ಭಾನುವಾರ, ಆಗಸ್ಟ್ 25, 2024

ಶರಣರನಗಲುವ ದಾವತಿಯಿಂದ ಮರಣವೇ ಲೇಸು ಕಂಡಯ್ಯಾ

ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ! ನೋಡಯ್ಯಾ!
ಹಗಲಿರುಳಹುದು, ಇರುಳು ಹಗಲಹುದು!
ಎಂತಯ್ಯಾ! ಆಳವಾಡಿ ಕಳೆವೆನು?
ಒಂದು ಜುಗ ಮೇಲೆ ಕೆಡೆದಂತೆ!
ಕೂಡಲಸಂಗನ ಶರಣರನಗಲುವ ದಾವತಿಯಿಂದ
ಮರಣವೇ ಲೇಸು ಕಂಡಯ್ಯಾ.
-- ಬಸವಣ್ಣ - Basavanna 

"ಕಂಡರೆ" ಮತ್ತು "ಕಾಣದಿದ್ದರೆ" ಎಂಬುವು ಶರಣರ ಬಗೆಗಿನ‌ ಮಾತುಗಳು. ಬಸವಣ್ಣನವರಿಗೆ ಶರಣರನ್ನು ಕಂಡರೆ ಮನೋಹರ, ಕಾಣದಿದ್ದರೆ ಅವಸ್ಥೆ. ಶರಣರನ್ನು ಕಾಣದಿದ್ದರೆ ಹಗಲು‌ ಇರುಳಾಗಿ, ಇರುಳು ಹಗಲಾಗಿ ಕಂಡು, ಎಲ್ಲವೂ ಅಯೋಮಯ ಬಸವಣ್ಣನವರಿಗೆ. ಮಂಕು ಕವಿದಂತಾಗಿ ಮರುಳು ಮಾತುಗಳನ್ನಾಡುತ್ತಾ ಕಾಲ ಕಳೆವಂತಾಗುವುದು, ಯುಗವೇ (ಕಾಲವೇ) ಮೇಲೆ ತಿರುಗಿ ಬಿದ್ದಂತೆ ಅನ್ನಿಸುವುದು. ಶರಣರನ್ನು ಬಿಟ್ಟಿರುವುದಕ್ಕಿಂತ ಮರಣವೇ ಲೇಸು ಎಂಬುದು ಬಸವಣ್ಣನ ಅನುಭವ. ಶರಣರೊಡನೆ ಬೆರೆತು ಕಲೆತು ಬದುಕುವ ಬಸವಣ್ಣನ ಅಪೇಕ್ಷೆ ಬೆಲೆಕಟ್ಟಲಾಗದ್ದು.

--
ಮನೋಹರ ಅನ್ನುವುದಕ್ಕೆ ಹಲವು ಹುರುಳುಗಳನ್ನು ಹೇಳಬಹುದು.
೧. 
ಮನೋಹರ ~ ಮನ: ಹರ.  ಹರ ಎಂದರೆ‌‌ ಇಲ್ಲ ವಾಗಿಸುವುದು. ಲಯಸ್ತಿತಿ. ಯೋಗದ ಗುರಿಯೇ ಮನದ ಲಯ. Thoughtless state. #ಮನೋಹರಸ್ತಿತಿ ಯು ಯೋಗದ ಎತ್ತರದ ನೆಲೆ. ಶಿವನ ನೆಲೆಯೇ. 

೨. ಹರ ಎಂದರೆ ಸೆಳೆಯುವುದು, ಆಕರ್ಷಣೆ. ಮನಸ್ಸನ್ನು ಸೆಳೆಯುವದು. attractive; fascinating; charming; beautiful. ಹಾಗಾಗೇ ಶಿವನು‌ #ಮನೋಹರ.

