ಗುರುವಾರ, ಜೂನ್ 21, 2018

ವಚನಗಳಲ್ಲಿ ಅಷ್ಟಾಂಗಯೋಗ


ಈವತ್ತು ಯೋಗ ದಿನಾಚರಣೆ.‌ ಬಹುಶ ಯೋಗ (ಆಸನಗಳು)ದ ಪರಿಚಯ ನನಗಾಗಿದ್ದು ಸುಮಾರು ಎರಡು ಅತ್ವಾ ಮೂರನೇ‌‌ ಕ್ಲಾಸಲ್ಲಿರಬಹುದು.

ಆದುನಿಕ ಕಾಲದ physical exercises ಜೊತೆ ಜೊತೆಗೇ ಅವಾಗ ನಮ್ಮೂರಿನ ಮಹೇಂದ್ರಣ್ಣ ನಮ್ಮೂರ ಹುಡುಗರನ್ನೆಲ್ಲ ಅವರ ಮನೇಲಿ‌ (ನಂತರ ಊರ ಮುಂದಿನ ದೇವಸ್ತಾನಕ್ಕೆ ಸೇರಿದ ಜಾಗದಲ್ಲಿ) ಸೂರ್ಯ ಸಮಸ್ಕಾರವೂ ಸೇರಿದಂತೆ ಇತರ ಯೋಗಾಸನಗಳನ್ನ ಹೇಳಿಕೊಡ್ತಾ ಇದ್ದ.

ನಂತರ degree ಓದ್ಬೇಕಾದ್ರೆ SSY ಮೂಲಕ ಆಸನಗಳಾಚೆಗಿನ ಯೋಗದ ಪರಿಚಯ ಹೆಚ್ಚಾಯಿತು. RSS ಸಂಪರ್ಕದೊಡನೆ ಸೂರ್ಯ ನಮಸ್ಕಾರದ ನಂಟು ಗಟ್ಟಿಯಾಯಿತು.

ಇವೆಲ್ಲದರ ನಡುವೆ ನಮ್ನಜ್ಜನ ಜೊತೆ ನಾನು‌ ಸಾಕಷ್ಟು ಸಮಯ ಕಳೆದರೂ ನಮ್ಮಜ್ಜನಿಗೆ ಒಲಿದ ಶಿವಯೋಗ ನನಗೆ ದಾಟಿ ಬರಲೇ‌ ಇಲ್ಲ.

ಯೋಗಕ್ಕೆ ಹಲವು ಆಯಾಮಗಳಿದ್ದರೂ ಇಂದು ಯೋಗ ಅಂದರೆ ಪತಂಜಲಿ‌ ಹಾಕಿ ಕೊಟ್ಟ ಅಷ್ಟಾಂಗ ಯೋಗದಲ್ಲಿ ಬರುವ ಆಸನಗಳೇ (ಅತ್ವಾ ಹಠ ಯೋಗ ಎನ್ನಿ) ಯೋಗ ಇಂದು ಸರಳೀಕರಣಗೊಂಡು‌ ಜನರ‌ ನಡುವೆ ನಲಿದಾಡುತ್ತಿದೆ.

ಯೋಗಗಳು ಯಾರನ್ನೂ ಬಿಟ್ಟಲ್ಲ. .. ವಚನಕಾರರನ್ನೂ...

ವಚನಗಳಲ್ಲಿ ಯೋಗದ ಉಲ್ಲೇಖ ಹೇಗಿದೆ ಅಂತ ನೋಡಿದಾಗ ನನಗೆ ಸಿಕ್ಕ ಷಣ್ಮುಖಸ್ವಾಮಿಯರ ಕೆಲ ವಚನಗಳನ್ನ ಇಲ್ಲಿ ಹಾಕ್ತಾ ಇದೀನಿ.

#ಯಮ #ನಿಯಮ #ಆಸನ #ಪ್ರಾಣಾಯಾಮ #ಪ್ರತ್ಯಾಹಾರ #ಧ್ಯಾನ #ಧಾರಣ #ಸಮಾಧಿ ಒಳಗೊಂಡ ಎಂಟು ಹಂತಗಳುಳ್ಳ #ಅಷ್ಟಾಂಗಯೋಗ ದ ವಿವರಣೆಗಳಿಗಷ್ಟೇ ಇಲ್ಲಿ ಗಮನಕೊಡ್ತಾ ಇದ್ದೀನಿ.


