ಭಾನುವಾರ, ಜೂನ್ 28, 2026

ಕಾಲಭೈರವಾಷ್ಟಕ - ಅಚ್ಚಗನ್ನಡದಲ್ಲಿ

ಕಾಳಬೈರವನೆಂಟುನುಡಿಗಳು (ಕಾಲಭೈರವಾಷ್ಟಕ - ಅಚ್ಚಗನ್ನಡದಲ್ಲಿ)

ಮಳೆಯೊಡೆಯ ಮಣಿಯುವಂತ ಬೆಳ್ದಾವರೆಯ ಅಡಿಯವನು,
ಹಾವನ್ನೆ ಉರುಳಾಗಿಸಿ ಮುಡಿಯಲಿ ತಿಂಗಳನಿಟ್ಟವನು |
ಅರಿಗರೆಲ್ಲ ಮುಗಿವಂಥ ಬರಿಯ-ಬಯಲನುಟ್ಟವನು,
ಕಾಶಿಯ ಬೀಡಿನೊಡೆಯ ಕಾಳಬೈರವನ ನೆನೆವೆನು || ೧ ||

ನೂರಾರು ನೇಸರರ ಬೆಳಕ ಬೀರುವ ಹಿರಿಯನು,
ಹುಟ್ಟುಸಾವಕಡಲ ದಾಟಿಸುವ ಒಡೆಯನು |
ಕರಿಗೊರಳ, ತಾವರೆಗಣ್ಣ, ಮೂರೆಸಳ-ಈಟಿ ಹಿಡಿದವನು,
ಕಾಶಿಯ ಬೀಡಿನೊಡೆಯ ಕಾಳಬೈರವನ ನೆನೆವೆನು || ೨ ||

ಕೈಯಲ್ಲಿ ಮೂರೆಸಳ-ಈಟಿ, ಕೊಡಲಿ, ಹಗ್ಗ ದೊಣ್ಣೆಯವನು,
ಎಲ್ಲಕ್ಕೂ ಮೊದಲಾದ ಕರಿಯೊಡಲಿನ ಒಡೆಯನು |
ಕೇಡಿಲ್ಲದ ಕಡುಗಲಿಯು ಅಚ್ಚರಿಯ ಕುಣಿತದವನು,
ಕಾಶಿಯ ಬೀಡಿನೊಡೆಯ ಕಾಳಬೈರವನ ನೆನೆವೆನು || ೩ ||

ಬಾಳಸಿರಿ-ಬಿಡುಗಡೆಯ ನೀಡುವಂತ ಚೆಲುವನು,
ಒಲಿದವರ ಕಾಯುವನು ಎಲ್ಲೆಡೆಯೂ ತಾನಾದವನು |
ಸೊಂಟದಲಿ ಇಂಪಾಗಿ ಉಲಿಯುವ ಹೊನ್ನ-ಗಜ್ಜೆಯವನು,
ಕಾಶಿಯ ಬೀಡಿನೊಡೆಯ ಕಾಳಬೈರವನ ನೆನೆವೆನು || ೪ ||

ಒಳಿತಿನ ಕಟ್ಟೆಯನು ಕಾಯುವನು, ಕೆಡುಕನು ಅಳಿಸುವನು,
ಬಾಳಿನ ಉರುಳಿಂದ ಬಿಡಿಸುವ, ಒಳಿತನು ನೀಡುವನು |
ಹೊಂಬಣ್ಣದ ಹಾವನ್ನೇ ಮೈಯೆಲ್ಲ ಸುತ್ತಿದವನು,
ಕಾಶಿಯ ಬೀಡಿನೊಡೆಯ ಕಾಳಬೈರವನ ನೆನೆವೆನು || ೫ ||

ಹರಳುಗಳ ಮೆಟ್ಟಿನಿಂದ ಬೆಳಗುವ ಅಡಿಗಳವನು,
ಎಂದೆಂದಿಗೂ ಎಣೆಯಿಲ್ಲದ ಮೆಚ್ಚಿನ ಕಲೆಯಿಲ್ಲದವನು |
ಸಾವಿನ ಜಂಬವನು ಮುರಿಯುವ ಕೋರೆದಾಡೆಯವನು,
ಕಾಶಿಯ ಬೀಡಿನೊಡೆಯ ಕಾಳಬೈರವನ ನೆನೆವೆನು || ೬ ||

