ಸೋಮವಾರ, ಜುಲೈ 05, 2010

ಬಯಲು












೧.
ಬಯಲ ರೂಪ ಮಾಡಬಲ್ಲಾತನೆ ಶರಣನು,
ಅ ರೂಪ ಬಯಲ ಮಾಡ ಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುನ್ಟೆ ಕೂಡಲಸಂಗಮದೇವ !

೨.
ಮೇಲನರಿತಲ್ಲಿ ಕೀಳಿಲ್ಲ
ಕೀಳನರಿತಲ್ಲಿ ಮೇಲಿಲ್ಲ
ಮೇಲುಕೀಳೆಂಬ ಬೋಳು ಮಾಡಿ
ಧೂಳಾಗಬಲ್ಲರೆ ಹೇಳಲಿಲ್ಲ ಕೇಳಲಿಲ್ಲ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಮಿಗೆ ಮಿಗೆ ಬಯಲು

೩.
ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವಿರಯ್ಯ !
ಬಯಲು ಬತ್ತಲೆಯಾದಡೆ
ಏನನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ - ಗುಹೇಶ್ವರ ?

೪.
ಎನ್ನ ಕಾಯ ಮಣ್ಣು ಜೀವ ಬಯಲು
ಆವುದ ಹಿಡಿವೆನಯ್ಯ ದೇವ
ನಿನ್ನನಾವ ಪರಿಯಲಿ ನಾ ನೆನೆವೆನಯ್ಯ
ಎನ್ನ ಮಾಯೆಯನ್ನು ಮಾಣಿಸಯ್ಯ
ಚೆನ್ನ ಮಲ್ಲಿಕಾರ್ಜುನಯ್ಯ

೫.
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ
ಆತನ ವಿದ್ಯಾಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ
ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು
ಆತನ ಕೋಪಕ್ರೋಧದಿಂದ ಹುಟ್ಟಿದಾತ ರುದ್ರ
ಈ ಮೂವರ ಪೀಠವಂತಿರಲಿ
ಆ ಶರಣನನರಿದು ಶರಣೆನುತ್ತಿದ್ದೆನು ಕೂಡಲಚೆನ್ನಸಂಗಮದೇ

೬.
ಬಯಲು ಲಿಂಗವೆಂಬೆನೆ? ಬಗಿದು ನಡೆದಲ್ಲಿ ಹೋಯಿತ್ತು
ಬೆಟ್ಟ ಲಿಂಗವೆಂಬೆನೆ? ಮೆಟ್ಟಿ ನಿಂದಲ್ಲಿ ಹೋಯಿತ್ತು
ತರುಮರಾದಿಗಳು ಲಿಂಗವೆಂಬೆನೆ! ತರಿದಲ್ಲಿ ಹೋಯಿತ್ತು
ಲಿಂಗ-ಜಂಗಮದ ಪಾದವೆ ಗತಿಯೆಂದು ನಂಬಿದ ಸಂಗನ ಬಸವಣ್ಣನ
ಮಾತು ಕೇಳದೆ ಕೆಟ್ಟೆನಯ್ಯ, ಚೆನ್ನಮಲ್ಲಿಕಾರ್ಜುನ

೭.
ಸತ್ಯವೂ ಅಲ್ಲ, ಅಸತ್ಯವೂ ಅಲ್ಲ, ಸಹಜವೂ ಇಲ್ಲ
ಅಸಹಜವೂ ಇಲ್ಲ, ನಾನು ಇಲ್ಲ, ನೀನೂ ಇಲ್ಲ,
ಇಲ್ಲ ಇಲ್ಲ ಎಂಬುವುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು.

೮.
ಕಳಾಧರ ಧರೆ ವಾರಿಧಿ ಸಹಿತ ಆರೂ ಇಲ್ಲದಂದು,
ಧರೆ ಅಂಬರ ವಾರಿಧಿ ಸಹಿತ ಆರೂ ಇಲ್ಲದಂದು
ಪ್ರಥಮನೊಬ್ಬನಿದ್ದನು ಓಂದನಂತ ಕಾಲ.
ನಿರವಯ ನಿರ್ಮಾಯನಾಗಿದ್ದನೊಂದು ಕೋಟ್ಯಾನುಕೋಟಿ ವರುಷ
ಅಲ್ಲಿ ಅನಾಗತವುಂಟು...
ಮತ್ತಂತಲ್ಲಿಯೆ ನಿರಾಳವ ಬೆರಸಿ, ಬಯಲು ಬೆಸಲಾಯಿತ್ತು ...

