ಶನಿವಾರ, ಡಿಸೆಂಬರ್ 18, 2021

ಬಸವರಾಜದೇವರರಗಳೆ - ಹನ್ನೊಂದನೆಯ ಸ್ಥಲ

ಬಸವರಾಜದೇವರ ರಗಳೆ 

ಹನ್ನೊಂದನೆಯ ಸ್ಥಲ 

ಬಸವನ ಭಕ್ತಿಯಂ ಬಸವರಾಜನ ದಾನವಿನೋದವೃತ್ತಿಯಂ 
ಬಸವನ ನಿಷ್ಠೆಯಂ ಬಸವದೇವನ ಸನ್ನುತಪುಣ್ಯಕೀರ್ತಿಯಂ | 
ಬಸವನ ಪೆರ್ಮೆಯಂ ನಲಿದು ಕೇಳುತೆ ಕಿನ್ನರಬೊಮ್ಮ ತಂದೆಗಳ್ 
ಬಸವನಿರೀಕ್ಷಣಾರ್ಥದೊಲವಿಂ ಬರುತಿರ್ದರನೂನಸಾತ್ವಿಕರ್ || ೧* 


೦. 
ಇಂತು ಬಸವಣ್ಣನಂ ನೋಡುವುದ್ಯೋಗದಿಂ 
ಸಂತಸದಿ ಬರುತಿರ್ದರಂತಲ್ಲಿ ಬೇಗದಿಂ | 
ಎಸೆವ ಕಿನ್ನರಬೊಮ್ಮ ತಂದೆಗಳು ಬರುತಮಿರೆ 
ಅಸಮನಯನನ ಗಣಾವಳಿ ನೋಡಿ ನಲಿವುತಿರೆ | 
ಮುಂತೆ ವೃಷಭಧ್ವಜಂ ಗಗನದೊಳು ಕುಣಿವುತಿರೆ 
ಪಿಂತೆ ಮಾಹೇಶ್ವರರ ಹೇಳಿಕೆಗಳೊಪ್ಪುತಿರೆ | 
ನಡೆತಂದು ಪದವೀಥಿಯಂ ಪುಗುತ್ತಿರಲತ್ತ 
ಕಡುನೇಹಿ ಬಸವಂಗೆ ಬಲದ ಕಣ್ ಕೆತ್ತುತ್ತ-| 
ವಿಮ್ಮಡಿಸಿ ಪುಳಕಂಗಳೊಮ್ಮೆಗೊಮ್ಮೆಗೆ ನೆಗೆಯೆ 
ನೂರ್ಮಡಿಸಿ ಮೈವೆಚ್ಚು ತಾನಂದವಂದೊಗೆಯೆ | ೧೦ 


ಪರಮ ಹರುಷಂದೋಱುತಿರೆ ಸಂತಸಂಬಡುತೆ 
ಹರನ ಭಕ್ತರ್ ಬರ್ಪರಿಂದೆನ್ನ ಮನೆಗೆನುತೆ | 
ಶಶಿಯ ಬರವಂ ಚಕೋರಂ ಬಯಸಿ ನಿಂದಂತೆ 
ಎಸೆವ *ಕಾರಂ ಬಯಸಿನಿಂದ* ಚಾದಗೆಯಂತೆ |
(* ಮುಂಗಾರಂ ಬಯಸುವ (ಕ.ಖ.)) 
ಮುಂದೆ ಮಿಗೆ ಮೆರೆವ ನಂದಿಯ ಪತಾಕೆಯ ನಡುವೆ 
ಸಂದಣಿಪ ಗಣನಾಯಕರ ಸಂಭ್ರಮದ ನಡುವೆ | 
ಕಿನ್ನರಯ್ಯಂ ಬರುತ್ತಿರೆ ದೂರದಿಂ ಕಂಡು 
ತನ್ನ ಮನದೊಳಗೆ ಗುಡಿಗಟ್ಟಿ ಹರುಷಂಗೊಂಡು | 
ಬಸವನಿದಿರ್ಗೊಂಡು ಭಯಭಕ್ತಿಯಿಂ ಮೈಯಿಕ್ಕಿ 
ಒಸೆದು ಕಿನ್ನರತಂದೆಗಿದಿರಾಗಿ ಮೈಯಿಕ್ಕಿ | ೨೦ 


