"ನಂಬಿಯಣ್ಣನ ರಗಳೆ" ಕೃತಿಯ ೧೦ನೆಯ ಅಧ್ಯಾಯವಾದ "ಪರವೆಯ ಪುಷ್ಪ ಮಾಲಾಬದ್ಧ"
ಓಲಗವಿತ್ತು ನರ್ತಕರ ಜಾಣರ ಗಾಣರ ಗೇಯಗೋಷ್ಠಿಯೊಳ್ ಬಾಲೆಯರೊಳ್ ಮಹಾಕವಿಗಳೊಳ್ ಗಮಕಿತ್ವದ ವಾಗ್ಮಿವೃಂದದೊಳ್ | ಲೀಲೆ ಮಿಗಿಲೆ ಪಾಡಿಸುತವಾಡಿಸುತುಂ ಮಿಗೆ ಮೆಚ್ಚುತುಂ ಕರಂ ಲಾಲಿಸುತಾಲಿಸುತ್ತೆ ಶಿವಸಂಗದೊಳೊಪ್ಪಿದನಂದು ಸೌಂದರಂ ||
ಇಂತು ತಿರುವಾರೂರ ಶಿವಲಿಂಗದ ರಂಗಮಂಟಪದೊಳು ಶಂಭುವಿನಣುಗಂ ನಂಬಿಯಣ್ಣಂ ಚೋಳಾದಿಗಳ ಬರೆ ಸಮಯಂಗೊಡುತ್ತುಂ, ಶಿವಭಕ್ತರ್ ಬರೆ ಮನದೊಳೆಗ್ಗುತುಂ, ಕಾಂತೆಯರ್ ಬರೆ ಕಟಾಕ್ಷಮಂ ಚೆಲ್ಲುತುಂ, ನೋಟಕಜನಕ್ಕೆ ಕರುಣಮನೀವುತುಂ ಸುಖದೊಳಿರ್ದು ಶಿವಪೂಜೆಗೆ ನವ್ಯಯೌವನವಾದಂತುನ್ಮತ್ತ ಪಂಚವಿಂಶತಿಪ್ರಾಯವಾಗಿ ಮಾಸಲ್ಗಳೆಯದ ಮನೋರಥದಂತೆ ಅರಳಲಿರ್ದ ಪರಿಮಳದ ಮೊಗ್ಗೆಯಂತೆ ಸವಿಯಲಿರ್ದಮೃತಫಲದಂತೆ ಮಾಧುರ ಭರಿತನಾಗಿ ಪರಿಮಿತದೊಳಿರಲ್-
ಅಲ್ಲಿಗೊರ್ವ ವಿಳಾಸಿನಿ ಮದನಶರದೊಡನೆ ಪರವೆಯರ ಮನಂ ಬರ್ಪಂತೆ ತನ್ನ ಒಲವಿನೊಡನೆ ಸೌಂದರನ ಬಲದ ಭುಜಂ ತಟ್ಟಿ ಹತ್ತಿರೆ ಬಂದು ಮೈಯಿಕ್ಕಿ ನಿಂದು ಕಯ್ಯಂ ಮುಗಿದು ದೇವದೇವ ಚಿತ್ತೈಸುವುದೆನ್ನದೊಂದು ಬಿನ್ನಪಮ- ಇಲ್ಲಿ ದೇವರ ದೇವನಪ್ಪ ಬೀದಿವೆಡಂಗ ಪೆರುಮಾಳೆಯನೋಲೈಸ ತಿಳಿಯಲಾರ ಕುಲದ ಪರಮಯೌವನೆಯಪ್ಪ ಪರವೆನಾಚಿಯರೆಂಬ ಕನ್ಯಾಕನಕಲತೆಯಿರ್ದಪುದು, ಆಕೆಗೀಗಳೀಗಳಿಂದುನಾಳೆ ಕುಸುಮಾಯುಧ ಪ್ರಥಮ ಪುಷ್ಟಿತಾಸಮಯವದು ಕಾರಣದಿಂದವರ ನಿಳಯದೊಳು ಪುಷ್ಪಮಾಲಾಬದ್ಧವೆಂಬುದೊಂದು