು - ಸೋಸಿ ತೆಗೆದದ್ದು - filter ಮಾಡಿದ್ದು) ಸಾರಾಯಿ. ಸಾರಾಯಿಯು ಕಳಿತ ಹಣ್ಣಿನ ಸಾರಾಯ! 

ಕಳಿತ ಮಾಗಿದ ಪಕ್ವಗೊಂಡ‌ ತನುವಿನವರು ತನುಸಾರಾಯರು. 
ಕಳಿತ ಮಾಗಿದ ಪಕ್ವಗೊಂಡ‌ ಮನವುಳ್ಳವರು ಮನಸಾರಾಯರು 
ಕಳಿತ ಮಾಗಿದ ಪಕ್ವಗೊಂಡ‌ ಭಾವವುಳ್ಳವರು ಭಾವಸಾರಾಯರು 
ಕಳಿತ ಮಾಗಿದ ಪಕ್ವಗೊಂಡ‌ ಜ್ಞಾನದಿಂದ ಜ್ಞಾನಸಾರಾಯರು
ಕಳಿತ ಮಾಗಿದ ಪಕ್ವಗೊಂಡ‌ ಭಕ್ತಿಯುಳ್ಳವರು ಭಕ್ತಿಸಾರಾಯರು

ತನು ಮನ ಭಾವ ಭಕ್ತಿ ಜ್ಞಾನ ಸಾರಾಯಾರಾಗಲು ಇಷ್ಟಲಿಂಗ ಪೂಜೆ ಬೇಕು, ಲಿಂಗಾಂಗಸಾಮರಸ್ಯ ಸಾಧನೆ ಬೇಕು,  ಶಿವಯೋಗ ಬೇಕು. ಇವರೇ ಶಿವ ವನ್ನು ಅರಿತವರು.

ಇಂತಹ ಸಾರಾಯರ ಸತ್ಸಂಗವನ್ನು ತೋರು... ಇಂತಲದಲ್ಲದವರ, ನಿಮ್ಮನರಿಯದವರ ಸಂಗ ಆ‌ ಕಡೆ ಇರಲಿ,‌ಅಂತವರ ಮೊಗವನ್ನೂ ಎನಗೆ ತೋರದಿರಾ ಎನ್ನುವರು ಬಸವಣ್ಣ. ಸಜ್ಜನರ ಸಹವಾಸ ಅನ್ನುವುದಕ್ಕಿಂತ ದಿಟ ಅನುಭಾವಿಗಳ‌ ಸತ್ಸಂಗದ ಮಾತು‌ ಎಂದು ಕೂಡ ಹೇಳಬಹುದು.
--

#ಸಾರಾಯ ಪದಾರ್ಥ ದ ಬಗ್ಗೆ ಚನ್ನಬಸವಣ್ಣನ‌ ಮಾತುಗಳಲ್ಲಿ!

ಸಾರಾಯ ಪದಾರ್ಥವನಾರಯ್ಯಾ ಅರಿವರು ? ಆರರಿಂದ ಬೇರೆ ತೋರಲಿಲ್ಲೆನಿಸಿತ್ತು.
ಹೆಸರೆನಿಸಿಕೊಂಬಡೆ ಹೆಸರು ಮುನ್ನಿಲ್ಲ ಹೆಸರೆಲ್ಲವೂ ಪರಿಣಮಿಸಲಾಯಿತ್ತು. ಕಂಡೆನೆಂದಡೆ ಕಾಣಲಾಯಿತ್ತು
ಕಂಡು ನುಡಿಸುವಂಥದಲ್ಲ ಕಂಡಾತ ಕಲಿಕೆಯೊಳಗಿಲ್ಲದಂತಿಪ್ಪ
ಕಾರ್ಯವಿಲ್ಲದ ಕಾರಣಕರ್ತ. ಆರರಿಂದತ್ತ ತಾನಿಲ್ಲೆಂದೆನಿಸಿಕೊಂಡ ಕೂಡಲಚೆನ್ನಸಂಗಯ್ಯಾ
ಆ ಮಹಾಲಿಂಗದ ಅನುಭಾವ ಶರಣಫಲದ ಸಂಬಂಧವ ಮೀರಿತ್ತು.