೧.
ಈ ಹಠಯೋಗ ಕ್ಕೆ ನಿಜದಂಗವಾಗಿರ್ಪ
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನ ಧಾರಣ ಸಮಾಧಿಗಳೆಂಬ ಅಷ್ಟಾಂಗಯೋಗ ದೊಳಗೆ
ಮೊದಲು ಯಮಯೋಗದ ಲಕ್ಷಣವೆಂತೆಂದೊಡೆ :
ಪರಸ್ತ್ರೀಯರ ಸಂಗವಿರಹಿತವಾಗಿಹುದು.
ಪರದ್ರವ್ಯವನಪಹರಿಸದಿಹುದು.
ಪರಹಿಂಸೆಯ ಮಾಡದಿಹುದು.
ದುಃಖಿತರಿಗೆ ಹಿತವ ಚಿಂತಿಸುವುದು.
ಶೋಕಭೀತಿಗಳಿಲ್ಲದಿಹುದು, ಅಲ್ಪಾಹಾರಿಯಾಗಿಹುದು.
ಕುಟಿಲತೆಯಿಲ್ಲದಿಹುದು, ಕಾರ್ಪಣ್ಯವಿಲ್ಲದಿಹುದು.
ಸತ್ಯವಚನವ ನುಡಿವುದು.
ಜಲಸ್ನಾನ ಭಸ್ಮಸ್ನಾನಾದಿಗಳನಾಚರಿಸುವುದು.
ಯಮಯೋಗವೆನಿಸುವುದಯ್ಯಾ ಅಖಂಡೇಶ್ವರಾ.

೨.
ಬಳಿಕ ನಿಯಮದ ಲಕ್ಷಣವೆಂತೆಂದೊಡೆ :
ಸಕಲ ವಿಷಯಂಗಳಲ್ಲಿ ಉದಾಸೀನತ್ವವು.
ಶಿವಾಗಮೋಕ್ತಂಗಳಲ್ಲಿ ವಿಶ್ವಾಸವು.
ಸತ್‍ಕೃತ್ಯದಲ್ಲಿ ಎರಕತೆಯು.
ದೇಹಶೋಷಣರೂಪವಾದ ತಪವು.
ನಾನಾರು ಮೋಕ್ಷವೆಂತಪ್ಪುದು ಎಂಬಾಲೋಚನೆಯು.
ಭಸ್ಮನಿಷ್ಠಾದಿ ವ್ರತವು, ಶಿವಲಿಂಗಾರ್ಚನೆಯು.
ಪ್ರಣವ ಪಂಚಾಕ್ಷರಾದಿ ಮಂತ್ರಜಪವು.
ಲೋಕವಿರುದ್ಧ ವೇದವಿರುದ್ಧವಾದ
ಮಾರ್ಗಂಗಳಲ್ಲಿ ಮನವೆರಗದಿಹುದು.
ಯೋಗಶಾಸ್ತ್ರಂಗಳ ಕೇಳುವುದು.
ಸತ್‍ಪಾತ್ರದಾನಯುಕ್ತವಾಗಿಹುದು
ನಿಯಮಯೋಗ ನೋಡಾ ಅಖಂಡೇಶ್ವರಾ.