ಮನ್ಮಥಪರ್ವಂ- ಆ ಪರವೆಯರ ಹೂವಿನ ಹೆಡಗಯ್ಯಂ ಬಿಡುವೊಡೆ ಶಿವಬ್ರಾಹ್ಮಣರಲ್ಲದೆ ಬಿಡಲಾರದು. ಆಕೆಯ ಕುಲವಲ್ಲಿ ಮುನ್ನ ರುದ್ರಕನ್ನಿಕಾಕುಲಂ ಇಲ್ಲಿ ಶಿವನೋಲಗದ ತೊತ್ತು ತನು ತಳಿರ್ತ ತಳಿಯಲಾರಕುಲಂ- ಇದಕ್ಕೆ ಪುರದ ಪಲಂಬರು ಶಿವಬ್ರಾಹ್ಮಣರ ಪೆಸರ್ಗೊಂಡೊಡೆ ಕೇಳದಂತಿ- ಪರವೆಯರು ನಿಮ್ಮಡಿಗಳ ನಾಮಗ್ರಹಣಂಗೊಳಲೊಡನಂತಂತೆ ಪುಳಕಿಸುತೆ ತಲೆವಾಗಿ ಲಜ್ಜಿತೆಯಾಗಿರಲ್ ಅವರ ಮಾತೆಪಿತರು ನಿಮ್ಮಡಿಗಳಲ್ಲಿಗೆನ್ನಂ ಕಳುಸಿದರ್- ಆ ಪರವೆಯರ ಜೀವ ಬರ್ಪಂತೆ ಬಿಜಯಂಗೆಯ್ದಿರ್ ದೇವ ನಿಮ್ಮಿರ್ವರ್ಗಂ ಹರೆಯಂ ಪಾಸಟಿ ಜವ್ವನಂ ಜತ್ತಾಯಿತಂ ಚೆಲ್ವು ಚಮತ್ಕಾರಂ ನೋಟವಘಾಟಂ ಪರಿಹಾಸಂ ಸಹವಾಸಂ ವಿನೋದಂ ವಿಲಂಬಂ ಅನುಭವಂ ಸಾನುಭವಂ ನುಡಿಗೆಡೆಯಿಲ್ಲ ನಿಮ್ಮಡಿಗಳಿಂದಿನ ಬೆಳತಿಗೆ ಬೆಟ್ಟಿಂಗಳೊಳು ಬಿಜಯಂಗೆಯ್ದಾ ಕನ್ನೆಯ ಮನೋರಥಮಂ ಮಾಳ್ವುದೆಂದೊಳುಡಿಯಿಂದೊಡಂಬಡಿಸಿ ಪೋಗಲ್-
ಇತ್ತಲು ಮುನ್ನವನಂಗಂ ಬಿತ್ತಿದ ಮೋಹದ ಮೊಳೆಯಂತೊಳಗೊಳಗಂಕುರಿಸಿ ನಂಬಿಯಣ್ಣಂ ತುಂಬುರನ ಮೊಗಮಂ ನೋಡೆ ದೇವದೇವ ಚಿತ್ತವೆಂತಿರ್ದುದಂತೆ ನೆಗಳ್ಳುದೆನೆ ಮಂತ್ರಿಯ ಚಾಣ್ನುಡಿಗೆ ಸಂತಸಂ ಬಡುತವಂದಿನ ದಿನಮಧ್ಯದೊಳೆದ್ದು ಸಂಗಡದ ಸತಿಯರ್‌ವೆರಸಿ ಮಜ್ಜನದ ಮನೆಗೆ ಬಿಜಯಂಗೆಯ್ದು ಶಿವಪೂಜಾರಸದೊಳಗವಗಾಹಮಿರ್ದಂತೆ ಪರಿಮಳ್ಳೋದಕದಿಂ ಮಜ್ಜನಂ ಮಾಡಿ ಸೋದಿಸಿದ ಸುಖಂ ಪೊಲಿಮಡುವಂತೆ ಪೋಲಮಟ್ಟು ಆರೂರರಸನಾರೈಸಿದ ಶಿವಪ್ರಸಾದಾಮೃತಂ ರಸವೊಸರ್ವ ಮುಪ್ಪುಳಮಂ ಚಿಲುಪಾಲ ತಿರುಳ ಕರಣೆಗಳುಮಂ ತವರಾಜದ ಸವಿಗಳುಮಂ ಒಂದುಗೂಡಿ ಮನಕ್ಕಿನಿದಾಗೆ ಕಣ್ಗೆ ನಯವಾಗೆ ನಾಸಿಕಕ್ಕೆ ಸೊಗಸಾಗೆ ನಾಲಗೆಗೆ ರುಚಿಕರವಾಗೆ ಶಿವಾರ್ಪಿತದೊಡನೆ ಕೈಕೊಂಡು ಪ್ರಸಾದಚಂದನದಿಂ ಕೈಘಟ್ಟಿಗೊಂಡು ಪಚ್ಚೆಕರ್ಪುರದ ಪರಿಮಳಭಾಗಂಗಳಿಂ ವೀಳೆಯಂಗೊಂಡು ಶಿವನಲ್ಲಿಗೆಯಂದು ಬೇಡಿಕಾಡಿ ಪ್ರಮಾಣಪತ್ರದ ಮೇಲುವರಿಯೆ ಮಾತಾಡಿ ಪಡಿವೊಂಗಳಂ ಚಂದನ ಜವಾದಿ ಕರ್ದಮಂ ಬೆರಸಿ ಕೈಕೊಂಡು ಭೋಂಕನೆ ತಿರುಗಿ ರಂಗಮಂಟಪದೊಳ್ ಸುಖಾಸನವನಿತ್ತು ಕುಳ್ಳಿರೆ ತುಂಬುರಂ ಬಂದು ಸಾದಿನ ಪರಿಮಳಮಂ ಕಕ್ಷಪುಟದೊಳ್ ಕೈಗೊಳಿಸಿ ಕತ್ತುರಿಯ ತಿಲಕಮಂ ನೊಸಲ್ಲಿತ್ತು ಚಂದನವನುದ್ವರ್ತನಂ ಮಾಡಿ ತೋರಹಾರಮಂ ಕೊರಳೊಳಿಕ್ಕಿ ರತ್ನಮುದ್ರಿಕೆಗಳು ಬೆರಲ್ಗಳೊಳಳವಡಿಸಿ ಸಪುರಬಿಳಿದಂ ಬಿಗಿದುಡಿಸಿ ಬೆಳಗುವ ದುಕೂಲಮಂ ಪೊದೆಯಿಸಿ ಸೌಭಾಗ್ಯದ ಸಿರಿಯಂ ಸಿಂಗರಿಸುವಂತೆ ಸಿಂಗರಂ ಮಾಡಿ ತನ್ನಂ ಕರೆಯಲ್ ಬರ್ಪ ಕಾಮನರಸಾಳಂತೆ ಅನುರಾಗದಿಂ ಚಂದ್ರೋದಯಮಾಗೆ ಪಿನಾಕಿಯನುಮತದಿಂ ಬಂದ ವಾರುವನ ಬೀಸುವ ವಾಯು ಅಲ್ಲಲ್ಲಿ ಕೈದೀವಿಗೆಗಳು ತಲ್ಲಣಯೆ ಪಲ್ಲವಸತ್ತಿಗೆ ಮೇಲ್ಮಸಗೆ ಎಳಲತೆಯ ಬಿಡಿಸಲ್ ಬರ್ಪ ವಸಂತನಂತೆ ಯೌವನದ ಮುದ್ರೆಯ ನೊಡೆಯಲ್ ಬರ್ಪ ಮನೋಜನಂತೆ ಪೊಸ ಪರಿಮಳವನೆಕ್ಕಿಲಿಕ್ಕಲ್ ಬರ್ಪ ಮಧುಕರನಂತೆ ಎಳವೆಳ್ಳಿಂಗಳಂ ಬಳಸಲ್ ಬರ್ಪ ಚಕೋರನಂತೆ ಸೌಂದರಂ ಪರವೆಯರ ಮನೆಗೆ ನಡೆತಂದು ಮುಂದೆ ಕಾಮನ ರತಿಯ ವಿವಾಹಕ್ಕೆ ನೆರೆದ ಶಿಬ್ಬಣಿಗರಂತೆ ಸಂದಣಿಸಿ ನಿಂದ ಸತಿಯರ ಮೊತ್ತಮನೊತ್ತರಿಸಿ ಬಗಿದು ಪೊಗುತಪ್ಪಾಗಳು