ಇಲ್ಲಿ #ಸಾರಾಯ ಎಂಬುದು ಪದಾರ್ಥ ( = ವಸ್ತು, ಘನ, ಶಿವ,‌ ಜಗತ್ತಿನ ತಿರುಳು). ಪದಾರ್ಥ =  ಪದದ ಅರ್ಥ (meaning of the word /position ಎಂಬುದು ಇಲ್ಲಿಗೆ ಹೊಂದದು.

ಶನಿವಾರ, ಜನವರಿ 04, 2025

ಮುತ್ತೈದೆ - ನಿಟ್ಟೈದೆ

ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು:
ಆನು ಮುತ್ತೈದೆ, ಆನು ನಿಟ್ಟೈದೆ.
ಕೂಡಲಸಂಗಯ್ಯನಂತಪ್ಪ ಎನಗೊಬ್ಬ ಗಂಡನುಂಟು!

ಬಸವಣ್ಣನವರ ಈ ವಚನದಲ್ಲಿ "ಶರಣಸತಿ-ಲಿಂಗಪತಿ" ಭಾವ ಕಾಣಬಹುದು.‌ ಶರಣಸ್ಥಲದಲ್ಲಿ ಎದ್ದು ಕಾಣುವ ಅನುಭವ ಇದು. ಮೇಲಿನ ವಚನವು ಭಕ್ತನಶರಣಸ್ತಲ ದ ವಚನ. 

ಪದಗಳ ಬಗ್ಗೆ: 
ಮುತ್ತು ಐದೆ ~ ಮುತ್ತೈದೆ  An elderly woman whose husband is alive. ಮದುವೆಯಾದ ಹೆಣ್ಣು.
ನಿಡಿದು ಐದೆ ~ ನಿಟ್ಟೈದೆ An aged woman, whose husband is alive (whose state is regarded as auspicious). - ದೀರ್ಘ ಸುಮಂಗಲೆ. 
ಗಂಡ ~ husband . ಕನ್ನಡದ ಈ ಪದ (ಗಂಡ) ಸಂಸ್ಕೃತಕ್ಕೂ ಹೋಗಿ ಕಾಂತ ನಾಗಿ ಬಳಕೆಯಲ್ಲಿದೆ.

ಮುತ್ತು, ಮುದಿ : advanced age, oldness, old age, priority; 
ಮುದುಕ / ಮುದುಕು : old man; 
ಮುದಕಿ ಮುದಿಕಿ ಮುದುಕಿ : old women
ಮುತ್ತ / ಮುದುಪ : old man; 
ಮುದು / ಮುತ್ತ್ :  mode to advance in growth, increase, become full-grown, mature, advance in years, become old; n. old age,
ಮುದುಕುತನ , ಮುಪ್ಪು :  old age;
ಮೂದೇವಿ : elder sister of Lakṣmī, goddess of misfortune. 

ನಿಡಿದು ~ ನೀಳ, ನಿಡುಪು, ಉದ್ದ, long, stretched

ಹೈದ ಹೈದೆ ಅಚ್ಚಗನ್ನಡದ ಪದಗಳು. ಇವೇ ಆಡುನುಡಿಯಲ್ಲಿ ಅಯ್ದ ಅಯ್ದೆ ಗಳಾಗಿವೆ. ಹುಡುಗ ಹುಡುಗಿ ಎಂದು ಹುರುಳು. ಅಯ್ದೆ / ಐದೆ ಎಂದರೆ a woman whose husband is alive ಎಂದು‌ ಕೂಡ.

ಶುಕ್ರವಾರ, ಜನವರಿ 03, 2025

(ಙಞಣನಮ) ಮೂಗುಲಿಗಳ ಉಲಿಯುವಿಕೆ!

