ಅಭ್ಯಾಸವೆನ್ನ ವರ್ತಿಸಿತ್ತಯ್ಯಾ, ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ
ಅನು ನಿಮ್ಮ ಮನಂಬೊಗುವನ್ನಕ್ಕ ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ
*ಅಭ್ಯಾಸ* ಎಂಬ ಪದವು ವ್ಯಾಕರಣ/ಪುರಾಣ/ಇತಿಹಾಸ/ಆಯುರ್ವೇದ/ಮೀಮಾಂಸೆ/ಯೋಗ/ಶೈವದರ್ಶನ ಗಳೆಲ್ಲದರಲ್ಲೂ ಮತ್ತೆಮತ್ತೆ ಬಳಸುವ technical word. ಈಗಿನ ಬಳಕೆಯಲ್ಲಿ ಈ ಪದದ ಸರಳ ಹುರುಳು practice, regular habit, repetition ಮುಂತಾಗಿ ಹೇಳಬಹುದು.
ಕರ್ಮಿ,ಮುಮುಕ್ಷು, ಅಭ್ಯಾಸಿ, ಅನುಭಾವಿ, ಆರೂಡರೆಂದು ಹಲವು ತೆರನ ರನ್ನು ಸಿದ್ದರಾಮೇಶ್ವರರು ಪಟ್ಟಿ ಮಾಡುವರು. ಇವರೆಲ್ಲರೂ ಹತ್ತಿರಿಂದ ನೋಡಿದರೆ ಬೇರೆ ಬೇರೆಯೇ ಮತ್ತು ಇವರೆಲ್ಲ ಮುಕ್ತಿಯ ಮಾರ್ಗದಲ್ಲಿ ಕ್ರಮವಾಗಿ ಜೋಡಿಸಲ್ಪಟ್ಟವರು.
ಈ ವಚನವು ಬಸವಣ್ಣನ #ಆತ್ಮನಿವೇದನೆ ಯ ವಚನಗಳಲ್ಲೊಂದು. Practitioner ಹಂತದಲ್ಲಿದ್ದಾಗ ಬಸವಣ್ಣ ತಾನು ಪಟ್ಟ ತೊಳಲಾಟವನ್ನು ಈ ವಚನದಲ್ಲಿ ಹಿಡಿದಿಟ್ಟು ಕೊಟ್ಟಿದ್ದಾನೆ ಎನ್ನುವೆ. ಶರಣಮಾರ್ಗದ ಮೊದಲ ಹಂತವಾದ ಭಕ್ತಿ ಸಾಧನೆಯೇ ತನ್ನ ಕೈಲಿ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ತೊಳಲಾಟ ಇಲ್ಲಿದೆ. ಈಗಿನ ಕಾಲದ, ಸಾಧನೆಯ ದಾರಿಯಲ್ಲಿನ ಭಕ್ತರಿಗೆ ಬಸವಣ್ಣ ನಡೆದ ದಾರಿಯ ಅನುಭವಗಳು ದಾರಿದೀಪಗಳು.
ಮನಂ + ಪೊಗು > ಮನಂಬೊಗು ~ ಮನಂಬುಗು;
ಹುಗಿ/ಪುಗಿ, ಹೊಕ್ಕು / ಪೊಕ್ಕು ಹೊಗು /ಪೊಗು ಇವೆಲ್ಲವೂ ಒಂದೇ ಬೇರಿನ ಪದಗಳು. ಮನಂಬೊಗು ಎಂದರೆ ಮನಸ್ಸಿಗೆ ನಾಟುವುದು, ಮನಸ್ಸಿಗೆ ಇಳಿಯುವುದು, ಮನಸ್ಸಿಗೆ ಹೊಕ್ಕುವುದು. ಸಂಗಯ್ಯ-ಬಸವಯ್ಯರು ಒಬ್ಬರಮನದೊಳಗಿನ್ನೊಬ್ಬರಾಗದೆ ಈ ಕಾಯಗುಣಗಳು ಕಳೆಯವು.
ಶರಣರು ಕಾಯಗುಣ-ಜೀವಗುಣ ಗಳ ಬಗ್ಗೆ ಮತ್ತೆಮತ್ತೆ ಮಾತಾಡುವರು. ಮತ್ತು ಬಯಲಿಗೆ ಇವುಗಳ ಅಳಿವು ಮುಖ್ಯವೆನ್ನುವರು. "ಬೇಕೆಂಬುದು ಕಾಯಗುಣ" ಎನ್ನುವರು ಚನ್ನಬಸವಣ್ಣ. "ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ - ಜೀವಗುಣದಿಂದ ಭವಕ್ಕೆ ಬೀಜವಾಗಿ" ಎನ್ನವರು ನಿಜಗುಣ ಶಿವಯೋಗಿಗಳು. "ಶರಣಸತಿ ಲಿಂಗಪತಿಯಾದಲ್ಲಿಯೆ ಕಾಯಗುಣ ನಿಂದಿತ್ತು - ಆತ್ಮಸತಿ ಅರಿವು ಪುರುಷನಾದಲ್ಲಿಯೇ ಜೀವಗುಣ ನಿಂದಿತ್ತು." ಎನ್ನವನು ಢಕ್ಕೆಯ ಬೊಮ್ಮಣ್ಣ. ಕಾಯಗುಣವಳಿದು ಕಾಯ ಲಿಂಗವಾಗುವುದು.
ಇಂತ ಕಾಯಗುಣವಳಿದವರ ತೋರಾ, ಅವರಿಗೆ ಶರಣೆಂಬೆ ಎಂಬ ಮಾತು ಬಸವಣ್ಣನವರದ್ದು. ಇಂತವರನ್ನು ಆರಿಸಿ ಆರಿಸಿಕೊಂಡು ಸೇರಿಸಿಕೊಂಡೇ ಬಸವಣ್ಣ #ಅನುಭವಮಂಟಪ ಕಟ್ಟಿದ್ದು ಮತ್ತು #ಅನುಭಾವಿ ಗಳನ್ನು ಹುಟ್ಟುಹಾಕಿದ್ದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