ಶುಕ್ರವಾರ, ಜನವರಿ 03, 2025

(ಙಞಣನಮ) ಮೂಗುಲಿಗಳ ಉಲಿಯುವಿಕೆ!

ಸೊನ್ನೆ (ಂ, ೦) ಅನ್ನೋ ಗುರುತನ್ನು ನಾವು‌ ಕನ್ನಡ ಬರವಣಿಗೆಯಲ್ಲಿ ಬಳಸುತ್ತೇವೆ.‌ ಕನ್ನಡದ ಮೇಲರಿಮೆ ಏನಪ ಅಂದ್ರೆ "ಆಡುವಂತೆಯೇ ಬರೆವುದು".

ಆದರೆ ೦ ಬಂದ ಪದಗಳಲ್ಲಿ ಮಾತ್ರ (ಎತ್ತುಗೆಗೆ : ಕೊಂಗ, ಕೆಂಚ, ಕೆಂಡ, ಕಂತು, ಕಂಬ)  ಬರೆಯೋದು ಒಂದು ತೆರನಾದರೆ ಓದೋದೇ ಬೇರೆ ತರ. ಈ  #ಂ ಎನ್ನುವ ಗುರುತಿನ "ಬಳಕೆ"  ಕನ್ನಡಕ್ಕೆ ಹೊರಗಿಂದ ಬಂದದ್ದು ಎನ್ನುವುದು ಇದಕ್ಕೆ ಕಾರಣ ಇರಬಹುದು.

ಇದರ ಬಗ್ಗೆ ಒಂದೆರಡು ಸಾಲುಗಳು....

ಉಸಿರಿಲ್ಲದೆ ಉಲಿಯಿಲ್ಲ. ಮಾತಾಡುವಾಗ ಹೆಚ್ಚಿನೆಲ್ಲ ಬಾರಿ ನಾವು ಈ ಉಸಿರನ್ನು ಬಾಯಿಯ ಮೂಲಕ ಹೊರಗೆಡವ್ತೀವಿ. ಆದರೆ ಕೆಲವು ಬರಿಗೆಗಳನ್ನು ಉಲಿಯುವಾಗ - ಬಾಯಿಯಿಂದ ಹೊರಬರುವ ಗಾಳಿಯನ್ನು - ಸೊಲ್ಪ ಮಟ್ಟಿಗೆ ತೆಡೆದು - ಅದೇ ಗಾಳಿಯನ್ನು ಮೂಗಿನ ಮೂಲಕ - ಹೊರತಳ್ಳುತ್ತೇವೆ. ಮೂಗಿನ ನೆರವು ಇಲ್ಲದೆ ಉಲಿಯಲು ಆಗದ ಕೆಲ ಬರಿಗೆ / ಉಲಿಗಳು ಇವೆ. #ಙಞಣನಮ ಅನ್ನೋವೇ ಇವು. ಈ ಅಯ್ದು ಉಲಿಗಳನ್ನು ಸಕ್ಕದದಲ್ಲಿ ಅನುನಾಸಿಕ ಅಂತಾರೆ ಕನ್ನಡದಲ್ಲಿ #ಮೂಗುಲಿ ಅಂತಾರೆ. 

ಇತ್ತೀಚೆಗಂತೂ ಈ ಬರಿಗೆಗಳು ಕನ್ನಡ ಬರವಣಿಗೆಯಿಂದ ಕಾಣೆಯಾಗಿವೆ. "ಸಂಸ್ಕೃತ ಭೂಯಿಷ್ಟ ಕನ್ನಡವೇ ಶುದ್ದ ಕನ್ನಡ" ಅನ್ನೋ ಭ್ರಮೆ ಹೊತ್ತಿರುವಂತರ‌ ಕಡೆಯಿಂದ ಅವರಿಗೇ ಅರಿವಿಲ್ಲದೆ ಆದ ತಪ್ಪು ಇದೆ ಎನ್ನಬಹುದು. 

ಈ ಸೊನ್ನೆಗೆ ಸಕ್ಕದದಲ್ಲಿ ಅನುಸ್ವಾರ (ಅಂ) ಅಂತಾರೆ. ಇದೊಂದು derived nasal sound. ಇದೊಂದು ಬರಿಗೆಯ ಗುರುತೇ ಹೊರತು ಒಂದು ಉಲಿ / ತೆರೆಯುಲಿ / ಸ್ವರವಲ್ಲ.

೦ ಸೊನ್ನೆಯನ್ನು ಹೇಗೆ ಉಲಿಯುವುದು ಅನ್ನೋದಕ್ಕೆ ನಿಸರ್ಗವೇ ನೀಡಿದ ಕಟ್ಟಳೆಗಳು ಇವೆ. ಂ / ೦ ಯ ಉಲಿಯುವಿಕೆ ಇದರ ನಂತರ ಬರುವ ಬರಿಗೆ ಮೇಲೆ ನಿಂತಿದೆ. 

