ಬುಧವಾರ, ನವೆಂಬರ್ 01, 2023

ನಲವರಿಕೆ‌ ಮತ್ತು ನಲ್ವಾರೈಕೆ ಗಳು!!

ನಾವು ಮತ್ತೆ ಮತ್ತೆ ಬಳಸುವ #ನಲವರಿಕೆ, #ನಲ್ವಾರೈಕೆ ಅನ್ನುವು ಪದಗಳ ಹುರುಳು‌ ಹಲವರಿಗೆ ಇನ್ನೂ ದಕ್ಕಿಲ್ಲ ಅನ್ನಿಸಿದ್ದರಿಂದ ಈ‌ ಕೆಳಗಿನ ಸಾಲುಗಳು. ಇವೆರಡೂ ಅಚ್ಚಗನ್ನಡದ ಹರಸುವ, ಒಳಿತು ಬಯಸುವ ಸಾಲುಗಳು!! 

ನಲ್ + ಪಾರಯಿಕೆ > ನಲ್ ವಾರಯಿಕೆ‌ > ನಲ್ವಾರಯಿಕೆ > ನಲ್ವಾರೈಕೆ!! 
(ವಕಾರಾದೇಶ - ಪ ಇರುವ ಕಡೆ ವ ಬಂದಿದೆ)

#ನಲ್ವಾರೈಕೆ ಎಂದರೆ "ಒಳಿತಿನ ಬಯಕೆ".

---
ನಲವು + ಅರಿಕೆ > ನಲವರಿಕೆ‌

(ಲೋಪ ಸಂದಿ - ಉ ಕಾರ ಲೋಪವಾಗಿದೆ, ಇದರ‌ಜಾಗದಲ್ಲಿ ಅ ಬಂದು‌ ಕೂತಿದೆ) 

#ನಲವರಿಕೆ‌  ‌ಎಂದರೆ delighted to hear ಅನ್ನುವು ಹುರುಳು ತೆಗೆದುಕೊಳ್ಳಬಹುದು. ಒಳಿತಾಗಲಿ / ನಲವಾಗಲಿ ಎಂದು ಬಯಸುವೆ ಎನ್ನಬಹುದು. ನಲಿವಾಯ್ತೆಂದು ತಿಳಿಸುವೆ ಎನ್ನಬಹುದು.

----
ಪದಗಳ ಬಗ್ಗೆ
ನಲವು ಗೆ ಎರಡು ಬೇರುಗಳಿವೆ. ನಳವು, ನಳನಳಿಸು (ಅರಳು, ಹೊಳೆ, bloom,  ಶೋಭಿಸು, joy, delight ) ಗಳ ಹಿಂದಿರುವುದು ಒಂದು ಬೇರಾದರೆ 
ನಲ್, ನಲವು, ನಲಿವು (good, ಒಳಿತು) ಗಳ‌‌ ಹಿಂದೆ ಇರುವುದು ಇನ್ನೊಂದು ಬೇರು!

(ಪಾರಯಿಕೆ > ಹಾರಯಿಕೆ > ಹಾರೈಕೆ) 
ಹರಸು ಹಾರಯಿಸು ಹಾರಯ್ಯುವಿಕೆ ಹಾರೈಕೆ ಹರಕೆ ಮುಂತಾದವೆಲ್ಲ ಅಚ್ಚಕನ್ನಡ ಬೇರಿನ ಪದಗಳು. 
 
#ಪರಸು to utter a benediction, bless; 
ಪರಕೆ /ಹರಕೆ/ಹರಿಕೆ  benediction
ಹಾರೈಕೆ ಎಂದರೆ ಹರಸುವುದು, ಆಶೀರ್ವಾದ ಮಾಡುವುದು. 
(ಒಳಿತನ್ನು) ಬಯಸು, ಅಪೇಕ್ಷಿಸು, ಎದುರುನೋಡು ಎಂಬ ಹುರುಳು‌ಕೂಡ ಇದಕ್ಕೆ ಬರುವುದು.

