ಶುಕ್ರವಾರ, ಮೇ 01, 2026

ಸಾಂಸ್ಕೃತಿಕ ನಾಯಕ ಬಸವಣ್ಣ ಸರಣಿ : ದೇಹಿ ಸಂಸ್ಕೃತಿಯಿಂದ ಕಾಯಕ ಸಂಸ್ಕೃತಿಯೆಡೆಗೆ

ಸರಣಿ: ಸಾಂಸ್ಕೃತಿಕ ನಾಯಕ ಬಸವಣ್ಣ ಮತ್ತು ಶರಣರ ದರ್ಶನ Series: Cultural Leader Basavanna and the Vision of the Sharanas

ಲೇಖನ: 'ದೇಹಿ' ಸಂಸ್ಕೃತಿಯಿಂದ 'ಗ್ರಾಮ ಸ್ವರಾಜ್ಯ'ದೆಡೆಗೆ - ಕಾಯಕಯೋಗದ ತಾತ್ವಿಕ ಪಯಣ Article: From the 'Dehi' Culture to 'Grama Swarajya' - The Philosophical Journey of Kayaka Yoga


೧. 'ದೇಹಿ' ಸಂಸ್ಕೃತಿಯ ಅಂತ್ಯ ಮತ್ತು ಕಾಯಕದ ಉದಯ

1. The End of the 'Dehi' Culture and the Dawn of Kayaka

ಸಾಂಪ್ರದಾಯಿಕ ಅಧ್ಯಾತ್ಮವು ಭೌತಿಕ ದೇಹವನ್ನು (ಕಾಯವನ್ನು) ಪಾಪದ ಕೂಪವೆಂದು ಬೋಧಿಸಿ, ಅದನ್ನು ದಂಡಿಸಲು ಹೇಳುತ್ತಿತ್ತು. ಸಂಸ್ಕೃತದಲ್ಲಿ 'ದೇಹಿ' ಎಂದರೆ 'ಕೊಡು' (ಬೇಡುವುದು) ಎಂಬ ಅರ್ಥವಿದೆ. ಕೇವಲ ಒಂದು ದೇಹವನ್ನು ಹೊತ್ತುಕೊಂಡು ಹುಟ್ಟಿದ ಕಾರಣಕ್ಕೆ, ಆ ದೇಹವನ್ನು ಸಾಕಲು ಸಮಾಜದ ಮುಂದೆ ಕೈಯೊಡ್ಡಿ 'ದೇಹಿ' ಎನಿಸಿಕೊಳ್ಳುವುದು ಮನುಷ್ಯನ ಘನತೆಗೆ ಮಾಡುವ ಅತಿದೊಡ್ಡ ಅಪಮಾನ. "ದೇಹವಿಡಿದ ಕಾರಣದಿಂದ ದೇಹಿ" ಎಂದು ಒಡಲು ತುಂಬಿಸಿಕೊಂಡವರ ಮುಂದೆ, ೧೨ನೇ ಶತಮಾನದ ಶರಣರು ಒಂದು ಹೊಸ ಮಾರ್ಗವನ್ನು ಸೃಷ್ಟಿಸಿದರು. "ಕಾಯವಿಡಿದ ಕಾರಣದಿಂದ ಕಾಯಕ‌ ಮಾಡಿ" ಎಂದು ಸ್ವಾಭಿಮಾನದಿಂದ ಒಡಲು ತುಂಬಿಕೊಳ್ಳುವ ದಾರಿಯನ್ನು ತೋರಿದರು. 'ಕಾಯವೇ ಕೈಲಾಸ' ಅಂದವರದು ಒಂದು ಎತ್ತರವಾದರೆ, ಅದೇ ಕಾಯವನ್ನು ದುಡಿಸಿ 'ಕಾಯಕವೇ ಕೈಲಾಸ' ಎಂದವರದು ಅದಕ್ಕೂ ಮೀರಿದ ಎತ್ತರ!