ಕಟ್ಟಳೆ ೧. 
ಕ ಖ ಗ ಘ ಙ ಗಳು ಕವರ್ಗ / ಕ ಗುಂಪು. ಇವನ್ನು ಉಲಿಯಲು ಗಂಟಲಿನಿಂದ ಉಸಿರು ಹೊರಡುತ್ತದೆ. ಇವಕ್ಕೆ ಕಂಠ್ಯ ಎನ್ನುವರು. ಗಂಟಲುಲಿ ಎನ್ನವರು.

ಂ ಯ ನಂತರ ಮೇಲಿನ ಬರಿಗೆಗಳಲ್ಲಿ ಯಾವುದಾರೂ ಬಂದರೆ ಈ ಂ ಯನ್ನು ನಾವು ಙ ದಂತೆ‌ ಆಡುತ್ತೇವೆ.

ಎತ್ತುಗೆ :
ಕಂಕ = ಕಙ್ಕ 
ಕೊಂಗ = ಕೊಙ್ಗ

ಕಟ್ಟಳೆ ೨. 
ಚಛಜಝಞ ಗಳು ಚವರ್ಗ / ಚಗುಂಪಿನಲ್ಲಿ ಬರುತ್ತವೆ. ಸೊನ್ನೆ/ಂ ಯ ನಂತರ ಇವುಗಳಲ್ಲಿ ಒಂದು ಬರಿಗೆ ಬಂದರೆ ಇಲ್ಲಿನ ಂ ಯನ್ನು ಞ ಅಂತೆ ಉಲಿಯುವರು.

ಎತ್ತುಗೆ: 
ಕೆಂಚ = ಕೆಞ್ಚ 
ಕೆಂಜಗ = ಕೆಞ್ಜಗ 

ಕಟ್ಟಳೆ ೩: 
ಟಠಡಢಣ ಗಳು ಟವರ್ಗ / ಟ ಗುಂಪಿನಲ್ಲಿ  ಬರುತ್ತವೆ. ಈ ಗುಂಪಿನ ಬರಿಗೆಗಳಲ್ಲೊಂದು ಂ ಆದ ಮೇಲೆ ಬಂದರೆ ಇಲ್ಲಿನ ೦ ಯನ್ನು ಣ ದಂತೆ ಉಲಿಯುವರು.

ಎತ್ತುಗೆ:
ಕಂಟಕ = ಕಣ್ಟಕ
ಕಂಠ = ಕಣ್ಠ
ಕೆಂಡ = ಕೆಣ್ಡ

ಕಟ್ಟಳೆ ೪: 
ತಥದಧನ ಗಳು ತವರ್ಗ / ತ ಗುಂಪಿನಲ್ಲಿ ಬರುತ್ತವೆ. ಈ ತ ಗುಂಪಿನ ಬರಿಗೆಗಳಲ್ಲೊಂದು ಂ ಆದ ಮೇಲೆ ಬಂದರೆ ಇದನ್ನು ನ ದಂತೆ ಉಲಿಯುವರು.

ಎತ್ತುಗೆ: 
ತಂತು, ಕಂತು  = ತನ್ತು, ಕನ್ತು
ಬಂದ, ಕಂದ = ಬನ್ದ, ಕನ್ದ 

ಕಟ್ಟಳೆ ೫: 
ಪಫಬಭಮ ಗಳು ಪವರ್ಗ / ಪ ಗುಂಪಿನವು. ಈ ಪ ಗುಂಪಿನ ಬರಿಗೆಯಲ್ಲೊಂದು ಂ ಆದಮೇಲೆ ಬಂದರೆ ಈ ಂ ಯನ್ನು ಮ ಎಂಬಂತೆ ಉಲಿಯುವರು.

ಎತ್ತುಗೆ: 
ಪಂಪ = ಪಮ್ಪ
ಕಂಬ = ಕಮ್ಬ

ಕಟ್ಟಳೆ ೬. 
ಮೇಲಿನವು ಗುಂಪು ಮಾಡಿದ ಬರಿಗೆಗಳು. ಅವರ್ಗೀಯ / ಗುಂಪು ಮಾಡದ ಬರಿಗೆಗಳೂ ಇವೆ. ಶ ಷ ಸ ಹ ಮುಂತಾದವು. ಪದದಲ್ಲಿ ಈ ಬರಿಗೆಗಳು ಂ ಆದಮೇಲೆ ಬಂದರೆ .. ಕನ್ನಡದಲ್ಲಿ ಹೆಚ್ಚಿನೆಲ್ಲಾ ಬಾರಿ‌ "ಮ" ವನ್ನೇ ಬಳಸಿರುವುದು ನನ್ನ ಗಮನಕ್ಕೆ ಬಂದಿದೆ.

