ಬುಧವಾರ, ಫೆಬ್ರವರಿ 12, 2025

ಇಷ್ಟಲಿಂಗದ ಅವಶ್ಯಕತೆ

ಇಷ್ಟಲಿಂಗ ಎಂಬುದು ಯಾವುದೋ ದೊಡ್ಡ ದೇವರೋ ರುದ್ರನೋ ಶಂಕರನೋ ಅಲ್ಲ!! ಅದೊಂದು ಕುರುಹು / symbol ಅಷ್ಟೇ... ಸಾಧನೆಗೆ ಬಳಸುವ ಸಾಧನ!
ಪುಸ್ತಕವೇ ಬೇರೆ, ಪುಸ್ತಕದಿಂದ ಸಿಗುವ ಜ್ಞಾನವೇ ಬೇರೆ. ಮೊಬೈಲೇ ಬೇರೆ, ಮೊಬೈಲ್ ಬಳಸಿ ದೂರದವರೊಡನೆ ಮಾತಾಡುವುದೇ ಬೇರೆ!! ಸಾಧನವೇ ಬೇರೆ, ಸಾಧ್ಯವೇ ಬೇರೆ.
ಸಾಧನ = ಇಷ್ಟಲಿಂಗ
ಸಾಧಕ = ಶಿವಪೂಜೆ / ಶಿವಯೋಗ ಮಾಡುವವನು.
ಸಾಧನೆ = ಶಿವಯೋಗ / ಲಿಂಗಾಂಗಯೋಗ
ಸಾಧ್ಯ = ಬಯಲು / ಐಕ್ಯ

೧. ಏಕೆ ಇಷ್ಟಲಿಂಗ ಬೇಕು?
ಉತ್ತರ:: 
ಅರಿಯದ ಕಾರಣ ಕುರುಹುವಿಡಿವೆನಲ್ಲದೆ ಅರಿದ ಬಳಿಕ ಇನ್ನೇನೊ?
ಬಿಟ್ಟಡೆ ಸಮಯ ವಿರೋಧ, ಬಿಡದಿದ್ದರೆ ಜ್ಞಾನ ವಿರೋಧ.
ಗುಹೇಶ್ವರಲಿಂಗವು ಉಭಯದಳದ ಮೇಲೈದಾನೆ ಕಾಣಾ ಸಿದ್ಧರಾಮಯ್ಯಾ.
---- ಅಲ್ಲಮಪ್ರಭುಗಳು. 

2. ಉಭಯದಳಕ್ಕೂ ಹೊಂದುವುದು ಯಾವುದು? 
ಉತ್ತರ: 
ಇಷ್ಟಲಿಂಗದ ಆಕಾರ / ಅಂದ / ರೂಪ / ನಿರ್ಮಾಣ ವನ್ನು ಗಮನಿಸಿದರೆ -- 
√ ಆಕಡೆ ಸಾಕಾರವೂ ಅಲ್ಲ.... ಈ ಕಡೆ ನಿರಾಕಾರವೂ ಅಲ್ಲ!! ಎರಡರ ನಡುವಿನದ್ದು! 
√ ಕಡೆ ಮೂರ್ತಿ ಅಂತಾನೂ ಹೇಳಕ್ಕೆ ಆಗಲ್ಲ... ಈ ಕಡೆ ಮೂರ್ತಿ ಅಲ್ಲ ಅಂತಾನೂ ಹೇಳಕ್ಕೆ ಆಗಲ್ಲ!!

3. ಈ ಆದ್ಯಾತ್ಮ ಸಾಧನೆಯನ್ನು ಬೇರೆಯವರ ಕೈಯಲ್ಲಿ ನಾವ್ಯಾಕೆ ಮಾಡಿಸಬಾರದು? ಮಾಡಿಸಬಹುದಲ್ವಾ?
ಉತ್ತರ:
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನು ತಾ ಮಾಡಬೇಕಲ್ಲದೆ,
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ?
-ಬಸವಣ್ಣ

4. ಇಷ್ಟಲಿಂಗ ಪೂಜೆಯ ಗುರಿ ಏನು?
ಉತ್ತರ : ಕುರುಹು ಅಳಿಯುವುದು!! ಅರಿವ ಅರಿವುದು! 

ಕುರುಹಳಿದು ಕುರುಹನರಿಯ ಬಲ್ಲಡೆ
ಗುಹೇಶ್ವರಲಿಂಗದಲ್ಲಿ ಉಭಯಗೆಟ್ಟಲ್ಲದೆ ಪ್ರಸಾದವಿಲ್ಲ,
ಕಾಣಾ ಮಡಿವಾಳ ಮಾಚಯ್ಯಾ.
-ಅಲ್ಲಮಪ್ರಭು

ಅರಿವರತು, ಮರಹರತು, ಕುರುಹಳಿದು, ನಿರುಗೆಗಂಡು ಬೆರಗುವಡೆದು,
ಹೃದಯಾಕಾಶದ ಬಟ್ಟಬಯಲೊಗೆ ಭರಿತವಾಗಿರ್ದ
ಮಹಾಶರಣರ ತೋರಿಸಿ ಬದುಕಿಸಾ,
ಸೌರಾಷ್ಟ್ರ ಸೋಮೇಶ್ವರಾ. ನಿಮ್ಮ ಧರ್ಮ, ನಿಮ್ಮ ಧರ್ಮ,
-ಆದಯ್ಯ

5. ಈ ಇಷ್ಟಲಿಂಗವನ್ನು ಬಳಸು ಮಾಡುವ ಲಿಂಗಾಂಗಯೋಗ / ಶಿವಯೋಗ ದಲ್ಲಿನ ಮುಖ್ಯವಾದ ಮೂರು ಕ್ರಮಗಳೇನು?

ನಮ್ಮಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರ ಗಳು ಎಂಬುವು ಇವೆ. ಇದೇ ಆಧಾರದಲ್ಲಿ, ಇವಕ್ಕೆ ಹೊಂದುವಂತೆ 
ಇಷ್ಟಲಿಂಗ - ಪ್ರಾಣಲಿಂಗ - ಭಾವಲಿಂಗ ಗಳಿವೆ.ಇವುಗಳಿಗೆ ಹೊಂದುವಂತೆ ಲಿಂಗಾರ್ಚನೆ - ಲಿಂಗನಿರೀಕ್ಷಣೆ - ಲಿಂಗಧ್ಯಾನ ಎಂಬ ಮೂರು ಸಾಧನಾಕ್ರಮದ ಮೆಟ್ಟಿಲುಗಳಿವೆ.

ಇವೆಲ್ಲವೂ ಕ್ರಮದಲ್ಲಿ ಒಂದಕ್ಕೊಂದು ಸಂಬಂಧವುಳ್ಳವು.


https://www.facebook.com/share/v/19x6JmzF6a/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