ಏನ ಬಂದಿರಿ, ಹದುಳವಿದ್ದಿರೆ? ಎಂದರೆ ನಿಮ್ಮೈಸಿರಿ ಹಾರಿಹೋಹುದೆ?
ʼಕುಳ್ಳಿರೆಂದರೆʼ ನೆಲ ಕುಳಿಹೋಹುದೆ?
ಒಡನೆ ನುಡಿದರೆ ಶಿರ-ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮದೇವನು.
-- ಬಸವಣ್ಣ - Basavanna
ಹೊಸತಾಗಿ ಜನ ಸಿಕ್ಕಾಗ ನಾವು greet ಮಾಡುವುದೇ ಹೀಗೆ, "ಏನ್ರೀ, ಹೇಗಿದೀರ, ಏನ್ಸಮಾಚಾರ" ಅಂತ. ಏನು + ರೀ > ಏನುರೀ > ಏನ್ರೀ. ಏನೀ / ಏನ ಕೂಡ ಇದೇ ಸಾಲಿನ ಪದ.
೧. ಯಾರಾದರೂ ನೋಡಲು / ಮಾತಾಡಿಸಲು ಬಂದಾಗ, ದಾರಿಯಲ್ಲಿ ಸಿಕ್ಕಾಗ, ಕಡೇ ಪಕ್ಷ "ಏನು ಬಂದಿರಿ, ಹೇಗಿದೀರ, ಚೆನ್ನಾಗಿದೀರ, ಎಲ್ಲವೂ ಸರಿಯಾಗಿ (ಹದುಳ) ವಾಗಿದೆಯೇ, ನಿಮ್ ಕಡೆ ಮಳೆ ಬೆಳೆ ಹೇಗೆ?" ಎಂದು ಕೇಳುವುದಕ್ಕೂ ಕೆಲವರು ಹಿಂದೆ ಮುಂದೆ ನೋಡುವರು. ಕೇಳಿದರೆ ಅವರ ಐಸಿರಿ (ಐಶ್ವರ್ಯ) ಹಾರಿ ಹೋಗದು.
೨. ದೂರದಿಂದ ನೋಡಲು ಬಂದವರನ್ನು (ದಣಿದು ಬಂದಿರಬಹುದು) ನಿಲ್ಲಿಸಿಯೇ ಮಾತಾಡಿಸುವುದು ಅಗೌರವ ಎಂಬುದೇ ಜನಪದರ ತಿಳುವಳಿಕೆ. ಬಂದವರಿಗೆ ರಾಜೋಪಚಾರ ಆ ಕಡೆ ಇರಲಿ, ಕಡೇ ಪಕ್ಷ ಬಂದವರನ್ನು ಕುಳಿತುಕೊಳ್ಳಿ ಎಂದಾದರೂ ಕೇಳಬೇಕು. ಕೂರಿ ಎಂದು ಕೇಳಿದರೆ ತಾವು ಕುಳಿತ ನೆಲದಲ್ಲೇನೂ ಕುಳಿ (ಗುಂಡಿ, ತಗ್ಗು) ಬೀಳದು, ನೆಲವೇನೂ ಕುಸಿದುಹೋಗದು!
೩. ಕೇಳಿದ "ಕೂಡಲೇ" ಮರು ನುಡಿಯಲೂ ಕೆಲವರಿಗೆ ಆಲಸ್ಯ, ಉಡಾಫೆ, ನಾನ್ಯಾಕೆ ಉತ್ತರಿಸಬೇಕು ಎಂಬ ಸೊಕ್ಕು, ನಾನೆಲ್ಲಿ ಕೀಳಾಗ್ತೀನೋ ಅನ್ನೋ ಕೀಳರಿಮೆ. ಒಡನೆ / ಕೂಡಲೇ ಮರು ನುಡಿದರೆ ತನ್ನ ತಲೆಯೂ ಸಿಡಿಯದು, ಹೊಟ್ಟೆಯೂ ಸೀಳದು!
