ಶನಿವಾರ, ಜನವರಿ 04, 2025

ಮುತ್ತೈದೆ - ನಿಟ್ಟೈದೆ

ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು:
ಆನು ಮುತ್ತೈದೆ, ಆನು ನಿಟ್ಟೈದೆ.
ಕೂಡಲಸಂಗಯ್ಯನಂತಪ್ಪ ಎನಗೊಬ್ಬ ಗಂಡನುಂಟು!

ಬಸವಣ್ಣನವರ ಈ ವಚನದಲ್ಲಿ "ಶರಣಸತಿ-ಲಿಂಗಪತಿ" ಭಾವ ಕಾಣಬಹುದು.‌ ಶರಣಸ್ಥಲದಲ್ಲಿ ಎದ್ದು ಕಾಣುವ ಅನುಭವ ಇದು. ಮೇಲಿನ ವಚನವು ಭಕ್ತನಶರಣಸ್ತಲ ದ ವಚನ. 

ಪದಗಳ ಬಗ್ಗೆ: 
ಮುತ್ತು ಐದೆ ~ ಮುತ್ತೈದೆ  An elderly woman whose husband is alive. ಮದುವೆಯಾದ ಹೆಣ್ಣು.
ನಿಡಿದು ಐದೆ ~ ನಿಟ್ಟೈದೆ An aged woman, whose husband is alive (whose state is regarded as auspicious). - ದೀರ್ಘ ಸುಮಂಗಲೆ. 
ಗಂಡ ~ husband . ಕನ್ನಡದ ಈ ಪದ (ಗಂಡ) ಸಂಸ್ಕೃತಕ್ಕೂ ಹೋಗಿ ಕಾಂತ ನಾಗಿ ಬಳಕೆಯಲ್ಲಿದೆ.

ಮುತ್ತು, ಮುದಿ : advanced age, oldness, old age, priority; 
ಮುದುಕ / ಮುದುಕು : old man; 
ಮುದಕಿ ಮುದಿಕಿ ಮುದುಕಿ : old women
ಮುತ್ತ / ಮುದುಪ : old man; 
ಮುದು / ಮುತ್ತ್ :  mode to advance in growth, increase, become full-grown, mature, advance in years, become old; n. old age,
ಮುದುಕುತನ , ಮುಪ್ಪು :  old age;
ಮೂದೇವಿ : elder sister of Lakṣmī, goddess of misfortune. 

ನಿಡಿದು ~ ನೀಳ, ನಿಡುಪು, ಉದ್ದ, long, stretched

ಹೈದ ಹೈದೆ ಅಚ್ಚಗನ್ನಡದ ಪದಗಳು. ಇವೇ ಆಡುನುಡಿಯಲ್ಲಿ ಅಯ್ದ ಅಯ್ದೆ ಗಳಾಗಿವೆ. ಹುಡುಗ ಹುಡುಗಿ ಎಂದು ಹುರುಳು. ಅಯ್ದೆ / ಐದೆ ಎಂದರೆ a woman whose husband is alive ಎಂದು‌ ಕೂಡ.

ಶುಕ್ರವಾರ, ಜನವರಿ 03, 2025

(ಙಞಣನಮ) ಮೂಗುಲಿಗಳ ಉಲಿಯುವಿಕೆ!

ಸೊನ್ನೆ (ಂ, ೦) ಅನ್ನೋ ಗುರುತನ್ನು ನಾವು‌ ಕನ್ನಡ ಬರವಣಿಗೆಯಲ್ಲಿ ಬಳಸುತ್ತೇವೆ.‌ ಕನ್ನಡದ ಮೇಲರಿಮೆ ಏನಪ ಅಂದ್ರೆ "ಆಡುವಂತೆಯೇ ಬರೆವುದು".