ಎತ್ತುಗೆ: 
ಸಿಂಹ = ಸಿಮ್ಹ 
ವಂಶ = ವಮ್ಶ
ಕಂಸ = ಕಮ್ಸ 
ಸಂಸ್ಕೃತ = ಸಮ್‌ಸ್ಕೃತ 

ಙಞಣನಮ ದಂತ ಮೂಗುಲಿಗಳು ಮತ್ತು ರ ಱ ಲ ೞ ಳ alveolar approximant ಗಳು ಜೊತೆಯಲ್ಲಿ ಬಂದಗ .. ಉಸಿರನ್ನು - ಮೂಗಿನ ಮೂಲಕ ತಳ್ಳಿ - ಕೂಡಲೇ ಮೂಗಿನ ಗಾಳಿಯನ್ನು ತಡೆದು - ಬಾಯಿಯ ಮೂಲಕ ಹೊರತಳ್ಳುವ - ಉಸಿರನ್ನು ನಾಲಗೆಯ ಮೂಲಕ ಹಲ್ಲಿನ ಹಿಂಬಾಗದ ಮೇಲ್ಬಾಯಿಗೆ ತಳ್ಳುವ - ಕೆಲಸ ತೊಡಕೇ ಮತ್ತು ನಮ್ಮ "ನಾಲಗೆ-ಉಸಿರು-ಸದ್ದುಪೆಟ್ಟಿಗೆ" ಯ ಏರ್ಪಾಟು ಇದನ್ನು  ಬೆಂಬಲಿಸುವುದಿಲ್ಲ. ಹಾಗಾಗಿ ರ ಱ ಗಳ ಹಿಂದೆ ಈ ಮೂಗುಲಿಗಳು ಬರುವುದಿಲ್ಲ. ಬಂದರೂ ತುಂಬಾ ಕಡಿಮೆ.

ಬಡಗು ಕರ್ನಾಟಕದಲ್ಲಿ ಮ ಬದಲು ವ ಉಲಿಯುವ ಬಳಕೆಯೂ ಇದೆ. ಸುಯ್ऽ ಅಂತ ಗಾಳಿ ಬೀಸುವ ಸದ್ದಿನಲ್ಲೊಂದು ಮೂಗುಲಿ ಇದೆ. ಪೋಮ್ ಪೋಮ್ ಅನ್ನೋ ಬಸ್ಸಿನ ಸದ್ದಿನಲೂ ಒಂದು ಮೂಗುಲಿ ಇದೆ. ಆದರೆ‌ ಇವಾವನ್ನೂ ಬರವಣಿಗೆಗೆ‌ ನಾವು ತಂದಿಲ್ಲ. 

ಬಡಗಿನ ಭಾರತದ ಹಿಂದಿ ಮುಂತಾದ ನುಡಿಗರು ಸಂಸ್ಕೃತ ವನ್ಬು ಸ‍ನ‌್‍ಸ್ಕೃತ ಅಂತಾರೆ. ಸಂಸ್ಕಾರವನ್ನು ಸನ್‌ಸ್ಕಾರ ಅಂತಾರೆ. ಸಂಸ್ಕೃತ ದ ಮೂಗುಲಿಯ ನೆಲೆಯಲ್ಲಿ ನಾವು ಮ ಬಳಸಿದರೆ ಅವರು ಹೆಚ್ಚಾಗಿ ನ ಬಳಸುತ್ತಾರೆ. ಅವರ ನುಡಿಯ ಕಟ್ಟಳೆಗಳು ಬೇರೆ.

ಬಡಗು ಕರ್ನಾಟಕದ ಕನ್ನಡಿಗರಲ್ಲೂ ಈ ನೆರಳು ಬಿದ್ದಂತಿದೆ. ತೆಂಕಣದ ಕನ್ನಡಿಗರು ಸಿಂಹವನ್ನು ಸಿಮ್ಹ ಎಂದರೆ ಬಡಗಿನ ಕನ್ನಡಿಗರು ಸಿವ್ಹ ಅಂತಾರೆ. ಬಾವಿಯನ್ನು ಬಾವ್‌ವಿ ಅಂತಾರೆ. ಇಲ್ಲಿನ ವ ಉಲಿಯು ನಮ್ಮ ಮ ಮತ್ತು ವ ಗಳ ನಡುವೆ ಬರುವೆ ಉಲಿ. 

-----
ಕೊಸರು:
ಎಲ್ಲೋ ಬರೆದಿದ್ದು ಇಲ್ಲೂ ಇರಲಿ ಅಂತ.