ಗುರುವಾರ, ನವೆಂಬರ್ 02, 2023

ವಚನಗಳಲ್ಲಿ ಚಕ್ರಗಳು

ಅವಿರಳ ಜ್ಞಾನಿ ಚನ್ನಬಸವಣ್ಣನವರ ಒಂದು ವಚನ 

ಗುದಸ್ಥಾನದಲ್ಲಿ ಆಧಾರಚಕ್ರ
ಅಲ್ಲಿಗೆ ಪೃಥ್ವಿಯೆಂಬ ಮಹಾಭೂತ,
ಸದ್ಯೋಜಾತವಕ್ತ್ರ, ಬ್ರಹ್ಮ ಪೂಜಾರಿ, 
ಸುವರ್ಣದ ತೇಜ, ಬಾಲರವಿಕೋಟಿ ಪ್ರಕಾಶ,
ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ ಸುವರ್ಣಮಯಲಿಂಗ - ಅದು ಆಚಾರಲಿಂಗ, 
ಅದಕ್ಕೆ ಬೀಜಾಕ್ಷಾರ ಓಂ ನಾಂ ನಾಂ ನಾಂ ಎಂಬ ನಾದಘೋಷ. ಎಸಳು ನಾಲ್ಕರಲ್ಲಿ ವ, ಶ, ಷ, ಸ ಎಂಬ ನಾಲ್ಕಕ್ಷರ.
ಅದು ದೇವರಿಗೂ ತಮಗೂ ಪಶ್ಚಿಮಮುಖ- ಸದ್ಯೋಜಾತ ವಕ್ತ್ರ,
ಆಧಾರಚಕ್ರ.

----

ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ
ಅಲ್ಲಿಗೆ ಅಪ್ಪುವೆಂಬ ಮಹಾಭೂತ, 
ವಾಮದೇವವಕ್ತ್ರ, ವಿಷ್ಣು ಪೂಜಾರಿ, 
ನೀಲದ ತೇಜ, ಬಾಲದ್ವಿಕೋಟಿ ಸೂರ್ಯಪ್ರಕಾಶ,
ಅರೆಸಳಿನ ತಾವರೆಯ ಮಧ್ಯದಲ್ಲಿ ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ - ಅದು ಗುರುಲಿಂಗ; 
ಅದಕ್ಕೆ ಬೀಜಾಕ್ಷರ ಓಂ ಮಾಂ ಮಾಂ ಮಾಂ ಎಂಬ ನಾದಘೋಷ.
ಎಸಳು ಆರರಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರ
ಅದು ದೇವರಿಗೂ ತಮಗೂ ಉತ್ತರಮುಖ-ವಾಮದೇವವಕ್ತ್ರ,
ಸ್ವಾದಿಷ್ಠಾನಚಕ್ರ.

----

ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ,
ಅಲ್ಲಿಗೆ ಅಗ್ನಿಯೆಂಬ ಮಹಾಭೂತ, 
ಅಘೋರವಕ್ತ್ರ ರುದ್ರ ಪೂಜಾರಿ, 
ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ,
ಹತ್ತೆಸಳಿನ ತಾವರೆಯ ಮಧ್ಯದಲ್ಲಿ ಮಾಣಿಕ್ಯವರ್ಣದ ಲಿಂಗ-ಅದು ಶಿವಲಿಂಗ, 
ಅದಕ್ಕೆ ಬೀಜಾಕ್ಷರ ಓಂ ಶಿಂ ಶಿಂ ಶಿಂ ಎಂಬ ನಾದಘೋಷ.
ಎಸಳು ಹತ್ತರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ
ದಶಾಕ್ಷರ.
ಅದು ದೇವರಿಗೂ ತಮಗೂ ದಕ್ಷಿಣಮುಖ - ಅಘೋರವಕ್ತ್ರ, ಮಣಿಪೂರಕಚಕ್ರ.