ಆದರೆ ೦ ಬಂದ ಪದಗಳಲ್ಲಿ ಮಾತ್ರ (ಎತ್ತುಗೆಗೆ : ಕೊಂಗ, ಕೆಂಚ, ಕೆಂಡ, ಕಂತು, ಕಂಬ)  ಬರೆಯೋದು ಒಂದು ತೆರನಾದರೆ ಓದೋದೇ ಬೇರೆ ತರ. ಈ  #ಂ ಎನ್ನುವ ಗುರುತಿನ "ಬಳಕೆ"  ಕನ್ನಡಕ್ಕೆ ಹೊರಗಿಂದ ಬಂದದ್ದು ಎನ್ನುವುದು ಇದಕ್ಕೆ ಕಾರಣ ಇರಬಹುದು.

ಇದರ ಬಗ್ಗೆ ಒಂದೆರಡು ಸಾಲುಗಳು....

ಉಸಿರಿಲ್ಲದೆ ಉಲಿಯಿಲ್ಲ. ಮಾತಾಡುವಾಗ ಹೆಚ್ಚಿನೆಲ್ಲ ಬಾರಿ ನಾವು ಈ ಉಸಿರನ್ನು ಬಾಯಿಯ ಮೂಲಕ ಹೊರಗೆಡವ್ತೀವಿ. ಆದರೆ ಕೆಲವು ಬರಿಗೆಗಳನ್ನು ಉಲಿಯುವಾಗ - ಬಾಯಿಯಿಂದ ಹೊರಬರುವ ಗಾಳಿಯನ್ನು - ಸೊಲ್ಪ ಮಟ್ಟಿಗೆ ತೆಡೆದು - ಅದೇ ಗಾಳಿಯನ್ನು ಮೂಗಿನ ಮೂಲಕ - ಹೊರತಳ್ಳುತ್ತೇವೆ. ಮೂಗಿನ ನೆರವು ಇಲ್ಲದೆ ಉಲಿಯಲು ಆಗದ ಕೆಲ ಬರಿಗೆ / ಉಲಿಗಳು ಇವೆ. #ಙಞಣನಮ ಅನ್ನೋವೇ ಇವು. ಈ ಅಯ್ದು ಉಲಿಗಳನ್ನು ಸಕ್ಕದದಲ್ಲಿ ಅನುನಾಸಿಕ ಅಂತಾರೆ ಕನ್ನಡದಲ್ಲಿ #ಮೂಗುಲಿ ಅಂತಾರೆ. 

ಇತ್ತೀಚೆಗಂತೂ ಈ ಬರಿಗೆಗಳು ಕನ್ನಡ ಬರವಣಿಗೆಯಿಂದ ಕಾಣೆಯಾಗಿವೆ. "ಸಂಸ್ಕೃತ ಭೂಯಿಷ್ಟ ಕನ್ನಡವೇ ಶುದ್ದ ಕನ್ನಡ" ಅನ್ನೋ ಭ್ರಮೆ ಹೊತ್ತಿರುವಂತರ‌ ಕಡೆಯಿಂದ ಅವರಿಗೇ ಅರಿವಿಲ್ಲದೆ ಆದ ತಪ್ಪು ಇದೆ ಎನ್ನಬಹುದು. 

ಈ ಸೊನ್ನೆಗೆ ಸಕ್ಕದದಲ್ಲಿ ಅನುಸ್ವಾರ (ಅಂ) ಅಂತಾರೆ. ಇದೊಂದು derived nasal sound. ಇದೊಂದು ಬರಿಗೆಯ ಗುರುತೇ ಹೊರತು ಒಂದು ಉಲಿ / ತೆರೆಯುಲಿ / ಸ್ವರವಲ್ಲ.

೦ ಸೊನ್ನೆಯನ್ನು ಹೇಗೆ ಉಲಿಯುವುದು ಅನ್ನೋದಕ್ಕೆ ನಿಸರ್ಗವೇ ನೀಡಿದ ಕಟ್ಟಳೆಗಳು ಇವೆ. ಂ / ೦ ಯ ಉಲಿಯುವಿಕೆ ಇದರ ನಂತರ ಬರುವ ಬರಿಗೆ ಮೇಲೆ ನಿಂತಿದೆ. 