ಮುಂದೆ ಬಾಳೆಯ ಬಾಳಂಭದಿಂ ಲಾಮಂಚದ ಕೇರ್ಗಟ್ಟಿನಿಂ ಮಡಿವಾಳದ ಚಮರಿಯಿಂ ಕಮಲದ ಘಂಟೆಯಿಂ ಮರುಗದ ಮೇಲ್ಕಟ್ಟಿನಿಂ ಕತ್ತುರಿಯ ಸಾರಣೆಯಿಂ ಕುಂಕುಮದ ಕಾರಣೆಯಿಂ ಕರ್ಪುರದ ರಂಗವಾಲಿಯಿಂ ಆಲಂಬಿಸಿದ ಪುಷ್ಪಮಾಲೆಯಿಂದಲಂಕರಿಸಿದ ಮಕರಧ್ವಜ ಮಂಟಪವೆನಿಸ ಹೂವಿನ ಚಪ್ಪರದ ನಡುವೆ ಕಬ್ಬಿನ ಬಿಲ್ಲಂ ನೆಮ್ಮಿದ ಕುಸುಮ ಶರದಂತೆ ಕುರವಕದ ಕಂಭಮಂ ನೆಮ್ಮಿ ಅಶೋಕೆಯ ತಳಿರಂ ಮೆಟ್ಟಿ ತಾವರೆಯ ನೂಲ ದುಕೂಲಮನುಟ್ಟು ಪರಾಗದ ತಿಲಕವನಿಕ್ಕಿ ಅದ್ರಿಗಂತಿಯ ಕಂಕಣಮುಂ ಮಲ್ಲಿಗೆಯ ನನೆಯ ಮೊಲ್ಲೆಯ ಮುಗುಳ ಕಡುಕು ಕಡುಸೊಗಸನೀಯ ಬೆಟ್ಟಿಂಗಳ ಬೆಳಗುಂ ಕಣ್ಣಳ ಬೆಳಗುಂ ತಮ್ಮೊಳ್ ಸೆಣಸೆ ಪೂಮಾಲೆಯ ನಡುವೆ ನಿಂದ ಪರವೆ ತನ್ನ ಕೆಲಬಲದ ಸತಿಯರಿಕ್ಕೆಲದೊಳಿಕ್ಕುವ ದವನದ ಪೊಂಬಾಳೆಯ ಸೀಗುರಿಚಾಮರದ ತಂಬೆಲರಿಂ ತಾಪಮನಾಯಿಸಿಕೊಳುತುಂ ಚಂದನರಸಂ ತೀವಿರ್ದ ನಳಿನಪತ್ರದ ಘಳಿಗೆವಟ್ಟಲ ಮುಂದಿರ್ದ ವಸಂತನಂ ನೋಡುತುಂ ನನೆಯಂಬಂ ನೆಸುವ ರತಿಗೆ ಮುಯ್ಯಾನುತುಂ ಪೂವಿನ ಸೆಜ್ಜೆಯೊಳು ಪೊಚ್ಚ ಪೊಸ ಮೃದುವಂ ಪಚ್ಚಡಿಸಿದ ಹಂಸತೂಳದ ಹಾಸುಮಂಚವನಾಸೆಗೆಯ್ದುತುಂ ಪರಿಮಳದೊಳು ಸಿಲ್ಕಿದ ಹೆಣ್ಣುಂಬಿಯಂತೆ ತನಗಿದಿರ್ವಷ್ರ ಸೌಂದರಂಗೆ ತಾನೆ ತೆವಾಗಿರ್ದ ಪರವೆನಾಚಿಯರಿರವಂ ಕಂಡು ವಿಯತ್ತಳದಿಂ ವಿದ್ಯಾಧರಂ ನೆಲಕ್ಕಿಳಿವಂತೆ ವಾರುವನಿಂ ಭೋಂಕನಿಳಿದು ತುಂಬುರನ ಕೈವಿಡಿದು ನೋಟದಿಂ ನಡೆ ಮುಂಚೆ ಪೊಗುತಪ್ಪಾಗಳು
