ಶನಿವಾರ, ಅಕ್ಟೋಬರ್ 05, 2024

ಸಂಗೀತಕ್ಕೆ ಶಿವಶರಣರ ಕೊಡುಗೆ

ಸಂಗೀತಕ್ಕೆ ಶಿವಶರಣರ ಕೊಡುಗೆ

ಪ್ರೊ|| ಮಲ್ಲಿಕಾರ್ಜುನ ಮನಸೂರ

ಕನ್ನಡ ನಾಡಿನ ಶಿವಶರಣರು ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳ ಮೂಲಕ ಈಶ್ವರ ಸೇವೆಸಲ್ಲಿಸಿ ಭಕ್ತರರನ್ನು ತಣಿಸಿ, ಇಹಪರಗಳಿಗೂ ಪೂಜ್ಯರಾಗಿದ್ದಾರೆ. ಅವರು ಆಶ್ರಯಿಸಿದ್ದು ಜನತೆಯನ್ನು; ಆದುದರಿಂದ ಜನತೆಯ ಭಾಷೆಯನ್ನು ಸಾಹಿತ್ಯಕ್ಕೆ ಬಳಸಿದಂತೆ, ಜನತೆಯ ಕಲೆಗಳಾದ ಹಾಡು, ಕುಣಿತಗಳನ್ನು, ವೇಷಗಳನ್ನು, ಭಕ್ತಿಯಕಾಯಕಗಳನ್ನಾಗಿ ಪರಿವರಿಸಿಕೊಂಡು ಈಶ್ವರಾನುಗ್ರಹ ಸಂಪಾದಿಸಿದರು. ಅವರು ಈ ಕಲೆಗಳನ್ನು ಬಳಸಿದ್ದು, ಬೆಳೆಸಿದ್ದು ಉದರ ಪೋಷಣೆಗೆ ಮಾತ್ರವಲ್ಲ; ದೈವದಶಕ್ತಿಯಾದ ಕಲಾಪ್ರತಿಭೆಯನ್ನು ಸಮಾಜೋದ್ಧಾರ, ಲೋಕಕಲ್ಯಾಣಕ್ಕಾಗಿ; ಅದರಿಂದಾಗಿ ದೈವದ ಪೂಜೆಗೆಂದು ಅವುಗಳನ್ನು ಬಳಸಿಕೊಂಡುದು ಗೋಚರಿಸುತ್ತದೆ. ಕಾವ್ಯಕಲೆಯನ್ನು ವೀರಶೈವ ಶರಣರು 'ನರಸುತ್ತಿ'ಗೆ 'ಉದರ ಪೋಷಣೆ'ಗೆ 'ಕೀರ್ತಿ ವಾರ್ತೆಲಾಭ'ಗಳಿಗೆ ಬಳಸಿಲ್ಲ. ಈ ತತ್ತ್ವವೇ ಇತರ ಕಲಾವಿದರಿಗೂ ಅನ್ವಯಿಸುತ್ತದೆ. ಕಲಾವಿದರಲ್ಲಿ ಕವಿಗಳು ಮತ್ತು ವಚನಕಾರರಾದ ಶಿವಶರಣರು ಇದ್ದಾರೆ. 'ದೇಶೀ' ಮತ್ತು 'ಮಾರ್ಗ' ಎರಡರಲ್ಲಿಯೂ ಅವರ ಕೊಡುಗೆ ಮಹತ್ವವಾದುದು, ಇವರ ಕಲಾಭಿರುಚಿ ನೃತ್ಯ ದಲ್ಲಿಯೂ ಕಂಡು ಬರುತ್ತದೆ. ಕಲೆಗಳನ್ನು ಪ್ರಯೋಗಗಳ ಮೂಲಕ ಪ್ರದರ್ಶಿಸುತ್ತಿದ್ದುದು ಮಾತ್ರವಲ್ಲದೆ ಕೆಲವರು ಈಬಗೆಗೆ ಶಾಸ್ತ್ರ ಗ್ರಂಥಗಳನ್ನು ರಚಿಸಿದ್ದಾರೆ. ಶರಣರು ರಚಿಸಿದ 'ವಚನ', 'ಗೀತ', 'ಜಾನಪದ ಹಾಡು', 'ಒನಕೆವಾಡು', 'ಯಕ್ಷಗಾನ', 'ಸಣ್ಣಾಟ' (ಶರಣರಾಟ) ಇವೆಲ್ಲವುಗಳನ್ನು ಹಾಡುವುದು ಒಂದು ರೀತಿಯಲ್ಲಿ 'ಜಾನಪದ ಸಂಗೀತ'ಕ್ಕೆ ಕೊಟ್ಟ ಕೊಡುಗೆಯೆಂದೇ ಹೇಳಬೇಕು, ಶಿವಶರಣರ ಕಥೆಗಳನ್ನು ನಾಡಿನಲ್ಲಿ ಹಲವು ಕಲಾಮಾಧ್ಯಮದ ಮೂಲಕ ಪ್ರಸಾರಮಾಡುತ್ತಿದ್ದರೆಂಬುದಕ್ಕೆ ಬಸವಪುರಾಣ ದ ಈ ಕೆಳಗಿನ ಪದ್ಯವನ್ನು ನೋಡಬಹುದು. ಸಿರಿಯಾಳಶೆಟ್ಟಿಯಿಂದಲೇ ಶಿವ ಭಕ್ತಿ ಹುಟ್ಟಿತಂತೆ! 
"ಇಳಿಯೊಳಾ ಸಿರಿಯಾಳ ಸೆಟ್ಟಿಯ ತಲೆಯಲೇ ಶಿವಭಕ್ತಿ ಹುಟ್ಟಿತು : '
ಸರಸ ಭಾಷಾಂಗ ಕ್ರಿಯಾಂಗೋತ್ಕರದ ಗದ್ಯ ಪದ್ಯವಿಸರ ಮಧುರ ಗೀತೋಕ್ತಿಯಿಂ, 
ಸಲೆ ದೇಶ ದೇಶದಲಿ, ಕರಂ ಎಸೆಯಲು ಊರೂರೊಳು ಅತಿ ಶುಭಕರಮೆನಲು 
ಸಿರಿಯಾಳ ಚರಿತೆಯ ನೆರೆಹೊರೆದು ವಿರಚಿವರು ಭಕ್ತಿ ಸಭಾಂತರಾಳದೊಳು' 