೯.
ತನುವೆಲ್ಲ ಜರಿದು, ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯ ಎನಗೆ
ಭಾವವಿಲ್ಲದ ಬಯಲ ಸುಖವು ಭಾವಿಸಿದಡೆಂತಹುದು
ಬಹುಮುಖರುಗಳಿಗೆ
ಕೇಳಯ್ಯ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವ
ನಾನಳಿದು ನೀನುಳಿದ ಪರಿಯ ತೋರಯ್ಯ ಪ್ರಭುವೆ

೧೦.
ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ ||ಪಲ್ಲವ||
ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ ||೧||
ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ ||೨||
ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು ||೩||

೧೧.
ಅರಸಿ ಮರೆವೊಕ್ಕೊಡೆ ಕಾವ ಗುರುವೇ,
ಜಯ ಜಯ ಗುರುವೇ
ಆರೂ ಅರಿಯದ ಬಯಲೊಳಗೆ ಬಯಲಾಗಿ
ನಿಂದ ನಿಲವ ಹಿಡಿದೆನ್ನ ಕರದಲ್ಲಿ ತೋರಿದ ಗುರುವೇ
ಚೆನ್ನಮಲ್ಲಿಕಾರ್ಜುನ ಗುರುವೇ, ಜಯ ಜಯ ಗುರುವೇ.

೧೨ .
ವೇದಶಾಸ್ತ್ರಾಗಮ ಪುರಾಣಗಳೆಂಬುವ
ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿ ಭೋ!
ಅವ ಕುಟ್ಟಲೇಕೆ?
ಅತ್ತಲಿತ್ತ ಹರಿವ ಮನದ ಶಿವನರಿಯಬಲ್ಲಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ.

೧೩.
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
ಐವರು ಮಕ್ಕಳು ಜನಿಸಿದರೆಂತೆಂಬೆ?!
ಒಬ್ಬ ಭಾವದರೂಪ, ಒಬ್ಬ ಪ್ರಾಣದರೂಪ,
ಒಬ್ಬನೈಮುಖನಾಗಿ ವಿಶ್ವಕ್ಕೆ ಕಾಯರೂಪಾದ
ಇಬ್ಬರು ಉತ್ಪತ್ತಿಸ್ಥಿತಿಗೆ ಕಾರಣರಾದರು
ಐಮುಗನರಮನೆ ಸುಖವಿಲ್ಲೆಂದರಿದವನಾಗಿ
ಇನ್ನು ಕೈಲಾಸವನು ಹೊಗೆ ಹೊಗೆ!
ಮರ್ತ್ಯಕ್ಕೆ ಅಡಿಯಿಡೆನು
ಚೆನ್ನಮಲ್ಲಿಕಾರ್ಜುನದೇವ ನೀನೆ ಸಾಕ್ಷಿ!