ಸೊನ್ನೆ (ಂ, ೦) ಅನ್ನೋ ಗುರುತನ್ನು ನಾವು‌ ಕನ್ನಡ ಬರವಣಿಗೆಯಲ್ಲಿ ಬಳಸುತ್ತೇವೆ.‌ ಕನ್ನಡದ ಮೇಲರಿಮೆ ಏನಪ ಅಂದ್ರೆ "ಆಡುವಂತೆಯೇ ಬರೆವುದು".

ಆದರೆ ೦ ಬಂದ ಪದಗಳಲ್ಲಿ ಮಾತ್ರ (ಎತ್ತುಗೆಗೆ : ಕೊಂಗ, ಕೆಂಚ, ಕೆಂಡ, ಕಂತು, ಕಂಬ)  ಬರೆಯೋದು ಒಂದು ತೆರನಾದರೆ ಓದೋದೇ ಬೇರೆ ತರ. ಈ  #ಂ ಎನ್ನುವ ಗುರುತಿನ "ಬಳಕೆ"  ಕನ್ನಡಕ್ಕೆ ಹೊರಗಿಂದ ಬಂದದ್ದು ಎನ್ನುವುದು ಇದಕ್ಕೆ ಕಾರಣ ಇರಬಹುದು.

ಇದರ ಬಗ್ಗೆ ಒಂದೆರಡು ಸಾಲುಗಳು....

ಉಸಿರಿಲ್ಲದೆ ಉಲಿಯಿಲ್ಲ. ಮಾತಾಡುವಾಗ ಹೆಚ್ಚಿನೆಲ್ಲ ಬಾರಿ ನಾವು ಈ ಉಸಿರನ್ನು ಬಾಯಿಯ ಮೂಲಕ ಹೊರಗೆಡವ್ತೀವಿ. ಆದರೆ ಕೆಲವು ಬರಿಗೆಗಳನ್ನು ಉಲಿಯುವಾಗ - ಬಾಯಿಯಿಂದ ಹೊರಬರುವ ಗಾಳಿಯನ್ನು - ಸೊಲ್ಪ ಮಟ್ಟಿಗೆ ತೆಡೆದು - ಅದೇ ಗಾಳಿಯನ್ನು ಮೂಗಿನ ಮೂಲಕ - ಹೊರತಳ್ಳುತ್ತೇವೆ. ಮೂಗಿನ ನೆರವು ಇಲ್ಲದೆ ಉಲಿಯಲು ಆಗದ ಕೆಲ ಬರಿಗೆ / ಉಲಿಗಳು ಇವೆ. #ಙಞಣನಮ ಅನ್ನೋವೇ ಇವು. ಈ ಅಯ್ದು ಉಲಿಗಳನ್ನು ಸಕ್ಕದದಲ್ಲಿ ಅನುನಾಸಿಕ ಅಂತಾರೆ ಕನ್ನಡದಲ್ಲಿ #ಮೂಗುಲಿ ಅಂತಾರೆ. 

ಇತ್ತೀಚೆಗಂತೂ ಈ ಬರಿಗೆಗಳು ಕನ್ನಡ ಬರವಣಿಗೆಯಿಂದ ಕಾಣೆಯಾಗಿವೆ. "ಸಂಸ್ಕೃತ ಭೂಯಿಷ್ಟ ಕನ್ನಡವೇ ಶುದ್ದ ಕನ್ನಡ" ಅನ್ನೋ ಭ್ರಮೆ ಹೊತ್ತಿರುವಂತರ‌ ಕಡೆಯಿಂದ ಅವರಿಗೇ ಅರಿವಿಲ್ಲದೆ ಆದ ತಪ್ಪು ಇದೆ ಎನ್ನಬಹುದು. 

ಈ ಸೊನ್ನೆಗೆ ಸಕ್ಕದದಲ್ಲಿ ಅನುಸ್ವಾರ (ಅಂ) ಅಂತಾರೆ. ಇದೊಂದು derived nasal sound. ಇದೊಂದು ಬರಿಗೆಯ ಗುರುತೇ ಹೊರತು ಒಂದು ಉಲಿ / ತೆರೆಯುಲಿ / ಸ್ವರವಲ್ಲ.