Traditional spirituality often taught that the physical body (Kaya) was a well of sin, encouraging its punishment. In Sanskrit, 'Dehi' translates to 'Give me' (begging). Extending one's hand to society to sustain a body simply because one was born with it, thus becoming a 'Dehi', is the greatest insult to human dignity. Standing tall against those who justified a parasitic life by saying "Because I possess a body, I am a Dehi," the 12th-century Sharanas forged a revolutionary path. They taught the world to live with self-respect: "Because you possess a Kaya (body), perform Kayaka (labor)." While those who proclaimed "The body is Heaven" reached a certain philosophical height, those who put that body to work and declared "Labor itself is Heaven" reached an unsurpassed zenith!


೨. ಶ್ರಮದ ಘನತೆ (Dignity of Labour) ಮತ್ತು ತಾರತಮ್ಯದ ವಿನಾಶ

2. Dignity of Labor and the Annihilation of Discrimination

ಇಂದಿಗೂ ಸಮಾಜದಲ್ಲಿ ವರ್ಣ, ಜಾತಿ, ಲಿಂಗ ಭೇದಗಳಷ್ಟೇ ಅಲ್ಲದೆ ಮನುಷ್ಯ ಮಾಡುವ ಕೆಲಸದ ಮೇಲೂ ಭೇದಭಾವ ಮಾಡಲಾಗುತ್ತದೆ. ಸೆಕ್ಯೂರಿಟಿ ಗಾರ್ಡ್‌ಗೆ ಸಿಗುವ ಮರ್ಯಾದೆಯೇ ಬೇರೆ, ಮೇಲಧಿಕಾರಿಗೆ ಸಿಗುವ ಮರ್ಯಾದೆಯೇ ಬೇರೆ. ಎದುರಿನ ವ್ಯಕ್ತಿ ಯಾವ ಕಾಯಕ ಮಾಡುತ್ತಾನೆ ಎಂದು ತಿಳಿದಾಕ್ಷಣ ಆತನ ಬಗೆಗಿನ ನಮ್ಮ ಗೌರವಾದರಗಳು ಬದಲಾಗುತ್ತವೆ. ಆದರೆ, ಸಾಂಸ್ಕೃತಿಕ ನಾಯಕ ಬಸವಣ್ಣನವರು ಈ ವೃತ್ತಿ-ಆಧಾರಿತ ತಾರತಮ್ಯವನ್ನು ಬೇರುಸಹಿತ ಕಿತ್ತುಹಾಕಿದರು:

"ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ !"

ಮನೆಗೆ ಬಂದವರ ಕಾಯಕ ಯಾವುದೆಂದು ಕೇಳಿ, ಅದರ ಆಧಾರದ ಮೇಲೆ ಮೇಲು-ಕೀಳು ಎಣಿಸಿದರೆ ಎನ್ನ ತಲೆಯೇ ದಂಡ ಎಂದು ಬಸವಣ್ಣನವರು ಎಚ್ಚರಿಸಿದರು. ಕಾಯಕಗಳು ಬೇರೆಯಾಗಿರಬಹುದು, ಆದರೆ ಅವುಗಳ ಹಿಂದಿನ ನಿಷ್ಠೆ ಒಂದೇ ಆಗಿದ್ದರೆ ಫಲವೂ ಒಂದೇ ಎಂಬುದನ್ನು ಶರಣ ಆನಂದಯ್ಯನವರು ಅತ್ಯಂತ ಸುಂದರವಾದ ರೂಪಕದಲ್ಲಿ ವಿವರಿಸುತ್ತಾರೆ:

"ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ,
ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ,
ಲಿಂಗವ ಕೂಟ ಕೂಡುವ ಏಕವಾಗಿರಬೇಕು."

Even today, society discriminates not just on caste and gender, but heavily on the profession one practices. The respect offered to a security guard vastly differs from that given to a high-ranking official. The moment we learn someone's profession, our level of respect shifts. But Cultural Leader Basavanna completely eradicated this profession-based discrimination:

"If a devotee comes to my house with God, and if I inquire about his profession (to judge his status), I swear by You! I swear by the ancients! Let my head be severed!"

Professions may vary, but if the dedication behind them is pure, the spiritual result is the same. Sharana Anandayya explains this beautifully:

"Just as cows are of many colors, but the milk they yield is of one single color, though labors (Kayakas) are many, the execution and the ultimate spiritual union must be one."


