ಕನ್ನಡದಲ್ಲಿ "ಕಱ್" ಎಂಬ ಬೇರಿದೆ. ಇದರಿಂದಲೇ ಕಱು / ಕರು / ಕಡಿ ಎಂಬ ಪದಗಳು ಹುಟ್ಟಿವೆ. ಕರುನಾಡು ಎಂದರೆ ಎತ್ತರದ ನಾಡು. ಕಡಿದಾದ ದಾರಿ ಎಂದರೆ ಎತ್ತರೆತ್ತರಕ್ಕೆ ಬೆಳೆಯುತ್ತಿರುವ ದಾರಿ.
ಇದೇ ಬೇರಿನಿಂದ ಹುಟ್ಟಿದ ಇನ್ನೊಂದು ಪದ ಕರ್‍ಟೆ > ಕಟ್ಟೆ. ಗಾದಿ, ಗದ್ದಿ, ಗದ್ದೆ, ಗುಡ್ಡೆ ಗಳು ಕಟ್ಟೆಯ ಇತರೆ ರೂಪಗಳು.
ಕಟ್ಟೆಯನ್ನು ಕಟ್ಟುವಿಕೆಯೇ ಕಟ್ಟಗೆ / ಕಟ್ಟುಗೆ. - a structure or platform which is slightly elevated. ಗರ್ದಿಗೆ, ಗರ್ದಗೆ, ಗದ್ದಗೆ, ಗದ್ದುಗೆ, ಗದ್ದಿಗೆ, ಗದ್ಗೆ ಇವೆಲ್ಲ ಇದೇ ಪದದ ಬೇರೆ ಬೇರೆ ರೂಪಗಳು.
ಹೊಲದ ಸುತ್ತ ಕಟ್ಟುವ ಕಟ್ಟೆಯೇ ಬದು /ಬದ. ಬಾವಿ ಸುತ್ತಲೂ ಕಟ್ಟೆ ಕಟ್ಟುತ್ತೇವೆ. ಸುತ್ತ ಕಟ್ಟೆ ಕಟ್ಟಿದ (ಒಳಗೆ ನೀರು ಸೆಳೆದಿಡಲು) ಹೊಲವೇ ಗದ್ದೆ. ಇಲ್ಲಿ ಕಟ್ಟೆ ಯ ಅರ್ಥ "ಎತ್ತರದ ಒಂದು structure".
ಊರ ಮುಂದೆ - ನೆಲದ ಮೇಲೆ ಕೂರುವುದರ ಬದಲು ಮೇಲೆ - ಕೂರಲು ನೆರವಾಗುವ ಜಗಲಿ ತರದ್ದು ಈ ಕಟ್ಟೆ. ಈ ಅರ್ಥದಲ್ಲಿ ಇದು ಕುಳಿತುಕೊಳ್ಳುವ ಆಸನ.
---
ಮನುಷ್ಯ ಸತ್ತ ಮೇಲೆ ಅವನನ್ನು ಹೂಳಿದ ಜಾಗದಲ್ಲಿ (ಗದ್ದುಗೆ - ಗುಡ್ಡೆಯ ಮೇಲೆ) ಮೇಲೆ ಒಂದು ಕಲ್ಲನ್ನು ನೆಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಆಚರಣೆ. ಇದು ಜಗತ್ತಿನ ಹಳೆಯ ಎಲ್ಲ ಜನಾಂಗಗಳಲ್ಲೂ ಇತ್ತೆನ್ನಬಹುದು.
ಶರಣ ಪರಂಪರೆಯಲ್ಲಿ ಈ ಗುಡ್ಡೆ / ಸಮಾಧಿಗಳ ಮೇಲೆ ಲಿಂಗ ಸ್ಥಾಪಿಸಿದರು. ಲಿಂಗೈಕ್ಯರಾದರು ಎಂಬ ಕಲ್ಪನೆಯೂ ಜನ್ಮ ತಾಳಿತು. ಆಮೇಲೆ ಲಿಂಗದ ಮುಂದೆ ಒಂದು ಬಸವನನ್ನೂ ಪ್ರತಿಷ್ಠಾಪನೆ ಮಾಡುವರು. ಮುಂದೆ ಬರು ಬರುತ್ತಾ ಇವುಗಳಿಗೆ ಗುಡಿಗೋಪುರಗಳನ್ನು ಕಟ್ಟಿದಾಗ ಅವೇ ಶಿವಾಲಯಗಳಾಗಿ ತೋರಿಬಂದವು. ಇವುಗಳ ಸುತ್ತ ಮಠಗಳೂ ಬೆಳೆದವು.
ಶರಣರ ಸಮಾಧಿಯ ಮೇಲೆ ಒಂದು ಚಪ್ಪಡಿ ಹಾಕಿ ಅದರ ಮೇಲೆ ಒಂದು ಕಂಬವನ್ನು ಸ್ಥಾಪಿಸುವುದಕ್ಕೆ ಗದ್ದುಗೆ ಎನ್ನುವರು. ಕರ್ನಾಟಕದ ಹೆಚ್ಚಿನೆಲ್ಲಾ ಶಿವನ ಗುಡಿಗಳು ಶರಣರ ಗದ್ದುಗೆಗಳೇ ಎನ್ನಬಹುದು. ಶರಣರು - ಅಮರತ್ವ ಹೊಂದಿದಾಗ ಅವರನ್ನು “ನಿರ್ವಯಲಾದರು” ಎಂದು ಹೇಳಿ ಸಮಾಧಿ ಮಾಡುವರು. ಈ ಗುಡ್ಡೆಗಳೇ ಗದ್ದುಗೆಗಳು.
ಗದ್ದುಗೆ ಲಿಂಗಾಯತ ಧರ್ಮದ ವಿಶಿಷ್ಟ ಸಂಪ್ರದಾಯ. ಇಲ್ಲಿ ಗದ್ದುಗೆ ಎಂದರೆ ಸಮಾಧಿ ಎಂದು ಕೂಡ ಆಗುವುದು. ಲಿಂಗೈಕ್ಯರಾದಾಗ ದೇಹವನ್ನು ಹೂಳಿದ ಮೇಲೆ ಆ ಜಾಗದಲ್ಲಿ ಗುಡ್ಡೆ ಮಾಡುವುದರಿಂದ ಅದು ಎತ್ತರದ ಜಾಗವಾಗುವುದು. "ಗುಡ್ಡೆ ಪೂಜೆ" ಎಂಬ ಆಚರಣೆಯೇ ಇದೆ. ಗುಡ್ಡೆ ಪೂಜೆ ಎಂದರೆ ಗದ್ದುಗೆ ಪೂಜೆಯೇ. ಈ ಅರ್ಥದಲ್ಲಿ ಗದ್ದುಗೆ ಎಂದರೆ ಗುಡ್ಡೆ, ಸಮಾಧಿ ಆಗುವುದು.
ಇಷ್ಟಲಿಂಗಪೂಜೆ ಮತ್ತು ಗುಡ್ಡೆಪೂಜೆ ಲಿಂಗಾಯತರಲ್ಲಿ ಬರುವ ಎರಡು ಮುಖ್ಯ ನಡಾವಳಿಗಳು.
ಗದ್ದುಗೆ ಪದಕ್ಕೆ ಸ್ಥೂಲವಾಗಿ ಎರಡು ಅರ್ಥ ಹೇಳಬಹುದು.(1)ಕುಳ್ಳಿತುಕೊಳ್ಳುವ ಎತ್ತರದಲ್ಲಿನ ಆಸನ ಮತ್ತು (2)ಸಮಾಧಿ (ಮಣ್ಣು ಮಾಡಿದ ಗುಡ್ಡೆ). ಸಮಾಧಿ ಎಂದು ತೆಗೆದುಕೊಂಡರೆ ಗದ್ದುಗೆಗಳಲ್ಲಿ ಮತ್ತೆ ಮುಖ್ಯವಾಗಿ ಮೂಲಗದ್ದುಗೆ ಮತ್ತು ತೋರುಗದ್ದಿಗೆ ಎಂದು ಎರಡು ವಿಭಾಗ ಮಾಡಬಹುದು. ಎಲ್ಲವನ್ನೂ ಸೇರಿಸಿದರೆ ನಾಲಕ್ಕು ತೆರನ ಗದ್ದಿಗೆಗಳಿವೆ.