ಸಿರಿಯಾಳನ ಕಥೆ ಎಷ್ಟೊಂದು ಜನಪ್ರಿಯವಾಗಿತ್ತೆಂಬುದನ್ನು, ಆ ಕಥೆಯನ್ನು ಜನರಲ್ಲಿ ಪ್ರಸಾರ ಮಾಡಲು ಕಾವ್ಯ ನಾಟಕ ಗದ್ಯಪದ್ಯ, ಮಧುರಗೀತೆಕ್ತಿ ಬಳಸಿದುದನ್ನು ನಾವೆಲ್ಲ ಕಾಣುತ್ತೇವೆ; 'ಸತಿಯರು ಮನೆ ಮನೆಗೆ ಒನಕೆವಾಡು ಪಾಡುವರು' ಎಂದಿದ್ದಾನೆ ಭೀಮಕವಿ, ಇಲ್ಲಿ 'ದೇಸಿ' 'ಮಾರ್ಗ' ಸಂಗೀತಗಳ ಪ್ರಸ್ತಾಪವೂ ಇರುವುದನ್ನು ಗಮನಿಸುತ್ತೇವೆ.



ಕರ್ನಾಟಕದ ಜನ ಎಂದಿನಿಂದಲೂ ಸಂಗೀತ ಪ್ರಿಯರು, ಪಂಪ ಕವಿ ಆಡಿದ ಮಾತು : “ಚಾಗದ ಭೋಗದ, ಗೇಯದ ....  ಮಾನಿಸರೆ ಮಾನಿಸರು" ಎಂಬುದು, ಇಂಪನಾಳ್ದ ಗೇಯಂ ಕಿವಿವೊಕ್ಕೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ'-
ಎಂಬುದು, ಕನ್ನಡಿಗರ ಸಾಂಸ್ಕೃತಿಕ ಜೀವನದ ಮನೋಧರ್ಮವನ್ನು ಸೂಚಿಸುತ್ತದೆ. ಸಂಗೀತವನ್ನು ಕೇಳುವುದು, ಕನ್ನಡಿಗರ ಮನೋಧರ್ಮ, ಶಿವಶರಣರ ಪೂರ್ವದಲ್ಲಿಯೂ ಅನೇಕ ಸಂಗೀತಗಾರರ ಹೆಸರುಗಳು ನಮಗೆ ದೊರೆಯುತ್ತವೆ. 'ಶಾಂತರ' ಎಂಬ ದೊರೆಯು ಸಂಗೀತದಲ್ಲಿಯೂ ಚತುರನಾಗಿದ್ದನು. 'ಪಿರಿಯಕೇತಲದೇವಿ' ಎಂಬವಳಿಗೆ 'ಸಂಗೀತ ವಿದ್ಯಾಧರಿ' ಎಂದು ಕರೆಯುತ್ತಿದ್ದರು. ಗಂಗ ಪೆರ್ಮಾಡಿಯ ಪತ್ನಿ 'ಬಾಚಲದೇವಿ' ಸಂಗೀತ ವಿದ್ಯೆಯಲ್ಲಿ ಅಸಮಾನಳು ಎಂದು ವರ್ಣಿತವಾಗಿದೆ. ಸಾಮಂತ ನಾದ ಎರೆಯಪ್ಪ(ಮ್ಮ)ನು “ವಾದ್ಯವಿದ್ಯಾಧರನೂ' 'ಸಕಳ ಕಳಾಧರನೂ' ಆಗಿದ್ದನು, ವಿಷ್ಣುವರ್ಧನನು 'ಸಂಗೀತಪ್ರಸಂಗಭಂಗೀ ಸಂಗತ ಚತುರಭರತ' ನಾಗಿದ್ದನು. ಈ ಹೆಸರುಗಳನ್ನು ನೋಡಿದರೆ ಶಿವಶರಣರ ಪೂರ್ವದಲ್ಲಿಯೂ ಸಂಗೀತವು ಪರಂಪರಿತ ವಾಗಿ ಈ ನಾಡಿನಲ್ಲಿ ಬೆಳೆದು ಬಂದಿದೆಯೆಂಬುದು ಗೋಚರಿಸುತ್ತದೆ.