೩. ಮನೋಹರ ಎಂದರೆ bliss, ಶಿವಾನಂದ.
"ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ ಆ ಪ್ರಾಣದ ಮಧ್ಯದಲ್ಲಿ #ಮನೋಹರಮೂರ್ತಿ ಇರವಿರಲು" -- ನೀಲಮ್ಮ

೪. 
ಆದಿ ಅನಾದಿಯೆ ಹಾವುಗೆ, ಶುದ್ಧ ಸಿದ್ಧವೆ ಪಾದದ ಜಂಗು,
ಪ್ರಸಿದ್ಧವೆ ಗಮನ, #ಮನೋಹರವೆ ಕಟಿ,
ಸದಾಸನ್ನಹಿತವೆ ಕೌಪ, ನಿಶ್ಚಿಂತವೆ ಯೋಗವಟ್ಟಿಗೆ,
ನಿರಾಕುಳವೆ ಜೋಳಿಗೆ, ನಿರ್ಭರಿತವೆ ದಂಡಕೋಲು ... ಜಕ್ಕಣಯ್ಯ

೫. ದೇಗುಲದೊಳಗಣ ಲಿಂಗಕ್ಕೆ ಒಂಬತ್ತು ಶಿಖರ, ಆರು ಬಾಗಿಲು, ಮೂರು ಮಂಟಪವು, #ಮನೋಹರನೆಂಬ ಪೂಜಾರಿ

ಇನ್ನೂ ಹಲವು ಅರ್ಥಗಳನ್ನು ಹೇಳಬಹುದಾದರೂ‌ ಇಲ್ಲಿ ಮನೋಹರ ಎಂದರೆ ನಲಿವು, ಸುಂದರ , ಸೊಗಸು, attractive; fascinating; charming; beautiful ಎನ್ನುವುದು ಹೊಂದುವುದು.

--
ಅವಸ್ಥೆ ಎಂದರೆ ಪಾಡು, ಇರವು. ವಿಶೇಷವಾದ ಅವಸ್ಥೆ ~ ವ್ಯವಸ್ಥೆ - ಏರ್ಪಾಡು.
"ಭವವುಳ್ಳನ್ನಕ್ಕ ಧಾವತಿ ಮಾಣದು, ಶರೀರವುಳ್ಳನ್ನಕ್ಕ #ಅವಸ್ಥೆ ಮಾಣದು" - ಅಲ್ಲಮ
#ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ, ಕಳೆ ಕಳೆಗಳು ಒಂದಾದ ಪರಿಯ ನೋಡಾ! - ಅಲ್ಲಮ
ಅಂಗದ ಅವಸ್ಥೆಯಲ್ಲದೆ ಲಿಂಗದ #ಅವಸ್ಥೆ ಆರಿಗೂ ಇಲ್ಲ ಗುಹೇಶ್ವರಾ - ಅಲ್ಲಮ
ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. -- ಮುಕ್ತನಾಥಯ್ಯ.

ಅವಸ್ಥೆ ಎಂಬ ಪದಕ್ಕೆ ‌negative ಅರ್ಥಗಳೇ ಸಿಕ್ಕಿರುವಂತಿದೆ. ದುರ್ದೆಸೆ, ಕೆಟ್ಟಸ್ತಿತಿ, ಒಳ್ಳೆಯದಲ್ಲದ ಪಾಡು. ಶರಣರನ್ನು ಕಾಣದಿದ್ದರೆ ಸಹಜವಲ್ಲದ ಪಾಡು ಬಸವಣ್ಣನವರದ್ದು. ಹಗಲು ಇರುಳಂತೆ (ಒಳಗೆ / ಮನಕ್ಕೆ ಮಂಕು, ಹೊರಗೆ ಮೋಡ ಕವಿದು ಕತ್ತಲಾದಂತೆ), ಇರುಳು ಹಗಲಂತೆ (ನಿದ್ದೆ ಬಾರದೆ ಅದೇ ಹಗಲಂತೆ) ಎಲ್ಲವೂ ಅಯೋಮಯವಾದಂತೆ ಬಸವಣ್ಣನವರಿಗೆ.

ಆಳವಾಡು ಎಂದರೆ ಬುಗುಲು ಮಾತು, ತೋರಿಕೆ ಹಾರಿಕೆಯ ಮಾತು, ವಟವಟಮಾತು. ಅಳುತ್ತಾ, ಮರುಗುತ್ತಾ ಇರು.
ಅಳ್ಳಪ a chatterer; ಅಳಪ್ಪು  to chatter, prattle, talk nonsense; ಅಳವಳಿಮೆ babbling;