ಹೊರಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಾಗದನ್ನಕ್ಕ?
ಮಣಿಯ ಕಟ್ಟಿ ಏವೆನಯ್ಯಾ, ಮನ ಮುಟ್ಟದನ್ನಕ್ಕ?
ನೂರನೋದಿ ಏವೆನಯ್ಯಾ,
ನಮ್ಮ ಕೂಡಲಸಂಗಮದೇವರ ಮನಮುಟ್ಟಿ ನೆನೆಯದನ್ನಕ್ಕ?
ಶುದ್ದಿಯಿಲ್ಲದೆ ಸಂಗಯ್ಯನೊಲಿಯ! ಮನಮುಟ್ಟದೆ ಸಂಗಯ್ಯನೊಲಿಯ!! ಮನಮುಟ್ಟಿ ನೆನೆಯದೆ ಸಂಗಯ್ಯನೊಲಿಯ!!
ಆದರೆ ಇವಾವೂ ಸಾಧ್ಯವಾಗದೆ - ಶುದ್ಧಿಗಾಗಿ- ಸುಗಂಧ ಗಳಿಂದ ಹೊರಮೈಯನ್ನು ಹೂಸಿ, -ನೆನೆಯಲು- ಎಣಿಸಲು ಜಪಮಣಿ ಕೈಗೆ ಕೊರಳಿಗೆ ಮಣಿಯ ಕಟ್ಟಿ, -ಮನಮುಟ್ಟಲು- ಅಷ್ಟೋತ್ತರ ಶತನಾಮಾವಳಿ (ನೂರೆಂಟು) ಹೆಸರುಗಳನ್ನು ಓದಿ, ಏನೂ ಸಾಧನೆ ದಕ್ಕದೆ ಏಗುತ್ತಿರುವೆ. Struggling to manage. ಇವೆಲ್ಲವೂ ಬಹಿರಂಗದ ತೋರಿಕೆಗಳು.
ಸಾಧಕನ ಆತ್ಮನಿವೇದನೆ ಇಲ್ಲದೆ.
---
ಏವೆ ಎಂಬುದನ್ನು ಕನ್ನಡದ ಒಂದು #ಆಖ್ಯಾತಪ್ರತ್ಯಯ ಎಂದು ಪಟ್ಟಿಮಾಡಲಾಗಿದೆ. ಬರುತ್ತಾನೆ, ಬರುತ್ತಾವೆ, ಬರುತ್ತಾರೆ, ಬರುತ್ತೇನೆ, ಬರುತ್ತೇವೆ, ಬರುತ್ತಾಳೆ, ಬರುತ್ತೀಯ ಗಳ ಕೊನೆಗೆ ಬರುವ ಆನೆ, ಆವೆ, ಆರೆ, ಏನೆ, #ಏವೆ, ಆಳೆ, ಈಯ ಗಳು ಕನ್ನಡದಲ್ಲಿನ ಅಂತಹ ಕೆಲ ಹಿನ್ನೊಟ್ಟು ಗಳು.
ಸಂಸ್ಕೃತ ಮುಂತಾದ ಇಂಡೋಯುರೋಪಿಯನ್ ನುಡಿಗಳಲ್ಲಿ ಇಂತ ಪ್ರತ್ಯಯ ಗಳಿಗೆ ತನ್ನದೇ ಆದ ಅರ್ಥ ಇರಲ್ಲ. ಆದರೆ ಕನ್ನಡ ನುಡಿಯಲ್ಲಿ ಈ ಪ್ರತ್ಯಯ ಗಳಿಗೆ ತನ್ನದೇ ಆದರ ಹುರಳು ಇರುವುದು.
ಏವು ಏಗು ಎಗರು ಒಂದೇ ಬೇರಿನ ಅಚ್ಚಕನ್ನಡ ಪದಗಳು ಎನ್ನುವೆ.
ಎಗರು : to rise, fly, jump; ಎಗರಿಸು : to cause to rise, cause to fly, cause to jump, shoplift;
ಎಗರಿಕೆ : jumping; ಎಗು : rising, embarkation;
ಎಗಡಿಗ : up and down; ಏಳು : raise, get up
ಏವು ಎಂಬ ಪದವನ್ನು ನಾನು ಏಗು ಎಂದು ತೆಗೆದುಕೊಳ್ಳುವೆ.
ಏಗು : manage, to find ways to go on functioning; to get along somehow; to succeed in handling matters; to cope with; to manage; to struggle to manage.
ವಚನಕಾರರು ಮತ್ತೆಮತ್ತೆ ಏವೆನಯ್ಯ! ಏವೆನೇವೆನಯ್ಯಾ! ಎಂದು ಬಳಸುವರು. ಏಗುವೆನಯ್ಯಾ ಎಂದರೂ ಇದೇ ಅರ್ಥ ಬರುವುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