#ಅರಿಕೆ ಪದಕ್ಕೆ ತಿಳಿಸು, ಮನದಟ್ಟು ಮಾಡು, ಮನವಿ, ಬೇಡಿಕೆ ಮುಂತಾದ ಹುರುಳು ಹೇಳಬಹುದು. ಅಱ, ಅರಿವು, ಅರಿಮೆ, ಅರ್ಥ, ಅರಸ ಮುಂತಾದವೆಲ್ಲ ಒಂದೇ ಬೇರಿನ‌ ಪದಗಳು. 

ಅರಿಯುವಿಕೆ > ಅರಿಕೆ (ಅರಿದದ್ದು ಅರಿಕೆ) 

----
ನಲ್ ಎನ್ನುವುದು ಅಚ್ಚಗನ್ನಡದ ಬೇರು. ನಲಿವು, ನಲ್ಮೆ, ನಲ್ಲ /ನಲ್ಲೆ, ನಲಿ, ನಲ, ನಲವು, ನಲಿವು, ನಲುವು, ನಲ್ವು ಮುಂತಾದ ಹಲವು ಪದಗಳು ಹುಟ್ಟಿವೆ.

ನಲ್ goodness, fairness, fineness; 
ನಲ್ಮೆ goodness, welfare, prosperity; 
ನಲ್ಲ nalla a good, etc., man; goodness, excellence, beauty; 
ನಲ, ನಲವು, ನಲಿವು, ನಲುವು, ನಲ್ವು pleasure, delight; 
ನಲಿ to be delighted, rejoice, be pleased with, be fond of; n. pleasure; 
ನನ್ನಿ truth, love, affection

ಸೊಲ್ಲರಿಮೆ: 
#ಶಬ್ದಮಣಿದರ್ಪಣ ದ ಒಂದು ಕಟ್ಟಲೆ;

ವಿದಿತ ಸ್ವರದಿಂಅನಾದೇಶದಸಹಜ ವ್ಯಂಜನಂಗಳಿಂ
ಪರದ ಪವರ್ಗದ ನೆಲೆಗೆ ಅಕ್ಕುಂ ವತ್ವಂ;
ಪದವಿಧಿಯೊಳ್ಬಹುಳ ವೃತ್ತಿಯಿಂ ವಾಕ್ಯದೊಳಂ!

ಕೆಳಗಿನದ್ದು ಮೇಲಿನದರ ಹುರುಳು.

ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ‘ಪ ಬ ಮ’ (ಪವರ್ಗ) ವ್ಯಂಜನಗಳಿಗೆ ‘ವ’ ಕಾರವು ('ವ'ತ್ವುಂ) ಆದೇಶವಾಗಿ ಬರುವುದು ಕನ್ನಡ‌ ಸೊಲ್ಲರಿಮೆಯ ಗುಣಗಳಲ್ಲಿ ಒಂದು.

"ಪ" ಇರುವಕಡೆ "ವ" ಬರುವ‌ ಎತ್ತಗೆಗಳು ಕೆಳಗಿನವು!! 

ಎಳ ಪೆರೆ > ಎಳ ವೆರೆ > ಎಳವೆರೆ
ಎಳ ಪಳ್ಳಿ > ಎಳ ವಳ್ಳಿ > ಎಳವಳ್ಳಿ
ಕೆನೆ ಪಾಲ್ > ಕೆನೆ ವಾಲ್ > ಕೆನೆವಾಲ್ 
ಕಿಸು ಪಣ್ > ಕಿಸು ವಣ್ > ಕಿಸುವಣ್
ಕೈ ಪಿಡಿ > ಕೈ ವಿಡಿ‌> ಕೈವಿಡಿ
ಎಸರ್ ಪೊಯ್ದು > ಎಸರ್ ವೊಯ್ದು > ಎಸರ್ ಒಯ್ದು > ಎಸರೊಯ್ದು 
ನೀರ್ ಪೊನಲ್ > ನೀರ್ ವೊನಲ್ > ನೀರ್ ಒನಲ್ > ನೀರೊನಲ್
ಮೇಲ್ ಪಾಸು > ಮೇಲ್ ವಾಸು > ಮೇಲ್ವಾಸು
ಬೆಮರ್ ಪನಿ > ಬೆಮರ್ ವನಿ > ಬೆಮರ್‍ವನಿ 
ಇನ್ನೂ ಮುಂತಾದ ಪದಗಳಿವೆ