ಗಗನದೊಳು ನಿಂದು ನೋಡು ನೋಡು ಪಾರ್ವತಿ ನಿನ್ನ ಪರವೆಯ ರೂಪುಮನನ್ನ ನಂಬಿಯಣ್ಣ ವಿಳಾಸವು- ಇವರಿರ್ವರ ಸುಖದೋಜೆಯನೀ ಜಗತ್ರಯಂ ಮೆಚ್ಚೆ ಪೂಜೆಯಾಗಿ ಕೈಕೊಂಡಂ ಇವರಿರ್ವರ ಸುಖನಿಮಿತ್ತ ನೀನುವಿನಿತು ಬೇಗಂ ಬಿಟ್ಟಿಗರಾಗಿರ್ಪೆವೆಂದು ವಿನೋದದಿಂ ಅಮೃತಂ ನುಡಿವುತ್ತಿರೆ
ನಂಬಿಯಣ್ಣಂ ಬಂದು ಹೂವಿನ ಹಂದರ ಪೊಕ್ಕು ವಸಂತಂ ಮದನಮುಹೂರ್ತಂಗುಡೆ ಶೃಂಗಕುಲಂ ಮಂಗಳಂ ಪಾಡೆ ವನಲಕ್ಷ್ಮಿ ಪಳುಕಿನ ಪರಿಯಾಣಂಗಳೊಳು ಬಂದುಗೆಯರಳಂ ಮಂಗಳಾರತಿಯೆತ್ತೆ ರತಿ ಜಾಜಿಯ ಸಣ್ಣ ನನೆಗಳಿಂ ತಲೆಸೇಸೆಯನಿಕ್ಕೆ ಮನೋಜಂ ನನೆಯಂಬಿನ ಮೂಡಿಗೆಯ ಬಿಡುವಂತೆ ಹೂವಿನ ಹೆಡಗಯ್ಯಂ ಬಿಟ್ಟು ಸ್ನೇಹದ ಹೆಡಗಯ್ಯಂ ಕಟ್ಟಿ ಕಂಗಳೊಳಜ್ಯೋತಿ ಮನದೊಳ್ ತೂಪಿಂದು ಚಿತ್ತದೊಳಾಲಿಂಗಿಸಿ ಕೈವಿಡಿದು ನಡೆತಂದೆಡೆಮಾಡಿದೆಡೆಯೊಳು ಶಿವಪ್ರಸಾದ ರಸಮನೊಡನುಂಡು ತಾಂಬೂಲಮುಂ ಕೊಂಡಿರ್ವರುಂ ಸಖಿಯರುಮ ಸಖರುಮಂ ನೆರೆಮಡಿದು ನಡೆತಂದು ನೆರೆವ ಸೆಜ್ಜೆಯ ಮನೆಯ ಸಿರಿಮಂಚ ಕಾಮಕೋಲಾಹಲಮನೇನಂ ಬಣ್ಣಿಪೆನೆಂತು ನುಡಿದಪೆಂ ಶಿವ ಶಿವ ಶಿವ ಬಲ್ಲನೆನ್ನಳವಲ್ಲದೊಡಂ ಒಲ್ಲಂತೆ ಬಣ್ಣಿಪೆಂ ಸರ್ವಮುಖದೊಳು ಶಿವಭಕ್ತಿ ಸುಖಮಂ ಸವಿವುತಿರ್ಪ ಸದ್ಭಕ್ತರವಧರಿಪುದೆಂತೆಂದೊಡೆ
ಸಮಕುಲದ ಸಮರೂಪಿನ ಸಮಚಿತ್ರದ ಸಮಯೌವನದ ಸಮಾನುರಾಗದ ಸಮಸುಖದತಿಕಾಮಿಗಳೆ ಸುರತಸುಖದ ತಡೆ ಬಿಟ್ಟು ಸೋಂಕು ಮೇರೆದಪ್ಪಿ ಲಜ್ಜೆಯ ತೆರೆ ಸರಿದು ನುಡಿ ಗದ್ದದಿಕೆಯೊಳದ್ದು ಉಪಚಾರವಡಿಸಿ ಲಲ್ಲೆ ಮೆಲ್ಲೋಗಿ ಮಜಹಂಕುರಿಸಿ ಸವಿ ಪಲ್ಲವಿಸಿ ಮುಗುಳ್ಳಗೆ ಹೂತು ಪ್ರಥಮಾಲಿಂಗನದೊಳೆ ಸಫಲಮಾಗೆ ಮತ್ತೆ ಮತ್ತಜ್ವಲಿಸುವ ಅರಿಯದನುಭವಕ್ಕೆ ಸಿರಿಮಂಚಂ ಸುಖದುಕ್ಕಡಮಾಗೆ ಸವೆಯದ ಸವಿಗಳನುಗುಳ್ಳ ಸರ್ವಾವಯವಂಗಳಿಂದಿತರೇತರಂ ಪಲ್ಲಟಮಾಗೆ ಬಿಗಿದಪ್ಪಿದ ಸಮಸುಖದ ಮವೆಯ ನಿಡುಸುಯೊಡನೆ ಪೊಲಮಟ್ಟ ಪಂಚಾಕ್ಷರಂ ಶಿವನಲ್ಲಿಗೆ ಸುಖಮನಡಕುತ್ತಮಿರೆ ಕಿದು ಬೇಗಂ ಮಹಿನಸುಖದೊಳಿರ್ದು ಮೆಲ್ಲನೆಚ್ಚಚ್ಚ ಆದ ಸೋಲಗೆಲ್ಲದ ಮೊಳೆಮುನಿಸು ಮೂರ್ತಿಗೊಳಿಸಿ ಹಿಂದುಮುಂದಾಗಿ ಸೈರಿಸಲಾಗಿದೆ ಸುಖವೊಕ್ಕಿಮ್ಮಡಿಸಿದಂತೆ ಅನುರಾಗವಿಮ್ಮಡಿಸಿ ತಿಳಿದು ಮುಖವಿದಿರಾಗಿ ಪುಳಕದ ತಿವಿದಿರೆಯ ಪರಿಮಳದಂಕದ ಸರಸಗಾಳೆಗಕ್ಕಂ ಮೃದುವಾರಿಸಿಕ್ಕಿದ ಕಳನಾಗೆ ಅಭಿಮಾನದ ಗಳೆಯೊಡ್ಡೆ ಮೇಲುವರಿದು ಕಮ್ಮಿಕ್ಕಿ ಬಿಡಿಸಲಾರದಂತೆ ಪತ್ತಿ ಪಳಂಚುವಲ್ಲಿ ಸೂಳುಗೆಲ್ಲಂ ಸೂಳುಸೋಲು ಸೂಳುವದಲೆಗಳು ಮನದೊಳು ಮುಂದುವರಿವುತಿರಲು ಮುಟ್ಟಿದ ಸುಖಂ ಮನದೆಚ್ಚ ಮನಳಿಯಲ್- ಆಲಿಕಲ್ಲೆಂತಕ್ಕೆ ಕರಗುವುದೆ ಗೆಲ್ಲವೆಂಬಂತಿರ್ವರುಂ ತನಿಗರಗಿ ಮಳಲ ಪುತ್ತಳಿಗಳ ಮೇಲೆ ಮಳೆ ಕೊಂಡಂತೆ ಶಶಿಕಾಂತದ ಪ್ರತಿಮೆ ಚಂದ್ರನನಪ್ಪಿದಂತೆ ಸುರತ ಸುವಿದ ಸರಸಿಜನಿಧಿಯೊಳು ತೇಂಕಾಡುವ ದಂಪತಿತೆರೆಗಳಂ ತಿರುಳ್ ಗನಯಿಯದೆ ಪಲಕೆಲವು ದಿನಂಗಳು ನಿಮಿಷಂಗಳಾಗಿ ತೋರೆ ಕಾಮರತಿಕ್ರೀಡಾಕಾರಂ ಶಿವಾರ್ಪಿತಕಾರಣವಾಗುತ್ತಿರೆಯಿರೆ ||
ದಶಮ ಸ್ಥಲಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