೧೪.
ಶಿವಶಿವಾ ಆದಿಅನಾದಿಯೆಂಬೆರಡೂ ಇಲ್ಲದೆ
ನಿರವಯವಾಗಿಪ್ಪ ಶಿವನೇ, ನಿಮ್ಮ ನಿಜವನಾರು ಬಲ್ಲರಯ್ಯ?
ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು,
ಪುರಾಣಕ್ಕಗಮ್ಯನು, ಆಗಮಕ್ಕಗೋಚರನು, ತರ್ಕಕ್ಕತರ್ಕ್ಯನು
ವಾಙ್ಮನಕ್ಕತೀತವೆನಿಪ ಪರಶಿವಲಿಂಗನು
ಕೆಲಬರು ಸಕಲನೆಂಬರು, ಕೆಲಬರು ನಿಷ್ಕಲನೆಂಬರು
ಕೆಲವರು ಸೂಕ್ಷ್ಮನೆಂಬರು, ಕೆಲವರು ಸ್ಥೂಲನೆಂಬರು
ಈ ಬಗೆಯ ಭಾವದಿಂ ಹರಿ-ಬ್ರಹ್ಮ-ಇಂದ್ರ-ಚಂದ್ರ
ರವಿ-ಕಾಲ-ಕಾಮ-ದಕ್ಷ-ದೇವ-ದಾನವ-ಮಾನವರೊಳಗಾದವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾಗಿ ಹೋದರು
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು
ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಬಂದು
ವೀರಶೈವಮಾರ್ಗವರಿಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನು ಅದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿರುದ್ರಾಕ್ಷಿಧಾರಕನು
ಪಂಚಾಕ್ಷರಿಭಾಷಾಸಮೇತನು, ಲಿಂಗಾಂಗಸಂಬಂಧಿ,
ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣ ಸಂಗಮೇಶ್ವರನು, ತ್ರಿವಿಧದಲ್ಲಿ ಆಯತನು,
ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವಸ್ಮರಣೆಯ ಹೊದ್ದ
ಭವಿಸಂಗವ ಮಾಡ, ಭವಪಾಶವ ಕೊಳ್ಳ,
ಪರಸತಿಯ ಬೆರೆಸ, ಪರಧನವನೊಲ್ಲ,
ಪರನಿಂದೆಯನಾಡ, ಅನೃತವ ನುಡಿಯ, ಹಿಂಸೆಯ ಮಾಡ,
ತಾಮಸಭಕ್ತಸಂಗವ ಮಾಡ,
ಅರ್ಥ-ಪ್ರಾಣಾಭಿಮಾನ ಮುಂತಾಗಿ ಗುರುಲಿಂಗಜಂಗಮಕ್ಕೆ ಅರ್ಪಿಸಿ
ಪ್ರಸಾದ ಮುಂತಾಗಿ ಭೋಗಿಸುವ,
ಜಂಗಮನಿಂದೆಯ ಸೈರಿಸ, ಪ್ರಸಾದನಿಂದೆಯ ಕೇಳ,
ಅನ್ಯರನಾಶೆಗೈಯ್ಯ ಪಾತ್ರಾಪಾತ್ರವನರಿದೀವ
ಚತುರ್ವಿಧ ಪದವಿಯ ಹಾರ, ಅರಿಷಡ್ವರ್ಗಕ್ಕಳುಕ
ಕುಲಾದಿ ಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ
ಸಂಕಲ್ಪ ವಿಕಲ್ಪವ ಮಾದುವನಲ್ಲ, ಕಾಲೋಚಿತವ ಬಲ್ಲ,
ಕ್ರಮಯುಕ್ತವಾಗಿ ಷಟ್ಝಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ-
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆವ ನಮ್ಮ ಬಸವಣ್ಣನು
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನ

೧೫.
ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ಬಯಲಾಯಿತ್ತು
ಪ್ರುಭುವೆ ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನ್ನ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನದೇವಯ್ಯ,
ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗೆ ಮತ್ತಾವುದಿಲ್ಲವಯ್ಯ ಪ್ರಭುವೆ

೧೬.
ಕಾಯದ ಕಾರ್ಪಣ್ಯವರತಿತ್ತು
ಕರಣಂಗಳ ಕಳವಳವಳಿದಿತ್ತು
ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು
ಇನ್ನೇವೆನಿನ್ನೇವೆನಯ್ಯ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ
ಬಯಕೆ ಬಯಲಾಗದು!
ಇನ್ನೇವೆನಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನ

೧೭.
ತನುವೆಲ್ಲ ಜರಿದು, ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯ ಎನಗೆ
ಭಾವವಿಲ್ಲದ ಬಯಲ ಸುಖವು ಭಾವಿಸಿದಡೆಂತಹುದು
ಬಹುಮುಖರುಗಳಿಗೆ
ಕೇಳಯ್ಯ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವ
ನಾನಳಿದು ನೀನುಳಿದ ಪರಿಯ ತೋರಯ್ಯ ಪ್ರಭುವೆ

೧೮.
ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ ||ಪಲ್ಲವ||
ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ ||೧||
ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ ||೨||
ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು ||೩||