೩. ಆರು ಕಾಯಕಗಳು ಮತ್ತು ಕೃಷಿಯ ಅಗ್ರಸ್ಥಾನ (ಗ್ರಾಮ ಸ್ವರಾಜ್ಯ)

3. The Six Trades and the Supremacy of Farming (Grama Swarajya)

೧೨ನೇ ಶತಮಾನದ ಆರ್ಥಿಕತೆಯ ಚಿತ್ರಣವನ್ನು ನೀಡುತ್ತಾ ಶರಣ ಮೋಳಿಗೆ ಮಾರಯ್ಯನು ತನ್ನ ವಚನದಲ್ಲಿ ಆರು ಕಾಯಕಗಳನ್ನು (ಷಟ್-ಕೃಷಿವ್ಯಾಪಾರ) ಪಟ್ಟಿ ಮಾಡುತ್ತಾನೆ:

"ಅಸಿ ಮಸಿ ಕೃಷಿ ವಾಣಿಜ್ಯ ಗೋಪಾಲ ಯಾಚನ
ಷಟ್‍ಕೃಷಿವ್ಯಾಪಾರವ ಮಾಡುವಾತ ಜಂಗಮವಲ್ಲ...
ಮಾಟಕೂಟದವರೆಲ್ಲ ಜಗದಾಟದ ಡೊಂಬರೆಂಬೆ."

ಇಲ್ಲಿ ಉಲ್ಲೇಖವಾಗಿರುವ ಕಾಯಕಗಳೆಂದರೆ: ಅಸಿ (ಸೇನೆ/ರಕ್ಷಣೆ), ಮಸಿ (ಬರವಣಿಗೆ/ಜ್ಞಾನ), ಕೃಷಿ (ಉಳುಮೆ), ವಾಣಿಜ್ಯ (ವ್ಯಾಪಾರ), ಗೋಪಾಲ (ಪಶುಪಾಲನೆ) ಮತ್ತು ಯಾಚನ (ಪುರೋಹಿತಶಾಹಿ ಅಥವಾ ಬೇಡುವಿಕೆ). ಈ ಆರರಲ್ಲಿ ಕೊನೆಯದಾದ 'ಯಾಚನೆ'ಯನ್ನು ಕಾಯಕವೆಂದು ಒಪ್ಪಲು ಶರಣರು ಸಿದ್ಧರಿರಲಿಲ್ಲ. ಯಾಚನೆ ಮಾಡುವವನು ಜಂಗಮನಾಗಲು ಸಾಧ್ಯವಿಲ್ಲ ಎಂದು ಮಾರಯ್ಯ ಖಡಾಖಂಡಿತವಾಗಿ ಹೇಳುತ್ತಾನೆ.

ಇವೆಲ್ಲವುಗಳಲ್ಲಿ ಅತ್ಯಂತ ಮೇಲಿನ ಸ್ಥಾನ 'ಕೃಷಿ'ಗೆ ಸಲ್ಲುತ್ತದೆ. ಎಲ್ಲ ಕಾಯಕಗಳಿಗೂ‌ ಮುಗಿಲಾದದ್ದು ಉಳುಮೆಯೆಂಬ ಕಾಯಕ. ಹೊಟ್ಟೆಗೆ ಕೂಳಿಲ್ಲ ಅಂದರೆ ಏನೂ ಇಲ್ಲ. ಇತರರ ಹೊಟ್ಟೆ ತುಂಬಿಸುವ ಜನರೇ ತಮ್ಮ ಹೊಟ್ಟೆ ಹೊರೆಯುವುದು ಕಷ್ಟವಾಗಿರುವ ಇಂದಿನ ದಿನಗಳಲ್ಲಿ, ಕೃಷಿಗೆ ಮೊದಲ ಮಣೆ ಹಾಕಿದ ಶರಣರ ತತ್ವವೇ ನೈಜ ಆರ್ಥಿಕ ಪರಿಹಾರ. ಗಾಂಧೀಜಿಯವರ 'ಗ್ರಾಮ ಸ್ವರಾಜ್ಯ' ಮತ್ತು ಭಾರತದ 'ಸುಸ್ಥಿರ ಅಭಿವೃದ್ಧಿ'ಯ (Inclusive Development) ಕನಸು ನನಸಾಗುವುದು ಬಸವಾದಿ ಶರಣರ ಕಾಯಕ ಸಿದ್ಧಾಂತದ ಮೂಲಕ ಮಾತ್ರ. ಅಕ್ಟೋಬರ್ ೧೬ರ ವಿಶ್ವ ಆಹಾರ ದಿನ (World Food Day), ಸುಗ್ಗಿಹಬ್ಬ (ಸಂಕ್ರಾಂತಿ) ಹಾಗೂ ರಾಷ್ಟ್ರೀಯ ರೈತರ ದಿನಾಚರಣೆಗಳ ನಿಜವಾದ ಅರ್ಥ ಅಡಗಿರುವುದೇ ಕೃಷಿಕಾಯಕದಲ್ಲಿ.