ಇರ್ಬರೊಂದಾಗಿ ನಲಿನಲಿದು ತಕ್ಕೈಸುತಂ 
ಸರ್ಬನ ಗಣಂಗಳೊಳು ಪರಮಸುಖವೊಂದುತಂ | 
ಬಂದು ಬಸವಣ್ಣನರಮನೆಯನೊಲವಿಂ ಪೊಕ್ಕು 
ತಂದುನ್ನ ತಾಸನದೊಳಿರಿಸುತೆ ಮನಂ ಮಿಕ್ಕು | 
ಪಾದಂಗಳಂ ತೊಳೆದು ತೀರ್ಥಜಲಮಂ ತಳೆದು 
ಆದರಂ ಮಿಗೆ ಕಿಂಕರಾಕಾರದೊಳು ನೆರೆದು| 
ಪನ್ನೆರಡು ಸಾವಿರೊಡೆಯರ ನಡುವೆಯಾಡುತಂ 
ಕಿನ್ನರಯ್ಯಂಗೆ ಲಿಂಗಾರ್ಚನೆಗೆ ನೀಡುತಂ | 
ಸಂಗಂಗೆ ಸಂಗಡದೊಳಾರೈಸಲಿಕ್ಕುತಂ ಹಿಂಗದೆ 
ಶಿವಪ್ರಸಾದಂಗಳಿಂ ಪೆಚ್ಚುತಂ | ೩೦ 

ಕಿನ್ನರಯ್ಯಂಗೆ ಆದರದಿಂದೆ ಉಡಲಿತ್ತು 
ಮನ್ನಿಸುತ್ತವರ ಪದಮಂ ನೆತ್ತಿಯೊಳು ಹೊತ್ತು | 
ಕಿನ್ನರಯ್ಯನ ಹರುಷವೇ ಹರುಷವಾಗುತಂ 
ಕಿನ್ನರಯ್ಯನ *ನೇಹವೇ* ನೇಹವಾಗುತಂ | 
(* ಸರಸ.) 
ನಲಿನಲಿದು ಕೆಲದೆವಸವೀ ತೆಱದೊಳೊಪ್ಪುತಿರೆ 
ಒಲವು ದಳವೇಱಿ ಇರ್ಬರ ನಡುವೆ ಬೆಳೆವುತಿರೆ | 
ಒಂದು ದೆವಸಂ ಕಿನ್ನರಯ್ಯಂಗಳೊಲುಮೆಯಿಂ 
ಇಂದುಧರನಾರೋಗಣೆಗೆ ಚಿತ್ತದರ್ತಿಯಿಂ| 
ತನ್ನ ಸೊಗಸೇ ಶಿವಂಗತಿಸೊಗಸು ತಾನೆಂದು 
ಚೆನ್ನವಪ್ಪುಳ್ಳಿಗಳ ಮೇಲೋಗರಕ್ಕೆಂದು | ೪೦ 

ತರಿಸಿ ಸುಖಮುಖದಿಂದ ಸೋದಿಸುತ್ತಿರ್ದಲ್ಲಿ 
ಶರಣರೊಡಗೂಡಿ ಮಿಗೆ ಬಣ್ಣಿಸುತ್ತಿರ್ಪಲ್ಲಿ | 
ಹೆಂಪಿಂದೆ ಶರಣರ ನಡುವೆ ಉಳ್ಳಿ ಮೆಱವುತಿರೆ 
ಕಂಪು ಬಸವನ ನಾಸಿಕಕ್ಕೆ ತೀಡುತ್ತಮಿರೆ | 
ತಂದರಾರೀಯಭೋಜ್ಯವನೆನುತ್ತುಳ್ಳಿಯಂ 
ನಿಂದಿಸುತೆ ಪೋದನರಮನೆಗೆ ಅಭವಪ್ರಿಯಂ | 
ಆ ನುಡಿಯನಾಲಿಸುತೆ ಕಿನ್ನರಯ್ಯಂಗಳಿರೆ
ಏನೆಂದ ಬಸವಣ್ಣನೆನುತೆ ಕಾಯ್ಪಿಡಿದಡರೆ|
ಕಂಗಳರೆಕೆಂಪಾಗೆ ಮೀಸೆಗಳು ಕೆತ್ತುತ್ತೆ 
ಹಿಂಗದಿರ್ಪುದು ತನ್ನ ಮಂದಿರದೊಳಗೆ ಮತ್ತೆ | ೫೦ 


