ಆತ್ಮ / ಪರಮಾತ್ಮ ನಿಜವಾಗಿಯೂ ಇದೆಯಾ? , ಅನ್ನೋ ಪ್ರಶ್ನೆಗಳು ಅನೇಕರಿಗೆ ಎದ್ದಿವೆ. ಶರಣರು ಈ ಬಗ್ಗೆ ಏನು ಹೇಳ್ತಾರೆ ಅಂತ ಒಮ್ಮೆ ಗಮನ ಹರಿಸಿದಾಗ ನನಗೆ ಕಂಡ ಕೆಲವು ವಚನಗಳನ್ನು ಇಲ್ಲಿ ಬರೆಯುತ್ತಾ ಇದ್ದೇನೆ
ಸುಲಿದ ಬಾಳೆ ಹಣ್ಣಿನಂತಹ ಕನ್ನಡದಲ್ಲಿರುವ ಈ ವಚನಗಳು self explanatory . ನಮ್ಮ ಸೀಮಿತ ಅರಿವಿನ ವ್ಯಾಪ್ತಿಯಲ್ಲಿ ಈ ವಚನಗಳನ್ನು ಅರ್ಥ ಮಾಡಿಕೊಂಡರೆ .. ಅವು ಅರ್ಥವಾಗುವುದಕ್ಕಿಂತ ಅಪಾರ್ಥವಾಗುವ ಸಂಭವವೇ ಹೆಚ್ಚು. ಆದರೂ ಈ ವಚನಗಳು ನಮಗೆ ಅವರ ಚಿಂತನೆಯ ಬಗ್ಗೆ ಸ್ವಲ್ಪ ವಾದರೂ ಸುಳಿವನ್ನು ಕೊಡುವುದಾದರೆ ಅದಕ್ಕಿಂತ ಹೆಚ್ಚಿನ ಭಾಗ್ಯವೇನಿಲ್ಲ .
ನನಗೆ ಇಲ್ಲಿ ಶರಣರ ವಚನಗಳು ಏಕೆ ಮುಖ್ಯವಾಗಿತ್ತೆ ಅಂದ್ರೆ ಆವ್ರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಋುಷಿಗಳು. ( ಋಷಿ=ಸತ್ಯವನ್ನು ಅರಸುವವ=seer). ಅವರಲ್ಲಿ ನಾನು ಎಲ್ಲಿಯೂ ಕುರುಡು ಭಕ್ತಿ / ನಂಬಿಕೆಯನ್ನು ಕಂಡಿಲ್ಲ.
1. ಉಂಟೆಂದಡುಂಟು, ಇಲ್ಲ ಎಂದಡೆ, ಅದು ತನ್ನ ವಿಶ್ವಾಸದ ಭಾವ ,
ತನಗೆ ಅನ್ಯಭಿನ್ನವಿಲ್ಲ, ಅರ್ಕೇಶ್ವರ ಲಿಂಗ ತಾನಾದ ಕಾರಣ
.......ಮಧುವಯ್ಯ
2.ಉಂಟೆಂಬ ವಸ್ತು ಇಲ್ಲೆಂಬ ಪ್ರಮಾಣ ಬಹುದು
ಆಚಾರಕ್ಕಿಕ್ಕುವುದಿದು ಭಕ್ತಿಯೆ?
ಉಂಟೆಂಬ ಉಧ್ಭಾವಿಯಲ್ಲ, ಇಲ್ಲೆಂಬ ನಿರ್ಭಾವಿಯಲ್ಲ,
ಇದು ಕಾರಣ ಕೂಡಲಚೆನ್ನಸಂಗಾ
ಸಜ್ಜನ ಶುದ್ದ ಶಿವಾಚಾರಿಗಲ್ಲದೇ ಲಿಂಗೈಕ್ಯವಳವಡದು.