೩.
ಇನ್ನು ಆಸನದ ಭೇದವೆಂತೆಂದೊಡೆ:
ಒಂದು ಹಿಮ್ಮಡದಿಂ ಯೋನಿಸ್ಥಾನವನೊತ್ತಿ ,
ಮತ್ತೊಂದು ಹಿಮ್ಮಡಮಂ ಮೇಢ್ರದ ಮೇಲಿರಿಸಿ,
ಏಕಚಿತ್ತನಾಗಿ ಋಜುಕಾಯನಾಗಿ,
ಭ್ರೂಮಧ್ಯದಲ್ಲಿ ದೃಷ್ಟಿಯುಳ್ಳಾತನಾಗಿಹುದೇ ಸಿದ್ಧಾಸನವೆನಿಸುವುದು.
ಎರಡು ತೊಡೆಗಳ ಮೇಲೆ
ಎರಡು ಪಾದಂಗಳ ಮೇಲುಮುಖವಾಗಿರಿಸಿ,
ಎರಡು ಕರತಳಂಗಳನು ನಡುವೆ ಮೇಲುಮುಖವಾಗಿರಿಸಿ,
ರಾಜದಂತಗಳನಡುವೆ ರಸನಾಗ್ರವನಿಟ್ಟು,
ನಾಸಾಗ್ರದೃಷ್ಟಿಯಿಂದಿಹುದೆ ಪದ್ಮಾಸನವೆನಿಸುವುದು.
ಎರಡು ತೊಡೆ ಕಿರಿದೊಡೆಗಳ ಸಂದಿಗಳಲ್ಲಿ
ಎರಡು ಪಾದಂಗಳನಿರಿಸಿ,
ಋಜುಕಾಯನಾಗಿಹುದೇ ಸ್ವಸ್ತಿಕಾಸನವೆನಿಸುವುದು.
ಮೇಢ್ರದ ಮೇಲೆ ಎಡದ ಹಿಮ್ಮಡವನಿರಿಸಿ,
ಅದರ ಮೇಲೆ ಬಲದ ಹಿಮ್ಮಡವನಿರಿಸಿ,
ಋಜುಕಾಯನಾಗಿಹುದೆ ಮುಕ್ತಾಸನವೆನಿಸುವುದು.
ಬಲದ ಹಿಮ್ಮಡಮಂ ಎಡದ ಪೊರವಾರಿನೊಳಿಟ್ಟು
ಎಡದ ಹಿಮ್ಮಡಮಂ ಬಲದ ಪೊರವಾರಿನೊಳಿಟ್ಟು
ಜಾನುಗಳೆರಡನು ಗೋಮುಖಾಕಾರಮಂ ಮಾಳ್ಪುದೇ
ಗೋಮುಖಾಸನವೆನಿಸುವುದು.
ಈ ಸಕಲ ಆಸನಗಳಿಂದೆ ಯೋಗಮಂ ಸಾಧಿಸುವುದೇ
ಆಸನಯೋಗ ನೋಡಾ ಅಖಂಡೇಶ್ವರಾ.