ಹರಹರ ಇದೇನೆಂದು ಕಣ್ಣ ನೀರಿಕ್ಕುತಂ 
ಪಿರಿದುಂ ನಿರೋಧದಿಂ ಶರಣಸತಿ ನೋವುತಂ | 
ಬರಲಾಗದಿಲ್ಲಿಗಾಂ ಬಂದಲ್ಲಿ ಸೈರಿಪುದು 
ಶರಣರಂ ದೂರದಿಂ ಕೇಳುತಾದರಿಸುವುದು | 
ಅಮೃತಮಂ ಬಿಸುಟು ಮಲ್ಲಯ್ಯನಾರೋಗಿಸುವ 
ಅಮೃತಮಯಶಾಕಮನಿದಂ ನೋಡಿ ನಿಂದಿಸುವ | 
ನುಡಿಗೇಳ್ದು ನಿಲಲಾಗದೆಂದು ಘುಡುಘುಡಿಸುತಂ 
ಕಡುಕೋಪದಿಂದೆ ಪೋಱಮಟ್ಟು ದಡದಡಿಸುತಂ| 
ಗಾವುದಳವಿಯ ಬಟ್ಟೆಯೊಂದೂರ್ಗೆ ನಡೆತಂದು 
ದೇವಾರ್ಚನೆಯ ನಿತ್ಯನೇಮಕ್ಕೆ ಮನದಂದು | ೬೦ 


ಅತ್ತಲಾ ಕಿನ್ನರಯ್ಯಂ ಹೋಗಿಯಿರಲಿತ್ತ 
ನಿತ್ಯ ನಿಯಮಕ್ಕೆಂದು ಶರಣರಂ ಕೂಡುತ್ತ| 
ಅಂದು ಬಸವಂ ಬಂದು ಶರಣಪಾದೋದಕದಿ 
ಮಿಂದು ಮಡಿವರ್ಗಮಂ ಪೊದೆದು ಮಿಗೆ ಸಂತಸದಿ | 
ಕಿನ್ನರಯ್ಯನನಱಸಿ ಕಾಣದೆ ಭಯಂಗೊಂಡು 
ಎನ್ನೊಡೆಯನೆಲ್ಲಿರ್ದನೆಂದು ನೇಹಂಗೊಂಡು | 
ಬೆಸಗೊಳಲು ಶರಣರೆಂದರು ಬಸವರಾಜಂಗೆ 
ಶಶಿಧರನ ಸದ್ಭಕ್ತಿಯಾಚಾರ*ಧೀರಂ*ಗೆ | 
(*ರಾಜ (ಕ.ಖ.), ಬೀಜ (ಗು);))) 
ಎಲೆ ಬಸವ ಕಿನ್ನರಯ್ಯಂ ತಮ್ಮ ದೇವಂಗೆ 
ಸಲೆ ಸೊಗಸಿನುಳ್ಳಿಯಂ ತರೆ ಮಲ್ಲಿನಾಥಂಗೆ | ೭೦ 


ಕಂಡದಂ ನಿಂದಿಸಿದರೆಂದು ಘನಕೊಪದಿಂ 
ಕೆಂಡವಂ ಮೆಟ್ಟಿದಂತಾಗಿ ಸಂತಾಪದಿಂ | 
ಮುಳಿದು ಪೋದರ್ ಕಿನ್ನರಯ್ಯಂಗಳಂತದಕೆ 
ಕಳೆದು ಹೋಗದ ಮುನ್ನ ಹೋಗಿ ಬೇಳ್ಳು'೨[ದು ಇ]೨'ದಕೆ | 
(೨. ದನಿ (ಕ.), ದನ (೩) ; ) 
ಗುಣವಂತನಭಿಮಾನಿ ಮುಳಿದು ಹೋದ ದೇವ 
ತ್ರಿಣಯನವತಾರ ಶರಣಂ ಪೋದನೆಲೆ ದೇವ | 
ಎಂಬುದಂ ಕೇಳಂಜಿ ಬಸವಣ್ಣ ಮರವಟ್ಟು 
ಹಂಬಲಿಸಿ ಹಲುಬಿ ಘನತಾಪ ಮನಮಂ ನಟ್ಟು | 
ನೊಂದು ಮನಗುಂದಿ ತನು ಕಂದಿ ಮಿಗೆ ಮಿಗೆ *ಕೋ*ಡಿ 
ಬಂದ ಸುಕೃತಂ ತಿರಿಗಿ ಹೋಯ್ತಂದು ನೆಱೆ ಬಾಡಿ | ೮೦ 
(*ನೋ (ಖ.ಕ.)

