ಗುರುವಾರ, ಜನವರಿ 09, 2025

ಸಾರಾಯ

ತನುಸಾರಾಯರ, ಮನಸಾರಾಯರ, 
ಜ್ಞಾನಸಾರಾಯರ ತೋರಯ್ಯಾ, ನಿಮ್ಮ ಧರ್ಮ!
ಭಾವಸಾರಾಯರ ಭಕ್ತಿಸಾರಾಯರ ತೋರಯ್ಯಾ, ನಿಮ್ಮ ಧರ್ಮ!
ಕೂಡಲಸಂಗಮದೇವಯ್ಯಾ, ನಿಮ್ಮನರಿಯದವಗುಣಿಗಳ ತೋರದಿರಯ್ಯಾ, ನಿಮ್ಮ ಧರ್ಮ!

ತನು-ಮನ-ಜ್ಞಾನ -ಭಾವ-ಭಕ್ತಿ ಗಳು‌ ಮುಖ್ಯವಾದವು! 
--
ಹಿನ್ನೆಲೆ ಯಾಗಿ ಈ‌ ಕೆಲವು ವಚನಗಳ ಸಾಲುಗಳನ್ನು ಇಟ್ಟುಕೊಳ್ಳೋಣ. 
೧. #ತನು ಕರಗಿ #ಮನ ಕರಗಿ ನೋಡಿ, ಮಾಡುವುದು ಭಕ್ತಿಸ್ಥಲ.
೨. ಕೂಡಲಸಂಗಮದೇವಾ, ನಿಮ್ಮನರಿಯದ #ಜ್ಞಾನ ವೆಲ್ಲಾ ಅಜ್ಞಾನ!
೩. #ಭವಜ್ಞಾನ ವ ಕೆಡೆಮೆಟ್ಟಿ, #ಭಕ್ತಿಜ್ಞಾನ ವ ಗಟ್ಟಿಗೊಳಿಸಿ,
೪. ಜ್ಞಾನವಿಲ್ಲದನ್ನಕ್ಕರ ತಲೆಯಿಲ್ಲದ ಮುಂಡದಂತೆ
೫. #ಭಾವ ಶುದ್ಧವಾದೊಡೆ, ಕೂಡಲಸಂಗಯ್ಯನು ʼಇತ್ತ ಬಾʼ ಎಂದೆತ್ತಿಕೊಳ್ಳನೇಕಯ್ಯಾ?
೬. ಭಾವತಪ್ಪಿದ ಬಳಿಕ ಏಗೆಯ್ದೊಡಾಗದು.
---
ಸಾರಾಯ ಎಂದರೆ ತಿರುಳು, ಸತ್ವ, ಅನುಭಾವ. ಹಣ್ಣುಗಳನ್ನು "ಕಳಿ"ಸಿ ಬಟ್ಟಿ ಇಳಿಸಿ‌ ಒಳಗಿನ ಸಾರ / ಸಾರಾಂಶ ವನ್ನು ಹೊರೆತೆಗೆದದ್ದೇ (ಬಟ್ಟಿ ಇಳಿಸಿದ್ದು - ಸೋಸಿ ತೆಗೆದದ್ದು - filter ಮಾಡಿದ್ದು) ಸಾರಾಯಿ. ಸಾರಾಯಿಯು ಕಳಿತ ಹಣ್ಣಿನ ಸಾರಾಯ! 