Painting a picture of the 12th-century economy, Sharana Molige Maraiah lists six trades:

"Asi (Sword/Military), Masi (Ink/Writing), Krushi (Farming), Vanijya (Trade), Gopala (Cattle-rearing), and Yachana (Begging/Rituals)... one who merely engages in begging is no Jangama."

The Sharanas recognized soldiers and writers as integral to the economy, but vehemently rejected 'Yachana' (parasitic begging/ritualism). Among all these, 'Krushi' (Farming) reigns supreme. Without food in the stomach, everything is a void. In today's times where farmers who feed the world struggle to feed themselves, the Sharana principle of prioritizing agriculture is the true economic solution. Mahatma Gandhi's dream of 'Grama Swarajya' (Village Self-rule) and 'Inclusive Development' can only be realized through this Kayaka ideology. Harvest festivals and World Food Day find their truest meaning in the labor of the farmer.


೪. ಸತ್ಯ, ಅಹಿಂಸೆ ಮತ್ತು ಆಂತರಿಕ ಶುದ್ಧಿ: ಗಾಂಧೀಜಿಗೂ ಮುನ್ನ ಶರಣರು

4. Truth, Non-violence, and Inner Purity: The Sharanas before Gandhi

ಗಾಂಧೀಜಿಯವರ 'ಸತ್ಯ' ಮತ್ತು 'ಅಹಿಂಸೆ'ಯ ಪರಿಕಲ್ಪನೆಗಳನ್ನು ಜಗತ್ತು ಕೊಂಡಾಡುತ್ತದೆ. ಆದರೆ, ಈ ತತ್ವಗಳ ಅತ್ಯಂತ ಆಳವಾದ ಮಾನಸಿಕ ಆಯಾಮವನ್ನು (Psychological depth) ಶರಣರು ಶತಮಾನಗಳ ಹಿಂದೆಯೇ ತೆರೆದಿಟ್ಟಿದ್ದರು. ಕೇವಲ ಭೌತಿಕವಾಗಿ ಯಾರಿಗೂ ನೋವು ಮಾಡದಿರುವುದು ಮಾತ್ರ ಅಹಿಂಸೆಯಲ್ಲ; ಮನಸ್ಸಿನಲ್ಲಿಯೂ ದ್ವೇಷವಿರಬಾರದು. ಅಲ್ಲಮಪ್ರಭುಗಳು ಇದನ್ನು ಅತ್ಯಂತ ಮಾರ್ಮಿಕವಾಗಿ ವಿಶ್ಲೇಷಿಸುತ್ತಾರೆ:

"ಧರ್ಮವೆಂಬುದು ಅಧರ್ಮದೊಳಗು... ಅಹಿಂಸೆಯೆಂಬುದು ಹಿಂಸೆಯೊಳಗು!
ಇವಾವಂಗವೂ ಇಲ್ಲದೆ ಗುಹೇಶ್ವರಾ ನಿಮ್ಮ ಶರಣ ಸುಖಿಯಾಗಿರ್ದನು!"

ಹಾಗೆಯೇ, ಆಚರಣೆಗಳಿಗಿಂತ ಸತ್ಯವೇ ಶ್ರೇಷ್ಠವೆಂದು ಚೆನ್ನಬಸವಣ್ಣ ಎಚ್ಚರಿಸುತ್ತಾರೆ:

"ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ ? ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ ? ... ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ ?"