----

ಹೃದಯ ಸ್ಥಾನದಲ್ಲಿ ಅನಾಹತಚಕ್ರ,
ಅಲ್ಲಿಗೆ ವಾಯುವೆಂಬ ಮಹಾಭೂತ, 
ತತ್ಪುರುಷವಕ್ತ್ರ, ಈಶ್ವರ ಪೂಜಾರಿ 
ಕಪೋತವರ್ಣದ ತೇಜ, ಬಾಲಚತುಷ್ಕೋಟಿ ಸೂರ್ಯಪ್ರಕಾಶ,
ಹನ್ನೆರಡೆಸಳಿನ ತಾವರೆಯ ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ ಅದು ಜಂಗಮಲಿಂಗ, 
ಅದಕ್ಕೆ ಬೀಜಾಕ್ಷರ ಓಂ ವಾಂ ವಾಂ ವಾಂ ಎಂಬ ನಾದಘೋಷ. ಎಸಳು ಹನ್ನೆರಡರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟಂಠ
ಎಂಬ ದ್ವಾದಶಾಕ್ಷರ
ಅದು ದೇವರಿಗೂ ತಮಗೂ ಪೂರ್ವಮುಖ-ತತ್ಪುರುಷ ವಕ್ತ್ರ, ಅನಾಹತ ಚಕ್ರ.

----

ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ
ಅಲ್ಲಿಗೆ ಆಕಾಶವೆಂಬ ಮಹಾಭೂತ, 
ಈಶಾನವಕ್ತ್ರ, ಸದಾಶಿವ ಪೂಜಾರಿ, 
ವಿದ್ಯುಲ್ಲತೆಯ ತೇಜ, ಬಾಲಪಂಚಕೋಟಿ ಸೂರ್ಯಪ್ರಕಾಶ,
ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ ಅನಂತಕೋಟಿ ಮಿಂಚುಗಳ ವರ್ಣದ ಲಿಂಗ_
ಅದು ಪ್ರಸಾದಲಿಂಗ, 
[ಓಂ ಯಾಂ ಯಾಂ ಯಾಂ ಎಂಬ ನಾದಘೋಷ]. 
ಎಸಳು ಹದಿನಾರರಲ್ಲಿ ಅ ಆ ಇ ಈ ಉ ಊ ಋ Iೂ ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರ. 
ಅದು ದೇವರಿಗೂ ತಮಗೂ ಊಧ್ರ್ವಮುಖ_ ಈಶಾನವಕ್ತ್ರ, ವಿಶುದ್ಧಿಚಕ್ರ.

----

ಭ್ರೂಮಧ್ಯದಲ್ಲಿ ಆಜ್ಞಾಚಕ್ರ
ಅಲ್ಲಿಗೆ ಮನವೆಂಬ ಮಹಾಭೂತ, 
ಶ್ರೀಗುರುವೆ ವಕ್ತ್ರ
ಮಾಹೇಶ್ವರ ಪೂಜಾರಿ, ಜ್ಯೋತಿರ್ವರ್ಣದ ತೇಜ.
ಬಾಲಷಟ್ಕೋಟಿ ಸೂರ್ಯಪ್ರಕಾಶ
ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ
ಎಡಗಡೆಯ ಪಾದ ಕೆಂಪು ವರ್ಣ, ಬಲಗಡೆಯ ಪಾದ ಶ್ವೇತವರ್ಣ-ಅದು ಮಹಾಲಿಂಗ.
ಅದಕ್ಕೆ ಬೀಜಾಕ್ಷರ `ಓಂಕಾರನಾದ ಘೋಷ.
ಎಸಳೆರಡರಲ್ಲಿ ಅಕ್ಷರ ಹಂ ಸಂ ಎಂಬ [ಎರಡಕ್ಷರ]
ಅದು ದೇವರಿಗೂ ತನಗೂ ಗಂಭೀರ ಮುಖ-ಶ್ರೀಗುರುವಕ್ತ್ರ, ಆಜ್ಞಾಚಕ್ರ.

----

ಅಲ್ಲಿಂದತ್ತ ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ಅಲ್ಲಿಗೆ
ಚಂದ್ರನೆಂಬ ಮಹಾಭೂತ, 
ಲಿಂಗವಕ್ತ್ರ ಪರಮೇಶ್ವರ ಪೂಜಾರಿ, 
ಮಹಾಜ್ಯೋತಿರ್ವರ್ಣದ ತೇಜ, ಬಾಲ ಅನಂತಕೋಟಿಸೂರ್ಯಪ್ರಕಾಶ
ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ
ಮಹಾಜ್ಯೋತಿರ್ವರ್ಣದ ಲಿಂಗ. ಅದು ನಿರಾಮಯ ಲಿಂಗ,
ಅದಕ್ಕೆ ಬೀಜಾಕ್ಷರ ಪ್ರಣವ ನಾದ ಘೋಷ,
ಎಸಳೊಂದುನೂರ ಎಂಟು ಸಾವಿರದಲ್ಲಿ, ಒಂದನೂರ ಎಂಟು ಸಾವಿರ ಅಕ್ಷರ_
ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ.
ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ
ವಿಶ್ವತೋ ಬಾಹುರುತ ವಿಶ್ವತಃ ಪಾತ್
ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ
ದ್ರ್ಯಾವಾ ಭೂಮೀ ಜನಯನ್ ದೇವ ಏಕಃ
ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ ಕೂಡಲಚೆನ್ನಸಂಗಮದೇವಾ