೦ ಸೊನ್ನೆಯನ್ನು ಹೇಗೆ ಉಲಿಯುವುದು ಅನ್ನೋದಕ್ಕೆ ನಿಸರ್ಗವೇ ನೀಡಿದ ಕಟ್ಟಳೆಗಳು ಇವೆ. ಂ / ೦ ಯ ಉಲಿಯುವಿಕೆ ಇದರ ನಂತರ ಬರುವ ಬರಿಗೆ ಮೇಲೆ ನಿಂತಿದೆ. 

ಕಟ್ಟಳೆ ೧. 
ಕ ಖ ಗ ಘ ಙ ಗಳು ಕವರ್ಗ / ಕ ಗುಂಪು. ಇವನ್ನು ಉಲಿಯಲು ಗಂಟಲಿನಿಂದ ಉಸಿರು ಹೊರಡುತ್ತದೆ. ಇವಕ್ಕೆ ಕಂಠ್ಯ ಎನ್ನುವರು. ಗಂಟಲುಲಿ ಎನ್ನವರು.

ಂ ಯ ನಂತರ ಮೇಲಿನ ಬರಿಗೆಗಳಲ್ಲಿ ಯಾವುದಾರೂ ಬಂದರೆ ಈ ಂ ಯನ್ನು ನಾವು ಙ ದಂತೆ‌ ಆಡುತ್ತೇವೆ.

ಎತ್ತುಗೆ :
ಕಂಕ = ಕಙ್ಕ 
ಕೊಂಗ = ಕೊಙ್ಗ

ಕಟ್ಟಳೆ ೨. 
ಚಛಜಝಞ ಗಳು ಚವರ್ಗ / ಚಗುಂಪಿನಲ್ಲಿ ಬರುತ್ತವೆ. ಸೊನ್ನೆ/ಂ ಯ ನಂತರ ಇವುಗಳಲ್ಲಿ ಒಂದು ಬರಿಗೆ ಬಂದರೆ ಇಲ್ಲಿನ ಂ ಯನ್ನು ಞ ಅಂತೆ ಉಲಿಯುವರು.

ಎತ್ತುಗೆ: 
ಕೆಂಚ = ಕೆಞ್ಚ 
ಕೆಂಜಗ = ಕೆಞ್ಜಗ 

ಕಟ್ಟಳೆ ೩: 
ಟಠಡಢಣ ಗಳು ಟವರ್ಗ / ಟ ಗುಂಪಿನಲ್ಲಿ  ಬರುತ್ತವೆ. ಈ ಗುಂಪಿನ ಬರಿಗೆಗಳಲ್ಲೊಂದು ಂ ಆದ ಮೇಲೆ ಬಂದರೆ ಇಲ್ಲಿನ ೦ ಯನ್ನು ಣ ದಂತೆ ಉಲಿಯುವರು.

ಎತ್ತುಗೆ:
ಕಂಟಕ = ಕಣ್ಟಕ
ಕಂಠ = ಕಣ್ಠ
ಕೆಂಡ = ಕೆಣ್ಡ

ಕಟ್ಟಳೆ ೪: 
ತಥದಧನ ಗಳು ತವರ್ಗ / ತ ಗುಂಪಿನಲ್ಲಿ ಬರುತ್ತವೆ. ಈ ತ ಗುಂಪಿನ ಬರಿಗೆಗಳಲ್ಲೊಂದು ಂ ಆದ ಮೇಲೆ ಬಂದರೆ ಇದನ್ನು ನ ದಂತೆ ಉಲಿಯುವರು.

ಎತ್ತುಗೆ: 
ತಂತು, ಕಂತು  = ತನ್ತು, ಕನ್ತು
ಬಂದ, ಕಂದ = ಬನ್ದ, ಕನ್ದ 

ಕಟ್ಟಳೆ ೫: 
ಪಫಬಭಮ ಗಳು ಪವರ್ಗ / ಪ ಗುಂಪಿನವು. ಈ ಪ ಗುಂಪಿನ ಬರಿಗೆಯಲ್ಲೊಂದು ಂ ಆದಮೇಲೆ ಬಂದರೆ ಈ ಂ ಯನ್ನು ಮ ಎಂಬಂತೆ ಉಲಿಯುವರು.

