ಗುರುವಾರ, ಜನವರಿ 30, 2025

ಶರಣರನರಿಯದವರ ಕೈಯಲ್ಲಿ ಲಿಂಗವಿರ್ದು ಫಲವೇನು?!


ಅರ್ಥರೇಖೆಯಿದ್ದು ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕ? 
ಹಂದೆಯ ಕೈಯಲ್ಲಿ ಚಂದ್ರಾಯುಧವಿರ್ದು ಫಲವೇನು? 
ಅಂಧಕನ ಕೈಯಲ್ಲಿ ದರ್ಪಣವಿರ್ದು ಫಲವೇನು? 
ಮರ್ಕಟನ ಕೈಯಲ್ಲಿ ಮಾಣಿಕ್ಯವಿರ್ದು ಫಲವೇನು? 
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ 
ಲಿಂಗವಿರ್ದು ಫಲವೇನು ! ಶಿವಪಥವನರಿಯದನ್ನಕ್ಕ?
-ಬಸವಣ್ಣ

೧. ಆಯುಸ್ಸು ಇಲ್ಲದೇ ಹಣ ಪ್ರಯೋಜನ ಕ್ಕೆ ಬಾರದು. ಹಣ ಐಶ್ವರ್ಯ ಲಕ್ಷ್ಮಿಯಿಂದ ಸಿಗಬಹುದಾದ ಸುಖವನ್ನು ಅನುಭವಿಸಲು ಮೊದಲು ಬದುಕಿರಬೇಕು.

೨. ಕಲಿತನ ಇಲ್ಲದಿದ್ದರ, ಆಯುಧಗಳನ್ನು ಬಳಸುವುದು ತಿಳಿದಿರದಿದ್ದರೆ ದೊಡ್ಡ ಆಯುಧಗಳೂ ನೆರವಿಗೆ ಬಾರದು. ಅವು ಇದ್ದೂ ಇಲ್ಲದಂತೆ.

೩. ಕಣ್ಣೇ ಕಾಣದಿದ್ದರೆ ಕನ್ನಡಿಯೂ ಇದ್ದೂ ಇಲ್ಲದಂತೆ.

೪.ಮಂಗನ ಕೈಲಿ ಮಾಣಿಕ್ಯ ಕೊಟ್ಟರೆ ಎಲ್ಲೋ (ತಿ*ಕ್ಕೆ) ಮುಟ್ಟಿಸಿಕೊಂಡು 😉 ಮೂಸಿ ನೋಡಿ ಒಗೆಯಿತಂತೆ! ಮಾಣಿಕ್ಯದ ಬೆಲೆ ತಿಳಿಯದಿದ್ದರೆ ಅದೊಂದು ಕಲ್ಲು ಅಷ್ಟೇ. ಏನೋನೋ ಕೆರೆದುಕೊಳ್ಳಲು ಬಳಸುವ ಕಲ್ಲು!! 

೫. ಲಿಂಗ ಎನ್ನುವುದು ಐಕ್ಯ ಸಾಧಿಸಲು - ಬಯಲು ಕಾಣಲು ಇರುವ ದೊಡ್ಡ ಅಣಿಗೆ / ಸಾಧನ / tool. ಆದರೆ ಅದನ್ನು ಬಳಸಲು ಶರಣನ್ನು ಅರಿಯಬೇಕು, ಶರಣರ ಮೂಲಕ ಶಿವಪಥವನ್ನು ಅರಿತಬೇಕು. ಶರಣರಷ್ಟೇ ಇದನ್ನು‌ ಸರಿಯಾಗಿ ಬಳಸಲು ಅರಿತವರು. ಶರಣರನ್ನರಿಯದಿದ್ದವರ ಕೈಲಿದ್ದ ಲಿಂಗವೂ (ಅದರ‌ ಮಹತ್ವ ಅದೆಷ್ಟೇ ದೊಡ್ಟದಿದ್ದರೂ) ಬಳಕೆಗೆ ಬಾರದು.

 "ಕ್ರಿಯಾಜ್ಞಾನ ಸಮಾಯುಕ್ತಂ ವೀರಶೈವಸ್ಯ ಲಕ್ಷಣಂ" ಎಂಬ ಸಾಲಿದೆ. ಮಾಡುವ ಕ್ರಿಯೆ (ಲಿಂಗಾಂಗಯೋಗ) ಮತ್ತು ಅದನ್ನು ಮಾಡುವ ಅರಿವು ಸಮವಾಗಿರಬೇಕು. ಬರಿಯ ಕ್ರಿಯೆಯಿಂದ ಅಂದುಕೊಂಡು ಕೆಲಸ ಸಾಧ್ಯವಾಗದು.

ಹೋಲಿಕೆಗಳ ಮೂಲ‌ಕ ಈ ಸಾಲನ್ನು ಮನಮುಟ್ಟುವಂತೆ ಹೇಳಲಾಗಿದೆ ಈ ವಚನದಲ್ಲಿ.  ಶರಣರ ಅರಿವು ಮತ್ತು ಲಿಂಗದ ಅನುಭಾವ ಎರಡೂ ಬೇಕು.


ಕ್ರಿಯಾಜ್ಞಾನಸಂಬಂಧವೆಂದು ನುಡಿವರು - 
ಕ್ರಿಯಾಜ್ಞಾನಸಂಬಂಧವೆಂತಿರ್ಪುದೆಂದರಿಯರು. 
ಕ್ರೀಯಲ್ಲಿ ಅಂಗಲಿಂಗಸಂಬಂಧವನರಿಯರು, 
ಜ್ಞಾನದಲ್ಲಿ ಲಿಂಗಜಂಗಮಸಂಬಂಧವನರಿಯರು. 
ಕ್ರೀಯಲ್ಲಿ ಅರ್ಪಿತಪ್ರಸಾದಸಂಬಂಧವನರಿದು, 
ಜ್ಞಾನದಲ್ಲಿ ತೃಪ್ತಿಪರಿಣಾಮವನರಿದು. 
ಕ್ರೀಯೊಳಗಿರ್ದು ಜ್ಞಾನಸಂಪನ್ನನಾಗಿರಬಲ್ಲ ಶರಣಂಗೆ 
ಕ್ರಿಯೆಯೆ ತನು, ಜ್ಞಾನವೆ ಪ್ರಾಣ. 
ತನು ಲಿಂಗವಾಗಿ, ಪ್ರಾಣ ಜಂಗಮವಾಗಿ, 
ತನುವ ಸಯನಮಾಡಿ, ಪ್ರಾಣವ ಲಿಂಗಜಂಗಮಕ್ಕರ್ಪಿಸಿ, 
ನಿರಂತರ ಸಾವಧಾನಿಯಾಗಿರಬಲ್ಲ ಪ್ರಸಾದಿಗಳ 
ಎನಗೊಮ್ಮೆ ತೋರಿ ಸಲಹಾ, ಕೂಡಲಸಂಗಮದೇವಾ.
-ಬಸವಣ್ಣ