ನಿಮಿಷದ ನಿಮಿಷಂ ಬೋ, ಕ್ಷಣದೊಳಗರ್ಧಂ ಬೋ,
ಕಣ್ಣುಮುಚ್ಚಿ ಬಿಚ್ಚುವೈಸು ಬೇಗಂ ಬೋ,
ಸಂಸಾರದಾಗುಂ ಬೋ! ಸಂಸಾರದ ಹೋಗುಂ ಬೋ!
ಸಂಸಾರದೊಪ್ಪಂ ಬೋ! ಕೂಡಲಸಂಗಮದೇವಾ,
ನೀ ಮಾಡಿದ ಮಾಯೇಂ ಬೋ, ಅಭ್ರಚ್ಛಾಯೇಂ ಬೋಂ.
- ಬಸವಣ್ಣ - Basavanna
ಸರಳ ಹುರಳು:
ಸಂಸಾರದ ಆಗು-ಹೋಗು-ಒಪ್ಪಗಳು ನಿಮಿಷದಲ್ಲಿ ನಿಮಿಷದಷ್ಟು ಹೊತ್ತಿನವು, ಕ್ಷಣದ ಅರ್ದದಷ್ಟು ಹೊತ್ತಿನವು. ಕಣ್ಣು ಮುಚ್ಚಿ ಬಿಚ್ಚುವಷ್ಟು ಬೇಗ ಮುಗಿಯುವಂತವು. ಇದು ಕೂಡಲಸಂಗಯ್ಯನು ಮಾಡಿದ ಮಾಯೆಯು, ಮೋಡದ ನೆರಳಂತಹದ್ದು.
ನಿಮಿಷ, ಕ್ಣಣಗಳೇ ಚಿಕ್ಕವು ಇನ್ನು ಇವಕ್ಕಿಂತ ಸಣ್ಣ ಹೊತ್ತು ಎಷ್ಟಿರಬಹುದು?
ಮೋಡವೇ ಶಾಶ್ವತವಲ್ಲ, ಇನ್ನು ಮೋಡದ ನೆರಳು ಶಾಶ್ವತವೇ?
ಬಿಡಿಕೆ:
ಈ ವಚನದಲ್ಲಿ ಬಸವಣ್ಣನ Revelation / ಸತ್ಯದರ್ಶನವಿದೆ, ಅನುಭಾವವಿದೆ, ಧ್ವನಿಸಿದ್ಧಿ ಇದೆ, ಶಬ್ಧಸಿದ್ಧಿ ಇದೆ, ಭಾವಾವಿಷ್ಠತೆ ಇದೆ, ಅಲಂಕಾರ - ರೀತಿ - ಧ್ವನಿ - ಔಚಿತ್ಯ - ರಸ ಗಳೆಂಬ ಅಲಂಕಾರಪಂಚಕ ಗೆಳೆಲ್ಲವೂ ಇವೆ. ಹಿರಿದಾದ್ದನ್ನು ಕುಂದುಂಟಾಗದಂತೆ ಕಿರಿದಾಗಿಸಿ ಹೇಳುವ ಅಳವಿದೆ. ಹೇಳಬೇಕಿದ್ದನ್ನು ಚಿಕ್ಕದಾಗಿ ಸ್ಪಷ್ಟವಾಗಿ ಹೇಳುವ ಮೊನಚಿದೆ.
ಸಂಸಾರದ ಬಗ್ಗೆ, ಕ್ಷಣಿಕತೆಯ ಬಗ್ಗೆ, ಮಾಯೆಯ ಬಗ್ಗೆ ಬಸವಣ್ಣನವರ ಇಲ್ಲಿನ ಸತ್ಯದರ್ಶನ ಒಂದು ಸಣ್ಣ ತುಣುಕಷ್ಟೇ. ಈ ವಚನ ಬಸವಣ್ಣನವರ ಧ್ವನಿಸಿದ್ಧಿ, ಶಬ್ಧಸಿದ್ಧಿಗಳ ಪ್ರತೀಕವೂ ಹೌದು. ಈ ವಚನ ಬರೆಯುವಾಗ ಅವರು ಭಾವಾವಿಷ್ಟ ರಾಗಿದ್ದರೆಂಬುದರಲ್ಲಿ ಅನುಮಾನವಿರದು. ಹಾಗಾಗಿಯೇ ಈ ವಚನ ಯಾವ ಭಾವಗೀತೆ ಗಳಿಗೂ ಕಡಿಮೆ ಇಲ್ಲವೆನಿಸುವುದು.