ಎತ್ತುಗೆ: 
ಪಂಪ = ಪಮ್ಪ
ಕಂಬ = ಕಮ್ಬ

ಕಟ್ಟಳೆ ೬. 
ಮೇಲಿನವು ಗುಂಪು ಮಾಡಿದ ಬರಿಗೆಗಳು. ಅವರ್ಗೀಯ / ಗುಂಪು ಮಾಡದ ಬರಿಗೆಗಳೂ ಇವೆ. ಶ ಷ ಸ ಹ ಮುಂತಾದವು. ಪದದಲ್ಲಿ ಈ ಬರಿಗೆಗಳು ಂ ಆದಮೇಲೆ ಬಂದರೆ .. ಕನ್ನಡದಲ್ಲಿ ಹೆಚ್ಚಿನೆಲ್ಲಾ ಬಾರಿ‌ "ಮ" ವನ್ನೇ ಬಳಸಿರುವುದು ನನ್ನ ಗಮನಕ್ಕೆ ಬಂದಿದೆ.

ಎತ್ತುಗೆ: 
ಸಿಂಹ = ಸಿಮ್ಹ 
ವಂಶ = ವಮ್ಶ
ಕಂಸ = ಕಮ್ಸ 
ಸಂಸ್ಕೃತ = ಸಮ್‌ಸ್ಕೃತ 

ಙಞಣನಮ ದಂತ ಮೂಗುಲಿಗಳು ಮತ್ತು ರ ಱ ಲ ೞ ಳ alveolar approximant ಗಳು ಜೊತೆಯಲ್ಲಿ ಬಂದಗ .. ಉಸಿರನ್ನು - ಮೂಗಿನ ಮೂಲಕ ತಳ್ಳಿ - ಕೂಡಲೇ ಮೂಗಿನ ಗಾಳಿಯನ್ನು ತಡೆದು - ಬಾಯಿಯ ಮೂಲಕ ಹೊರತಳ್ಳುವ - ಉಸಿರನ್ನು ನಾಲಗೆಯ ಮೂಲಕ ಹಲ್ಲಿನ ಹಿಂಬಾಗದ ಮೇಲ್ಬಾಯಿಗೆ ತಳ್ಳುವ - ಕೆಲಸ ತೊಡಕೇ ಮತ್ತು ನಮ್ಮ "ನಾಲಗೆ-ಉಸಿರು-ಸದ್ದುಪೆಟ್ಟಿಗೆ" ಯ ಏರ್ಪಾಟು ಇದನ್ನು  ಬೆಂಬಲಿಸುವುದಿಲ್ಲ. ಹಾಗಾಗಿ ರ ಱ ಗಳ ಹಿಂದೆ ಈ ಮೂಗುಲಿಗಳು ಬರುವುದಿಲ್ಲ. ಬಂದರೂ ತುಂಬಾ ಕಡಿಮೆ.

ಬಡಗು ಕರ್ನಾಟಕದಲ್ಲಿ ಮ ಬದಲು ವ ಉಲಿಯುವ ಬಳಕೆಯೂ ಇದೆ. ಸುಯ್ऽ ಅಂತ ಗಾಳಿ ಬೀಸುವ ಸದ್ದಿನಲ್ಲೊಂದು ಮೂಗುಲಿ ಇದೆ. ಪೋಮ್ ಪೋಮ್ ಅನ್ನೋ ಬಸ್ಸಿನ ಸದ್ದಿನಲೂ ಒಂದು ಮೂಗುಲಿ ಇದೆ. ಆದರೆ‌ ಇವಾವನ್ನೂ ಬರವಣಿಗೆಗೆ‌ ನಾವು ತಂದಿಲ್ಲ. 