ಇನ್ನೆಂತು ಮಾಡುವ ಕಿನ್ನರಯ್ಯಂ ಮುಳಿದ- 
ನಿನ್ನೆಂತುಟಪ್ಪುದೋ ಭಕ್ತರೇ ಬಲ್ಲರಿದ-| 
ನೆಂದು ಗಣವೃಂದಕ್ಕೆ ಭಯದಿಂದ ಮೈಯಿಕ್ಕಿ 
ಅಂದು ಬಸವಣ್ಣನುಬ್ಬುಡುಗುತಂ ಮೈಯಿಕ್ಕಿ | 
ಅಱಿದನಱಿದೆಂ ನೋಡು ನುಡಿಕೆಟ್ಟ ನಾಲಗೆಗೆ 
ಮಱೆನುಂಟುಂಟು ಅಪರಾಧವೀ ನಾಲಗೆಗೆ | 
ಬಂದುದೀವುಳ್ಳಿಯಂ ನಿಂದಿಸಿದ '*ದಂಡ*ಕ್ಕೆ 
ಇಂದು ನಾನಪರಾಧಿಯೇ ಶರಣವೃಂದಕ್ಕೆ || 
 (*ಡಂತೆ (ಖ.)) 
ದೇವ ಒಂದಂ ಬೆಸಸಿರೇ ಇದಕ್ಕೆನುತಮಿರೆ 
ದೇವಶರಣರ್ ನುಡಿದರಾ ಒಸವ ನಲಿವುತಿರೆ | ೯೦ 


ಬಸವ ಕೇಳಿಂದಾದ ಸಮೆದ ಬೋನವನಿಂತೆ 
ಎಸೆವಶರಣನ ಕೊಂಡು ಬಂದು ನಾವಿನ್ನಂತೆ | 
ಉಳ್ಳಿಯಿಂ ಕಿನ್ನರಯ್ಯಂಗಾದ ಮುಳಿಸುವಂ 
ಉಳ್ಳಿಯಿಂದವೆ ತೀರ್ಚಿ ಕಳೆದು ನಿರೋಧವಂ | 
ಎನೆ ಬಸವರಾಜಂ ಹಸಾದವೆನುತಂ ನಿಂದು 
ಘನಮಹಿಮನಾಕ್ಷಣಂ ತರಿಸುತಿರ್ದಂ ನಲಿದು | 
ಒಸೆದು ತರುತಿರ್ದರಾ ಲೇಸಪ್ಪ ಉಳ್ಳಿಯಂ 
ಮಸಗಿ ತರುತಿರ್ದರಾ ಶಿವಭಕ್ತರೊಲ್ಮೆಯಿಂ | 
ತೀವಿ ಬಂಡಿಯೊಳು ನಾಲ್ಸೆದೆಸೆಗಳಿ೦ ಬರುತಮಿರೆ 
ಏವೇಳ್ವನಾ ಭಕ್ತರುತ್ಸಹವನೊಪ್ಪುತಿರೆ | ೧೦೦ 