೪.
ಇನ್ನು ಪ್ರಾಣಾಯಾಮದ ಲಕ್ಷಣವೆಂತೆಂದೊಡೆ :
ಪ್ರಾಕೃತಪ್ರಾಣಾಯಾಮವೆಂದು, ವೈಕೃತಪ್ರಾಣಾಯಾಮವೆಂದು,
ಆ ಎರಡರಿಂ ಪೊರತಾದ ಕೇವಲ ಕುಂಭಕವೆಂದು,
ಮೂರು ಪ್ರಕಾರವಾಗಿರ್ಪುದದೆಂತೆನೆ :
ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು
ಹಂಸ ಹಂಸವೆಂದುಚ್ಚರಿಸುವ
ಅಹಂಕಾರಾತ್ಮಕವಾದ ಜೀವಜಪವೇ
ಪ್ರಾಕೃತ ಪ್ರಾಣಾಯಾಮವೆನಿಸುವುದು.
ಮತ್ತಾ ಜೀವಜಪವನು ಗೂರೂಪದೇಶದಿಂದೆ ಲೋಪವಮಾಡಿ
ಸೋಹಂ ಸೋಹಂ ಎಂಬ ಮಂತ್ರಸಂಸ್ಕಾರದಿಂದುಚ್ಚರಿಸುವುದೆ
ವೈಕೃತಪ್ರಾಣಾಯಾಮವೆನಿಸುವುದು.
ಆ ವೈಕೃತಪ್ರಾಣಾಯಾಮವೆ
ಇನ್ನೊಂದು ಪ್ರಕಾರವಾಗಿ ಪೇಳಲ್ಪಡುವುದದೆಂತೆನೆ :
ಕನಿಷ್ಠೆ ಅನಾಮಿಕೆಗಳಿಂದೆ ಈಡನಾಡಿಯಂ ಬಲಿದು,
ಪಿಂಗಳನಾಡಿಯಿಂದೆ ದೇಹಾಂತರ್ಗತ ವಾಯುಮಂ
ಅಕಾರೋಚ್ಚರಣದಿಂ ಪನ್ನೆರಡು ಮಾತ್ರೆ ರಚಿಸಿ,
ಮತ್ತೆ ಪಿಂಗಳನಾಡಿಯಂ ಅಂಗುಷ್ಠದಿಂ ಬಲಿದು,
ಈಡಾನಾಡಿಯಿಂದೆ ಪನ್ನೆರಡು ಮಾತ್ರೆ ಉಕಾರೋಚ್ಚರಣದಿಂ ಪೂರಿಸಿ,
ನಾಬ್ಥಿ ಹೃದಯ ಕಂಠವೆಂಬ ತ್ರಿಸ್ಥಾನದೊಳೊಂದರಲ್ಲಿ
ಪನ್ನೆರಡು ಮಾತ್ರೆ ಮಕಾರೋಚ್ಚರಣದಿಂ ತುಂಬಿಪುದೆ
ಕನಿಷ್ಠಪ್ರಾಣಾಯಾಮವೆನಿಸುವುದು.
ಅದೆಂತೆಂದೊಡೆ :
ಶೀಘ್ರವಲ್ಲದೆ ವಿಳಂಬವಲ್ಲದೆ ಜಾನುಪ್ರದಕ್ಷಿಣಮಂ ಮಾಡಿ,
ಅಂಗುಲಿಸ್ಫೋಟನಮಂ ಮಾಡಿದರೆ ಒಂದು ಮಾತ್ರೆ ಎನಿಸುವುದು.
ಇಂತಹ ಮಾತ್ರೆ ಪನ್ನೆರಡು ಆದರೆ ಕನಿಷ್ಠವೆನಿಸುವುದು.
ಮತ್ತಾ ಮಾತ್ರೆ ಇಪ್ಪತ್ತು ನಾಲ್ಕಾದರೆ ಮಧ್ಯಮವೆನಿಸುವುದು.
ಬಳಿಕಾ ಮಾತ್ರೆ ಮೂವತ್ತಾರಾದರೆ ಉತ್ತಮವೆನಿಸುವುದು.
ಇಂತೀ ಮೂವತ್ತಾರು ಮಾತ್ರೆಗಳು
ಮಂತ್ರ ಸ್ಮರಣೆ ಧ್ಯಾನ ಸಹಿತಮಾಗಿ ಮಾಳ್ಪುದೆ
ಪ್ರಾಣಾಯಾಮದಲ್ಲಿ ಉತ್ತಮ ಪ್ರಾಣಾಯಾಮವೆನಿಸುವುದು.
ಇನ್ನು ಕೇವಲ ಕುಂಭಕವೆಂತೆನೆ :
ವಾಮಭಾಗದ ಈಡಾನಾಡಿಯೇ ಚಂದ್ರನಾಡಿಯೆಂದು
ಯಮುನಾನದಿ ಎಂದು ಪೇಳಲ್ಪಡುವುದು.
ದಕ್ಷಿಣಭಾಗದ ಪಿಂಗಳನಾಡಿಯೇ ಸೂರ್ಯನಾಡಿಯೆಂದು
ಗಂಗಾನದಿಯೆಂದು ಪೇಳಲ್ಪಡುವುದು.
ಸುಷುಮ್ನೆಯೆಂಬ ಮಧ್ಯನಾಡಿಯೇ ಅಗ್ನಿಯೆಂದು
ಸರಸ್ವತಿನದಿಯೆಂದು ಪೇಳಲ್ಪಡುವುದಾಗಿ,
ಆ ನದಿತ್ರಯಂಗಳ ಸಂಬಂಧದಿಂ ತ್ರಿವೇಣಿಯೆಂಬ ಯೋಗಸ್ಥಲಕೆ
ತ್ರಿಕೂಟವೆಂದು, ಮಧ್ಯಹೃದಯವೆಂದು, ಕಾಶಿಕ್ಷೇತ್ರವೆಂದು,
ಕೂರ್ಚವೆಂದು ಆಜ್ಞಾಚಕ್ರವೆಂದು, ಪರ್ಯಾಯ ನಾಮಂಗಳನುಳ್ಳ
ಶಿವಧ್ಯಾನಕ್ಕೆ ರಹಸ್ಯವಾದ ಭ್ರೂಮಧ್ಯಸ್ಥಾನದಲ್ಲಿ
ಮನೋಮಾರುತಂಗಳನೈದಿಸಿ ಯೋಗಮಂ ಸಾದ್ಥಿಸಲ್ತಕ್ಕುದೇ
ಪ್ರಾಣಾಯಾಮಾಭ್ಯಾಸ ನೋಡಾ ಅಖಂಡೇಶ್ವರಾ.