ಕಟ್ಟಳೆ ೧. 
ಕ ಖ ಗ ಘ ಙ ಗಳು ಕವರ್ಗ / ಕ ಗುಂಪು. ಇವನ್ನು ಉಲಿಯಲು ಗಂಟಲಿನಿಂದ ಉಸಿರು ಹೊರಡುತ್ತದೆ. ಇವಕ್ಕೆ ಕಂಠ್ಯ ಎನ್ನುವರು. ಗಂಟಲುಲಿ ಎನ್ನವರು.

ಂ ಯ ನಂತರ ಮೇಲಿನ ಬರಿಗೆಗಳಲ್ಲಿ ಯಾವುದಾರೂ ಬಂದರೆ ಈ ಂ ಯನ್ನು ನಾವು ಙ ದಂತೆ‌ ಆಡುತ್ತೇವೆ.

ಎತ್ತುಗೆ :
ಕಂಕ = ಕಙ್ಕ 
ಕೊಂಗ = ಕೊಙ್ಗ

ಕಟ್ಟಳೆ ೨. 
ಚಛಜಝಞ ಗಳು ಚವರ್ಗ / ಚಗುಂಪಿನಲ್ಲಿ ಬರುತ್ತವೆ. ಸೊನ್ನೆ/ಂ ಯ ನಂತರ ಇವುಗಳಲ್ಲಿ ಒಂದು ಬರಿಗೆ ಬಂದರೆ ಇಲ್ಲಿನ ಂ ಯನ್ನು ಞ ಅಂತೆ ಉಲಿಯುವರು.

ಎತ್ತುಗೆ: 
ಕೆಂಚ = ಕೆಞ್ಚ 
ಕೆಂಜಗ = ಕೆಞ್ಜಗ 

ಕಟ್ಟಳೆ ೩: 
ಟಠಡಢಣ ಗಳು ಟವರ್ಗ / ಟ ಗುಂಪಿನಲ್ಲಿ  ಬರುತ್ತವೆ. ಈ ಗುಂಪಿನ ಬರಿಗೆಗಳಲ್ಲೊಂದು ಂ ಆದ ಮೇಲೆ ಬಂದರೆ ಇಲ್ಲಿನ ೦ ಯನ್ನು ಣ ದಂತೆ ಉಲಿಯುವರು.

ಎತ್ತುಗೆ:
ಕಂಟಕ = ಕಣ್ಟಕ
ಕಂಠ = ಕಣ್ಠ
ಕೆಂಡ = ಕೆಣ್ಡ

ಕಟ್ಟಳೆ ೪: 
ತಥದಧನ ಗಳು ತವರ್ಗ / ತ ಗುಂಪಿನಲ್ಲಿ ಬರುತ್ತವೆ. ಈ ತ ಗುಂಪಿನ ಬರಿಗೆಗಳಲ್ಲೊಂದು ಂ ಆದ ಮೇಲೆ ಬಂದರೆ ಇದನ್ನು ನ ದಂತೆ ಉಲಿಯುವರು.

ಎತ್ತುಗೆ: 
ತಂತು, ಕಂತು  = ತನ್ತು, ಕನ್ತು
ಬಂದ, ಕಂದ = ಬನ್ದ, ಕನ್ದ 

ಕಟ್ಟಳೆ ೫: 
ಪಫಬಭಮ ಗಳು ಪವರ್ಗ / ಪ ಗುಂಪಿನವು. ಈ ಪ ಗುಂಪಿನ ಬರಿಗೆಯಲ್ಲೊಂದು ಂ ಆದಮೇಲೆ ಬಂದರೆ ಈ ಂ ಯನ್ನು ಮ ಎಂಬಂತೆ ಉಲಿಯುವರು.