ಕಹಳೆ ಮದ್ದಳೆ ಶಂಖನಾದವುಳ್ಳಿಯ ಮುಂದೆ 
ಬಹುವಿಧದ ವಾದ್ಯ ಸಂತಾನವುಳ್ಳಿಯ ಮುಂದೆ | 
ಹಾಡುವ‌ರ್ ಪರಸುವರ್ ಕುಣಿವರುಳ್ಳಿಯ ಮುಂದೆ 
ಆಡುವರಗ ನೋಡುವ‌ರ್ ನಲಿವರುಳ್ಳಿಯ ಮುಂದೆ | 
ಬಿತ್ತರಿಪ ವೃಷಭಧ್ವಜಂಗಳುಳ್ಳಿಯ ಮುಂದೆ 
ಒತ್ತರಿಪ ಶರಣರ ಸಮೂಹವುಳ್ಳಿಯ ಮುಂದೆ | 
ಇಂತು ಬರಲುಳ್ಳಿಯಂ ಬಸವಣ್ಣನಿದಿರ್ಗೊಂಡು 
ಸಂತಸದೊಳಂದು ವಿಸ್ತರಿಸಿದಂ ಕೈಕೊಂಡು | 
ಆನೆಗೆ ಗುಳಂ ಕುದುರೆವಕ್ಕರಿಕೆಯುಳ್ಳಿಯಿಂ 
ನಾನಾಭರಣವೆಸೆವಲಂಕರಣವುಳ್ಳಿಯಿಂ | ೧೧೦ 


ತೊಡುವುಡುವ ಪೊದೆವ ಸುತ್ತುವವೆಲ್ಲವುಳ್ಳಿಯಿಂ 
ಪಿಡಿದಿಡುವ ನುಡಿವ ಮಾಡುವವೆಲ್ಲವುಳ್ಳಿಯಿಂ| 
ಇಂತು ಪಟ್ಟಣವೆಲ್ಲವುಳ್ಳಿಗಳ ಮಯವಾಗೆ 
ಸಂತಸಂ ಮಾಡಿ ಬಸವಣ್ಣನುನ್ನತವಾಗೆ | 
ಅವರಿದಿರ್ ಗಾವುದರೆದಾರಿಯೊಳಗಂದುಕ್ಕಿ 
ತವಕದಿಂದೊಪ್ಪವುಳ್ಳಿಯ ಚಪ್ಪರವನಿಕ್ಕಿ | 
ಲಕ್ಕಲಕ್ಕಕ್ಕೆ ನೆರೆದ ಭವಭಕ್ತರ ನಡುವೆ 
ಉಕ್ಕಂದದುರವಣೆಯ ವೀರಶರಣರ ನಡುವೆ | 
ನೆರೆದು ನೆಗಹಿದ ಕೋಟಿವೃಷಭಧ್ವಜದ ನಡುವೆ 
ಬರುತಿರ್ದನಾ ಬಸವನೆಸೆವ ಸಿಂಧದ ನಡುವೆ | ೧೨೦ 


ಉಳ್ಳಿಗಳ ಜಂಪಂ ಶಿರೋಮಾಲೆಗಳನಿಕ್ಕಿ 
ಉಳ್ಳಿಗಳ ಬಾಹುಬಳೆ ಕಂಠಮಾಲೆಯನಿಕ್ಕಿ | 
ಉಳ್ಳಿಗಳ ಮುಡಿದು ಉಳ್ಳಿಗಳ ಕೈಯೊಳ್ ಪಿಡಿದು 
ಒಳ್ಳಿತೆಸಿಸುವ ಮನದ ಬಸವರಾಜಂ ನಡೆದು | 
ಬರುತಮಿರೆ ಬೆಳ್ಳೂಡೆಗಳಲ್ಲಿ ದಿವಿ ಮುಸುಕಿದವು 
ನೆರೆದು ಬಹುವಿಧವಾದ್ಯವಡಸಿ ನಿಖೆ ಮೊಳಗಿದವು | 
ಧಿಮಿಧಿಮಿಕು ದುಮುಕುತಂಗೆಂಬ ಮದ್ದಳೆಯ 
ಚಮಕ ತಕನಕ ತಕನವೆಂಬ ಕಹಳೆಯ ದನಿಯ | 
ನಟಟಿಹಕು ಫಣಭಣ ಛ್ಚಿಳಿಲೆಂಬ ಆವುಜೆಯ 
ನಟವಿಕಟ ಕಟಕ ಬಿಱ್ಬೆಂಬ ಕರಡೆಯ ದನಿಯ | ೧೩೦ 