ಮನುಷ್ಯನಿಗೆ ಸತ್ಯ, ನಿಷ್ಠೆ ಮತ್ತು ಆಂತರಿಕ ಶುದ್ಧಿ ಇದ್ದರೆ, ಅವನಿಗೆ ಯಾವುದೇ ಕೃತಕ ತತ್ವಶಾಸ್ತ್ರದ ಬೋಧನೆಯಾಗಲಿ, ಮಂತ್ರಗಳಾಗಲಿ ಬೇಕಾಗಿಲ್ಲ ಎಂದು ಸಾರಿ ಮಾನವೀಯತೆಯೇ ಅತ್ಯುನ್ನತ ಧರ್ಮವೆಂದು ಶರಣರು ಸ್ಥಾಪಿಸಿದರು.

The world celebrates Gandhi's concepts of 'Satya' (Truth) and 'Ahimsa' (Non-violence). However, the Sharanas explored their deepest psychological dimensions centuries earlier. True non-violence isn't just avoiding physical harm; it requires a mind devoid of hatred. Allama Prabhu profoundly notes:

"Dharma resides within Adharma... Non-violence is tested within violence!" Similarly, Chennabasavanna elevates truth above all empty rituals: "Why does a dedicated person need daily rituals? Why does a truthful person need philosophical debates? ... Why does a pure-minded person need chanted mantras?" The Sharanas established that if a human possesses truth, dedication, and internal purity, they need no artificial philosophical lectures or mantras, proving that humanity itself is the highest religion.


೫. ಶುದ್ಧ ಕಾಯಕ: ಕಾಡಿ-ಬೇಡಿ ಮಾಡುವ ಶ್ರಮವಲ್ಲ

5. Pure Kayaka: Not a Labor of Self-Torture

ಕಾಯಕ ಮತ್ತು ದಾಸೋಹವು ಒತ್ತಾಯದ ಕೆಲಸವಾಗಿರಲಿಲ್ಲ. ದಾಸೋಹದ ಹೆಸರಿನಲ್ಲಿ ದೇಹವನ್ನು ಅತಿಯಾಗಿ ದಂಡಿಸುವುದು, ಅಥವಾ ಇನ್ನೊಬ್ಬರನ್ನು ಪೀಡಿಸಿ ದಾನ ತರುವುದನ್ನು ಶರಣರು ಒಪ್ಪಲಿಲ್ಲ. ಇದು ಕಾರ್ಮಿಕರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು (Well-being) ಕಾಪಾಡುವ ಅದ್ಭುತ ನಿಲುವು:

"ಕಾಯಕವೆಂದು ಕಾಯವ ಬಳಲಿಸದೆ, ತನು ಕರಗದೆ, ಮನ ನೋಯದೆ, ಕಾಡಿ ಬೇಡಿ ಮಾಡುವುದು ದಾಸೋಹವೆ ? ... ಚಿತ್ತ ಶುದ್ಧದಲ್ಲಿ ಗುರುಚರಕ್ಕೆ ಮುಯ್ಯಾಂತು ಬಂದುದಕ್ಕೆ ಸರಿಗಂಡು... ಮಲ್ಲಿಕಾರ್ಜುನಲಿಂಗಕ್ಕೆ ತೃಪ್ತಿ."

ತನ್ನ ಬೆವರಿನಿಂದ, ಅತ್ಯಂತ ಪ್ರಾಮಾಣಿಕವಾಗಿ ತಂದ ಒಂದು ಕಾಡಿನ ಸೊಪ್ಪಾಗಿದ್ದರೂ ಅದು ದೇವರಿಗೆ ಪ್ರಿಯ ಎಂದು ನುಲಿಯ ಚಂದಯ್ಯ ಸಾರುತ್ತಾರೆ:

"ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ."