.......ಚೆನ್ನಬಸವಣ್ಣ
3. ಉಂಟೆಂಬಲ್ಲಿಯೇ ಜ್ಞಾನಕ್ಕೆ ದೂರ ; ಇಲ್ಲಾ ಎಂಬಲ್ಲಿಯೇ ಸಮಯಕ್ಕೆ ದೂರ;
ತನುವಿಗೆ ಬಂದ ಪ್ರಾಪ್ತಿಯ ಅನುಭವಿಸುವುದಕ್ಕೆ ಒಡಲಾಯಿತ್ತು
ಪ್ರಾಪ್ತಿಯನುಮ್ಬುದು ಘಟವೋ, ಆತ್ಮನೋ?
ಒಂದನಹುದು, ಒಂದನಲ್ಲಾ ಎನಬಾರದು
ಇಲ್ಲಾ ಎಂದಡೆ ಕ್ರೀವಂತರಿಗೆ ಭಿನ್ನ; ಅಹುದೆಂದಡೆ ಆರಿದಾತಂಗೆ ವಿರೋಧ
ತೆರಪಿಲ್ಲದ ಘನವ ಉಪಮಿಸಲಿಲ್ಲ
ಕಾಮ ಧೂಮ ಧೂಳೇಶ್ವರನ ಮುಂದೆ ಹೋಗಲಿಲ್ಲ , ಹಿಂದೆ ಉಳಿಯಲಿಲ್ಲ.
.......ಧೂಳಯ್ಯ
4.ಉಂಟೆಂಬುದು ಭಾವದ ನೆಂಬುಗೆ, ಇಲ್ಲ ಎಂಬುದು ಚಿತ್ತದ ಪ್ರಕೃತಿ
ಉಭಯಾನಾಮ ನಷ್ಟವಾಗಿ ನಿಂದುಳುಮೆ
ಐಘಟದೂರ ರಾಮೇಶ್ವರಲಿಂಗ ಇಕ್ಕಿದ ಗೊತ್ತು.
.......ಮಿಂಡಯ್ಯ
5. ಉಂಟು ಇಲ್ಲಾ ಎಂಬುನರಿತು ನುಡಿವುದು ಕ್ರೀಯೋ? ನಿಃಕ್ರೀಯೋ ?
ಇವೆಲ್ಲವನರಿತು ನುಡಿವುದು ಘಟದೊಳಗಣ ಮಾತಲ್ಲದೇ ಅದು ಮಾಯಾವಾದದ ಇರವು,
ಭಾವಕಾಯವಲ್ಲಿ ಸಿಕ್ಕಿ ಸಕಲವನಡೊಗೂಡಿ ಭೋಗಂಗಳನುಣುತ
ನಾನಲ್ಲ ಎಂಬ ಮಾಯಾವಾದಿಗಳ ಮಾತು
ಕನ್ನದ ಬಾಯಲ್ಲಿ ಸಿಕ್ಕಿದ ಕಳ್ಳನ ಬಾಯಾಲಿನಂತೆ ಬಲ್ಲವರು ಮೆಚ್ಚುವರೆ?
ಶರೀರವುಳ್ಳನ್ನಕ್ಕ ಇಷ್ಟಪ್ರಾಣ ಮುಕ್ತನಾಗಬೇಕು
ಇದೆ ನಿಶ್ಚಯ , ಸದಾಶಿವಮೂರ್ತಿ ಲಿಂಗವನರಿವುದಕ್ಕೆ.
....... ಮಾರಿತನ್ದೆ
6.ಉಂಟು ಉಂಟೆಂಬನ್ನಕ್ಕ ಸಂದೇಹಕ್ಕೀಡಾಗದೆ ,
ಇಲ್ಲಾ ಇಲ್ಲಾ ಎಂದು ಶೂನ್ಯಕ್ಕೊಳಗಾಗದೆ
ಇಂತೀ ಕ್ರೀಯ ಒಳಗಿನಲ್ಲಿ, ನಿಃಕ್ರೀಯ ತೆರಪಿನಲ್ಲಿ ,
ಉಭಯಚಕ್ಷು ಒಡಗೂಡಿ ಕಾಬಂತೆ ,
ನೋಡುವುದು , ಉಭಯ ನೋಡಿಸಿಕೊಂಬುದು ಒಂದೇ
ಕ್ರೀಯಲ್ಲಿ ಇಷ್ಟ , ಅರಿವಿನಲ್ಲಿ ಸ್ವಸ್ಥ
ಈ ಉಭಯ ನೀನಾಹನ್ನಕ್ಕ ದೃಷ್ಟವಾದೆಯಲ್ಲ ,
ನಿಃಕಳಂಕ ಮಲ್ಲಿಕಾರ್ಜುನಾ .