(೨)
ಕನ್ನಡ ಸಾಹಿತ್ಯಕ್ಕೆ ಸಂಗೀತದ ಮೆರಗು ಕೊಟ್ಟು ಜನತೆಯ ಮನೆಮನೆಗೂ ವಚನಗಳನ್ನು ಮುಟ್ಟಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ವಚನಗಳನ್ನು ಹಾಡುವ ಪರಂಪರೆಯೇ ಏರ್ಪಟ್ಟು, ಅವುಗಳಿಗೆ ರಾಗ, ತಾಳಗಳನ್ನೂ ಸೂಚಿಸುತ್ತಿದ್ದುದಕ್ಕೆ ಉದಾಹರಣೆಗಳು ಹರಿಹರ, ರಾಘವಾಂಕ, ಭೀಮಕವಿ ಇವರಲ್ಲಿ ದೊರೆಯುತ್ತವೆ. ಬಸವಣ್ಣನವರು ವಚನಗಳನ್ನು ಹಾಡಿದರು. 'ತಾಳ, ಮಾನ, ಓಜೆ, ಬಜಾವಣೆಗಳ ಲೆಕ್ಕ ಭಕ್ತಿಯ ಹಾಡಿಗೇಕೆ' ಎಂದು ಒಂದು ವಚನದಲ್ಲಿ ಹೇಳಿದ್ದಾರೆ. ಇನ್ನೊಂದು ವಚನದಲ್ಲಿ 'ದಂಡಿಗೆ' 'ಸೋರೆ' 'ತಂತಿ' 'ಕಡ್ಡಿ' 'ಬತ್ತೀಸರಾಗ' ಮೊದಲಾದವುಗಳನ್ನು ಉಲ್ಲೇಖಿಸಿದ್ದಾರೆ. 'ಕೂಡಲಸಂಗನ ಶರಣರ ಕಂಡು, ಆಡಿ ಹಾಡಿ ಬದುಕು' ಎಲೆ ಮನವೇ ಎಂದಿದ್ದಾರೆ. ಆಡದೆ ನವಿಲು? ಹಾಡದೆ ತಂತಿ?' ಎಂದು ಮತ್ತೊಂದು ವಚನದಲ್ಲಿ ನುಡಿದಿದ್ದಾರೆ. ಭಕ್ತಿಯಿಲ್ಲದೆ ಹಾಡಿದ ಹಾಡು, ತಂತಿಯ ಮಿಡಿತ, ನವಿಲಿನ ಕುಣಿತ, ಇಕ್ಕುಳದ ಕೈಮುಗಿತಕ್ಕೆ ಸಮಾನವೆಂದಿದ್ದಾರೆ. ಅವರು ಹಾಡಿದುದು ಕೇಡಿಲ್ಲದ ಪದವಿಯವ ಭಕ್ತಿಯ ಹಾಡು, ಅಲ್ಲಮಪ್ರಭುದೇವನ 'ಎರಡೆಂಬತ್ತು ಕೋಟಿ ವಚನವ ಹಾಡಿ'ದನೆಂದು ತಿಳಿಸಿದ್ದಾನೆ. ಅಲ್ಲದೆ ಅಲ್ಲಮನು ಅನೇಕ ಹಾಡುಗಳನ್ನು ಬರೆದು ಅವುಗಳಿಗೆ ಹಾಡಲು ಅನುಕೂಲವಾಗುವಂತೆ ರಾಮಶ್ರೀ, ಮಾಳವಗೌಳ, ಮಧುಮಾಧವಿ, ದೇಶಾಕ್ಷಿ, ಗೌಳ, ಧನ್ಯಾಸಿ, ಭೌಳಿ, ನಾಟಿ-ಮೊದಲಾದ ರಾಗಗಳ ಹೆಸರುಗಳನ್ನು ಸೂಚಿಸಿದ್ದಾನೆ. ಅಲ್ಲದೆ ಹರೀಶ್ವರ ಕವಿಯು ಪ್ರಭುದೇವರ ರಗಳೆಯಲ್ಲಿ ಅವನನ್ನು ವರ್ಣಿಸುವಾಗ :
'ಇ೦ತು ಬಳೆಯ ಬಳಿದುದಾತನೊಡನ ವಿದ್ಯೆ;
ಸಂತತಂ ಸೊಗಯಿಪ ಮೃದಂಗದ ಮಹಾವಿದ್ಯೆ;
ಆ ವಿದ್ಯೆಯೊಡನೆ ಯೌವನಮೊಸೆದು ಬಳೆಯುತಿರೆ;
ಎಂದು ಅಲ್ಲಮನೊಡನೆಯೆ 'ಮೃದಂಗ ಬಾರಿಸುವ ಕಲೆಯೂ ಬೆಳೆಯಿತೆಂದು ಕವಿ ಹರಿಹರದೇವನು ವರ್ಣಿಸಿದ್ದಾನೆ, ಗೊಗ್ಗೆಶ್ವರಾಲಯಕ್ಕೆ ಬಂದು 'ಮೃದಂಗಮುಂ ಇಕ್ಕೆಲದೊಳುಂ ನಿರಿಸಿ, ಸಿಂಗರಿಸಿ, ರಂಗಂಬೊಕ್ಕು ಮೇಳೈಸಿ, ಅತಿರಸಾಮೃತ ಕಾಂತಿಯುತ, ನುತಗತಿ, ನವೀನಗತಿ, ರಸಗತಿ, ನುಣ್ಣತಿ, ಗಂಭೀರಗತಿ, ಸಾಂದ್ರಗತಿ, ಜಾಣತಿ, ಮಧುರಗತಿ, ಮನೋಹರಗತಿ, ಸಂಗತಿಗಳನ್ನು ಶಂಕರನಿಗೆ ಕರ್ಣಾಭರಣವಾಗುವಂತೆ ಬಾರಿಸಲು ಕುಳಿತು ಕೇಳಿದ ಜನ, ನಂದಿ ಮಾಕಾಳರು ತಲೆದೂಗುತ್ತಾರೆ! ಮುರಜದ ಗತಿಗೆ ಮಾರುಹೋದವರಲ್ಲಿ ಕಾಮಲತೆಯೂ ಒಬ್ಬಳು ಎಂದಿದ್ದಾನೆ ಹರಿಹರ ಕವಿ. ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಅಲ್ಲಮನು ಮದ್ದಳೆ ಬಾರಿಸುತ್ತಿದ್ದರೆ ಮಾಯಾದೇವಿ 'ಕಾರಮುಗಿಲಿನ ಗರ್ಜನೆಯ ಕೇಳಿ, ನಲಿದು, ನಟಿಸುವ ಸೋಗೆ ನವಿಲಂತೆ ನಟಿಸುತ್ತಾಳೆ' ಎಂದು ವರ್ಣಿಸಲಾಗಿದೆ. ಈ ಎರಡೂ ಕಾವ್ಯಗಳಲ್ಲಿ ಅಲ್ಲಮಪ್ರಭುವನ್ನು ಮದ್ದಳೆಯಲ್ಲಿ ನುರಿತ ಕಲಾವಿದನೆಂದು ವರ್ಣಿಸಲಾಗಿದೆ. ಬಸವಣ್ಣನಂತೆ ಅಲ್ಲಮನ ಶ್ರೇಷ್ಠ ಸಂಗೀತಗಾರನಿದ್ದುದು ಸುಸ್ಪಷ್ಟ ಪ್ರಸಿದ್ಧಯೋಗಿ ಸಿದ್ಧರಾಮನು ತನ್ನೊಂದು ವಚನದಲ್ಲಿ, “ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ ಸೋತಿತನ್ನ ಮನ ನೋಡಯ್ಯ''ಎಂದು ನುಡಿದಿದ್ದಾನೆ, ಗಜೇಶಮಸಣಯ್ಯನೆಂಬ ವಚನಕಾರನು, 'ದೇಶಾಕ್ಷಿಯಿಲ್ಲದ ರಾಗ ಉಪ್ಪಿಲ್ಲದೂಟ ಸಪ್ಪ ಕಾಣಿರಣ್ಣಾ' ಎಂದಿದ್ದಾನೆ. ಇದು ಅವನಿಗೆ ದೇಶಾಕ್ಷಿರಾಗದ ಮೇಲಿದ್ದ ಮಮತೆಯನ್ನು ತೋರಿಸುತ್ತದೆ. ಹೀಗೆ ವಚನಕಾರರಲ್ಲನೇಕರು ಸಂಗೀತವಿದ್ಯೆಯ ಮೇಲಿದ್ದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದುದು ಮಾತ್ರವಲ್ಲ, ಅವರು ಸ್ವತಃ ಸಂಗೀತಗಾರರಿದ್ದು ಅದನ್ನು ಪ್ರದರ್ಶಿಸುತ್ತಿದ್ದರೆಂದೆನಿಸುತ್ತದೆ. ಢಕ್ಕೆಯ ಮಾರಯ್ಯ, ಕಿನ್ನರಿಯ ಬ್ರಹ್ಮಯ್ಯ, ಸಕಳೇಶ ಮಾದರಸರು ಸಂಗೀತದಲ್ಲಿ ಬಲ್ಲಿದರಾಗಿದ್ದರು. ಕಿನ್ನರಿಯ ಬ್ರಹ್ಮಯ್ಯನು ಕಿನ್ನರಿ ನುಡಿಸುವಲ್ಲಿ, ಸಕಳೇಶ ಮಾದರಸನು ವೀಣೆ ನುಡಿಸುವಲ್ಲಿ ಖ್ಯಾತರಾಗಿದ್ದರು, ಭೀಮಕವಿಯ ಬಸವಪುರಾಣದಲ್ಲಿ ಮಾದರಸರ ವೀಣಾವಾದನದ ವಿಷಯದಲ್ಲಿ ಹೀಗೆ ಬರೆಯಲಾಗಿದೆ.