ಬುಧವಾರ, ನವೆಂಬರ್ 01, 2023

ನಲವರಿಕೆ‌ ಮತ್ತು ನಲ್ವಾರೈಕೆ ಗಳು!!

ನಾವು ಮತ್ತೆ ಮತ್ತೆ ಬಳಸುವ #ನಲವರಿಕೆ, #ನಲ್ವಾರೈಕೆ ಅನ್ನುವು ಪದಗಳ ಹುರುಳು‌ ಹಲವರಿಗೆ ಇನ್ನೂ ದಕ್ಕಿಲ್ಲ ಅನ್ನಿಸಿದ್ದರಿಂದ ಈ‌ ಕೆಳಗಿನ ಸಾಲುಗಳು. ಇವೆರಡೂ ಅಚ್ಚಗನ್ನಡದ ಹರಸುವ, ಒಳಿತು ಬಯಸುವ ಸಾಲುಗಳು!! 

ನಲ್ + ಪಾರಯಿಕೆ > ನಲ್ ವಾರಯಿಕೆ‌ > ನಲ್ವಾರಯಿಕೆ > ನಲ್ವಾರೈಕೆ!! 
(ವಕಾರಾದೇಶ - ಪ ಇರುವ ಕಡೆ ವ ಬಂದಿದೆ)

#ನಲ್ವಾರೈಕೆ ಎಂದರೆ "ಒಳಿತಿನ ಬಯಕೆ".

---
ನಲವು + ಅರಿಕೆ > ನಲವರಿಕೆ‌

(ಲೋಪ ಸಂದಿ - ಉ ಕಾರ ಲೋಪವಾಗಿದೆ, ಇದರ‌ಜಾಗದಲ್ಲಿ ಅ ಬಂದು‌ ಕೂತಿದೆ) 

#ನಲವರಿಕೆ‌  ‌ಎಂದರೆ delighted to hear ಅನ್ನುವು ಹುರುಳು ತೆಗೆದುಕೊಳ್ಳಬಹುದು. ಒಳಿತಾಗಲಿ / ನಲವಾಗಲಿ ಎಂದು ಬಯಸುವೆ ಎನ್ನಬಹುದು. ನಲಿವಾಯ್ತೆಂದು ತಿಳಿಸುವೆ ಎನ್ನಬಹುದು.

----
ಪದಗಳ ಬಗ್ಗೆ
ನಲವು ಗೆ ಎರಡು ಬೇರುಗಳಿವೆ. ನಳವು, ನಳನಳಿಸು (ಅರಳು, ಹೊಳೆ, bloom,  ಶೋಭಿಸು, joy, delight ) ಗಳ ಹಿಂದಿರುವುದು ಒಂದು ಬೇರಾದರೆ 
ನಲ್, ನಲವು, ನಲಿವು (good, ಒಳಿತು) ಗಳ‌‌ ಹಿಂದೆ ಇರುವುದು ಇನ್ನೊಂದು ಬೇರು!

(ಪಾರಯಿಕೆ > ಹಾರಯಿಕೆ > ಹಾರೈಕೆ) 
ಹರಸು ಹಾರಯಿಸು ಹಾರಯ್ಯುವಿಕೆ ಹಾರೈಕೆ ಹರಕೆ ಮುಂತಾದವೆಲ್ಲ ಅಚ್ಚಕನ್ನಡ ಬೇರಿನ ಪದಗಳು. 
 
#ಪರಸು to utter a benediction, bless; 
ಪರಕೆ /ಹರಕೆ/ಹರಿಕೆ  benediction
ಹಾರೈಕೆ ಎಂದರೆ ಹರಸುವುದು, ಆಶೀರ್ವಾದ ಮಾಡುವುದು. 
(ಒಳಿತನ್ನು) ಬಯಸು, ಅಪೇಕ್ಷಿಸು, ಎದುರುನೋಡು ಎಂಬ ಹುರುಳು‌ಕೂಡ ಇದಕ್ಕೆ ಬರುವುದು.