ಈ ಲೋಕದ / ಭವದ ಬದುಕೇ ಮಿಗಿಲು ಶಾಶ್ವತ ಎಂದು ನಂಬಿ ಕೂರುವುದನ್ನು, ಈ ಸಂಸಾರದ ಬೆಡಗು ಬಿನ್ನಾಣಗಳ ಸೆಳೆತಕ್ಕೊಳಗಾಗಿ ತಲುಪಬೇಕಿದ್ದ "ನಿಜನೆಲೆ" ಯ ಕಡೆಗಿನ ಪಯಣವನ್ನು ಮರೆಯುವುದನ್ನು "ಮಾಯೆ" ಎಂಬ ಪದ ಬೊಟ್ಟು ಮಾಡುವುದು. ಹತ್ತಿರದಿಂದ ನೋಡಿದಾಗ ಅದೊಂದು "ಅಭ್ರಚ್ಛಾಯೆ" (ಮೋಡ ಉಂಟು ಮಾಡಿದ ನೆರಳು) ಮಾತ್ರ ಎನ್ನುವ ಅರಿವು ಈ ವಚನದ ವಸ್ತು. ಸಂಸಾರದ ಕ್ಷಣಿಕತೆಯನ್ನು ವರ್ಣಿಸುವಲ್ಲಿ ಮೊದಲ ಸಾಲುಗಳು ಮಾಡುವ ಪ್ರಭಾವದ ಜೊತೆಗೆ ಎರಡನೆಯ ಸಾಲಿನಲ್ಲಿ ಬರುವ "ಕಣ್ಣು ಬಿಚ್ಚಿ ಮುಚ್ಚು" ವುದು, ಆ ಕ್ಷಣಿಕತೆಯನ್ನು ಅಭಿನಯಿಸಿಯೇ ತೋರಿಸುತ್ತದೆ. ಮೇಲೆ ಮೋಡ ವೇಗವಾಗಿ ಹೋಗುವಂತೆ ಈ ವಚನದ ಪದಗಳೂ ತೀವ್ರಗತಿಯಲ್ಲಿ ಹೇಳಲ್ಪಟ್ಟಿವೆ. ಮುಂದೆ ಬಳಸುವ "ಮಾಯೆ" ಮತ್ತು "ಅಭ್ರಚ್ಛಾಯೆ" ಗಳಲ್ಲಿ ಪ್ರಾಸವಿದೆ, ಅಲಂಕಾರವಿದೆ, ರೀತಿ ಇದೆ, ಧ್ವನಿ ಇದೆ, ಔಚಿತ್ಯವಿದೆ. ಈ ವಚನದ ಭಾವದಲ್ಲಿ ಮುಳುಗಿದರೆ ರಸವೂ ಇದೆ.
ಸಂಸಾರದ ಸ್ಥಿತಿಯನ್ನು ಹೇಳುವಾಗ ಬಳಸುವ 'ಆಗು' "ಹೋಗು' ಗಳೆಂಬ ದೀರ್ಫಾದಿಯಾದ ಪದಗಳನ್ನು ಬಳಸಿಕೊಂಡು, ಸಂಸಾರವು ಕ್ಷಣಿಕವಾದರೂ ಅದರಲ್ಲಿ ಅನುಭವಿಸಿದ ಬವಣೆಯಿಂದಾಗಿ ಅದು ದೀರ್ಫವೆಂಬ ಭಾವನೆಯನ್ನು ಉಂಟುಮಾಡುವ ಧ್ವನಿಯಿದೆ. 'ನೀ ಮಾಡಿದ ಮಾಯೇಂ ಬೋ, ಅಭ್ರಚ್ಛಾಯಂ ಬೋ' ಎಂಬ ಕೊನೆಯ ಸಾಲಿನಲ್ಲಿ ಮಾಯೆ-ಛಾಯೆಗಳ ಪ್ರಾಸವೇ ಅವೆರಡರ ಸಾಮ್ಯತೆಯನ್ನು ಸೂಚಿಸಿ, ಅವುಗಳನ್ನು ಆಧರಿಸಿ ಬಾಳಲಾರದನ್ನು ಸುಂದರವಾಗಿ ಧ್ವನಿಸುತ್ತದೆ
ಪದಗಳ ಬಗ್ಗೆ::
ಬೋ / ಭೋ ಎಂದರೆ ಎಲೈ ಎಂದು. "ಭೋ ಶಂಭೋ" ಎಂದರೆ "ಎಲೈ ಶಂಭುವೇ" ಎನ್ನಬಹುದು.