'ನಾದ ವಿದ್ಯಾಪಂಡಿತಂ , ಸಕಳ ವೀಣಾದಿ ಕಲಾವಿದಂ, ಭರತಾದಿ ಶಾಸ್ತ್ರ ವಿಚಕ್ಷಣಂ,' 'ಬತ್ತಿಸಾದಿ ರಾಗಗಳಿಂ ದಂಡಿಗೆಗಳಂ ರಚಿಸಿ, ಪ್ರೀಯವಾದ ವೀಣೆ ಮೊರೆಯಲು ಪ್ರಸ್ತುತವನರಿದು, ಕೋಣಿಯೊಳು ಹೆಸರುಳ್ಳ ರಾವಳ ವೀಣೆ, ವಾರಣಹಸ್ತ, ಗೌರೀವೀಣೆ, ಕಿನ್ನರವೀಣೆ, ಕಚ್ಛಪವೀಣೆ, ಕೈಲಾಸವೀಣೆ, ತುಂಬುರವೀಣೆ, ಪದ್ಮಜವೀಣೆ, ಸ್ವಾಯಂಭುವೀಣೆ, ಸಾರಂಗವೀಣೆ, ಪಿನಾಕವೀಣೆ ಇವು ಮೊದಲಾದವುಗಳಿಂದ, ಮೇಘಚಾಳ, ಯೌಠಾಣಮಾನಿತ, ನವಠಾಣ, ಸಂಧಾನ, ಅಮರ, ತಾಳೆ ಪಾಠಮೊದಲಾದವುಗಳನ್ನು ನಾದಮೂರ್ತಿ ಶಿವನೇ ಕೇಳೆಂದು ನುಡಿಸುತ್ತಿದ್ದನು. ಸಪ್ತ ಸ್ವರಗಳಲ್ಲಿ, ಇಪ್ಪತ್ತೆರಡು ಶ್ರುತಿಗಳಲ್ಲಿ ನಾರಾಟ, ಕಾವುಳವೆಂಬ ಧ್ವನಿಗೂಡಿ, ಚೌಕುಳವೆಂಬ ಸುಗತಿಯಿಂದ ಅನುಬದ್ದಗೂಡಿ, ಗಮಕ ಸಪ್ತಕದಲ್ಲಿ, ಮಂದ್ರ ಮಧ್ಯಮ ಮತ್ತು ತಾರಸ್ವರದಲ್ಲಿ, ಶುದ್ಧ ಸಾಳಗದ ದೇಶಿ ಮಾರ್ಗದಲ್ಲಿ ನುಡಿಸುತ್ತಿದ್ದನು. ಅಲ್ಲದೆ ಪ್ರಸಿದ್ಧವಾದ ಮಲಹರಿ, ಲಲಿತ, ಧನ್ಯಾಸಿ, ಮಂಗಳಶಿ, ದೇಶಾಕ್ಷಿ, ಕುರಜೆ, ಗುಜ್ಜರಿ, ದೇಶಿ, ವೇಳಾಪರಿ ಮೊದಲಾದ ರಾಗಗಳಲ್ಲದೆ ಪರುಷರಾಗಳನ್ನು ಗೀತ ರೂಪದಲ್ಲಿ ವಾದ್ಯದಲ್ಲಿ ನುಡಿಸುತ್ತಿದ್ದನು. ಇವೆಲ್ಲ ಭಕ್ತಿಯಿಂದ ಶಿವನನ್ನು ಹಾಡುವ ಹಾಡುಗಳು, ಕಿನ್ನರಿ ಬ್ರಹ್ಮಯ್ಯನು ಕಿನ್ನರಿ ವೀಣೆ ನುಡಿಸುತ್ತಿದ್ದು ಶಿವನು 'ಸುನಾದರಸಲೋಲ' ನಾಗಿ ಒಂದು 'ಹೊನ್ನು' ಒಂದು 'ಹಣ' ಒಂದು 'ಹಾಗ' ಕರುಣಿಸುತ್ತಿದ್ದನಂತೆ, ಸಂಗೀತವು ಶರಣರಿಗೆ ಶಿವನನ್ನೊಲಿಸುವ ಸಾಧನವಾಗಿದ್ದಿತು. 'ರಾಗದ ಸಂಕಣ್ಣ ನೆಂಬುವನು ಸಂಗೀತದಿಂದಲೇ ಪ್ರಸಿದ್ದನಾಗಿದ್ದನು. ಅವನ ಹೆಸರೇ ಅದನ್ನು ಸೂಚಿಸುತ್ತದೆ, ಕಲ್ಯಾಣದ ಚಾಳುಕ್ಯ ಚಕ್ರವರ್ತಿ ವಿಕ್ರಮಾದಿತ್ಯನ ಆಸ್ಥಾನದಲ್ಲಿ ವಿದ್ವಾಂಸನೀತ, ಆಸ್ಥಾನದಲ್ಲಿ ನಿತ್ಯವು ಹಾಡಿ ಎರಡು ವರಹಗಳನ್ನು ಪಡೆಯುತ್ತಿದ್ದನಂತೆ ಸಂಕಣ್ಣನ ಸಂಗೀತವು ಭಕ್ತಿಯ ಕಂಪುಗೂಡಿರುತ್ತಿತ್ತು. ಈತನ ಗೌಳದೇಶದ ಗಾಯಕನೊಡನೆ ಗೆದ್ದುದರಿಂದ ದೊರೆಯು ಈತನಿಗೆ 'ರಾಗರಸಾಂಕ' ಎಂಬ ಬಿರುದು ಕೊಟ್ಟಿದ್ದಾನೆ. ಅನೇಕ ಶಿವ ಶರಣರ ವಚನಗಳಿಗೆ ರಾಗ ನಿರ್ದೇಶನಗಳು ದೊರೆಯುತ್ತವೆ. 'ಅಲ್ಲಮನ ವಚನ ಚಂದ್ರಿಕೆ,' 'ಶಿವದಾಸ ಗೀತಾಂಜಲಿ' ಗಳಲ್ಲಿ ಇದಕ್ಕೆ ಹೇರಳ ಉದಾಹರಣೆಗಳನ್ನು ಕಾಣುತ್ತೇವೆ.