....... ಮಾರಯ್ಯ
7. ಉಂಟಾದುದು ಉಂಟೆ? ಉಂಟಾದುದನಿಲ್ಲವೆಂಬುದು ಮಿಥ್ಯೆ
ಅದು ತಾ ನಾಮ ರೂಪು ಕ್ರಿಯೆ ಇಲ್ಲವಾಗಿ ಇಲ್ಲ
ಇಲ್ಲವಾದುದನುಂಟೆಂದಡೆ ಘಟಿಸದು ,
ಉಂಟು ಇಲ್ಲವೆಂಬ ಉಳುಮೆಯಿಲ್ಲದೆ ನಿಜ ತಾನೇ , ಸೌರಾಷ್ಟ್ರ ಸೋಮೆಶ್ವರ
.......ಅದಯ್ಯ
೮. ಕಂಡೆ ಕಾಣೆನೆಂಬುದು ಕಂಗಳ ಭ್ರಮೆ
ಕೂಡಿದೆನಗಲಿದೆ ನೆಂಬುದು ಕಾಯದ ಭ್ರಮೆ
ಅರಿದೆನ್ ಅರಿಯದೆನೆಂಬುದು ಚಿದೋಹಂ ಭ್ರಮೆ
ಓದುವೆದಂಗಳ ಜಿನುಗು ಓದು ಮನದ ಭ್ರಮೆ
ಇಹ ಪರಂಗಳನಾಸೆಗೈವುದು ಜೀವ ಭ್ರಮೆ
ಸೌರಾಷ್ಟ್ರ ಸೋಮೆಶ್ವರನ್ನೆಂಬುದು ಸಕಲ ಭ್ರಮೆ
.......ಆದಯ್ಯ
೯. ಅರಿದಡೆ ಆತ್ಮನಲ್ಲ ; ಅರಿಯದಿದ್ದಡೆ ಆತ್ಮನಲ್ಲ;
ತೋರಿತ್ತಾದಡೆ ವಿಷಯ; ತೋರದಿದ್ದಡೆ ಶೂನ್ಯವೆನಿಸುಗು ;
ಬೊಮ್ಮದ ಅರಿವಿನ್ನೆಲ್ಲಿಯದೋ ?
ಅವು ತಾನರಿವಾಗಿದ್ದು , ಸ್ವಾನುಭಾವದ ಹೊರೆಯಲ್ಲಿದ್ದು,
ಸನ್ನಿಧಿ, ನಿತ್ಯನಿಜಾನನ್ದಾತ್ಮ
ಉರಿಲಿಂಗ ಪೆದ್ಡಿ ಪ್ರಿಯ ವಿಶ್ವೇಶ್ವರನೆನ್ದರಿವುದು.
.......ಉರಿಲಿಂಗ ಪೆದ್ಡಿ
ನಾನು ಉಂಟು / ಇಲ್ಲ ಎಂಬುದರ ಬಗ್ಗೆ ಶರಣರು ಏನು ಹೇಳುತ್ತಾರೆ ಎಂಬಲ್ಲಿ ಮಾತ್ರ ಈ ವಚನಗಳಲ್ಲಿ ಗಮನಹರಿಸಿದ್ದೇನೆ. ಇವು ನನ್ನ ಕಣ್ಣಿಗೆ ಬಿದ್ದ ಕೆಲವೇ ಕೆಲವು ವಚನಗಳು.