ಬಡಗಿನ ಭಾರತದ ಹಿಂದಿ ಮುಂತಾದ ನುಡಿಗರು ಸಂಸ್ಕೃತ ವನ್ಬು ಸ‍ನ‌್‍ಸ್ಕೃತ ಅಂತಾರೆ. ಸಂಸ್ಕಾರವನ್ನು ಸನ್‌ಸ್ಕಾರ ಅಂತಾರೆ. ಸಂಸ್ಕೃತ ದ ಮೂಗುಲಿಯ ನೆಲೆಯಲ್ಲಿ ನಾವು ಮ ಬಳಸಿದರೆ ಅವರು ಹೆಚ್ಚಾಗಿ ನ ಬಳಸುತ್ತಾರೆ. ಅವರ ನುಡಿಯ ಕಟ್ಟಳೆಗಳು ಬೇರೆ.

ಬಡಗು ಕರ್ನಾಟಕದ ಕನ್ನಡಿಗರಲ್ಲೂ ಈ ನೆರಳು ಬಿದ್ದಂತಿದೆ. ತೆಂಕಣದ ಕನ್ನಡಿಗರು ಸಿಂಹವನ್ನು ಸಿಮ್ಹ ಎಂದರೆ ಬಡಗಿನ ಕನ್ನಡಿಗರು ಸಿವ್ಹ ಅಂತಾರೆ. ಬಾವಿಯನ್ನು ಬಾವ್‌ವಿ ಅಂತಾರೆ. ಇಲ್ಲಿನ ವ ಉಲಿಯು ನಮ್ಮ ಮ ಮತ್ತು ವ ಗಳ ನಡುವೆ ಬರುವೆ ಉಲಿ. 

-----
ಕೊಸರು:
ಎಲ್ಲೋ ಬರೆದಿದ್ದು ಇಲ್ಲೂ ಇರಲಿ ಅಂತ.

ಬುಧವಾರ, ಜನವರಿ 01, 2025

ಬಸವಣ್ಣನವರ ಕೊನೆಯ ದಿನಗಳು

ಸಾಗರ ಬ್ರಹ್ಮವನು ಸಾಧಿಸಿ ಬ್ರಹ್ಮದಲ್ಲಿ|
ನೀಗಿ "ನಿಃಪತಿಯಾದ ಮಳೆಯ ಮಠ"ದಿ|
ಆಗದಾ ಅರಸನನ್ನು ಕಳಿದು ಕಂಗೊಳಿಸಿದನು|
ಯೋಗಿ ಗುರುಬಸವನೈ ಯೋಗಿನಾಥಾ.||
- ಸಿದ್ಧರಾಮೇಶ್ವರ
----
ಸಿದ್ಧರಾಮರು ಬಸವಣ್ಣನನ್ನು ಕಣ್ಣಾರೆ ಕಂಡವರು. ದಶಕಗಳ ಕಾಲ ಬಸವಣ್ಣನೊಡನೆ ಹತ್ತಿರದಿಂದ ಒಡನಾಡಿದವರು‌. ಬಸವಣ್ಣನ ಹೆಗಲಿಗೆ ಹೆಗಲು ಜೋಡಿಸಿ‌ ಕೆಲಸ ಮಾಡಿದವರು. ಇಂತಹ ಪ್ರತ್ಯಕ್ಷದರ್ಶಿಗಳು ಬಸವಣ್ಣನ ಸಾವಿನ ಬಗ್ಗೆ‌ ಏನು ಹೇಳುತ್ತಾರೆ ಎನ್ನುವುದು ಮುಖ್ಯವಾಗುವುದು.

ಈ ತ್ರಿವಿಧಿಯಲ್ಲಿ ಸಿದ್ದರಾಮರು "*#ಮಳೆಯಮಠ* ದಲ್ಲಿ ಬಸವಣ್ಣ #ನಿಷ್ಪತ್ತಿ ಯಾದ" ಎನ್ನವರು. ಪತ್ತಿ ಎಂದರೆ ಹುಟ್ಟು. ನಿಃಪತ್ತಿ ಎಂದರೆ ಹುಟ್ಟು ಇಲ್ಲದೇ ಇರುವುದು. ಬಯಲು, ಐಕ್ಯ. ನಿಃಪತ್ತಿ ಪದವೇ ಆಡುಮಾತಿನಲ್ಲಿ ನಿಷ್ಪತ್ತಿ ಆಗಿದೆ.