೫.
ಇನ್ನು ಪ್ರತ್ಯಾಹಾರ ದ ಭೇದವೆಂತೆನೆ :
ಯೋಗಾಭ್ಯಾಸವ ಮಾಡುವಲ್ಲಿ
ಆಲಸ್ಯವಾದ ಮಂದಸ್ವರೂಪವಾದ ಅತಿ ಉಷ್ಣವಾದ
ಅತಿ ಶೀತಲವಾದ ಅತಿ ಕಟುವಾದ ಅತಿ ಆಮ್ಲವಾದ
ಅಪವಿತ್ರವಾದ ಅನ್ನಪಾನಂಗಳಂ ಬಿಟ್ಟು,
ಯೋಗೀಶ್ವರರಿಗೆ ಸ್ವೀಕರಿಸಲು ಯೋಗ್ಯವಾದ
ಗೋದುವೆ ಶಾಲಿ ಜವೆ ಹೆಸರು ಹಾಲು ತುಪ್ಪ ಜೇನುತುಪ್ಪ
ಮುಂತಾದ ಪವಿತ್ರ ಅನ್ನಪಾನಂಗಳು
ಬಹು ಬಹುಳವಲ್ಲದೆ, ಬಹು ಸೂಕ್ಷ್ಮವಲ್ಲದೆ,
ಸುಪ್ರಮಾಣದಲ್ಲಿ ಸ್ವೀಕರಿಸುವುದೆ ಪ್ರತ್ಯಾಹಾರವೆನಿಸುವುದು.
ಅಂತುಮಲ್ಲದೆ ಬಾಹ್ಯಾರ್ಥಂಗಳಲ್ಲಿ ಎರಗುವ ಚಿತ್ತಮಂ
ಹೃದಯಾಕಾಶದಲ್ಲಿ ನಿಲಿಸುವುದೆ ಪ್ರತ್ಯಾಹಾರವು.
ಮತ್ತೆ ಹೃದಯಸ್ಥಾನದಿಂ ಚಲಿಸುವ ಮನಮಂ ಮರಳಿ ಮರಳಿ
ಅಲ್ಲಿಯೇ ಸ್ಥಾಪಿಸುವುದೇ ಪ್ರತ್ಯಾಹಾರವಯ್ಯಾ ಅಖಂಡೇಶ್ವರಾ.