ನಡುವೆ ಕೇಳಿಸುವ ಹೇಳಿಕೆಯವರ ಸಂಗಡದ 
ಗಡಣ ವಿಡಿದೊಪ್ಪದಿಂ ಬರುತಿರ್ದ ಜಂಗಮದ |
ಕೋಳಾಹಳದ ಸರ್ವಸಂಭ್ರಮಂ ನೆಗಳುತಿರೆ 
ಮೇಳೈಪ ಪೌರಜನವರ್ತಿಯಿಂ ಬರುತಮಿರೆ| 
ಎಡಬಲದ ವೀರತತಿ ನೆಲನನುಗ್ಘಡಿಸುತಿರೆ 
ಬಿಡದೆ ಪರಸಮಯಿಗಳು ನಡನಡುಗಿ ಸರಿವತಿರೆ |
ಭಕ್ತಜನಚರಣಸರಸಿರುಹಷಟ್ಟದನೆಂಬ 
ಭಕ್ತಜನಕುಮುದವನಕಮನೀಯಶಶಿಯೆಂಬ | 
ಜಂಗಮದ ವೇಳೆ ಜಂಗಮದ ಕಿಂಕರನೆಂಬ 
ಜಂಗಮಪ್ರಾಣ ಜಂಗಮದ ಸಂಪದನೆಂಬ | ೧೪೦ 


ಬಿರುದೆ ಕಹಳೆಗಳು ದೆಸೆದೆಸೆಗೆ ಕರೆವುತಿರೆ 
ಧರೆ ನಡುಗೆ ನಿಸ್ಸಾಳನಾದವುತ್ತಮಿರೆ | 
ನಡೆದು ಬಂದುದು ರಜತಗಿರಿಯ ಹಾದಿಯ ತೆಱದಿ 
ನಡೆತಂದುದಿಂದುಮೌಳಿಯ ನಿಬ್ಬಣದ ತೆಱದಿ |
ಇಂತು ಬರುತಿರೆ ಕಂಡು ಕಿನ್ನರಯ್ಯಂ ನಿಂದು 
ಚಿಂತಿಸಿದನೆಲ್ಲಿಯದಿದೇನು ಕೌತುಕವೆಂದು | 
ತನ್ನ ಮುನಿಸಂ ತಿಳುಪಲೆಂದು ಬಸವಂ ಬಪ್ಪ 
ಉನ್ನತಿಯಿದೆಂದರಿದು ತನ್ನ ಮನದೊಳಗಿಪ್ಪ | 
ಮುನಿಸು ದೇಹದೊಳಿದಿರ್ಗೊಂಡುದಾ ಭಕ್ತಂಗೆ 
ನೆನಹು ಬಸವನ ಮೇಲೆ ಬಿದ್ದು ದಾ ಭಕ್ತಂಗೆ | ೧೫೦


ಚಿತ್ತಂ ಬಸವನತ್ತ ತಿರಿಗಿತ್ತು ಭಕ್ತನಂ 
ಒತ್ತರಿಸಿ ಪುಳಕಂಗಳೆತ್ತಿದವ 'ಶರಣನಂ | 
ಇದಿರೆದ್ದು ಬರಿಸಿದವು ಕರಣಂಗಳಾತನಂ 
ಸದಮಳ ಶಿವಧ್ಯಾನಪರಿಪೂರ್ಣ ಹೃದಯನಂ। 
ಇಂತು ಸಾತ್ಕ್ರವಿಕರಸದರಸನಾಗಿ ಬರುತಿರ್ಪ 
ಕಂತುನದಹರನ ಸುಖದವತಾರನೆನಿಸಿರ್ಪ |
ಕಿನ್ನರಯ್ಯನನಕ್ಕಱಿಂದೆ ನೋಡುತೆ ಬಂದು 
ಎನ್ನ ಸಂಗಮನೀತನೀತನೆನುತೈ ತಂದು | 
ಇಳಿಸಿದಂ ಸರ್ವಾಂಗಮಂ ಕಿನ್ನರನ ಪದಕೆ 
ಗಳಗಳನೆ ಸುರಿದನಾನಂದಜಳವಂ ತಳಕೆ | ೧೬೦