(೪) 
ಮಹಾಕವಿ ಹರಿಹರನು ಸಂಗೀತ ಕಲೆಯನ್ನು ಚೆನ್ನಾಗಿ ಅರಿತಿದ್ದನೆಂಬುದನ್ನು ಆತನ ಕಾವ್ಯಗಳ ಅಧ್ಯಯನದಿಂದ ಗೀತಗಳನ್ನು ಹಾಡುತ್ತಿದ್ದುದನ್ನು ಪ್ರಸ್ತಾಪಿಸುತ್ತಾನೆ. ಕವಿ ಹರಿಹರದೇವನು ರಗಳೆಗಳಲ್ಲಿ ಶರಣರ ಕಥೆಗಳನ್ನೇ ಹಾಡುತ್ತಿದ್ದನೆಂದು ಹೇಳಿದ್ದಾನೆ. "ಲಲಿತ ಬಂಗಾಳದಿಂದೊಲಿದು, ಮಲಹರಿ, ವರಾಳಿಯಿಂದೊಲಿದು, ದೇಶಿಗುಜ್ಜರಿಗಳಿಂದ, ದೇಶಾಕ್ಷಿ, ಗೌಳಗಳಿಂದ"- ಹೀಗೆ 'ಬತ್ತೀಸ ರಾಗ' ದಿಂದ ಈಶ್ವರನನ್ನು ಹಾಡುತ್ತಾನೆಂದು ಹೇಳಿದ್ದಾನೆ. ರಗಳೆಯ ಮುಖ್ಯ ಲಕ್ಷಣಗಳಲ್ಲೊಂದು 'ತಾಳ', ಸಂಗೀತಕ್ಕೂ ಇದು ಮುಖ್ಯವಾಗಿದೆ. ಹರೀಶ್ವರ ಕವಿಯು ಹಲವಾರು ಕೃತಿಗಳಲ್ಲಿ ತನಗಿದ್ದ ಸಂಗೀತದ ಅಭಿರುಚಿಯನ್ನು ವ್ಯಕ್ತಪಡಿಸಿದ್ದಾನೆ. ಆನಯನಾರರ ರಗಳೆಯಲ್ಲಿ, ಆ ಶರಣನು ದನಗಾಹಿಯಾಗಿದ್ದರೂ ಅವನು ಮಹಾಭಕ್ತನಾಗಿದ್ದನು. ದನಗಳನ್ನು ಒಟ್ಟುಗೂಡಿಸಿಕೊಂಡು, ಶಿವನ ಕಿವಿಗೆ ಸವಿದನಿಯನೀವಂತೆ, ರಾಗರಸದೊಳಗೆ ಪಂಚಾಕ್ಷರಿಗಳನ್ನು ತನ್ನ ಕೊಳಲಿನಿಂದ ನುಡಿಸುತ್ತಿದ್ದನು, ಆ ನಾದಕ್ಕೆ ಮರಳಾದ ಗೋವುಗಳೆಲ್ಲ 'ಮುಗಿದಕಣ್‌, ಎತ್ತಿದಮುಖ, ಇಳಿದಕಟವಾದ ಹೊಸನೊರೆಗರುಂಕೆಗಳಿಂದ ಆಲಿಸುತ್ತಿದ್ದುವು. ಹುಲಿ-ಹುಲ್ಲೆ, ಹಾವು-ಮುಂಗಲಿಗಳು ವೈರವನ್ನು ಮರೆತು ಕಿವಿಗೊಡುತ್ತಿದ್ದವು; ಗಿಳಿ, ಅಂಚೆ,ಕೋಗಿಲೆ ಕೇಳಿ ನಲಿಯುತ್ತಿದ್ದುವು; ತರುಗಿರಿಗಳೂ ಎಳಸಿ ಕೇಳುತ್ತಿದ್ದುವು. ಈ ರೀತಿ ನಿಸರ್ಗವನ್ನೇ ತೃಪ್ತಿಪಡಿಸಿದ ಮೇಲೆ ಈಶ್ವರನ ಮನ ಆತನ ಕೊಳಲ ಧ್ವನಿಯೊಳಗೆ ಮುಳುಗದಿದ್ದೀತೆ? ಆ ಧ್ವನಿ ನಾಯನಾರನ ಹೃದಯದ ಉಸಿರು. ಗೋವು ಕಾಯುತ್ತಲೆ ಭಕ್ತಿಭಾವ ವನ್ನು ಬೆಳೆಯಿಸಿಕೊಂಡ ಆತನ ಕೊಳಲದನಿಯ ಸುಶ್ರಾವ್ಯತೆಯನ್ನು ಆತನ ಭಕ್ತಿಯ ಇಂಪನ್ನು ಲೋಕಕ್ಕೆ ಪ್ರಕಟಪಡಿಸಬೇಕೆಂಬ ಹಂಬಲವುಳ್ಳ ಶಿವನು, ಒಂದುದಿನ ಒಂದು ಶಿಕ್ಷೆಯ ಮರದಮೇಲೇರಿ ಕುಳಿತುಕೊಂಡಿರುತ್ತಾನೆ. ಶರಣನು ಭವಮೂರ್ತಿಯನ್ನಪ್ಪಿ ತನ್ನ ಹೃತ್ಯ ಮಲದೊಳೆರಿಸಿಕೊಂಡು ಮರದ ಮುಂದೆ ಅಡ್ಡಂ ತಿಗಟಂ ಪರಿದಾಡಿ, ಕೊಳಲಿಂದ ಪಂಚಾಕ್ಷರಿಯನೂದಿ ಹೆಚ್ಚಿ ಹಿಗ್ಗಿ, ಸವಿದು, ಹೊರಗಿನ ದನಿಯನಾಲಿಸದಂತೆ ಆಡುತ್ತ, ಶಿವನನ್ನು ಧ್ಯಾನಿಸುತ್ತ' ತಲ್ಲೀನನಾಗಿರುತ್ತಾನೆ. ಇನ್ನೊಂದು ಕೊಳಲು ವಾದನದ ಉತ್ತಮ ದೃಶ್ಯನಿರ್ಮಾಣ ಹರಿಹರನಲ್ಲಿ: ತಿರುನೀಲಕಂಠವಾಣರೂ 'ಗಾನವಿದ್ಯಾವಿಶಾರದರು: ಶಿವದೇವಾಲಯ ಗಳಲ್ಲಿ ಅತ್ಯಂತ ಭಕ್ತಿಯಿಂದ ಭಕ್ತಿಯ ಹಾಡುಗಳನ್ನು ಹಾಡುತ್ತಿದ್ದ ಶಿವಶರಣರು. ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದ ಇನ್ನೊಂದು ದೃಶ್ಯವನ್ನು ಕವಿ ಹೀಗೆ ವರ್ಣಿಸಿದ್ದಾನೆ: ಕಣ್ಮುಚ್ಚಿ ಸಪ್ತಸ್ವರ, ತ್ರಿಸ್ಟರದಿಂದ, ಮಲಹರಿ, ಪಳಮಂಜರಿ, ಲಲಿತ, ವರಾಳಿ, ಕನ್ನಡ, ಗೌಳ, ದೇಶಿ, ನಾಟಿ, ಬಹುಳಿ, ಶಾಂತಮಲಹರಿ, ರಾಮಕ್ರಿಯಾ, ಶುದ್ದ ಸಾಳಗ ರಾಗಗಳನ್ನು ತಾರ ಮಧುರ ಮಂದ್ರವನಿಪ ತ್ರಿಪಾದಗಳಿಂದ ಸೊಗಸಾಗಿ ಭಕ್ತಿರಸದಲ್ಲಿ ಹಾಡಿದ ಹಲವು ಚಿತ್ರಗಳನ್ನು ನಿರ್ಮಿಸುತ್ತಾನೆ. ಸಂಗೀತವು ಸ್ವತಂತ್ರವಾಗಿ ಹೊರಹೊಮ್ಮಿದಂತೆ ನೃತ್ಯದ ಜೊತೆಗೂ ಹೊರಹೊಮ್ಮುತ್ತದೆ. ಸಂಗೀತವಿಲ್ಲದೆ ನೃತ್ಯವು ಹೊರಹೊಮ್ಮುವಂತಿಲ್ಲ, ಶೃಂಗೀಶ್ವರನ ನಾಟ್ಯನ್ನು ವಿವರಿಸುವಲ್ಲಿ ಆವುಜಗಳ ಧ್ವನಿ ಸುಧೆಯನ್ನು ಸೂಸುತ್ತಿತ್ತು; ಕಹಳೆಯ ಧ್ವನಿ ಸುಗತಿಯನ್ನು ಹೊರಹೊಮ್ಮಿಸುತ್ತಿತ್ತು; ಕರಡೆಯಧ್ವನಿ ಸೊಂಪನ್ನು, ಕೌಸಾಳವು ಸಂಜ್ಞೆಯನ್ನು, ತಾಳಗಳು ನರ್ತನವನ್ನು ಹೊರಸೂಸುತ್ತಿದ್ದುವು ಎಂದು ವರ್ಣಿಸಿದ್ದಾನೆ. ಮಲುಹಣನ ರಗಳೆಯಲ್ಲಿ ಮಲುಹಣಿಯ ನೃತ್ಯವನ್ನು ಹೀಗೆ ವರ್ಣಿಸುತ್ತಾನೆ:

"ಮುಂದಣ ರಂಗಭೋಗ ಮಂಟಪದೊಳಿತ್ತರಂಗೊಂಡೋಲಗವಿತ್ತು, ಕುಳ್ಳಿರ್ದ, ಪರಮಭಕ್ತರ, ಸಚಿವರ, ರಾಜಪುತ್ರರ, 
ವಡ್ಡ ವ್ಯವಹಾರಿಗಳ, ಕಳಾವಿದರ, ಸತ್ಯರ, ಸಾಹಿತ್ಯರ, ವಿಳಾಸಿನಿಯರ, ಪುರಜನರ, ಪರಿಜನರ,
ನಡುವಣ ರಂಗಮಧ್ಯದೊಳ್ - ನರ್ತನಂಗೊಡುವ, ತಾಳದ ಗತಿಗೊಡುವ, ಮದ್ದಳೆಯ ಲಹಣಿಗೊಡುವ, ಆವುಜದ
ದೆಖ್ಖಾಳಂಗೊಡುವ, ಕೌಸಾಳದ ಹಲ್ಲಣ್ಣಿಗೊಡುವ, ವಾಸದ ಲಕ್ಷ್ಮಿಗೊಡುವ ಚೀಹಣಿಯರ ಸಂಗೀತದ ಸಂದಣಿಯೊಳ್ ...... "

ಎಂದು



"ಕುಂಬಾರ ಗುಂಡಯ್ಯನ ರಗಳೆಯಲ್ಲಿ ಮತ್ತೆ ಹರಿಹರ ಕವಿ ಸಂಗೀತ ನಾಟ್ಯಗಳ ಪರಿಜ್ಞಾನವನ್ನು ಪ್ರಕಟಿಸುತ್ತಾನೆ. ಘಟಗಳನ್ನು ಮಾಡುತ್ತ, ಹಾಡುತ್ತ ಕುಣಿಯುತ್ತಾನೆ: ಭಕ್ತಿಭಾವದಿಂದ ಘಟಗಳನ್ನು ಬಾರಿಸುತ್ತಾನೆ. 'ಕುಣಿದಾಡುತ ಮಡಕೆಗಳಂ ಬಾರಿಸಿ, ಮಣಿದು, ತೂಗಾಡುತ್ತಾನೆ' ಇವನ ಕುಣಿತಕ್ಕೆ ಶಿವನ ಮೆಚ್ಚಿ ಕುಣಿಯುತ್ತಾನೆ. ಆತನು ಘಟಗಳನ್ನು ಬಾರಿಸುವ ದನಿಗೆ ಶಿವನ ಪಾದಗಳ ಅಂದುಗೆ ಘಲಕ್ ಎಂದೂ, ಕಟಕಧ್ವನಿ ಝಣಕ್ ಎಂದೂ ನಾದ ಮಾಡುತ್ತವೆ.