ಪೆರೆ = ಚಂದ್ರ
ಪಾಲ್ > ಹಾಲು
ಪಣ್ > ಹಣ್ಣು
ಪಿಡಿ > ಹಿಡಿ
ಪೊಯ್ಯು > ಹೊಯ್ಯು
ಪೊನಲು = ಹೊನಲು, torrent stream, ಜರಿ, ಹಳ್ಳ
ಪಾಸು = ಹಾಸು
ಪನಿ = ಹನಿ

---
ನಲವು ಎಂಬ ಪದ ಮೋಳಿಗೆಮಹಾದೇವಿ ಯ ವಚನಗಳಲ್ಲಿ ಈ‌ ಕೆಳಗಿನಂತೆ ಬಳಕೆಯಾಗಿದೆ.

ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ
ಕುಸುಮದ ಗಿಡುವಿಂಗೆ ವಾಸನೆಯುಂಟೆ ಕುಸುಮಕಲ್ಲದೆ ?
ಅದು ಗಿಡುವಿಡಿದಾದ ಕುಸುಮವೆಂಬುದನರಿದು
ಗಿಡುವಿನ ಹೆಚ್ಚುಗೆ; ಕುಸುಮದ ನಲವು; ಸುಗಂಧದ ಬೆಳೆ.
ಭಕ್ತಿಗೆ ಕ್ರೀ, ಕ್ರೀಗೆ ಶ್ರದ್ಧೆ, ಶ್ರದ್ಧೆಗೆ ಪೂಜೆ, ಪೂಜೆಗೆ ವಿಶ್ವಾಸ,
ವಿಶ್ವಾಸಕ್ಕೆ ವಸ್ತು ತನ್ಮಯವಾಗಿಪ್ಪುದು.
ಇದು ತುರೀಯಭಕ್ತಿಯ ಇರವು;
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವ ಮೆಲ್ಲಮೆಲ್ಲನೆ
ಕೂಡುವ ಕೂಟ.
-- 

ನಲಿವು ದಾಸೋಹದ ಸಂಗಣ್ಣನ‌ ವಚನಗಳಲ್ಲಿ ‌ಈ ತರ ಬಳಕೆಯಾಗಿದೆ.
ಕಣ್ಣಿನಿಂದ ನಡೆದು, ಕಾಲಲ್ಲಿ ಮುಟ್ಟಿ ಕಂಡು
ನಾಸಿಕದ ಓಹರಿಯಲ್ಲಿ ದೇಶಿಕನಾಗಿ,
ಕರ್ಣದ ನಾದದಲ್ಲಿ ಗರ್ಭವುದಿಸಿ,
ನಾಲಗೆಯ ತೊಟ್ಟಿಲಲ್ಲಿ ಮರೆದೊರಗಿ
ಅರಿವುತ್ತ ಕರದ ಕಮ್ಮಟದಲ್ಲಿ ಬೆಳೆವುತ್ತ ನಲಿವುತ್ತ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
-- 
ಅರಿಕೆ ಎಂಬ ಪದವು ವಚನಗಳಲ್ಲಿ ‌ಈ ತರ ಬಳಕೆಯಾಗಿದೆ. (ಅರಿದದ್ದು ಅರಿಕೆ) ಅರಿಯುವಿಕೆಯೇ ಅರಿಕೆಯಾಗಿದೆ‌‌ ಎಂದು‌ಕೂಡ ಹೇಳಬಹುದು.