ಎತ್ತಿದಂ ಕಿನ್ನರಯ್ಯ ಬಸವರಾಜನಂ 
ಉತ್ತಮೋತ್ತಮಭಕ್ತಿಯಾಚಾರ್ *ತೇ*ಜನಂ | 
ತೆಗೆದು ತಕ್ಕೈಸುತಂ ತಣಿಯದೋರೊರ್ವರೊಳು 
ಬಿಗಿಬಿಗಿದು ಪುಗಲೆಳಸುತಿರ್ದ'ರೋರೊರ್ವರೊಳು | 
ಆಲಿಕಲ್ಲಾಲಿಕಲ್ಲಂ ತಾಗಿದಂತಾಗೆ 
ಹಾಲೊಳಗೆ ಹಾಲಂ ಕರಂ ಬೆರಸಿದಂತಾಗೆ | 
ಬೆಳಗು ಥಳಥಳಿಸ ಬೆಳಗಂ ಕೂಡಿದಂತಾಗೆ 
ತಿಳಿದಮೃತವಮೃತವಂ ಬಿಡದಪ್ಪಿದಂತಾಗೆ |
ಅಪ್ಪಿಕೊಂಡಿರ್ದರಿನಿತುಂ ಬೇಗವಿರ್ಬರುಂ 
ಒಪ್ಪಂಬಡೆದರಭವನಾಜ್ಞೆಯೊಳಗಿರ್ಬರುಂ | ೧೭೦


ಆಗ*ಳುಣ್ಮಿ*ದವು ದುಂದುಭಿಶಂಖಕಹಳೆಗಳು 
ಚಾಗು ಬೊಲ್ಲೆನುತೆ ನೆಗೆದವು ಭಕ್ತಹರಕೆಗಳು | 
( *ಳೂಳಿ*) 
ಭೋರೆಂದು ಕೊಂಡಾಡಿದರ್ ಬಸವರಾಜನಂ 
ಹಾರೈಸಿ ಕೊಂಡಾಡಿದರ್ ಕಿನ್ನರಯ್ಯನಂ | 
ಒಡಗೊಂಡು ಬಸವರಾಜನ ಮಹಮನೆಗೆ ಬರುತ್ತೆ 
ಗುಡಿಗಟ್ಟಿದುಳ್ಳಿ ಗಳ ಗುಡಿಯಂ ನಿರೀಕ್ಷಿಸುತೆ |
ಹಾಡುವ ಗಣಂಗಳಂ ಹರುಷದಿಂ ನೋಡುತಂ 
ಆಡುವ ಗಣಂಗಳಂ ಗುರ್ಬಿನಿಂ ನೋಡುತಂ | 
ಬಂದು ಬಸವಣ್ಣನರಮನೆಯ ನಲವಿಂ ಪೊಕ್ಕು 
ಸಂದಣಿನ ಕೋಟೆಗ*ಣ*ಸಂಚಯಕೆ ಕೈಯಿಕ್ಕು | ೧೮೦
(*ಳ*) 


ಇರೆ ಸವೆದವಲ್ಲಿ ಉಳ್ಳಿಗಳ ಮೇಲೋಗರಂ 
ಸರಸವೆನಿಪುಳ್ಳಿಗಳ ಪಕ್ವಾನ್ನದಾಗರಂ | 
ಮಲ್ಲಿಗೆಯ ಬಣ್ಣ ಮಂ ಚಂದ್ರಿಕೆಯ ಸವಿಗಳಂ 
ಅಲ್ಲಿಯಂಕುರಿಪ ತಾರಾಗಣದ ರುಚಿಗಳಂ |
ಕವರ್ದುಕೊಂಡಂತೆ ನೆಱೆ ಥಳಥಳಿಸುವುಳ್ಳಿಯಂ 
ಶಿವಭಕ್ತ ಕಿನ್ನರಯ್ಯನ ಸವಿಯ ಉಳ್ಳಿಯಂ | 
ಸಕಳ ಪಕ್ವಾನ್ನದೋಗರತತಿಗಳು ಸವೆಯೆ 
ಸಕಳ ಶರಣರ ಶಿವಾರ್ಚನೆ ಸೌಖ್ಯಮಂ ಪಡೆಯೆ |
ಆರೈಸಲಿಕ್ಕುತಂ ಸಕಳಶಿವಲಿಂಗಕ್ಕೆ 
ಹಾರೈಸಿ ಪೊಡಮಡುತೆ ಪರಮಪ್ರಕಾಶಕ್ಕೆ |  ೧೯೦