ಎತ್ತುಗೆ: 
ಪಂಪ = ಪಮ್ಪ
ಕಂಬ = ಕಮ್ಬ

ಕಟ್ಟಳೆ ೬. 
ಮೇಲಿನವು ಗುಂಪು ಮಾಡಿದ ಬರಿಗೆಗಳು. ಅವರ್ಗೀಯ / ಗುಂಪು ಮಾಡದ ಬರಿಗೆಗಳೂ ಇವೆ. ಶ ಷ ಸ ಹ ಮುಂತಾದವು. ಪದದಲ್ಲಿ ಈ ಬರಿಗೆಗಳು ಂ ಆದಮೇಲೆ ಬಂದರೆ .. ಕನ್ನಡದಲ್ಲಿ ಹೆಚ್ಚಿನೆಲ್ಲಾ ಬಾರಿ‌ "ಮ" ವನ್ನೇ ಬಳಸಿರುವುದು ನನ್ನ ಗಮನಕ್ಕೆ ಬಂದಿದೆ.

ಎತ್ತುಗೆ: 
ಸಿಂಹ = ಸಿಮ್ಹ 
ವಂಶ = ವಮ್ಶ
ಕಂಸ = ಕಮ್ಸ 
ಸಂಸ್ಕೃತ = ಸಮ್‌ಸ್ಕೃತ 

ಙಞಣನಮ ದಂತ ಮೂಗುಲಿಗಳು ಮತ್ತು ರ ಱ ಲ ೞ ಳ alveolar approximant ಗಳು ಜೊತೆಯಲ್ಲಿ ಬಂದಗ .. ಉಸಿರನ್ನು - ಮೂಗಿನ ಮೂಲಕ ತಳ್ಳಿ - ಕೂಡಲೇ ಮೂಗಿನ ಗಾಳಿಯನ್ನು ತಡೆದು - ಬಾಯಿಯ ಮೂಲಕ ಹೊರತಳ್ಳುವ - ಉಸಿರನ್ನು ನಾಲಗೆಯ ಮೂಲಕ ಹಲ್ಲಿನ ಹಿಂಬಾಗದ ಮೇಲ್ಬಾಯಿಗೆ ತಳ್ಳುವ - ಕೆಲಸ ತೊಡಕೇ ಮತ್ತು ನಮ್ಮ "ನಾಲಗೆ-ಉಸಿರು-ಸದ್ದುಪೆಟ್ಟಿಗೆ" ಯ ಏರ್ಪಾಟು ಇದನ್ನು  ಬೆಂಬಲಿಸುವುದಿಲ್ಲ. ಹಾಗಾಗಿ ರ ಱ ಗಳ ಹಿಂದೆ ಈ ಮೂಗುಲಿಗಳು ಬರುವುದಿಲ್ಲ. ಬಂದರೂ ತುಂಬಾ ಕಡಿಮೆ.

ಬಡಗು ಕರ್ನಾಟಕದಲ್ಲಿ ಮ ಬದಲು ವ ಉಲಿಯುವ ಬಳಕೆಯೂ ಇದೆ. ಸುಯ್ऽ ಅಂತ ಗಾಳಿ ಬೀಸುವ ಸದ್ದಿನಲ್ಲೊಂದು ಮೂಗುಲಿ ಇದೆ. ಪೋಮ್ ಪೋಮ್ ಅನ್ನೋ ಬಸ್ಸಿನ ಸದ್ದಿನಲೂ ಒಂದು ಮೂಗುಲಿ ಇದೆ. ಆದರೆ‌ ಇವಾವನ್ನೂ ಬರವಣಿಗೆಗೆ‌ ನಾವು ತಂದಿಲ್ಲ. 

ಬಡಗಿನ ಭಾರತದ ಹಿಂದಿ ಮುಂತಾದ ನುಡಿಗರು ಸಂಸ್ಕೃತ ವನ್ಬು ಸ‍ನ‌್‍ಸ್ಕೃತ ಅಂತಾರೆ. ಸಂಸ್ಕಾರವನ್ನು ಸನ್‌ಸ್ಕಾರ ಅಂತಾರೆ. ಸಂಸ್ಕೃತ ದ ಮೂಗುಲಿಯ ನೆಲೆಯಲ್ಲಿ ನಾವು ಮ ಬಳಸಿದರೆ ಅವರು ಹೆಚ್ಚಾಗಿ ನ ಬಳಸುತ್ತಾರೆ. ಅವರ ನುಡಿಯ ಕಟ್ಟಳೆಗಳು ಬೇರೆ.