#ಅರಿಕೆ ಪದಕ್ಕೆ ತಿಳಿಸು, ಮನದಟ್ಟು ಮಾಡು, ಮನವಿ, ಬೇಡಿಕೆ ಮುಂತಾದ ಹುರುಳು ಹೇಳಬಹುದು. ಅಱ, ಅರಿವು, ಅರಿಮೆ, ಅರ್ಥ, ಅರಸ ಮುಂತಾದವೆಲ್ಲ ಒಂದೇ ಬೇರಿನ‌ ಪದಗಳು. 

ಅರಿಯುವಿಕೆ > ಅರಿಕೆ (ಅರಿದದ್ದು ಅರಿಕೆ) 

----
ನಲ್ ಎನ್ನುವುದು ಅಚ್ಚಗನ್ನಡದ ಬೇರು. ನಲಿವು, ನಲ್ಮೆ, ನಲ್ಲ /ನಲ್ಲೆ, ನಲಿ, ನಲ, ನಲವು, ನಲಿವು, ನಲುವು, ನಲ್ವು ಮುಂತಾದ ಹಲವು ಪದಗಳು ಹುಟ್ಟಿವೆ.

ನಲ್ goodness, fairness, fineness; 
ನಲ್ಮೆ goodness, welfare, prosperity; 
ನಲ್ಲ nalla a good, etc., man; goodness, excellence, beauty; 
ನಲ, ನಲವು, ನಲಿವು, ನಲುವು, ನಲ್ವು pleasure, delight; 
ನಲಿ to be delighted, rejoice, be pleased with, be fond of; n. pleasure; 
ನನ್ನಿ truth, love, affection

ಸೊಲ್ಲರಿಮೆ: 
#ಶಬ್ದಮಣಿದರ್ಪಣ ದ ಒಂದು ಕಟ್ಟಲೆ;

ವಿದಿತ ಸ್ವರದಿಂಅನಾದೇಶದಸಹಜ ವ್ಯಂಜನಂಗಳಿಂ
ಪರದ ಪವರ್ಗದ ನೆಲೆಗೆ ಅಕ್ಕುಂ ವತ್ವಂ;
ಪದವಿಧಿಯೊಳ್ಬಹುಳ ವೃತ್ತಿಯಿಂ ವಾಕ್ಯದೊಳಂ!

ಕೆಳಗಿನದ್ದು ಮೇಲಿನದರ ಹುರುಳು.

ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ‘ಪ ಬ ಮ’ (ಪವರ್ಗ) ವ್ಯಂಜನಗಳಿಗೆ ‘ವ’ ಕಾರವು ('ವ'ತ್ವುಂ) ಆದೇಶವಾಗಿ ಬರುವುದು ಕನ್ನಡ‌ ಸೊಲ್ಲರಿಮೆಯ ಗುಣಗಳಲ್ಲಿ ಒಂದು.

"ಪ" ಇರುವಕಡೆ "ವ" ಬರುವ‌ ಎತ್ತಗೆಗಳು ಕೆಳಗಿನವು!! 

ಎಳ ಪೆರೆ > ಎಳ ವೆರೆ > ಎಳವೆರೆ
ಎಳ ಪಳ್ಳಿ > ಎಳ ವಳ್ಳಿ > ಎಳವಳ್ಳಿ
ಕೆನೆ ಪಾಲ್ > ಕೆನೆ ವಾಲ್ > ಕೆನೆವಾಲ್ 
ಕಿಸು ಪಣ್ > ಕಿಸು ವಣ್ > ಕಿಸುವಣ್
ಕೈ ಪಿಡಿ > ಕೈ ವಿಡಿ‌> ಕೈವಿಡಿ
ಎಸರ್ ಪೊಯ್ದು > ಎಸರ್ ವೊಯ್ದು > ಎಸರ್ ಒಯ್ದು > ಎಸರೊಯ್ದು 
ನೀರ್ ಪೊನಲ್ > ನೀರ್ ವೊನಲ್ > ನೀರ್ ಒನಲ್ > ನೀರೊನಲ್
ಮೇಲ್ ಪಾಸು > ಮೇಲ್ ವಾಸು > ಮೇಲ್ವಾಸು
ಬೆಮರ್ ಪನಿ > ಬೆಮರ್ ವನಿ > ಬೆಮರ್‍ವನಿ 
ಇನ್ನೂ ಮುಂತಾದ ಪದಗಳಿವೆ

