ಇದು ಒಂದೆರಡು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕಾಗಿ ಬರೆದ ಲೇಖನದ ಆಯ್ದ ಭಾಗ ಅಷ್ಟೇ. ಬಸವ ಜಯಂತಿಯ ನೆಪದಲ್ಲಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಸಮಾಜಕ್ಕೆ ಬಸವಣ್ಣನವರ ಕೊಡುಗೆ ಅಪಾರ. ಸಾಹಿತ್ಯ, ಸಂಗೀತ, ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕ ವಲಯಗಳಲ್ಲದೆ ಕಾಮ, ಮೋಕ್ಷ, ವಿಚಾರ ಸ್ವಾತಂತ್ರ್ಯ—ಹೀಗೆ ಹತ್ತು-ಹಲವು ನೆಲೆಗಳಲ್ಲಿ ಅವರ ಕೊಡುಗೆಗಳನ್ನು ಚರ್ಚಿಸಬಹುದು. ಆದರೂ, ಸದ್ಯಕ್ಕೆ 'ಕನ್ನಡ ಭಾಷೆಗೆ ಬಸವಣ್ಣನವರ ಕೊಡುಗೆಯೇನು?' ಎಂಬುದರ ಕಡೆಗೆ ಮಾತ್ರ ನನ್ನ ಗಮನ ಹರಿಸುತ್ತಿದ್ದೇನೆ.
೧. ಕನ್ನಡ ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದ:
ಕನ್ನಡ ಭಾಷೆಯ ಬಳಕೆಯ ದೃಷ್ಟಿಯಿಂದ ಬಸವಾದಿ ಪ್ರಮಥರು ಮಾಡಿದ ಪವಾಡದ ಬಗ್ಗೆ, ಶ್ರೀ ಬಸವನಾಳರು ಹೇಳಿರುವ ಈ ಮಾತುಗಳು ಅತ್ಯಂತ ಸಮರ್ಪಕವಾಗಿವೆ: "ಬಹುಕಾಲದಿಂದಲೂ ಪಂಡಿತರ ತೊತ್ತಾಗಿದ್ದ, ವಿಶಿಷ್ಟ ವರ್ಗದವರ ಸೊತ್ತಾಗಿದ್ದ, ರಾಜ್ಯಲಕ್ಷ್ಮಿಯ ತೊತ್ತಾಗಿದ್ದ ಸರಸ್ವತಿಯ ಸಂಸ್ಕೃತ ಭಂಡಾರವನ್ನು ಕಡೆಗಣಿಸಿ, ತಮ್ಮ ಅನುಭವ ಕಮ್ಮಟದಲ್ಲಿಯೇ ಅಚ್ಚೊತ್ತಿದ ವಚನ ನಾಣ್ಯಗಳನ್ನು ಜನಸಾಮಾನ್ಯರಲ್ಲೇ ಸಲ್ಲುವಂತೆ ಹರಡಿಸಿದನು. ದೇವವಾಣಿಗೆ ಜನವಾಣಿಯಾಗುವುದು ಅಸಾಧ್ಯವಾದಾಗ, ಜನವಾಣಿಯನ್ನೇ ದೇವವಾಣಿಯಾಗಿಸಿದ ಪವಾಡ ವೀರಶೈವ ವಚನಕಾರರದು." ಇವರೆಲ್ಲರೂ ಒಂದೆಡೆ ಸೇರಿದ್ದು ಬಸವಣ್ಣನವರ ನೇತೃತ್ವದಲ್ಲಿ ಎಂಬುದೇ ಇಲ್ಲಿನ ಮಹತ್ವದ ಸಂಗತಿ.