ಬಡಗು ಕರ್ನಾಟಕದ ಕನ್ನಡಿಗರಲ್ಲೂ ಈ ನೆರಳು ಬಿದ್ದಂತಿದೆ. ತೆಂಕಣದ ಕನ್ನಡಿಗರು ಸಿಂಹವನ್ನು ಸಿಮ್ಹ ಎಂದರೆ ಬಡಗಿನ ಕನ್ನಡಿಗರು ಸಿವ್ಹ ಅಂತಾರೆ. ಬಾವಿಯನ್ನು ಬಾವ್‌ವಿ ಅಂತಾರೆ. ಇಲ್ಲಿನ ವ ಉಲಿಯು ನಮ್ಮ ಮ ಮತ್ತು ವ ಗಳ ನಡುವೆ ಬರುವೆ ಉಲಿ. 

-----
ಕೊಸರು:
ಎಲ್ಲೋ ಬರೆದಿದ್ದು ಇಲ್ಲೂ ಇರಲಿ ಅಂತ.

ಬುಧವಾರ, ಜನವರಿ 01, 2025

ಬಸವಣ್ಣನವರ ಕೊನೆಯ ದಿನಗಳು

ಸಾಗರ ಬ್ರಹ್ಮವನು ಸಾಧಿಸಿ ಬ್ರಹ್ಮದಲ್ಲಿ|
ನೀಗಿ "ನಿಃಪತಿಯಾದ ಮಳೆಯ ಮಠ"ದಿ|
ಆಗದಾ ಅರಸನನ್ನು ಕಳಿದು ಕಂಗೊಳಿಸಿದನು|
ಯೋಗಿ ಗುರುಬಸವನೈ ಯೋಗಿನಾಥಾ.||
- ಸಿದ್ಧರಾಮೇಶ್ವರ
----
ಸಿದ್ಧರಾಮರು ಬಸವಣ್ಣನನ್ನು ಕಣ್ಣಾರೆ ಕಂಡವರು. ದಶಕಗಳ ಕಾಲ ಬಸವಣ್ಣನೊಡನೆ ಹತ್ತಿರದಿಂದ ಒಡನಾಡಿದವರು‌. ಬಸವಣ್ಣನ ಹೆಗಲಿಗೆ ಹೆಗಲು ಜೋಡಿಸಿ‌ ಕೆಲಸ ಮಾಡಿದವರು. ಇಂತಹ ಪ್ರತ್ಯಕ್ಷದರ್ಶಿಗಳು ಬಸವಣ್ಣನ ಸಾವಿನ ಬಗ್ಗೆ‌ ಏನು ಹೇಳುತ್ತಾರೆ ಎನ್ನುವುದು ಮುಖ್ಯವಾಗುವುದು.

ಈ ತ್ರಿವಿಧಿಯಲ್ಲಿ ಸಿದ್ದರಾಮರು "*#ಮಳೆಯಮಠ* ದಲ್ಲಿ ಬಸವಣ್ಣ #ನಿಷ್ಪತ್ತಿ ಯಾದ" ಎನ್ನವರು. ಪತ್ತಿ ಎಂದರೆ ಹುಟ್ಟು. ನಿಃಪತ್ತಿ ಎಂದರೆ ಹುಟ್ಟು ಇಲ್ಲದೇ ಇರುವುದು. ಬಯಲು, ಐಕ್ಯ. ನಿಃಪತ್ತಿ ಪದವೇ ಆಡುಮಾತಿನಲ್ಲಿ ನಿಷ್ಪತ್ತಿ ಆಗಿದೆ.