೬.
ಇನ್ನು ಯೋಗೀಶ್ವರರ ಧ್ಯಾನಯೋಗಕ್ಕೆ ಸ್ಥಾನಂಗಳಾವುವೆನೆ :
ಆಧಾರ ಸ್ವಾಧಿಷ್ಟಾನ ಮಣಿಪೂರಕ ಅನಾಹತ ವಿಶುದ್ಧಿ
ಆಜ್ಞೇಯ ಭ್ರೂಮಧ್ಯಾದಿ ಸ್ಥಾನಂಗಳಲ್ಲಿ
ಬಂಧಮುದ್ರೆಗಳಿಂದೆ ಧ್ಯಾನಮಂ ಮಾಳ್ಪುದೆಂತೆನೆ :
ಆಧಾರಚಕ್ರಗಳ ನಾಲ್ಕೆಸಳಮಧ್ಯದಲ್ಲಿ
ಇಷ್ಟಾರ್ಥಮಂ ಕೊಡುವ ಸುವರ್ಣ ಕಾಂತಿಯನುಳ್ಳ
ಆಧಾರಶಕ್ತಿಯಂ ಧ್ಯಾನಿಸುವುದು.
ಸ್ವಾಧಿಷ್ಟಾನಚಕ್ರ ಆರೆಸಳಮಧ್ಯದಲ್ಲಿ ಸಕಲವರ್ಣದಿಂ
ಲಿಂಗಸ್ವರೂಪನಾದ ಶಿವನಂ ಧ್ಯಾನಿಸುವುದು.
ಮಣಿಪೂರಕಚಕ್ರ ಹತ್ತೆಸಳಮಧ್ಯದಲ್ಲಿ
ಸುಪ್ತ ಸರ್ಪಾಕಾರದ ಮಿಂಚಿಗೆ ಸಮಾನದೀಪ್ತಿಯುಳ್ಳ
ಸಕಲಸಿದ್ಧಿಗಳಂ ಕೊಡುವ ಕುಂಡಲಿಶಕ್ತಿಯಂ ಧ್ಯಾನಿಸುವುದು.
ಅನಾಹತಚಕ್ರ ಹನ್ನೆರಡೆಸಳಮಧ್ಯದಲ್ಲಿ
ಜ್ಯೋತಿರ್ಮಯಲಿಂಗಮಂ ಧ್ಯಾನಿಸುವುದು.
ವಿಶುದ್ಧಿಚಕ್ರ ಷೋಡಶದಳಮಧ್ಯದಲ್ಲಿ
ಸುಸ್ಥಿರಮಾದ ಆನಂದರೂಪಿಣಿಯಾದ
ಸುಷುಮ್ನೆಯಂ ಧ್ಯಾನಿಸುವುದು.
ಆಜ್ಞಾಚಕ್ರ ದ್ವಿದಳಮಧ್ಯದಲ್ಲಿ ವಾಕ್ಸಿದ್ಧಿಯಂ ಕೊಡುವ
ದೀಪದ ಜ್ವಾಲೆಗೆ ಸಮಾನವಾದ ಜ್ಞಾನನೇತ್ರವೆನಿಸುವ
ಶುದ್ಧಪ್ರಸಾದಜ್ಯೋತಿಯಂ ಧ್ಯಾನಿಸುವುದೇ
ಧ್ಯಾನಯೋಗ ನೋಡಾ ಅಖಂಡೇಶ್ವರಾ.

೭.
ಇನ್ನು ಧಾರಣಯೋಗದ ಲಕ್ಷಣವೆಂತೆನೆ :
ಸಂಕಲ್ಪ ವಿಕಲ್ಪಾತ್ಮಕವಾದ ಮನಸ್ಸು
ಕಾಕಾಕ್ಷಿಯಂತೆ ಬಾಹ್ಯಾಭ್ಯಂತರಗಳಿಗೆ ತಾನೇ ಕಾರಣವಪ್ಪುದರಿಂದೆ
ಆ ಮನಮಂ ಮುದ್ರಾಕರಣಬಂಧಂಗಳಿಂದಂತರ್ಮುಖಮಂ ಮಾಡಿ,
ಅನವಚ್ಛಿನ್ನ ತೈಲಧಾರೆಯಂತೆ ಶಿವಧ್ಯಾನಮಂ ಮಾಡುತಿರಲು
ಆ ಧ್ಯಾನಾಕಾರದಿಂ ಕರಿಗೊಂಡ ವಸ್ತುವಿನೊಳು
ಆ ಮನವು ನಿಶ್ಚಲಮಾಗಲದೇ ಧಾರಣಯೋಗ ನೋಡಾ
ಅಖಂಡೇಶ್ವರಾ.

೮.
ಇನ್ನು ಸಮಾಧಿ ಯೋಗವೆಂತೆಂದೊಡೆ :
ಸುಖದುಃಖ ಪುಣ್ಯಪಾಪ ಪೂಜಾಪೂಜಂಗಳು
ಸಂಕಲ್ಪವಿಕಲ್ಪಂಗಳೇನೂ ತೋರದೆ,
ತಾನೆಂಬ ಅಹಂಭಾವವಳಿದು
ಅಖಂಡಪರಿಪೂರ್ಣಮಾದ ಪರಬ್ರಹ್ಮದಲ್ಲಿ ಕೂಡಿದ
ಸಮರಸಭಾವವೇ ಸಮಾಧಿಯಯ್ಯಾ ಅಖಂಡೇಶ್ವರಾ.