ನಗುವಿನಬ್ಬರದಿಂದ ನಾನ್ಮೊಗದವನ ಗೂಡನೊಡೆಯುವನು,
ಕಣ್ನೋಟದಿಂದಲೇ ತಪ್ಪುಗಳ ಸುಡುವ, ಕಡುವಾಗಿ ಆಳುವನು |
ಎಂಟು ಬಗೆಯ ಒಲವನೀವ ತಲೆಬುರುಡೆಗಳ ಕೊರಳಲಿಹವನು,
ಕಾಶಿಯ ಬೀಡಿನೊಡೆಯ ಕಾಳಬೈರವನ ನೆನೆವೆನು || ೭ ||

ಪಡೆಗಳ ಗುಂಪಿನೊಡೆಯನು ಹಿರಿಯ ಹೆಸರ ಕೊಡುವವನು,
ಕಾಶಿಯಲಿ ಇರುವವರ ಒಳಿತು-ಕೆಡುಕುಗಳ ಅಳೆಯುವನು |
ಒಳಿತ ಹಾದಿಯಲಿ ಜಾಣನು ಹಳೆಯವ ಎಲ್ಲಕ್ಕೂ ಒಡೆಯನು,
ಕಾಶಿಯ ಬೀಡಿನೊಡೆಯ ಕಾಳಬೈರವನ ನೆನೆವೆನು || ೮ ||

(ಗಳಿಕೆಯ ನುಡಿ / ಫಲಶ್ರುತಿ)
ಈ ಕಾಳಬೈರವನ ಎಂಟು ನುಡಿಯ ಹಾಡನಿದನು,
ಓದುವವರ ಅರಿವು ಮತ್ತು ಬಿಡುಗಡೆಯು ಹೆಚ್ಚುವುದು |
ಕೊರಗು, ಮರುಳು, ಬಡತನವು, ಸಿಟ್ಟು-ಸೆಡವುಗಳಳಿದು,
ಕಾಳಬೈರವನ ಅಡಿಯ ಸೇರುವರು ದಿಟವಿದು || ೯ ||


Source 

ಶ್ರೀ ಕಾಲಭೈರವಾಷ್ಟಕಮ್

ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಮ್ | ನಾರದಾದಿಯೋಗಿವೃಂದವಂದಿತಂ ದಿಗಂಬರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ || ||

ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್ | ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ || ||

ಶೂಲಟಂಕಪಾಶದಂಡಪಾಣಿಮಾದಿಕಾರಣಂ ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ | ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ || ||

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ ಭಕ್ತವತ್ಸಲಂ ಶಿವಂ ಸಮಸ್ತಲೋಕವಿಗ್ರಹಮ್ | ವಿನಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ || ||

ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್ | ಸ್ವರ್ಣವರ್ಣಶೇಷಪಾಶಶೋಭಿತಾಂಗಮಂಡಲಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ || ||

ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಮ್ | ಮೃತ್ಯುದರ್ಪನಾಶನಂ ಕರಾಳದಂಷ್ಟ್ರಮೋಕ್ಷಣಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ || ||

ಅಟ್ಟಹಾಸಭಿನ್ನಪದ್ಮಜಾಂಡಕೋಶಸಂತತಿಂ ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಮ್ | ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಂಧರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ || ||

ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಮ್ | ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೇ || ||

(ಫಲಶ್ರುತಿ) 

ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ ಜ್ಞಾನಮುಕ್ತಿಸಾಧನಂ ವಿಚಿತ್ರಪುಣ್ಯವರ್ಧನಮ್ | ಶೋಕಮೋಹದೈನ್ಯಲೋಭಕೋಪತಾಪನಾಶನಂ ತೇ ಪ್ರಯಾಂತಿ ಕಾಲಭೈರವಾಂಘ್ರಿಸನ್ನಿಧಿಂ ನರಾಃ || ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