ಅರಿದು ಮಾಡುವ ಮಾಟ ಮರವೆಗೆ ಬೀಜವೆಂದೆ.
ಅದಕ್ಕೆ ಮರೆದರಿವು ತಪ್ಪದು.
ಆ ಅರಿವಿನ ಭೇದ ಎತ್ತಿದ ದೀಪದ ಬೆಳಗಿನಂತೆ.
ಅರಿದು ಮರೆಯದೆ, ಮರೆದು ಅರಿಯದೆ
ಇಂತೀ ಅರಿಕೆಯಲ್ಲಿ ಮಾಡುವವನ ಅರಿವು,
ಹೊತ್ತ ದೀಪದ ನಿಶ್ಚಯದಂತೆ.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ,
ಚನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು
-- ಮೋಳಿಗೆ ಮಾರಯ್ಯ

ಹರಿಗೆಯ ಹಿಡಿದು ರಣವ ಹೊಕ್ಕಲ್ಲಿ, ತನ್ನೆಡೆಗೆ ಮರೆಯಹ ತೆರದಂತೆ,
ತನ್ನಯ ಸತ್ಕ್ರೀ ಭಕ್ತಿಮಾರ್ಗದ ಮಾಟಕೂಟದಿರವು.
ತಾ ಮಾಡುವಲ್ಲಿ ಇದಿರ ರೂಪ ನೋಡಲಿಲ್ಲ.
ಅರಿಕೆಯಲ್ಲಿ ಉಭಯವನರಿಯಬೇಕು.
ಎಲೆಯ ಮರೆಯ ಕಾಯನರಿದಂತೆ,
ದರ್ಶನದ ಮರೆಯ ಅರಿವನರಿಯಬೇಕು,
ಬಂಕೇಶ್ವರಲಿಂಗವನರಿವುದಕ್ಕೆ.

ಹರಸು ಪದ ಸಿದ್ದರಾಮೇಶ್ವರರ  ವಚನಗಳಲ್ಲಿ ‌ಈ ತರ ಬಳಕೆಯಾಗಿದೆ

ಆನೀ ಲೋಕದ ಹರಕೆಯ ಹರಸೆನಯ್ಯಾ.
ಆನೀ ಲೋಕದ ಕೊಡ ಬೇಡೆನಯ್ಯಾ.
ಆನು ಘನ ಹರಸುವೆ.
ಎನಗೆ ನಿಮ್ಮನೆ ಬೇಡಿಹ ಘನವ ಹರಸುವೆ.
ಎನಗಿಂತಪ್ಪ ಕೊಡಕೊಡುವುದು ಇಲ್ಲದಿದ್ದೊಡೊಲ್ಲೆ,
ಕಪಿಲಸಿದ್ಧಮಲ್ಲಿನಾಥಯ್ಯಾ.

ಸುಖ ಬಂದಲ್ಲಿ ನಿಮ್ಮ ಹಾಡಿಹರಸುವೆನಯ್ಯ.
ದುಃಖ ಬಂದಲ್ಲಿ ನಿಮ್ಮ ಕೋಪಿಸಿ ಬಯ್ವೆನಯ್ಯ.
ಅದೇನು ಕಾರಣವೆಂದೊಡೆ :
ಎನ್ನ ಸುಖದುಃಖಂಗಳಿಗೆ ನೀವೆ ಆಧಾರವಾದ ಕಾರಣ,
ನಿಮ್ಮನೆ ಹಾಡುವೆನಯ್ಯ; ನಿಮ್ಮನೆ ಹೊಗಳುವೆನಯ್ಯ.
ನಿಮ್ಮ ಮುಂದೆ ಎನ್ನ ಒಡಲ
ಕಡು ದುಃಖವನೀಡಾಡುವೆನಯ್ಯ ಅಖಂಡೇಶ್ವರಾ
-- ಷಣ್ಮುಖಸ್ವಾಮಿ‌ಗಳು