ಪೆರೆ = ಚಂದ್ರ
ಪಾಲ್ > ಹಾಲು
ಪಣ್ > ಹಣ್ಣು
ಪಿಡಿ > ಹಿಡಿ
ಪೊಯ್ಯು > ಹೊಯ್ಯು
ಪೊನಲು = ಹೊನಲು, torrent stream, ಜರಿ, ಹಳ್ಳ
ಪಾಸು = ಹಾಸು
ಪನಿ = ಹನಿ

---
ನಲವು ಎಂಬ ಪದ ಮೋಳಿಗೆಮಹಾದೇವಿ ಯ ವಚನಗಳಲ್ಲಿ ಈ‌ ಕೆಳಗಿನಂತೆ ಬಳಕೆಯಾಗಿದೆ.

ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ
ಕುಸುಮದ ಗಿಡುವಿಂಗೆ ವಾಸನೆಯುಂಟೆ ಕುಸುಮಕಲ್ಲದೆ ?
ಅದು ಗಿಡುವಿಡಿದಾದ ಕುಸುಮವೆಂಬುದನರಿದು
ಗಿಡುವಿನ ಹೆಚ್ಚುಗೆ; ಕುಸುಮದ ನಲವು; ಸುಗಂಧದ ಬೆಳೆ.
ಭಕ್ತಿಗೆ ಕ್ರೀ, ಕ್ರೀಗೆ ಶ್ರದ್ಧೆ, ಶ್ರದ್ಧೆಗೆ ಪೂಜೆ, ಪೂಜೆಗೆ ವಿಶ್ವಾಸ,
ವಿಶ್ವಾಸಕ್ಕೆ ವಸ್ತು ತನ್ಮಯವಾಗಿಪ್ಪುದು.
ಇದು ತುರೀಯಭಕ್ತಿಯ ಇರವು;
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವ ಮೆಲ್ಲಮೆಲ್ಲನೆ
ಕೂಡುವ ಕೂಟ.
-- 

ನಲಿವು ದಾಸೋಹದ ಸಂಗಣ್ಣನ‌ ವಚನಗಳಲ್ಲಿ ‌ಈ ತರ ಬಳಕೆಯಾಗಿದೆ.
ಕಣ್ಣಿನಿಂದ ನಡೆದು, ಕಾಲಲ್ಲಿ ಮುಟ್ಟಿ ಕಂಡು
ನಾಸಿಕದ ಓಹರಿಯಲ್ಲಿ ದೇಶಿಕನಾಗಿ,
ಕರ್ಣದ ನಾದದಲ್ಲಿ ಗರ್ಭವುದಿಸಿ,
ನಾಲಗೆಯ ತೊಟ್ಟಿಲಲ್ಲಿ ಮರೆದೊರಗಿ
ಅರಿವುತ್ತ ಕರದ ಕಮ್ಮಟದಲ್ಲಿ ಬೆಳೆವುತ್ತ ನಲಿವುತ್ತ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
-- 
ಅರಿಕೆ ಎಂಬ ಪದವು ವಚನಗಳಲ್ಲಿ ‌ಈ ತರ ಬಳಕೆಯಾಗಿದೆ. (ಅರಿದದ್ದು ಅರಿಕೆ) ಅರಿಯುವಿಕೆಯೇ ಅರಿಕೆಯಾಗಿದೆ‌‌ ಎಂದು‌ಕೂಡ ಹೇಳಬಹುದು.

