ಭಾನುವಾರ, ಅಕ್ಟೋಬರ್ 06, 2024

ಪರಿಭವವ ಮರೆದೆಯಲ್ಲಾ, ಮನವೇ!

ಮನವೇ, ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ, ಮನವೇ!
ಲಿಂಗವ ನಂಬು ಕಂಡಾ, ಮನವೇ;  
ಜಂಗಮವ ನಂಬು ಕಂಡಾ, ಮನವೇ;
ಕೂಡಲಸಂಗಮದೇವರ ಬಿಡದೆ ಬೆಂಬತ್ತು, ಕಂಡಾ, ಮನವೇ.  
                              -- #ಬಸವಣ್ಣ - Basavanna 

ಇಹಪರಗಳೆರಡರಲ್ಲೂ ಸಲ್ಲುವುದೇ ಶರಣಧರ್ಮದ  ಪರಮೋದ್ದೇಶ. #ಕಾಯಕ #ದಾಸೋಹ ತತ್ವಗಳು, ಕಳಬೇಡ‌ ಕೊಲಬೇಡ ಮುಂತಾದ ಬದುಕಿನ ಸೂತ್ರಗಳು "ಇಹದಲ್ಲಿ ಸಲ್ಲುವ ದಾರಿ" ಗಳಾದರೆ, "ಪರದಲ್ಲಿ ಸಲ್ಲಲು‌‌" ಇರುವ ಏಕೈಕ ದಾರಿ #ಲಿಂಗಾಂಗಯೋಗ. 

ಭವಿ-ಭಕ್ತ, ಇಹ-ಪರ, ಇಲ್ಲಿ-ಅಲ್ಲಿ ಪದಗಳಂತೆ ಅರಿವು-ಮರೆವು ಗಳು ಶರಣರು ಬಳಸುವ ಎರಡು ವಿರುದ್ದ ಕಲ್ಪನೆಗಳು. ಮೋಡ  ಸೂರ್ಯ(ಅರಿವು) ನನ್ನು 'ಕೆಲಕಾಲ' 'ಮರೆ'ಮಾಡಿದಂತೆ ಈ‌ ಮರೆವು.

ಜಂಗಮ ಕಾಣದ ಶಕ್ತಿ. ಆ ಜಂಗಮವೇ ಕುರುಹಾಗಿ (symbol ಆಗಿ) ಕಾಣುವಂತೆ ಬಂದದ್ದು ಲಿಂಗ. ಮುಕ್ತಿಗೆ ಮಾರ್ಗ‌ ಲಿಂಗಜಂಗಮಗಳನ್ನು ನಂಬುವುದೇ! ಇಹದಲ್ಲಿನ ಲಿಂಗಾಂಗ ಸಾಮರಸ್ಯ ಪರದಲ್ಲಿ ಲಿಂಗೈಕ್ಯವ ನೀಡುವುದು. ಮರೆಯದೆ ಧೃತಿಗೆಡದೆ ದಾರಿತಪ್ಪದೇ ನಿಷ್ಠೆಯಿಂದ ಕೂಡಲ ಸಂಗಯ್ಯನ ಬೆನ್ನು ಹತ್ತು‌ (ಲಿಂಗಪೂಜೆ / ಶಿವಯೋಗದಲ್ಲಿ ತೊಡಗು) ಆಗ ಈ ಪರಿಭವಗಳು ನೀಗುವವು ಎನ್ನುವರು ಬಸವಣ್ಣ. ಇದನ್ನು‌ ಮಾಡದಿದ್ದಕ್ಕೇನೇ ಹಿಂದಿನ ಪರಿಭವಗಳು‌ ಉಂಟಾದವು ಎಂಬುದನ್ನು ಮರೆಯದಿರು ಮನವೇ ಎನ್ನುವರು‌.
---
ಪರಿಭವ ಎಂದರೆ ಮರುಹುಟ್ಟು / ಪುನರ್ಜನ್ಮ. ಆತ್ಮನು ನಾನಾ ಯೋನಿಗಳಲ್ಲಿ ಸಾಗುತ್ತಾ ಅಲೆಯುವ ಪರಿಪಾಟಲು. ಪರಿಭವಸುಖಕ್ಕೆ‌ ಈಡಾಗು, ಪರಿಭವಕ್ಕೆ ಒಳಗಾಗು, ಪರಿಭವಕ್ಕೆ ಗುರಿಯಾಗು ಮುಂತಾದ ಪದಗಳನ್ನು, ಪರಿಭವದ ತಡಿ, ಪರಿಭವದಲ್ಲಿ ತೊಳಲು, ಪರಿಭವಭಾದೆ ಮುಂತಾದವನ್ನು, ಪರಿಭವವ ದಾಟಿಸು, ಪರಿಭವಂಗಳ ಅಳಿವು, ಪರಿಭವಂಗಳ ನೀಗು ಮುಂತಾದ ಪದಗಳನ್ನು ಶರಣರು ಮತ್ತೆ ಮತ್ತೆ ಬಳಸುವರು.

ನಿಮ್ಮನರಿದು ತನ್ನ ಮರೆದ ಪರಮ ಶಿವಯೋಗಿಗೆ ಪರಿಭವಂಗಳುಂಟೆ ಗುಹೇಶ್ವರಾ? ಎನ್ನುವರು ಪ್ರಭುದೇವರು. ಎನ್ನ ಪರಿಭವದ ದಂದುಗ ಹರಿಯಿತ್ತಯ್ಯಾ ಎನ್ನುವರು ಸಿದ್ದರಾಮೇಶ್ವರ. ಎನ್ನ ಪರಿಭವವ ತಪ್ಪಿಸಿದ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ ಎನ್ನವರು ಷಣ್ಮುಖ ಸ್ವಾಮಿ.

ಕರ್ಮದಿಂದವು ಮನಸ್ಸು ಜ್ಞಾನವಿಲ್ಲದ ಭ್ರಮೆಯಿಂದವು, ತನುವಿನ ದೆಸೆಯಿಂದಲು ನಾನಾ ಪರಿಭವಂಗಳಲ್ಲಿ ಬಂದೆನಯ್ಯ ಎನ್ನುವನು ಶೂನ್ಯನಾಥಯ್ಯ. ಲಿಂಗಭಕ್ತಿಯನರಿಯದೆ, ಬರಿದೆ ಶಿವಭಕ್ತರೆಂದು ಬೊಗಳುವ ಕುನ್ನಿಗಳು ಪರಿಭವಕ್ಕೆ ಒಳಗಾಗುವರೆಂದಾತನಂಬಿಗರ ಚೌಡಯ್ಯನು.