ಸಂಗೀತ, ಗಮಕ, ನಾಟ್ಯ ಪ್ರೇಮಿಯಾಗಿದ್ದ ಕವಿ ರಾಘವಾಂಕನು 'ಗಾನವಿನೋದಿ ಇರ್ದೊಡೇಂ ಜಾಣರಿಲ್ಲದೊಡೆ, ಕಳಾನ್ವಿತರ ನಿವಹವಿದ್ದೇನು ಕಲಾಪ್ರೌಢರಿಲ್ಲದೊಡೆ' ಎಂದು ಕೇಳಿರುವಲ್ಲಿ ಮತ್ತು ಹರಿಶ್ಚಂದ್ರ ಕಾವ್ಯದಲ್ಲಿ ಸಂಗೀತ ನರ್ತನ ವಿದ್ಯಾ ಪ್ರದರ್ಶನಕ್ಕೆಂದೇ ಒಂದು ಸನ್ನಿವೇಶ ರಚಿಸಿಕೊಂಡಿದ್ದಾನೆ. ಹೊಲತಿಯರು ಹರಿಶ್ಚಂದ್ರನೆದುರು ಹಾಡಿ, ಕುಣಿದು ಆತ ನನ್ನೊಲಿಸಿದ ಸನ್ನಿವೇಶವೇ ಇದು. ಅಲ್ಲಿ ಕವಿ ರಾಘವಾಂಕನು ಅವರು ಹಾಡಿ ನರ್ತಿಸಿದ ಪ್ರಸಂಗವನ್ನು ವರ್ಣಿಸಿದ ನುಡಿಗಳಿವು:

“ಗತಿ, ಗಮಕ, ಗಹಗಹಿಕೆ, ತಿರುವ, ಚಾಳೆಯ, ಕೊಂಕು, ಜತಿ, ಜೋಕೆ, ಮಾರ್ಗವಣೆ, ವಹಣಿ, ತರಹರಿಕೆ, ಕಂಪಿತಹೋಪ
ಬಾಗು, ಡೊಕ್ಕರ ವಿವರ, ಕಾಳಾಸ, ಕಮ್ಮವಣೆ, ಲೋಲಂಗಿತ, ಮತಶುದ್ಧ ಸಾಳಂಗ, ಸಂಕೀರ್ಣಮಂ ಯಥೋಚಿತ ತಾರ,
ಮಧುರ, ಮಂದ್ರಂಗಳಿಂ ಹಾಡಿ, ಭೂಪತಿಯ ದುಗುಡವನ್ನು ತೊಳೆದರು, ರಾಗರಸಲಹರಿಯಿಂದ ಅನಾಮಿಕ ಸತಿಯರು" ಅವರು 'ದಂಡಿಗೆವಿಡಿದು ಹಾಡಿದ್ದಾರೆ. ಭೀಮಕವಿಯು ಬಸವ ಪುರಾಣದಲ್ಲಿ ಶಿವನ ಆಸ್ಥಾನದಲ್ಲಿ ನಡೆದ ಸಂಗೀತನ್ನು ವರ್ಣಿಸುವ ಮಾತುಗಳಿವು: “ತತ ವಿತರ ಘನ ಶುಪಿರ ವಾದ್ಯ ಪ್ರತಿ ಮಿಳಿತ ಪಕ್ಷಾದಿ ಸಪ್ತಕೃತಿಗಳ ಇಂಪು ಉಗೆ, ಮಂದ್ರ ಮಧ್ಯಮ ತಾರ ವಿಕ್ರಮದ ಅತಿಮಧುರ ಮೃದುಗೀತ ಜಾತೋನ್ನತ ರಸದೊಳೊಡಗೂಡಿ ಪಾಡುತ ಚತುರ ತುಂಬುರ ನಾರದಾದ್ಯರು ಮುಂದೆಸೆಯೊಳಿರಲು" ಎಂದು ಬಸವಣ್ಣನ ಮದುವೆಯ ಪ್ರಸಂಗದಲ್ಲಿ ಬಂದಭಕ್ತರ ಸಂತೋಷಕ್ಕೆಂದು ಭಂಡಾರಿ ಬಲದೇವನು ಭಕ್ತಾಸ್ತ್ರಾನಂಗಳನಲ್ಲಿ ಕೀರ್ತನ ನಾಟಕ, ಸಂಗೀತ ಮೊದಲಾದವುಗಳ ಮೇಳಗಳನ್ನು ಏರ್ಪಡಿಸಿದ್ದನು. ಆಗ “ರೀತಿಯಲಿ, ಆನಂದಗೀತ ಸಮೇತ ಶಂಕರಗಿ ತತಿಯೊಳು ಖ್ಯಾತರುದ್ರನ ಮಹಿಮೆಯನಂಕಿಸಿ ಪಾಡುವರು ಕೆಲರು" ಎಂದು ಭೀಮಕವಿಯು ವರ್ಣಿಸಿದ್ದಾನೆ. ಇದಲ್ಲದೆ ಇನ್ನೂ ಅನೇಕ ಪ್ರಸಂಗಗಳಲ್ಲಿ ಭೀಮಕವಿಯು ತನ್ನ ಸಂಗೀತ ಕಲಾಭಿರುಚಿಯನ್ನು ವ್ಯಕ್ತಪಡಿಸಿದ್ದಾನೆ. ಚಾಮರಸನೂ ಈ ಮಾತಿಗೆ ಹೊರತಾಗಿಲ್ಲ, ಸಂಗೀತದ ಅಭಿರುಚಿ ವೀರಶೈವರಲ್ಲಿ ವಚನಕಾರರಿಂದಲೇ ಬಳುವಳಿಯಾಗಿ ಬಂದ ಆಸ್ತಿ ಎನ್ನಬಹುದು, ಬಸವಪುರಾಣವನ್ನು ಹಾಡುವುದಕ್ಕೆ ಹಾಕಿದ ರಾಗ-ತಾಳಗಳನ್ನು ನೋಡಿದರೆ 'ಗಮಕ'ದ ಪರಂಪರೆಯು ಹೇಗೆ ಬೆಳೆದಿತ್ತೆಂದು ಗೋಚರಿಸುತ್ತದೆ.