ಅರಿದು ಮಾಡುವ ಮಾಟ ಮರವೆಗೆ ಬೀಜವೆಂದೆ.
ಅದಕ್ಕೆ ಮರೆದರಿವು ತಪ್ಪದು.
ಆ ಅರಿವಿನ ಭೇದ ಎತ್ತಿದ ದೀಪದ ಬೆಳಗಿನಂತೆ.
ಅರಿದು ಮರೆಯದೆ, ಮರೆದು ಅರಿಯದೆ
ಇಂತೀ ಅರಿಕೆಯಲ್ಲಿ ಮಾಡುವವನ ಅರಿವು,
ಹೊತ್ತ ದೀಪದ ನಿಶ್ಚಯದಂತೆ.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ,
ಚನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು
-- ಮೋಳಿಗೆ ಮಾರಯ್ಯ

ಹರಿಗೆಯ ಹಿಡಿದು ರಣವ ಹೊಕ್ಕಲ್ಲಿ, ತನ್ನೆಡೆಗೆ ಮರೆಯಹ ತೆರದಂತೆ,
ತನ್ನಯ ಸತ್ಕ್ರೀ ಭಕ್ತಿಮಾರ್ಗದ ಮಾಟಕೂಟದಿರವು.
ತಾ ಮಾಡುವಲ್ಲಿ ಇದಿರ ರೂಪ ನೋಡಲಿಲ್ಲ.
ಅರಿಕೆಯಲ್ಲಿ ಉಭಯವನರಿಯಬೇಕು.
ಎಲೆಯ ಮರೆಯ ಕಾಯನರಿದಂತೆ,
ದರ್ಶನದ ಮರೆಯ ಅರಿವನರಿಯಬೇಕು,
ಬಂಕೇಶ್ವರಲಿಂಗವನರಿವುದಕ್ಕೆ.

ಹರಸು ಪದ ಸಿದ್ದರಾಮೇಶ್ವರರ  ವಚನಗಳಲ್ಲಿ ‌ಈ ತರ ಬಳಕೆಯಾಗಿದೆ

ಆನೀ ಲೋಕದ ಹರಕೆಯ ಹರಸೆನಯ್ಯಾ.
ಆನೀ ಲೋಕದ ಕೊಡ ಬೇಡೆನಯ್ಯಾ.
ಆನು ಘನ ಹರಸುವೆ.
ಎನಗೆ ನಿಮ್ಮನೆ ಬೇಡಿಹ ಘನವ ಹರಸುವೆ.
ಎನಗಿಂತಪ್ಪ ಕೊಡಕೊಡುವುದು ಇಲ್ಲದಿದ್ದೊಡೊಲ್ಲೆ,
ಕಪಿಲಸಿದ್ಧಮಲ್ಲಿನಾಥಯ್ಯಾ.

ಸುಖ ಬಂದಲ್ಲಿ ನಿಮ್ಮ ಹಾಡಿಹರಸುವೆನಯ್ಯ.
ದುಃಖ ಬಂದಲ್ಲಿ ನಿಮ್ಮ ಕೋಪಿಸಿ ಬಯ್ವೆನಯ್ಯ.
ಅದೇನು ಕಾರಣವೆಂದೊಡೆ :
ಎನ್ನ ಸುಖದುಃಖಂಗಳಿಗೆ ನೀವೆ ಆಧಾರವಾದ ಕಾರಣ,
ನಿಮ್ಮನೆ ಹಾಡುವೆನಯ್ಯ; ನಿಮ್ಮನೆ ಹೊಗಳುವೆನಯ್ಯ.
ನಿಮ್ಮ ಮುಂದೆ ಎನ್ನ ಒಡಲ
ಕಡು ದುಃಖವನೀಡಾಡುವೆನಯ್ಯ ಅಖಂಡೇಶ್ವರಾ
-- ಷಣ್ಮುಖಸ್ವಾಮಿ‌ಗಳು 


ಶನಿವಾರ, ಜುಲೈ 08, 2023

ಭಗವದ್ಗೀತೆ : ರಾಜಸ ತ್ಯಾಗ

ಕನ್ನಡಕ್ಕೆ: 

ಅಳಲುಂಟೆಂದೋ ಮೈಕೈನೋಯಬಹುದೆಂಬಳುಕಿನಿಂದೋ ಎಸಗುವ ಗೆಯ್ಮೆಗಳನೆಸಗಿದರೆ|
ಎಸಗಿದ ತ್ಯಾಗವು ರಾಜಸವು, ದೊರೆಯದು ಕೂಡ ತ್ಯಾಗಫಲವು||


ಸೆಲೆ:
ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ ತ್ಯಜೇತ್ |
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ ||

#ಭಗವದ್ಗೀತೆ 15.8

ಭಗವದ್ಗೀತೆಯ ಸಾಲು: ತಾಮಸತ್ಯಾಗ

ಕನ್ನಡಕ್ಕೆ: 
ನಿಯತಿಯಿಂದ ಬಂದಲ್ಲದೆ ಕರ್ಮಗಳನ್ನು ಬಿಡುವುದು ಯುಕ್ತವಲ್ಲ.
ಮೋಹದಿಂದ ಬಿಟ್ಟರೆ ತಾಮಸವೆಂದು ಕರೆಯಲ್ಪಡುವುದು.


