ಶನಿವಾರ, ಫೆಬ್ರವರಿ 15, 2025

ಶರಣರಿಗೆ ಶರಣು ಮಾಡಿದುದಕ್ಕಾವುದು ಸಾಟಿ?

ಅಯ್ಯಾ! 
ಒಂದು ಕೋಟಿ ವರುಷ ತಲೆ ಕೆಳಗಾಗಿ ತಪವ ಮಾಡಿದಕಿಂದಲು 
ಒಂದು ದಿನ ಶಿವಭಕ್ತರಲ್ಲಿ ನಿರಹಂಕಾರವಾಗಿರ್ದಡೆ ಸಾಕು ನೋಡಾ. 
ಒಂದು ಕೋಟಿ ವರುಷ ಊರ್ಧ್ವಮುಖವಾಗಿ ಸೂರ್ಯನ ನೋಡಿದ ಫಲವು 
ಒಂದು ದಿನ ಸದಾಚಾರ ಸದ್ಧರ್ಮರಪ್ಪ ಶಿವಭಕ್ತರ ನೋಡಿದುದಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು 
ಒಂದು ದಿನ ಶರಣರಿಗೆ ಶರಣು ಮಾಡಿದುದಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಅರವತ್ತಾರು ಕೋಟಿ ನದಿಗಳ ಮಿಂದು ಮುಡಿಯಿಟ್ಟ ಫಲವು, 
ಒಂದು ದಿನ ಸದ್ಭಕ್ತ ಜಂಗಮ ಶರಣಗಣ ತೀರ್ಥಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಚಾಂದ್ರಾಯಣವ್ರತ ಮೊದಲಾದ ಸರ್ವವ್ರತಂಗಳ ನಡಸಿದ ಫಲವು 
ಒಂದು ದಿನ ಗುರು - ಲಿಂಗ - ಜಂಗಮ - ಪ್ರಸಾದಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ವೇದಾಗಮ ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು 
ಒಂದು ದಿನ ಶಿವಭಕ್ತಶರಣರ ಸಂಭಾಷಣಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಮಹಾಯೋಗವ ಮಾಡಿದ ಫಲವು 
ಒಂದು ದಿನ ಶ್ರೀಗುರು ಲಿಂಗ ಜಂಗಮ ಧ್ಯಾನಕ್ಕೆ ಸರಿಯಲ್ಲ ನೋಡಾ. 
ಒಂದು ಕೋಟಿ ವರುಷ ಷೋಡಶ ಮಹಾದಾನಂಗಳ ಮಾಡಿದ ಫಲವು 
ಒಂದು ದಿನ ಸದ್ಧರ್ಮಿ ಶಿವಯೋಗಿಗೆ ನೀಡಿದ ತೃಪ್ತಿಯ ಮಾಡಿದುದಕ್ಕೆ ಸರಿಯಲ್ಲ ನೋಡಾ. 
ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ ಸರಿಯಲ್ಲ ನೋಡಾ. 
ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು 
ಒಂದು ವೇಳೆ ಗುರು-ಲಿಂಗ-ಜಂಗಮಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ ಸನ್ನಿಧಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ. 
ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರಾ].
-ಅಲ್ಲಮಪ್ರಭು

ಬುಧವಾರ, ಫೆಬ್ರವರಿ 12, 2025

ಇಷ್ಟಲಿಂಗದ ಅವಶ್ಯಕತೆ

ಇಷ್ಟಲಿಂಗ ಎಂಬುದು ಯಾವುದೋ ದೊಡ್ಡ ದೇವರೋ ರುದ್ರನೋ ಶಂಕರನೋ ಅಲ್ಲ!! ಅದೊಂದು ಕುರುಹು / symbol ಅಷ್ಟೇ... ಸಾಧನೆಗೆ ಬಳಸುವ ಸಾಧನ!
ಪುಸ್ತಕವೇ ಬೇರೆ, ಪುಸ್ತಕದಿಂದ ಸಿಗುವ ಜ್ಞಾನವೇ ಬೇರೆ. ಮೊಬೈಲೇ ಬೇರೆ, ಮೊಬೈಲ್ ಬಳಸಿ ದೂರದವರೊಡನೆ ಮಾತಾಡುವುದೇ ಬೇರೆ!! ಸಾಧನವೇ ಬೇರೆ, ಸಾಧ್ಯವೇ ಬೇರೆ.
ಸಾಧನ = ಇಷ್ಟಲಿಂಗ
ಸಾಧಕ = ಶಿವಪೂಜೆ / ಶಿವಯೋಗ ಮಾಡುವವನು.
ಸಾಧನೆ = ಶಿವಯೋಗ / ಲಿಂಗಾಂಗಯೋಗ
ಸಾಧ್ಯ = ಬಯಲು / ಐಕ್ಯ