ಸಂಗೀತ ಶಾಸ್ತ್ರವನ್ನು ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ವಿವೇಚಿಸುವಾಗ ಗಮನಕ್ಕೆ ಬರುವ ಇನ್ನೊಂದ ಪ್ರಮುಖ ಹೆಸರೆಂದರೆ ಶ್ರೀ ನಿಜಗುಣಶಿವಯೋಗಿಗಳದು ಅವರು ಪ್ರಸಿದ್ಧ ಕವಿಗಳೂ ದಾರ್ಶನಿಕರೂ ಆಗಿದ್ದು ಕನ್ನಡದಲ್ಲಿ ಹಲವು ಕೃತಿ ರಚಿಸಿದ್ದಾರೆ. ಅವರು ರಚಿಸಿದ 'ವಿವೇಕ ಚಿಂತಾಮಣಿ' ಕನ್ನಡದ ಪ್ರಥಮ ವಿಶ್ವಕೋಶ, ಅವರು ಆಕೃತಿಯ ನಾಲ್ಕನೆಯ ಅಧ್ಯಾಯದಲ್ಲಿ ಸಂಗೀತ ಶಾಸ್ತ್ರದ ಸಂಪೂರ್ಣ ವಿವರಗಳನ್ನೇ ಕೊಟ್ಟಿದ್ದಾರೆ. ಗಮಕಿಯ ಲಕ್ಷಣವನ್ನು ಹೇಳುವಾಗ 'ತಾನ ಮಾನಂದೋರಿ, ವಿಶ್ರಮಣವರಿದು, ಪದನಂ ವ್ಯಕ್ತಿಗೆಯು, ಕೇಳ್ವರ ಕಿವಿಗೊಳಿಸಿ, ಮೃದು ಮಧುರ ವರ್ಣೋಚ್ಚಾರ ಮಾಳ್ವ ಗಮಕಿಗಳಿಂ ಎಂದು ವಿವರಿಸಿದ್ದಾನೆ. ಓಂಕಾರ, ಅದರಿ೦ದುವಿಸುವ ದಶವಿಧಧ್ವನಿ, ಮಧುರ ಮದ್ರ ತಾರ ಸ್ವರಭೇದ, ಷಡ್ಜಾದಿ ಸ್ವರಗಳುತ್ಪತ್ತಿ, ಸ್ವರೋತ್ಪತ್ತಿ, ತಾಲ, ಷಡ್ಜಾದಿ ಸ್ವರ ಧ್ವನಿಭೇದ, ಸ್ವರ ಜನ್ಮನಕ್ಷತ್ರ, ಸ್ವರಗಳಿಂದ ಹುಟ್ಟುವ ಧ್ವನಿ, ಇಪ್ಪತ್ತೆರಡು ಶೃತಿಗಮಕ, ಏಳು ದೇಶೀ ಗಮಕ, ಗೀತ, ಗೀತ ಲಕ್ಷ್ಮಣ, ರಾಗೋತ್ಪತ್ತಿಗೆ ಗ್ರಾಮತ್ರಯ ಇವುಗಳಿಂದ ರಾಗ ಜನನ
ಮೂವತ್ತಾರು ರಾಗ, ರಾಗಾಂಗ, ಭಾಷಾಂಗ, ಕ್ರಿಯಾಂಗ ಮತ್ತು ಉಪಾಂಗಗಳೆಂಬ ನಾಲ್ಕು ಅಂಗಗಳಿಂದ ಹುಟ್ಟುವ ಒಂದು ನೂರಾ ಐವತ್ತೇಳು ರಾಗಗಳು, ಪ್ರಸಿದ್ಧ ಮೂವತ್ತೆರಡು ರಾಗಗಳು, ಮಿತ್ರರಾಗ, ಗಾನವೈಖರಿ, ವಾದ್ಯಭೇದ ಇಪ್ಪತ್ತೆರಡು ತೆರನಾದ ತಂತಿವಾದ್ಯ, ಗಾಯಕಿಯರು, ಮದ್ದಳೆ, ಆವುಜಕಾರರು, ತಾಳ, ಧ್ರುವ, ಮಾತ್ರೆ, ಪ್ರಸ್ತಾರ, ತಾಳಭೇದ - ಇತ್ಯಾದಿಗಳನ್ನೂ ವಿವರವಾಗಿ ಕೊಟ್ಟಿದ್ದಾರೆ. ಅಲ್ಲದೆ ಅವರ ಕೈವಲ್ಯ ಪದ್ಧತಿಯ ಅನೇಕ ಹಾಡುಗಳು ಸಂಗೀತಕ್ಕಾಗಿಯೇ ರಚಿತವಾಗಿದ್ದು ಇಂದಿಗೂ ಅವುಗಳನ್ನು ವೀಣೆ ಏಕಧಾರಿಗಳ ಮೂಲಕ ಹಾಡುತ್ತಾ ಬಂದಿದ್ದಾರೆ. ಭಕ್ತರ ತಂಡಗಳು, ಭಜನಾಮೇಗಳು, ನಿಜಗುಣಶಿವಯೋಗಿಗಳ ಹಾಡು ಮಾತ್ರವಲ್ಲ, ಅನೇಕ ಸಂತಕವಿಗಳೂ ಅನುಭಾವಿಗಳೂ ಆದ ಸರ್ಪಭೂಷಣ ಶಿವಯೋಗಳು, ಘನಮಠ ಶಿವಯೋಗಿಗಳು, ಮೈಲಾರದ ಬಸವಲಿಂಗ ಶರಣರು, ನೊಣವಿನ ಕೆರೆ ಕರಿವೃಷಭೇಂದ್ರ ಸ್ವಾಮಿಗಳು, ಕೂಡಲೂರು ಬಸವಲಿಂಗ ಶರಣರು ಇವರೇ ಮೊದಲಾದವರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ಬಂದಿದ್ದಾರೆ. ಶಿವನನ್ನು
ವೀಣಾದಿಲೋಲ' ಎಂದಿದ್ದಾರೆ ನಿಜಗುಣರು, ಹೀಗಾಗಿ ಸರಸ್ವತಿಯ ಎರಡು ಕಣ್ಣುಗಳಂತಿರುವ ಸಾಹಿತ್ಯ-ಸಂಗೀತಕ್ಕೆ ವೀರಶೈವವಚನಕಾರರು, ಅನುಭಾವಿಗಳು ಕೊಟ್ಟ ಕೊಡುಗೆ ಅಪೂರ್ವವೆಂದೇ ಹೇಳಬೇಕು.


ಮೂಲ : ಸಿದ್ದಗಂಗಾಶ್ರೀ ಪತ್ರಿಕೆ