ಸಕಲೇಶಮಾದರಸ ಬಸವಣ್ಣನೊಡನಿದ್ದ ಇನ್ನೊಬ್ಬ ಶರಣ. ಈತನ ತಂದೆ #ಶಿವಯೋಗಿಮಲ್ಲರಸ. ಈತ‌ ಮೊದಲು (ಕಲಕುರ್ಕಿಯ) ಅರಸನಾಗಿದ್ದ. ನಂತರ ವೈರಾಗ್ಯ ಬಂದು ರಾಜ್ಯಭಾರವನ್ನು ಮಗ ಸಕಲೇಶಮಾದರಸನಿಗೆ ನೀಡಿ ಶ್ರೀಶೈಲಕ್ಕೆ ತೆರಳುವನು. ಅಲ್ಲಿ "ಮಳೆಯಮಠ" ದಲ್ಲಿ ನೆಲೆಸುವನು. ಈ ಮಳೆಯಮಠದ ಶಿವಯೋಗಿಯನ್ನು ಹಲವು ಪುರಾಣಕಾರರು / ಚರಿತ್ರೆಕಾರರು ಹಲವು ಬಾರಿ ನೆನೆವರು‌. ಇವನನ್ನು #ಮಳೆಯಮಲ್ಲೇಶ / ಮಳೆಯಮಲ್ಲರಸ / ಶಿವಯೊಗಿಮಲ್ಲರಸ / ಮಳೆಯಮಲ್ಲಾರ್ಯ / ಮಳೆಯಮೈಲಾರಿ ಮುಂತಾದ ಹೆಸರುಗಳಿಂದ ಕರೆವರು.

ಶ್ರೀಶೈಲದ ಬಳಿಯ ನಾಗಾರ್ಜುನ ಸಾಗರದ ಒಡಲಿನಲ್ಲಿ "ಮಳೆಯಮಠ" ಈಗ ಮುಳುಗಡೆಯಾಗಿದೆ. ಈ ಮಠದಲ್ಲೇ ಬಸವಣ್ಣನವರು ಬಯಲು ಕಂಡಿದ್ದು. ಸಿದ್ಧರಾಮೇಶ್ವರ ರ ತ್ರಿವಿಧಿ‌‌ ಇದನ್ನೇ ತಿಳಿಸುವುದು.

ಅಳಿಯದೇ ಕೂಡಿದವರು / ಕೂಡಬಲ್ಲವರು ಬಸವಣ್ಣ‌. ಇಂತಹ ಯೋಗ ನಮಗಿತ್ತವರು. ದೇಹಿವಿಡಿದೂ ಕೂಡಬಲ್ಲಾತ ಬಸವಣ್ಣ - ಕೂಡಲಸಂಗಮದಲ್ಲಿ (ಶ್ರೀಶೈಲದ ಬಳಿ) ಮಳೆಯಮಠದಲ್ಲಿ ದೇಹಬಿಟ್ಟು ಬಯಲಾದ .
---
ಕೂಡಲ, ಕಪ್ಪಡಿ, ಮತ್ತು ಸಂಗಮ ಮೂರೂ ಪದಗಳ ಅರ್ಥ ಒಂದೇ - ಕೂಡುವುದು. ಆದರೆ ಜಾಗಗಳ‌ ನೊಟದಿಂದ  "#ಕಪ್ಪಡಿಸಂಗಮ" ವೇ ಬೇರೆ  "#ಕೂಡಲಸಂಗಮ" ವೇ ಬೇರೆ ಎನ್ನುವರು.
ಕಪ್ಪಡಿಸಂಗಮ::  ಕೃಷ್ಣ - ಘಟಪ್ರಭ ನದಿಗಳು ಕೂಡುವ ಎಡೆ. 
ಕೂಡಲಸಂಗಮ::  ಕೃಷ್ಣಾ- ಮಲಾಪಹಾರಿ ನದಿಗಳು ಕೂಡುವ ಎಡೆ.
--
#ಬಸವಣ್ಣ ನ ಕೊನೆಯದಿನಗಳು.