ಕಳಿತ ಮಾಗಿದ ಪಕ್ವಗೊಂಡ‌ ತನುವಿನವರು ತನುಸಾರಾಯರು. 
ಕಳಿತ ಮಾಗಿದ ಪಕ್ವಗೊಂಡ‌ ಮನವುಳ್ಳವರು ಮನಸಾರಾಯರು 
ಕಳಿತ ಮಾಗಿದ ಪಕ್ವಗೊಂಡ‌ ಭಾವವುಳ್ಳವರು ಭಾವಸಾರಾಯರು 
ಕಳಿತ ಮಾಗಿದ ಪಕ್ವಗೊಂಡ‌ ಜ್ಞಾನದಿಂದ ಜ್ಞಾನಸಾರಾಯರು
ಕಳಿತ ಮಾಗಿದ ಪಕ್ವಗೊಂಡ‌ ಭಕ್ತಿಯುಳ್ಳವರು ಭಕ್ತಿಸಾರಾಯರು

ತನು ಮನ ಭಾವ ಭಕ್ತಿ ಜ್ಞಾನ ಸಾರಾಯಾರಾಗಲು ಇಷ್ಟಲಿಂಗ ಪೂಜೆ ಬೇಕು, ಲಿಂಗಾಂಗಸಾಮರಸ್ಯ ಸಾಧನೆ ಬೇಕು,  ಶಿವಯೋಗ ಬೇಕು. ಇವರೇ ಶಿವ ವನ್ನು ಅರಿತವರು.

ಇಂತಹ ಸಾರಾಯರ ಸತ್ಸಂಗವನ್ನು ತೋರು... ಇಂತಲದಲ್ಲದವರ, ನಿಮ್ಮನರಿಯದವರ ಸಂಗ ಆ‌ ಕಡೆ ಇರಲಿ,‌ಅಂತವರ ಮೊಗವನ್ನೂ ಎನಗೆ ತೋರದಿರಾ ಎನ್ನುವರು ಬಸವಣ್ಣ. ಸಜ್ಜನರ ಸಹವಾಸ ಅನ್ನುವುದಕ್ಕಿಂತ ದಿಟ ಅನುಭಾವಿಗಳ‌ ಸತ್ಸಂಗದ ಮಾತು‌ ಎಂದು ಕೂಡ ಹೇಳಬಹುದು.
--

#ಸಾರಾಯ ಪದಾರ್ಥ ದ ಬಗ್ಗೆ ಚನ್ನಬಸವಣ್ಣನ‌ ಮಾತುಗಳಲ್ಲಿ!

ಸಾರಾಯ ಪದಾರ್ಥವನಾರಯ್ಯಾ ಅರಿವರು ? ಆರರಿಂದ ಬೇರೆ ತೋರಲಿಲ್ಲೆನಿಸಿತ್ತು.
ಹೆಸರೆನಿಸಿಕೊಂಬಡೆ ಹೆಸರು ಮುನ್ನಿಲ್ಲ ಹೆಸರೆಲ್ಲವೂ ಪರಿಣಮಿಸಲಾಯಿತ್ತು. ಕಂಡೆನೆಂದಡೆ ಕಾಣಲಾಯಿತ್ತು
ಕಂಡು ನುಡಿಸುವಂಥದಲ್ಲ ಕಂಡಾತ ಕಲಿಕೆಯೊಳಗಿಲ್ಲದಂತಿಪ್ಪ
ಕಾರ್ಯವಿಲ್ಲದ ಕಾರಣಕರ್ತ. ಆರರಿಂದತ್ತ ತಾನಿಲ್ಲೆಂದೆನಿಸಿಕೊಂಡ ಕೂಡಲಚೆನ್ನಸಂಗಯ್ಯಾ
ಆ ಮಹಾಲಿಂಗದ ಅನುಭಾವ ಶರಣಫಲದ ಸಂಬಂಧವ ಮೀರಿತ್ತು.

ಇಲ್ಲಿ #ಸಾರಾಯ ಎಂಬುದು ಪದಾರ್ಥ ( = ವಸ್ತು, ಘನ, ಶಿವ,‌ ಜಗತ್ತಿನ ತಿರುಳು). ಪದಾರ್ಥ =  ಪದದ ಅರ್ಥ (meaning of the word /position ಎಂಬುದು ಇಲ್ಲಿಗೆ ಹೊಂದದು.