ಸೆಲೆ:
ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ
ಮೋಹಾತ್ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ ৷18.7৷

ಭಗವದ್ಗೀತೆಯ ೧೮ನೇ ಅಧ್ಯಾಯದ ೭ ನೇ ಶ್ಲೋಕ‌ ಇದು. ಕಣ್ಣಿಗೆ ಕಾಣ್ತು, ಕನ್ನಡಕ್ಕೆ ತಂದೆ.

----

ಈ ಶ್ಲೋಕದಲ್ಲಿ ಕೃಷ್ಣ  "ಯಾವುದು ತಾಮಸತ್ಯಾಗ?"  ಎಂಬುದರ ಬಗ್ಗೆ ಮಾತಾಡ್ತಾ ಇದ್ದಾನೆ.

ಕರ್ಮಸನ್ಯಾಸ ಮತ್ತು ಕರ್ಮತ್ಯಾಗ ಎಂಬ ಪದಗಳ ಬಳಕೆ ಇದೆ.
#ಸನ್ಯಾಸ ಕ್ಕೂ #ತ್ಯಾಗ ಕ್ಕೂ ಬೇರೆತನವುಂಟು.

ಸನ್ಯಾಸವು "ಕರ್ಮತ್ಯಾಗ" ವಾದರೆ,‌ ತ್ಯಾಗವು "ಕರ್ಮಫಲತ್ಯಾಗ" !! 

"ಹೆಚ್ಚಿನದ್ದೇನೋ" ಸಿಕ್ಕುವುದೆಂದು ಮಾಡುವ ಕರ್ಮಗಳನ್ನು ಬಿಡುವುದು ಸನ್ಯಾಸ. ಕರ್ಮಗಳನ್ನು ಮಾಡಿಯೂ ಅದರ ಫಲವನ್ನು ಬಯಸದೇ ಇರುವುದು ತ್ಯಾಗ.

ತ್ಯಾಗವನ್ನೂ ಮತ್ತೆ ಮೂರು ತರ ಗುಂಪು‌ ಮಾಡುಬಹುದು. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ.

ಸನ್ಯಾಸ ವನ್ನು ಸಾತ್ವಿಕತ್ಯಾಗ ದೆ ಕೆಳಗೆ ಗುಂಪುಮಾಡುತ್ತಾರೆ. 

ಅಜ್ಞಾನದಿಂದ, ತಪ್ಪುತಿಳುವಳಿಕೆಯಿಂದ, ಮೂಡನಂಬಿಕೆಯಿಂದ ಮಾಡುವ ತ್ಯಾಗವನ್ನು "ತಾಮಸಿಕ ತ್ಯಾಗ" ಎನ್ನಬಹುದು.

*ನಿಯತಿ* ಅಂದರೆ ವಿಧಿ, ದೈವ, ಹಣೆಬರಹ  fixed order of things, necessity, destiny; Fate ಮುಂತಾದ ಹುರುಳು ಹೇಳಬಹುದು. ನಿಯತಿ ಇಂದಲೇ ನೀತಿ ಎಂಬ ಪದ ಹುಟ್ಟಿದೆ. 


*ಪದಗಳ ಬಿಡಿಕೆ:*
ನಿಯತಿ + ಅಸ್ಯ + ತು + ಸನ್ಯಾಸಃ + ಕರ್ಮಣಃ + ನ + ಉಪಪದ್ಯತೇ
ಮೋಹಾತ್ +  ತಸ್ಯ + ಪರಿತ್ಯಾಗಃ + ತಾಮಸಃ + ಪರಿಕೀರ್ತಿತಃ 

#ಭಗವದ್ಗೀತೆ
#ಕನ್ನಡದಲ್ಲಿ_ಭಗವದ್ಗೀತೆ

ಮಂಗಳವಾರ, ಜೂನ್ 20, 2023

ನಸುಕಿನಲಿ‌ ನೆನೆಯುವ ನಲ್ಸಾಲುಗಳು

ಬೆಳಗೆದ್ದು ನೆನೆಯುವ‌ ಸಾಲುಗಳು.

