ಬುಧವಾರ, ಸೆಪ್ಟೆಂಬರ್ 25, 2024

ಭವತಿ ಭಿಕ್ಷಾಂ ದೇಹಿ!

ಭವತಿ ಭಿಕ್ಷಾಂ ದೇಹಿ! ಎಂಬ ಮಾತನ್ನು ಹಳೆಯ ನಾಟಕ ಸಿನಿಮಾಗಳಲ್ಲಿ ಶಿವಯೋಗಿಗಳ ಬಾಯಲ್ಲಿ ಕೇಳೇ ಇರುತ್ತೇವೆ.  ಶಂಕರನೇ ಬ್ರಹ್ಮಕಪಾಲ ವನ್ನು ಹಿಡಿದು ಭಿಕ್ಷೆ ಬೇಡುವಂತ ಪರಿಸ್ಥಿತಿ ಬಂತು. ಕೊನೆಗೆ ಅನ್ನಪೂರ್ಣೆ ನೀಡಿದ ಭಿಕ್ಷೆಯಿಂದ ಅವನ ಭಿಕ್ಷಾಟನೆ ನಿಂತಿತು.

#ಭವತಿ : ಭವ ಎಂದರೆ ಇರುವು. ಭವತಿ ಎಂದರೆ ಆಗು, to become. ಆದರೆ ಇಲ್ಲಿ ಭವತಿ ಎನ್ನುವ ಪದದ ಹೋಲಿಕೆ "ಶ್ರೀಮತಿ" ಅನ್ನುವ ಪದದೊಂದಿಗೆ ಇದೆ. ಭವತಿ ಎಂದರೆ ಒಡತಿ,‌ lady, your ladyship, lady, ಪೂಜ್ಯೆ, ಪೂಜ್ಯಳೇ ಎಂದಾಗುವುದು.

#ದೇಹಿ : ದೇಹವುಳ್ಳದ್ದು ದೇಹಿ. ದೇಹವಿರುವ ಕಾರಣಕ್ಕೇ ಅಲ್ಲವೇ ದೇಹಿ ಎಂದು ಬೇಡುತ್ತಿರುವುದು!! ಈ ಸಂದರ್ಭದಲ್ಲಿ ಜೇಡರ ದಾಸಿಮಯ್ಯ ನ ಈ ವಚನ ನೆನಪಾಗುವುದು.
"ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ. ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ."

ಪ್ರಜಾಪತಿಯ ದ ಎಂಬ ಅಕ್ಷರ ವನ್ನು ಮನುಷ್ಯರು ದಾನ, ದೇವತೆಗಳು ದಮ (ಇಂದ್ರಿಯ ನಿಗ್ರಹ), ದಾನವರು ದಯೆ‌ ಎಂದೂ ತೆಗೆದುಕೊಂಡು ಅರ್ಥಮಾಡಿಕೊಳ್ಳುವಂತಾಯಿತು. 

ಇಲ್ಲಿನ ದೇಹಿ ಯ ಬೇರು ಬೇರೆ. ದೇಹಿ ಅನ್ನುವುದು an indeclinable used in begging alms. ದಾ ಎಂದರೆ‌ ಕೊಡು.‌ ಹಿಂದಿಯ ದೇ (ಕೊಡು) ಕೂಡ ಇದರ ಇನ್ನೊಂದು‌ ರೂಪವೆ. ದಾನ ಮತ್ತು ದೇಹಿ ಒಂದೇ ಬೇರಿನ ಪದಗಳಾಗಿರಲು ಸಾಧ್ಯ. ಲೇವಾದೇವಿ ಯಲ್ಲಿನ ದೇವಿ ಇದೇ ದೇಹಿ. 

#ಭಿಕ್ಷೆ : ೧. Asking, begging, soliciting, ೨. anything given as alms, alms; ೩. Wages, hire. ೪. Service. ೫. A means of subsistence, ಬದುಕಿರಲು ಬಳಸುತ್ತಿದ್ದ ದಾರಿ. ಭಿಕ್ಷು, ಭಿಕ್ಷಾಟನೆ, ಭಿಕ್ಷಾನ್ನ, ಭಿಕ್ಷಾರ್ಥಿ, ಭಿಕ್ಷಾಪಾತ್ರೆ, ಭಿಕ್ಷಾವೃತ್ತಿ  ಮುಂತಾದ ಪದಗಳಿವೆ.

ಸಂಸ್ಕೃತ ಮತ್ತು ಇಂಗ್ಲಿಷ್ ಗಳು ಒಂದೇ ನುಡಿಗುಂಪಿಗೆ ಸೇರಿದ ನುಡಿಗಳು. ಸಂಸ್ಕೃತದ "ಭಿಕ್ಷ್" ಮತ್ತು ಇಂಗ್ಲಿಷ್ ನ "beg" ಒಂದೇ ಬೇರಿನವು. ಎರಡಕ್ಕೂ "ಭೆಗ್ / ಭೆಕ್" ಎಂಬ ಒಂದೇ ಬೇರಿದೆ.

ಕನ್ನಡದಲ್ಲಿ ಭಿಕ್ಷ್ ಎಂದರೆ "ಬೇಡು", ಭಿಕ್ಷೆ ಎಂದರೆ "ಬೇಡಿದ ಅನ್ನ".

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