ಋಷಿಗಳ ವೇದಗಳು ಸಂಸ್ಕೃತಕ್ಕೆ 'ದೇವಭಾಷೆ' ಎಂಬ ಪಟ್ಟ ತಂದುಕೊಟ್ಟರೆ, ಬಸವಾದಿ ಪ್ರಮಥರ ವಚನಗಳು ಕನ್ನಡವನ್ನು 'ಶಿವಭಾಷೆ'ಯನ್ನಾಗಿಸಿದವು. ಇಲ್ಲಿ ಶಿವಭಾಷೆ ಎಂದರೆ ಕೇವಲ ಮಂಗಳಕರ ಭಾಷೆ ಎಂದಲ್ಲ; ಶಿವಶರಣರಾಗಿ ಬದುಕಿ ಶಿವರೇ ಆದ ಬಸವಾದಿ ಪ್ರಮಥರು ನಿತ್ಯ ಬಳಸಿ, ಉಸಿರಾಗಿಸಿಕೊಂಡ ನುಡಿಯೆಂದು ಅರ್ಥೈಸಿಕೊಳ್ಳಬೇಕು.
ಬಸವಾದಿ ಪ್ರಮಥರಿಗಿಂತ ಮುಂಚೆಯೇ ಕನ್ನಡ ಸಾಹಿತ್ಯ ಪ್ರೌಢಾವಸ್ಥೆ ತಲುಪಿತ್ತಾದರೂ, ಅದು ಎಂದೂ ಜನಸಾಮಾನ್ಯರ ಸ್ವತ್ತಾಗಿರಲಿಲ್ಲ. ಸಂಸ್ಕೃತಭೂಯಿಷ್ಠವಾಗಿ, ಉದ್ದುದ್ದವಾದ ಕಠಿಣ ಸಮಾಸಪದಗಳಿಂದ ಕೂಡಿದ ಪ್ರೌಢ ಚಂಪೂ ಶೈಲಿಯ ಕಾವ್ಯಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದ್ದವು. ರಾಜಾಶ್ರಯದಲ್ಲಿ ಸೃಷ್ಟಿಯಾದ ಅವು ಜನಸಾಮಾನ್ಯರಿಗಾಗಿ ರೂಪುಗೊಂಡಿರಲಿಲ್ಲ.
ಆದರೆ, ಬಸವಣ್ಣನವರ ನೇತೃತ್ವದ ಕಲ್ಯಾಣದ ಚಳವಳಿಯು ಕನ್ನಡ ಕಾವ್ಯರಚನಾ ಶೈಲಿಯನ್ನೇ ಆಮೂಲಾಗ್ರವಾಗಿ ಬದಲಾಯಿಸಿತು. ಕೃತಕವೆನಿಸುವ ಸಂಸ್ಕೃತಭೂಯಿಷ್ಠತೆಯಿಂದ ಕಳಚಿಕೊಂಡು, ಜನರ ಆಡುನುಡಿಗೆ ಹತ್ತಿರವಾದ ಸಹಜ ಭಾಷೆಯ ಮೂಲಕವೇ ಅಭಿವ್ಯಕ್ತಿ ಮಾರ್ಗವನ್ನು ಕಂಡುಕೊಂಡಿತು. ತ್ರಿಪದಿ, ಷಟ್ಪದಿ, ರಗಳೆಯಂತಹ ಅಚ್ಚಗನ್ನಡದ ಛಂದಶ್ಶೈಲಿಗಳು ಯಥೇಚ್ಛವಾಗಿ ಬಳಕೆಗೆ ಬಂದವು. ಹರಿಹರ, ರಾಘವಾಂಕದಂತಹ ಮಹಾಕವಿಗಳು ಹಳೆಯ ಮಾರ್ಗವನ್ನು ಬಿಟ್ಟು ದೇಶಿ ಛಂದಸ್ಸಿನ ಕಡೆಗೆ ಹೊರಳಿದರು. ಇದರ ಪರಿಣಾಮವಾಗಿ ಷಟ್ಪದಿಯಂತಹ ದೊಡ್ಡ ದೇಶೀ ಛಂದಃಪರಂಪರೆಯೇ ಕನ್ನಡದಲ್ಲಿ ಮೈದಳೆಯಿತು. ಬಸವಾದಿ ಶರಣರ ಜೀವನಾಧಾರಿತ ಅನೇಕಾನೇಕ ಮಹಾಕಾವ್ಯಗಳು ಹಾಗೂ ಪುರಾಣಗಳು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದವು. ಕೇವಲ ಅಚ್ಚಗನ್ನಡದಲ್ಲಿಯೇ ಕಾವ್ಯರಚನೆಗೆ ಮುಂದಾದ ಆಂಡಯ್ಯನಂತಹ (ಅವನ ಒಲವು ಯಾವುದೇ ಇರಲಿ!) ಕವಿಗಳ ಮೇಲೂ ಶರಣರ ಪ್ರಭಾವ ದಟ್ಟವಾಗಿತ್ತು. ತಾತ್ವಿಕವಾಗಿ ತಾರತಮ್ಯದ ಹಿನ್ನೆಲೆಯುಳ್ಳ ದಾಸಸಾಹಿತ್ಯವೂ ಜನಪರ ಸಾಹಿತ್ಯವಾಗಿ ರೂಪುಗೊಳ್ಳುವಲ್ಲಿ ವಚನ ಸಾಹಿತ್ಯದ ಪ್ರಭಾವ ಅಪಾರ.
ಕನ್ನಡದಲ್ಲಿ ಧಾರ್ಮಿಕ ಸಾಹಿತ್ಯ, ತಾತ್ವಿಕ ವಿಮರ್ಶಾ ಸಾಹಿತ್ಯ ಮತ್ತು ಅನುಭಾವ ಸಾಹಿತ್ಯಗಳು ಸಂಸ್ಕೃತಕ್ಕೆ ಸರಿಸಮಾನವಾಗಿ, ಸ್ವತಂತ್ರವಾಗಿ ಹೊರಹೊಮ್ಮಿದವು.
ಜಾನಪದರಿಗೂ ವಸ್ತುವಾಗಿ ನಿಂತು, ಅವರ ಸಾಹಿತ್ಯವನ್ನು ಶರಣರು ಹಸಿರಾಗಿಸಿದರು. ಬಸವಣ್ಣನವರ ಸುತ್ತ ಹುಟ್ಟಿಕೊಂಡ ಜಾನಪದ ಸಾಹಿತ್ಯದ ವ್ಯಾಪ್ತಿ ಬಹುದೊಡ್ಡದು. ಕಾವ್ಯಮೀಮಾಂಸೆಯ ದೃಷ್ಟಿಯಿಂದಲೂ ವಚನಗಳು ಅತ್ಯಮೂಲ್ಯ.
ಪ್ರಪಂಚದ ಮಟ್ಟದಲ್ಲಿ ದುರಂತ ನಾಟಕಗಳು (Tragedy) ಗ್ರೀಸ್ನ ಕೊಡುಗೆಯಾದರೆ, ರಾಜಕೀಯ ವ್ಯವಸ್ಥೆ ರೋಮನ್ನರ ಕೊಡುಗೆ. ಕಾದಂಬರಿ ಪ್ರಕಾರ ರಷ್ಯನ್ನರದ್ದಾದರೆ, ವಿಮರ್ಶೆ ಇಂಗ್ಲಿಷರ ಕೊಡುಗೆ. ಕಾವ್ಯಮೀಮಾಂಸೆ ಸಂಸ್ಕೃತದ ಕೊಡುಗೆಯಾದರೆ, ಬಸವಾದಿ ಪ್ರಮಥರ ವಚನಸಾಹಿತ್ಯವು ಕರ್ನಾಟಕವು ಜಗತ್ತಿಗೆ ನೀಡಿದ ಅಪ್ಪಟ ವಿಶ್ವಮಟ್ಟದ ಕೊಡುಗೆಯಾಗಿದೆ.