ಕೈಕೊಂಡರಲ್ಲಿ ಸತ್ಯಪ್ರಸಾದನಂ 
ಮೈ ಕೊನರೆ ತಾಳಿದರ್ ಸುಕೃತಪ್ರಸಾದಮಂ | 
ಉಳ್ಳಿಯಂ ಕಚ್ಚಿ ಸರಿದಾಡುತಿಪ್ಪರ್ ಕೆಲರು 
ಉಳ್ಳಿಯಂ ಕಿನ್ನರನುಮಂ ಪರಸುವರ್ ಪಲರು | 
ಇಂತು ನಲವಿಂ ಪ್ರಸಾದಂಗಳಂ ಕೈಕೊಂಡು 
ಸಂತತಂ ಪರಸಿದರು ಬಸವನಂ ನೆಲೆಗೊಂಡು | 
ಅಮಮ ಶರಣರ ಬಂಧು ಶರಣರೊಲುಮೆಯ ಬಸವ 
ಅಮಮ ಶರಣೈಕಚಿಂತಾಮಣಿಯೆ ಎಲೆ ಬಸವ | -
ಅರರೆ ಶರಣರ ಮುಖದ ರತ್ನ ದರ್ಪಣ ಬಸವ 
ಅರರೆ ಶರಣರ ಮನೆಯ ಪರುಷಪುರುಷನೆ ಬಸವ |  ೨೦೦


ಬಸವಯ್ಯ ಬಸವಣ್ಣ ದಂಡನಾಥನೆ ಬಸವ 
ಬಸವ ಗಣವಿಸರದೊಳಗೆಸೆದ ಸಂಗನಬಸವ | 
ಎಂದು ಕೀರ್ತಿಸುವ ಶರಣಸ್ತುತಿಗೆ ನಡನಡುಗಿ 
ಒಂದುವಂ ಹೊಗಳದಿರಿ ಎಂದು ಚರಣದೊಳೆಱಗಿ |
ನುಡಿದನಾ ಬಸವಣ್ಣನರರೆ ಶರಣರ ಮುಂತೆ 
ಬಿಡದೆ ಮಾಡುವೆನಿಂದು ಮಾಡಿದ ತೆಱದೊಳಿಂತೆ | 
ಅತಿಶಯದೊಳೊಪ್ಪುವುಳ್ಳಿಯ ಪರ್ಬಂ ಕರಂ 
ಪ್ರತಿಸಂವತ್ಸರಂ ಮಾಡುತಿರ್ಪೆನಿಂತಿದು ಭರಂ | 
ನೇಮವೆನಗೆಂದು ನೆಱೆ ಬಸವರಾಜಂ ನುಡಿದು 
ಸೋಮಧರನೆನಿಪ ಕಿನ್ನರನ ಕರುಣಂಬಡೆದು |೨೧೦


ಕಿನ್ನರನ ಮುನಿಸನಾ ಪರ್ಬದಿಂದಂ ತಿಳಿಸಿ 
ಮನ್ನಿ ಸುತಲವರ ಪದದೊಳು ಚಿತ್ತಂ ನಿಲುಷಿ | 
ಭಕ್ತಜನವನಧಿವರ್ಧನಸುಧಾಕರನೆನಿಪ 
ಭಕ್ತ ಜನವನಜವಿಕಸಿತತರಣಿಯೆಂದೆನಿಪ | 
ಪರಸಮಯತಿಮಿರಕಮನೀಯಭಾಸ್ಕರನೆನಿಪ 
ಪರಸಮಯಸುಮನಕೋದಂಡಪುರಹರನೆನಿಪ | 
ಮಝರೆ ಶರಣರ ನಡುವೆ ಬಸವಣ್ಣನೊಪ್ಪಿದಂ 
ಮಝ ಬಾಪು ಬಾವು ಸಂಗನ ಬಸವನೊಪ್ಪಿದಂ || ೨೧೮