೩. ಬಂದವರಿಗೆ / ಕೇಳಿದವರಿಗೆ ಒಂದುಕಡೆ ಏನನ್ನೂ ಕೊಡಲಾಗದಿದ್ದರೂ ಪರವಾಗಿಲ್ಲ, ಒಳ್ಳೆಯ ಗುಣವಾದರೂ (ಏನ್ರೀ ಹದುಳವೇ ಎಂಬ ಮಾತು, ಕೂರಿ ಎಂಬ ನಲ್ ನಡವಳಿಕೆ, ಕೇಳಿದ ಮಾತಿಗೆ ಕೂಡಲೇ ಮರುನುಡಿಯುವ ಸೌಜನ್ಯ) ಇರಬೇಕು. ಈ ಗುಣ ಇರದಿದ್ದರೆ ಅಂತವರನ್ನು ಕೆಡವಿ ಮೂಗ ಕೊಯ್ವ ಕೂಡಲಸಂಗಯ್ಯ ಎನ್ನುವರು ಬಸವಣ್ಣ.
These are minimum expections from a human being. ಈ ಗುಣಗಳು ಎಲ್ಲ ಮನುಷ್ಯರಿಗೂ ಇರಲೇ ಬೇಕು. ಸ್ವಸ್ತಸಮಾಜಕ್ಕೆ ಸ್ವಸ್ಥ ಮನಗಳು ಬೇಕು. ಬಸವಣ್ಣ ಕಟ್ಟಿದ ಸ್ವಸ್ಥ ಸಮಾಜದ ಬೇರುಗಳು ಈ ಗುಣಗಳು.
ಪದಗಳ ಬಗ್ಗೆ:
ಪದ / ಹದ ಗಳೆರಡೂ ಒಂದೇ. ಹಳಗನ್ನಡದ ಪದವೇ ನಡುಗನ್ನಡದ ನಂತರ ಹದ ವಾಗಿದೆ. ಅಚ್ಚಗನ್ನಡ ಪದ.
ಪದ : proper or good state or condition, proper degree or temperature, the seasoning of any food, the right degree of ripeness, keenness of edge or sharpness;
ಪದನು/ ಹದನು: properness, etc.;
ಬಳಕೆ: ಹದ ಮಾಡಿದ ಮಜ್ಜಿಗೆ:
ಪದುಳ : well-being, prosperity, happiness, tranquillity, security, safety; ಪದುಳಿಗ : A happy man; ಪದುಳೀರ್ : to cheer up, become tranquil; ಪದುಳಿಸು: to become well or happy, be calmed or soothed, feel refreshed, recover one's strength;
ಸುಶ್ರುತ ಆರೋಗ್ಯದ ಬಗ್ಗೆ ಈತರ ಹೇಳುತ್ತಾನೆ.
ಸಮದೋಷಃ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ
ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ
ಮೂರು ದೋಷಗಳು, ಹದಿಮೂರು ಅಗ್ನಿಗಳು, ಏಳು ಧಾತುಗಳು ಸರಿಯಾದ ಪ್ರಮಾಣದಲ್ಲಿ ಇರಬೇಕು. ಹೊರಹೋಗುವುದು, ಹತ್ತು ಇಂದ್ರಿಯಗಳು, ಮನಸ್ಸು ಪ್ರಸನ್ನ / ತಿಳಿಯಾಗಿರಬೇಕು. ಇದನ್ನು ಸ್ವಸ್ಥ (~ ಸ್ವಃ + ತ - ತನ್ನ ಸಹಜ ನೆಲೆಯಲ್ಲಿರುವುದು) ಎನ್ನುವರು. ಸ್ವಸ್ಥ ವಾಗಿರುವಿಕೆಯೇ ಸ್ವಾಸ್ಥ್ಯ.
Health ಗೆ #ಹದುಳ ಅಚ್ಚಗನ್ನಡ ಪದ. ಎಲ್ಲವೂ ಹದವಾಗಿರುವುದೇ (ಎಷ್ಟು ಇರಬೇಕೋ ಅಷ್ಟು ಮಾತ್ರ - ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ) ಆರೋಗ್ಯ ಎನ್ನುವುದು ಭಾರತೀಯರ ಕಲ್ಪನೆ. ಹದುಳ ಎಂದರೂ ಇದೇ. ಎಲ್ಲವೂ ಹದವಾಗಿ (ಸಮ ಸ್ಥಿತಿಯಲ್ಲಿ) ಇರುವುದು.