ಬೆಳಗೆದ್ದು ನೆನೆವೆನು ಎದೆಯೊಳ್ಹೊ‌‌ಳೆಯುತಿಹ ಆನುತನವನ
ಇರುಹುರುಸೊಗವನ ಹಿರಿಹಂಸದೆಡೆ ನಡೆವನ ಮೂರರಾಚೆಯವನ |

ಯಾರು ಎಚ್ಚರನಿದಿರೆಯಾಳನಿದಿರೆಗಳೆಲ್ಲದರಲಿ ಇರುವನೋ ಅವನ ಎಂದೆಂದಿನವನ
ಸೊಕ್ಕಿಲ್ಲದನ ಪಳೆಕೂಟದನಲ್ಲದನ ಕುಂದಿಲ್ಲದ ಬೊಮ್ಮನ ||೧||

ಬೆಳಗೆದ್ದು ಕೊಂಡಾಡುವೆನು ಮಾತಿಗೆಟುಕದವನ  
ಯಾರಾಸರೆಯಿಂದ ಮಾತುಗಳು ಮಿನುಗುತಿಹವೋ ಅಂತ ತೆರಪಿಲ್ಲದವನ |

ಏನನು ಇದಲ್ಲ ಇದಲ್ಲವೆಂದ್ ಹೆಬ್ಬೊತ್ತಿಗೆಗಳು ಸಾರುತಿವೆಯೋ ಅಂತವನ 
ಹುಟ್ಟಿಲ್ಲದ ಕೊರೆಯಿಲ್ಲದ ಬಾಗಿಬೇಡಲುತಕ್ಕ ಅಯ್ಯರಿಗಯ್ಯನ ||೨||

ಬೆಳಗೆದ್ದು‌ ಕೈಮುಗಿವೆನು ಕತ್ತಲಮೀರಿದಗೆ ಪೊಳೆಬಣ್ಣಗೆ
ಇಡೀಯಗೆ ಹಳೆಯಗೆ ಮಾರ್ಪಡದನೆಲೆಯಗೆ ಪುರುಸರಲ್ ಪೆರಿಯನೆಂದು ಹೇಳಲ್ಪಡುವಗೆ।।

ಯಾರು ಇರ್‍ಮೆಯ ಎಲ್ಲಾ ಉಳಿದವುಳಿದಿಲ್ಲದವುಗಳಾಗಿ ಮೂಡಿಬಂದವನೋ ಅವಗೆ
ಹಗ್ಗ ಹಾವಾಗಿ ತೋರಿಬಂದವಗೆ ||  ೩ ||

---------
ಸೆಲೆ: ಪ್ರಾತಃಸ್ಮರಣ ಸ್ತೋತ್ರ, ಆದಿಶಂಕರ

ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮತತ್ತ್ವಂ
ಸತ್ಚಿತ್ಸುಖಂ ಪರಮಹಂಸಗತಿಂ ತುರೀಯಮ್ |

ಯತ್ಸ್ವಪ್ನಜಾಗರಸುಷುಪ್ತಮವೈತಿ ನಿತ್ಯಂ
ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತಸಂಘಃ ॥ 1 ॥

ಪ್ರಾತರ್‍ಭಜಾಮಿ ಮನಸೋ ವಚಸಾಮಗಮ್ಯಂ
ವಾಚೋ ವಿಭಾಂತಿ ನಿಖಿಲಾ ಯದನುಗ್ರಹೇಣ ।

ಯನ್ನೇತಿ ನೇತಿ ವಚನೈನಿರ್‍ಗಮಾ ಅವೋಚುಃ
ತಂ ದೇವದೇವಂ ಅಜಮಚ್ಯುತಮಾಹುರಗ್ರ್ಯಮ್ ॥ 2 ॥

ಪ್ರಾತರ್ನಮಾಮಿ ತಮಸಃ ಪರಮರ್ಕವರ್ಣಂ 
ಪೂರ್ಣಂ ಸನಾತನಪದಂ ಪುರುಷೋತ್ತಮಾಖ್ಯಮ್||

ಯಸ್ಮಿನ್ನಿದಂ ಜಗದಶೇಷಮಶೇಷಮೂರ್ತೌ 
ರಜ್ಜ್ವಾಂ ಭುಜಂಗಮ ಇವ ಪ್ರತಿಭಾಸಿತಂ ವೈ || 3 ||