"ಅಮ್ (ಅಂ)" ಎನ್ನವುದು ಹಳಗನ್ನಡದ ಎರಡನೇ ವಿಭಕ್ತಿ ಪ್ರತ್ಯಯ. ಇದೇ ರೀತಿ "ಮ್" ಎಂಬುದು ಹಳಗನ್ನಡದ ಮೊದಲ ವಿಭಕ್ತಿಪ್ರತ್ರಯ.
ನಿಮಿಷಂ / ನಿಮಿಷಮ್ = ನಿಮಿಷವು ~ ನಿಮಿಷ
ಅರ್ಧಮ್ = ಅರ್ದವು ~ ಅರ್ದವು
ಬೇಗಂ = ವೇಗವು ~ ವೇಗ
ಆಗುಂ = ಆಗುವು ~ ಆಗು
ಹೋಗುಮ್ = ಹೋಗುವು ~ ಹೋಗು
ಒಪ್ಪಮ್ = ಒಪ್ಪವು ~ ಒಪ್ಪ ~ charm, elegance (ಒಪ್ಪಓರಣ)
ಆಗುಹೋಗು ಎಂದರೆ success and failure; the profit and loss, favourable and unfavourable results as estimated, of a proposed act; pros and cons, life and death, the day-to-day affairs.
ಮಾಯೆ: ಈ ಅಚ್ಚಗನ್ನಡ ಪದ ಸಂಸ್ಕೃತ ಸಾಹಿತ್ಯದಲ್ಲಿ ಸಾಕಷ್ಟು ಬಳಕೆಯಾಗಿದೆ. ಅದ್ವೈತ ವನ್ನು ವಿವರಿಸಲು "ಮಾಯೆ" ಎನ್ನು ಸೊಗಸಾಗಿ ಬಳಸಿಕೊಳ್ಳಲಾಗಿದೆ. ಮರೆವು, ಮಾಯೆ, (ಗಾಯ)ಮಾಯು ಮುಂತಾದವೆಲ್ಲ ಒಂದೇ ಬೇರಿನ ಪದಗಳು.
ಅಭ್ರಚ್ಛಾಯೆಮ್ = ಅಭ್ರಃ ಛಾಯೆಯು ~ ಮೋಡದ ನೆರಳು.
"ನಿಮಿಷದ ನಿಮಿಷ" ಎಂದರೆ ಕಣ್ಮಿಟುಕಿಸಲು ಹಿಡಿಯುವ ಹೊತ್ತಿಗಿಂತ ಕಡಿಮೆ ಹೊತ್ತು. ಆಗ ಇದ್ದು ಈಗ ಇಲ್ಲವಾಗುವ ಹೊತ್ತಿಗೆ ಕ್ಷಣ ಎನ್ನವರು.
ಕ್ಷಣದೊಳಗರ್ದ, #ಕ್ಷಣ ಮತ್ತು #ನಿಮಿಷ ಪದಗಳ ಬಗ್ಗೆ:
ಕ್ಷಣ, ಕ್ಷಣಿಕ, ಕ್ಷಯ, ಕ್ಷತಿ ಗಳು ಒಂದೇ ಬೇರಿನ ಪದಗಳು. ಕ್ಷತ್ರಿಯ/ಕ್ಷಾತ್ರ, ಕ್ಷಮ ಮುಂತಾದವು ಕೂಡ (ಈಗ ಬೇರೆ ಅರ್ಥ ಪಡೆದಿದ್ದರೂ) ಇದೇ ಬೇರಿನ ಪದಗಳು ಎಂದು ವಾದಿಸಬಹುದು. ಕ್ಷಣ ದ ಅಕ್ಷರಶಃ ಹುರುಳು "that which perishes quickly." ಕ್ಷಯ ಎಂದರೆ "decay" or "destruction."