1. ಉರಿಗದ್ದುಗೆ : ಶರಣರು ಕುಳಿತುಕೊಳ್ಳುವ ಪವಿತ್ರ ಸ್ಥಾನ / ಆಸನ / seat. ಇದರ ಮೇಲೆ ಭತ್ತವೋ, ಜೀರಿಗೆಯನ್ನೋ ಎಸೆದರೆ ಅವು ಅವಲಾಗುತ್ತವೆ ಎಂದು ಹೇಳುವರು. ಇದರ ಮೇಲೆ ಗುರುಗಳು ಕುಳಿತು ತಮ್ಮ ಪೀಠದ ಕರ್ತವ್ಯವನ್ನು ನೆರವೇರಿಸುವರು. ಇದು ಭಕ್ತಾದಿಗಳು ಕುಳಿತುಕೊಳ್ಳುವುದಕ್ಕಿಂತ ಎತ್ತರದಲ್ಲಿರುತ್ತದೆ. ಇದರ ವಿನ್ಯಾಸ ಹೀಗೇ ಇರಬೇಕೆಂಬ ನಿಯಮವಿಲ್ಲ. ಇದನ್ನು ಯಾರೂ ತುಳಿಯುವುದಿಲ್ಲ. ಇದು ಗುರುಗಳ ಮಹತ್ತನ್ನು ಎತ್ತಿ ಹಿಡಿಯುತ್ತದೆ. ಭಕ್ತಾದಿಗಳು ಪೂಜ್ಯಬಾವನೆಯಿಂದ ಪೂಜಿಸುವರು.
2. ಮೂಲಗದ್ದುಗೆ / ಕರ್ತೃಗದ್ದುಗೆ : ಇವು ನಿಜಸಮಾಧಿಗಳು. ಶರಣರು ಲಿಂಗೈಕ್ಯರಾದ ಮೇಲೆ ಹೂಳಿದ ಸ್ಥಲದ ಮೇಲೆ ಲಿಂಗವನಿಟ್ಟು ಕಟ್ಟಿದ ಕಟ್ಟೆ / ಗದ್ದಿಗೆ.
3. ಜಲಗದ್ದುಗೆ: ಕೆಲವು ಶರಣರು “ಜಲ ಸಮಾಧಿ' ಹೊಂದುವುದೂ ಉಂಟು. ಸಿದ್ಧರಾಮೇಶ್ವರರು ಕೆರೆಯಲ್ಲಿ ಐಕ್ಕನಾದರೆ, ಬಸವಣ್ಣನವರು ಕೂಡಲ ಸಂಗಮದಲ್ಲಿ ಐಕ್ಕವಾದರು. ಮಲೆಯ ಮಾದೇಶ್ವರರೂ ಹಾಗೆಯೇ ಜಲೈಕ್ಯರಾದರು ಎಂಬುದು ಕಂಸಾಳೆ ಗುಡ್ಡರ ಅಭಿಪ್ರಾಯ. ಇಲ್ಲಿ ಇವುಗಳ ಮೇಲೆ ಸೋಪಾನಗಳನ್ನು ನಿರ್ಮಿಸಿ ಗುಡಿಗೋಪುರಗಳನ್ನು ಕಟ್ಟಿದ್ದಾರೆ. ಜನಪದ ಕವಿಗಳು ಜಲಗದ್ದುಗೆಯನ್ನು “ಪಾತಾಳಬಾವಿ" ಎಂದೂ ಕರೆಯುವರು. ಇವುಗಳು ಕೂಡ ಮೂಲಗದ್ದುಗೆಗಳೇ.
ಸಿದ್ದರಾಮೇಶ್ವರ, ರೇವಣಸಿದ್ದೇಶ್ವರ, ಮರುಳಸಿದ್ದೇಶ್ವರ, ಮಾದೇಶ್ವರ, ತೋಂಟದ ಸಿದ್ಧಲಿಂಗೇಶ್ವರ ಮುಂತಾದ ಶರಣರ ನೂರಾರು ಸಾವಿರಾರು ಗದ್ದುಗೆಗಳನ್ನು ಅನೇಕ ಸ್ಥಳಗಳಲ್ಲಿ ಕಾಣಬಹುದು. ಸಿದ್ದರಾಮೇಶ್ವರ ರವು ನಾಡಿನಾದ್ಯಂತ ಒಟ್ಟು 72 ಗದ್ದುಗೆಗಳಿವೆ ಎನ್ನುವರು. ಕೆಲವೊಮ್ಮೆ ಮೂರು ಬೇರೆ ಶರಣರ ಗದ್ದುಗೆಗಳು ಒಂದೇ ಕಡೆ ಇರುತ್ತವೆ. ಉದಾಹರಣೆಗೆ ಅಜ್ಜಂಪುರದ ಬಳಿಯ ಸೊಲ್ಲಾಪುರದಲ್ಲಿ ಚನ್ನಬಸವೇಶ್ವರ - ಸಿದ್ದರಾಮೇಶ್ವರ - ಪ್ರಭುದೇವರುಗಳು (ಗುರು - ಭಕ್ತ - ವಿರಕ್ತ) ಜೊತೆಗಿರುವರು.