ಕೆಲಸದ ಮೇಲಿನ ನಿಷ್ಠೆ ಎಷ್ಟಿರಬೇಕೆಂದರೆ, ದೇವರು ಎದುರಿಗೆ ಬಂದರೂ ಕಾಯಕ ನಿಲ್ಲಿಸಬಾರದು. ತವನಿಧಿಯ ಬೆಳೆವವನಿಗೆ ಕಣಜದ ಹಂಗಿಲ್ಲದಂತೆ, ಕಾಯಕ ಮಾಡುವ ಭಕ್ತನಿಗೆ ಮತ್ಯಾರ ಹಂಗೂ ಇಲ್ಲ. ಕಾಯಕವೇ ಮುಕ್ತಿಮಾರ್ಗವಾದಾಗ ಗುರುವಿನ ಹಂಗೂ ಇರುವುದಿಲ್ಲ. ಇದನ್ನು ಮೋಳಿಗೆ ಮಾರಯ್ಯ ಹೀಗೆ ಹೇಳುತ್ತಾರೆ:

"ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು... ಕಾಯಕವೆ ಕೈಲಾಸವಾದ ಕಾರಣ."

Kayaka and Dasoha were never forced tasks. The Sharanas completely rejected torturing one's body or harassing others for charity in the name of Dasoha. Championing the worker's well-being, they asked:

"Without excessively fatiguing the body... without causing mental pain, is it Dasoha if you harass and beg? Only that which is earned with a pure mind satisfies the Lord."

Economic ethics strictly dictates that even if it is a simple wild green from the forest, if it is earned purely through honest sweat, it is the highest offering to God. Nuliya Chandayya declares: "Even if it is just wild forest greens, whatever comes through honest labor is worthy of being offered to the Linga."

The dedication to work must be so fierce that even if God appears, labor must not halt. Just as one who grows a treasure field needs no external granary, a laboring devotee needs nothing else. Molige Maraiah commands:

"When engaged in labor, one must forget even the sight of the Guru, one must forget even the worship of the Linga... Because Labor itself is Heaven."

ಉಪಸಂಹಾರ / Conclusion

ಭೌತಿಕ, ಆರ್ಥಿಕ, ಮನೋವೈಜ್ಞಾನಿಕ ಮತ್ತು ಆಧ್ಯಾತ್ಮಿಕ—ಹೀಗೆ ಎಲ್ಲವನ್ನೂ ಒಗ್ಗೂಡಿಸಿದ ಇಂತಹದೊಂದು ಪ್ರಾಯೋಗಿಕ ಜೀವನ ದರ್ಶನ ಜಗತ್ತಿನ ಬೇರಾವ ತತ್ವಶಾಸ್ತ್ರದಲ್ಲೂ ಸಿಗಲು ಸಾಧ್ಯವಿಲ್ಲ. ದೇಹವನ್ನು ಗುಡಿಯನ್ನಾಗಿ, ಶ್ರಮವನ್ನು ಪೂಜೆಯನ್ನಾಗಿ, ಅದರ ಫಲವನ್ನು ಸಮಾಜದ ದಾಸೋಹವನ್ನಾಗಿ ಕಂಡ ಈ ವ್ಯವಸ್ಥೆಯು ಅಪ್ಪಟ ಕನ್ನಡಿಗರ ಸ್ವಂತಿಕೆಯಾಗಿದೆ. ದೈನಂದಿನ ವ್ಯವಹಾರದಲ್ಲಿ ಮನುಷ್ಯನ 'ಆಡುವ ನುಡಿ'ಗೆ (ಸತ್ಯ) ಮತ್ತು ಹೊಟ್ಟೆಪಾಡಿಗಾಗಿ 'ಮಾಡುವ ಕಾಯಕ'ಕ್ಕೆ ದೈವತ್ವವನ್ನು ತಂದುಕೊಟ್ಟ ಸಾಂಸ್ಕೃತಿಕ ನಾಯಕ ಬಸವಣ್ಣ ಮತ್ತು ಶರಣರ ಈ ಗ್ರಾಮ ಸ್ವರಾಜ್ಯದ ದರ್ಶನವು ಇಂದಿಗೂ, ಎಂದೆಂದಿಗೂ ಜಗತ್ತಿಗೆ ಬೆಳಕಾಗಿದೆ.

A practical philosophy that integrates the physical, economic, psychological, and spiritual realms so flawlessly cannot be found anywhere else in world history. Viewing the body as a temple, labor as worship, and the fruits of labor as a sacrament for society (Dasoha) is the absolute genius of Kannadigas. By bestowing divinity upon spoken truth and daily physical labor, Cultural Leader Basavanna and the Sharanas created a vision of Grama Swarajya that remains an eternal guiding light for humanity.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