ಸಕಲೇಶಮಾದರಸ ಬಸವಣ್ಣನೊಡನಿದ್ದ ಇನ್ನೊಬ್ಬ ಶರಣ. ಈತನ ತಂದೆ #ಶಿವಯೋಗಿಮಲ್ಲರಸ. ಈತ‌ ಮೊದಲು (ಕಲಕುರ್ಕಿಯ) ಅರಸನಾಗಿದ್ದ. ನಂತರ ವೈರಾಗ್ಯ ಬಂದು ರಾಜ್ಯಭಾರವನ್ನು ಮಗ ಸಕಲೇಶಮಾದರಸನಿಗೆ ನೀಡಿ ಶ್ರೀಶೈಲಕ್ಕೆ ತೆರಳುವನು. ಅಲ್ಲಿ "ಮಳೆಯಮಠ" ದಲ್ಲಿ ನೆಲೆಸುವನು. ಈ ಮಳೆಯಮಠದ ಶಿವಯೋಗಿಯನ್ನು ಹಲವು ಪುರಾಣಕಾರರು / ಚರಿತ್ರೆಕಾರರು ಹಲವು ಬಾರಿ ನೆನೆವರು‌. ಇವನನ್ನು #ಮಳೆಯಮಲ್ಲೇಶ / ಮಳೆಯಮಲ್ಲರಸ / ಶಿವಯೊಗಿಮಲ್ಲರಸ / ಮಳೆಯಮಲ್ಲಾರ್ಯ / ಮಳೆಯಮೈಲಾರಿ ಮುಂತಾದ ಹೆಸರುಗಳಿಂದ ಕರೆವರು.

ಶ್ರೀಶೈಲದ ಬಳಿಯ ನಾಗಾರ್ಜುನ ಸಾಗರದ ಒಡಲಿನಲ್ಲಿ "ಮಳೆಯಮಠ" ಈಗ ಮುಳುಗಡೆಯಾಗಿದೆ. ಈ ಮಠದಲ್ಲೇ ಬಸವಣ್ಣನವರು ಬಯಲು ಕಂಡಿದ್ದು. ಸಿದ್ಧರಾಮೇಶ್ವರ ರ ತ್ರಿವಿಧಿ‌‌ ಇದನ್ನೇ ತಿಳಿಸುವುದು.

ಅಳಿಯದೇ ಕೂಡಿದವರು / ಕೂಡಬಲ್ಲವರು ಬಸವಣ್ಣ‌. ಇಂತಹ ಯೋಗ ನಮಗಿತ್ತವರು. ದೇಹಿವಿಡಿದೂ ಕೂಡಬಲ್ಲಾತ ಬಸವಣ್ಣ - ಕೂಡಲಸಂಗಮದಲ್ಲಿ (ಶ್ರೀಶೈಲದ ಬಳಿ) ಮಳೆಯಮಠದಲ್ಲಿ ದೇಹಬಿಟ್ಟು ಬಯಲಾದ .
---
ಕೂಡಲ, ಕಪ್ಪಡಿ, ಮತ್ತು ಸಂಗಮ ಮೂರೂ ಪದಗಳ ಅರ್ಥ ಒಂದೇ - ಕೂಡುವುದು. ಆದರೆ ಜಾಗಗಳ‌ ನೊಟದಿಂದ  "#ಕಪ್ಪಡಿಸಂಗಮ" ವೇ ಬೇರೆ  "#ಕೂಡಲಸಂಗಮ" ವೇ ಬೇರೆ ಎನ್ನುವರು.
ಕಪ್ಪಡಿಸಂಗಮ::  ಕೃಷ್ಣ - ಘಟಪ್ರಭ ನದಿಗಳು ಕೂಡುವ ಎಡೆ. 
ಕೂಡಲಸಂಗಮ::  ಕೃಷ್ಣಾ- ಮಲಾಪಹಾರಿ ನದಿಗಳು ಕೂಡುವ ಎಡೆ.
--
#ಬಸವಣ್ಣ ನ ಕೊನೆಯದಿನಗಳು.