೧. ಏಕೆ ಇಷ್ಟಲಿಂಗ ಬೇಕು?
ಉತ್ತರ:: 
ಅರಿಯದ ಕಾರಣ ಕುರುಹುವಿಡಿವೆನಲ್ಲದೆ ಅರಿದ ಬಳಿಕ ಇನ್ನೇನೊ?
ಬಿಟ್ಟಡೆ ಸಮಯ ವಿರೋಧ, ಬಿಡದಿದ್ದರೆ ಜ್ಞಾನ ವಿರೋಧ.
ಗುಹೇಶ್ವರಲಿಂಗವು ಉಭಯದಳದ ಮೇಲೈದಾನೆ ಕಾಣಾ ಸಿದ್ಧರಾಮಯ್ಯಾ.
---- ಅಲ್ಲಮಪ್ರಭುಗಳು. 

2. ಉಭಯದಳಕ್ಕೂ ಹೊಂದುವುದು ಯಾವುದು? 
ಉತ್ತರ: 
ಇಷ್ಟಲಿಂಗದ ಆಕಾರ / ಅಂದ / ರೂಪ / ನಿರ್ಮಾಣ ವನ್ನು ಗಮನಿಸಿದರೆ -- 
√ ಆಕಡೆ ಸಾಕಾರವೂ ಅಲ್ಲ.... ಈ ಕಡೆ ನಿರಾಕಾರವೂ ಅಲ್ಲ!! ಎರಡರ ನಡುವಿನದ್ದು! 
√ ಕಡೆ ಮೂರ್ತಿ ಅಂತಾನೂ ಹೇಳಕ್ಕೆ ಆಗಲ್ಲ... ಈ ಕಡೆ ಮೂರ್ತಿ ಅಲ್ಲ ಅಂತಾನೂ ಹೇಳಕ್ಕೆ ಆಗಲ್ಲ!!

3. ಈ ಆದ್ಯಾತ್ಮ ಸಾಧನೆಯನ್ನು ಬೇರೆಯವರ ಕೈಯಲ್ಲಿ ನಾವ್ಯಾಕೆ ಮಾಡಿಸಬಾರದು? ಮಾಡಿಸಬಹುದಲ್ವಾ?
ಉತ್ತರ:
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನು ತಾ ಮಾಡಬೇಕಲ್ಲದೆ,
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ?
-ಬಸವಣ್ಣ

4. ಇಷ್ಟಲಿಂಗ ಪೂಜೆಯ ಗುರಿ ಏನು?
ಉತ್ತರ : ಕುರುಹು ಅಳಿಯುವುದು!! ಅರಿವ ಅರಿವುದು! 

ಕುರುಹಳಿದು ಕುರುಹನರಿಯ ಬಲ್ಲಡೆ
ಗುಹೇಶ್ವರಲಿಂಗದಲ್ಲಿ ಉಭಯಗೆಟ್ಟಲ್ಲದೆ ಪ್ರಸಾದವಿಲ್ಲ,
ಕಾಣಾ ಮಡಿವಾಳ ಮಾಚಯ್ಯಾ.
-ಅಲ್ಲಮಪ್ರಭು

ಅರಿವರತು, ಮರಹರತು, ಕುರುಹಳಿದು, ನಿರುಗೆಗಂಡು ಬೆರಗುವಡೆದು,
ಹೃದಯಾಕಾಶದ ಬಟ್ಟಬಯಲೊಗೆ ಭರಿತವಾಗಿರ್ದ
ಮಹಾಶರಣರ ತೋರಿಸಿ ಬದುಕಿಸಾ,
ಸೌರಾಷ್ಟ್ರ ಸೋಮೇಶ್ವರಾ. ನಿಮ್ಮ ಧರ್ಮ, ನಿಮ್ಮ ಧರ್ಮ,
-ಆದಯ್ಯ

5. ಈ ಇಷ್ಟಲಿಂಗವನ್ನು ಬಳಸು ಮಾಡುವ ಲಿಂಗಾಂಗಯೋಗ / ಶಿವಯೋಗ ದಲ್ಲಿನ ಮುಖ್ಯವಾದ ಮೂರು ಕ್ರಮಗಳೇನು?

ನಮ್ಮಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರ ಗಳು ಎಂಬುವು ಇವೆ. ಇದೇ ಆಧಾರದಲ್ಲಿ, ಇವಕ್ಕೆ ಹೊಂದುವಂತೆ 
ಇಷ್ಟಲಿಂಗ - ಪ್ರಾಣಲಿಂಗ - ಭಾವಲಿಂಗ ಗಳಿವೆ.ಇವುಗಳಿಗೆ ಹೊಂದುವಂತೆ ಲಿಂಗಾರ್ಚನೆ - ಲಿಂಗನಿರೀಕ್ಷಣೆ - ಲಿಂಗಧ್ಯಾನ ಎಂಬ ಮೂರು ಸಾಧನಾಕ್ರಮದ ಮೆಟ್ಟಿಲುಗಳಿವೆ.

ಇವೆಲ್ಲವೂ ಕ್ರಮದಲ್ಲಿ ಒಂದಕ್ಕೊಂದು ಸಂಬಂಧವುಳ್ಳವು.


https://www.facebook.com/share/v/19x6JmzF6a/

ಭಾನುವಾರ, ಫೆಬ್ರವರಿ 02, 2025

ಜಂಗಮ ಪದದ ವ್ಯುತ್ಪತ್ತಿ!

"ಜಂಗಮ" ಪರಿಕಲ್ಪನೆ ಭಾರತೀಯ ಆದ್ಯಾತ್ಮ ಕ್ಷೇತ್ರಕ್ಕೆ ಶರಣರು ಕೊಟ್ಟ ವಿಶೇಷ ಕೊಡುಗೆ. ಶರಣರು ಜಂಗಮ ಪದವನ್ನು ಹಲವು ಆಯಾಮಗಳಿಂದ ಬಳಸುತ್ತಾರೆ. ಕೆಳಗಿನ ಬಳಕೆಗಳನ್ನು ಗಮನಿಸಿದರೆ ಒಂದೊಂದರಲ್ಲೂ ಜಂಗಮ ಪದಕ್ಕೆ ಬೇರೆಯದೇ ಆದ ಹುರುಳು ಹೇಳಬಹುದು. ‌

  1. ಗುರು - ಲಿಂಗ - ಜಂಗಮ 
  2. ಸ್ಥಾವರ - ಜಂಗಮ
  3. ಜಂಗಮ ಸ್ಥಲ
  4. ಜಂಗಮ ಕುಲ
  5. ತ್ರಿವಿಧ ಜಂಗಮ

ಜಂಗಮ ಪದದ etymology / ನಿರುಕ್ತ / ಬೇರರಿಮೆ ಈತರ ವಚನಗಳಲ್ಲಿ ‌ಮೂಡಿ ಬಂದಿದೆ‌.

ಜಕಾರಂ ಜನನಂ ನಾಸ್ತಿ ಗಕಾರಂ ಗಮನವರ್ಜಿತಂ| 
ಮಕಾರಂ ಮರಣಂ ನಾಸ್ತಿ ಏತದ್ಭವ್ಜೇಂಗಮಂ||
-- ಅಲ್ಲಮಪ್ರಭುಗಳು

ಜಕಾರಂ ಹಂಸವಾಹಸ್ಯಾ ಗಕಾರಂ ಗರುಡಧ್ವಜಂ | 
ಮಕಾರಂ ರುದ್ರ ರೂಪಂ ಚ ತ್ರಿಮೂರ್ತ್ಯಾತ್ಮಜಂಗಮಂ ||

ಜಕಾರೇ ಜನನಂ ಪೃಥ್ವೀ ಗಕಾರೇ ಆಕಾಶೋದ್ಭವಂ |
ಮಕಾರೇ ಮರ್ತ್ಯಲೋಕಂ ಚ ಜಂಗಮಂ ಜಗದೀಶ್ವರಂ | 
ಜಂಗಮಸ್ಯ ತ್ರಿಯಕ್ಷರಂ ಭುವನಾನಿ ಚತುರ್ದಶಂ |
- ಬಾಲಸಂಗಯ್ಯ ಅಪ್ರಮಾಣ ದೇವ

ಜಕಾರಂ ಹಂಸವಾಹಸ್ಯ ಗಕಾರಂ ಗರುಢಧ್ವಜಂ | 
ಮಕಾರಂ ರುದ್ರರೂಪಂ ಚ ತ್ರಿಮೂರ್ತ್ಯಾತ್ಮಕಜಂಗಮಃ || 
ಎಂದೆಂಬ ಜಂಗಮವು.
-- ಹೇಮಗಲ್ಲ ಹಂಪ

ಜಂಗಮ ಜನನಮರಣವಿರಹಿತನಂದೆಂತೆಂದಡೆ: 
ಜಕಾರಂ ಜನನಂ ದೂರಂ ಗಕಾರಂ ಗಮನವರ್ಜಿತಃ |
ಮಕಾರಂ ಮರಣಂ ನಾಸ್ತಿತ್ರಿವರ್ಣಮಭಿಧೀಯತೇ ||
-- ನಂಜುಂಡಶಿವ

ಜಕಾರವೆ ಗುರು, ಗಕಾರವೆ ಲಿಂಗ, ಮಕಾರವೆ ಚರಲಿಂಗವಯ್ಯ.
-- ಶೂನ್ಯನಾಥ/ಶೂನ್ಯನಾಥಯ್ಯ ಅಂಕಿತದ ವಚನಗಳು

ಜಂಗಮ ಎಂಬ ಶಬ್ದದಲ್ಲಿರುವ 
ಜಂ ಎಂಬುದಕ್ಕೆ ಜನನಾಭಾವವೂ, 
ಕಾರಕ್ಕೆ ಸಂಸಾರದಲ್ಲಿ ಹೊಂದಬೇಕಾದ ಗಮ್ಯಸ್ಥಾನಾಭಾವವೂ, 
ಕಾರಕ್ಕೆ ಮರಣಾಭಾವವು 
ಎಂದು ಅರ್ಥವಿರುವುದರಿಂದ ಮೂರು ಅಕ್ಷರಗಳಿಂದ ಕೂಡಿದ ಈ ಜಂಗಮ ಶಬ್ದಕ್ಕೆ ಪುನರ್ಜನ್ಮ, ಗಮ್ಯಸ್ಥಾನ, ಮರಣ ಇವು ಮೂರೂ ಇಲ್ಲದವ ನೆಂದು ಅರ್ಥವಾಗುವದು.
--

ತ್ರಿವಿಧ ಜಂಗಮ
(೧)ಪಟ್ಟ - (೨)ಚರ - (೩)ನಿರಂಜನ ಜಂಗಮ
(೧)ಸ್ವಯ ಜಂಗಮ - (೨)ಚರ ಜಂಗಮ  - (೩)ಪರ ಜಂಗಮ
---

ಪ್ರಭುದೇವರ ವಚನದಿಂದ-- 
೧. ಸ್ವಯ, ಚರ, ಪರವೆಂಬ ತ್ರಿವಿಧ ಜಂಗಮವು
೨. ಧರ್ಮಾಚಾರ, ಭಾವಾಚಾರ, ಜ್ಞಾನಾಚಾರವೆಂಬ ತ್ರಿವಿಧ ಜಂಗಮವು
೩.‌ ಶಿಷ್ಯ, ಶುಶ್ರೂಷ, ಸೇವ್ಯವೆಂಬ ತ್ರಿವಿಧ ಜಂಗಮವು
೪. ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯ ಪ್ರಸಾದಿಯೆಂಬ ತ್ರಿವಿಧ ಜಂಗಮವು
೫. ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶವೆಂಬ ತ್ರಿವಿಧ ಜಂಗಮವು
೬. ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ತ್ರಿವಿಧ ಜಂಗಮವು.