ನಿಮಿಷ ಎಂದರೆ ಕಣ್ (ರೆಪ್ಪೆ) ಹೊಡೆ, ಕಣ್ ಮಿಟುಕಿಸು
winking, shutting the eye, twinkling ಎನ್ನುವುದು ಮೂಲದ ಹುರುಳು. ನಿಮಿಷ ಎಂದರೆ ಕಣ್ ರೆಪ್ಪೆಯನ್ನು ಹೊಡೆಯಲು ತೆಗೆದುಕೊಳ್ಳುವಷ್ಟು ಹೊತ್ತು (Twinkling of the eye as a measure of time, a moment) ಎನ್ನುವಂತೆ ಪುರಾಣ ಸಾಹಿತ್ಯದಲ್ಲಿ ಬಳಕೆಯಾಗಿದೆ. ಇತ್ತೀಚಿನ ಕನ್ನಡದಲ್ಲಿ ಇದರ ಅರ್ಥ ಹಿಗ್ಗಿ ಗಂಟೆಯ / ಡಿಗ್ರಿಯ ಅರವತ್ತನೇ ಒಂದು ಭಾಗ ಎಂದಾಗಿದೆ. Both words denote very short time periods. ಕ್ಷಣ is generally used for a slightly longer duration than ನಿಮಿಷ. ನಿಮಿಷ is often used to describe the shortest possible unit of time, like the blink of an eye. "ಕ್ಷಣ" refers to a moment that is fleeting and perishable, while "ನಿಮಿಷ" refers to a moment that is so short that it is almost imperceptible. ಮೀನು ಗಳಿಗೆ ರೆಪ್ಪೆಗಳಿರದ್ದರಿಂದ ಅವು ಅನಿಮಿಷ. ದೇವತೆಗಳು ಕಣ್ಮಿಟುಕಿಸದ ಕಾರಣ ಅವರು ಅನಿಮಿಷರು. (ನಳ ದಮಯಂತಿ ಕತೆಯಲ್ಲಿ ಎಲ್ಲ ದೇವತೆಗಳು ನಳ ರೂಪದಲ್ಲಿ ಬಂದಾಗ, ನಳನನ್ನು ಗುರುತಿಸಲು ದೇವತೆಗಳ ಈ ಕಣ್ಮಿಟುಕಿಸದ ಗುಣವನ್ನೇ ಬಳಸಲಾಗಿದೆ).
ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯ ಆನಂದ-
ಇವೈದು ಆಕಾಶದ ಅಂಶ ಎನ್ನವರು ಚನ್ನಬಸವಣ್ಣ.
"ಡಂಬು - ಪ್ರಕಟ - ಪ್ರಪಂಚು - ಅಭ್ರಚ್ಛಾಯ" ಯೆಂಬ ಚತುರ್ವಿಧಂಗಳಿವುದು" #ಪ್ರಸಿದ್ದಪ್ರಸಾದ ದ ಲಕ್ಷಣ ಎನ್ನುವನು ಆದಯ್ಯ. (ಶುದ್ದ ಸಿದ್ಧ ಪ್ರಸಿದ್ಧ ಗಳೆಂಬ ತ್ರಿವಿಧ #ಪ್ರಸಾದ ಗಳ ಕಲ್ಪನೆಯನ್ನು ಶರಣರು ಕೊಟ್ಟಿದ್ದಾರೆ)
ಕುಟಿಲ ಕುಹಕ ಆಟಮಟ ಅಭ್ರಚ್ಛಾಯವಳಿದು ಹೋಗದ ಮುನ್ನ ಎನ್ನವರು ತೋಂಟದ ಸಿದ್ದಲಿಂಗ ಶಿವಯೋಗಿಗಳು.
ಸೊನ್ನಾರಿಯಲ್ಲಿ ಹುಟ್ಟಿದ ಹೊನ್ನು ಸೊನ್ನಾರಿಯ ಮಗನೆ?
ಉನ್ಮತ್ತದಲ್ಲಿ ಹುಟ್ಟಿದ ಹೆಣ್ಣು ಉನ್ಮತ್ತದ ಮಗಳೆ?
ತನ್ಮಯದಲ್ಲಿ ಹುಟ್ಟಿದ ಮಣ್ಣು ತನ್ಮಯದ ಮಗನೆ?
ಸನ್ಮನ ( ಸನ್ಮತ) "ಮೂರರ ಮಾಯವೆ ಅಭ್ರಚ್ಛಾಯೆ"
ಗೊಹೇಶ್ವರಲಿಂಗನ ಉಪಾಯವು
ಎಂಬ ಸಾಲುಗಳು ಇಬ್ಬರು ಶರಣರ ವಚನಗಳಲ್ಲಿ ಸಿಗುತ್ತವೆ.
The word ಸಂಸಾರ refers to the endless cycle of death and rebirth, or transmigration of souls. ಸಂಸಾರವೆಂದರೆ ಹುಟ್ಟು ಸಾವು ಮರುಹುಟ್ಟು ಗಳ ಮುಗಿಯದ ಕೊಂಡಿಗಳುಳ್ಳ ಸುತ್ತು. ಸಂಸಾರ ಎಂದರೆ ಭವದ ಬದುಕು ಎಂದು ಕೂಡ ಹಾಗುವುದು. ಭವದಿಂದ ಭವಕ್ಕೆ ಅಲೆಯುವುದು ಎಂದು ಕೂಡ ಹಾಗುವುದು.