ಶನಿವಾರ, ಸೆಪ್ಟೆಂಬರ್ 28, 2024

ಪರಿಮಳ ಬುದ್ದಿ ದೇಗುಲ ಓಡಿತ್ತ ಕಂಡೆ! - ಪ್ರಭುದೇವರು

ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ! 
ಇದೇನು ಸೋಜಿಗ ಹೇಳಾ? ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ, 
ದೇವ ಬಂದಡೆ ದೇಗುಲ ಓಡಿತ್ತ ಕಂಡೆ, ಗುಹೇಶ್ವರಾ. 
                                           --- #ಅಲ್ಲಮಪ್ರಭು ಗಳು.
--
ವಾಚ್ಯಾರ್ಥ:  ತುಂಬಿ ಎಂದರೆ ದುಂಬಿ ಎಂದು. ತುಂಬಿ ಬಂದರೆ ಪರಿಮಳ ಹೇಗೆ ಓಡುವುದು? ಮನವು ಬಂದಡೆ ಬುದ್ದಿ ಓಡುವುದು ಎಂದರೆ ಏನು? ಎಲ್ಲಿಗೆ ಓಡುವುದು? ದೇವ ಬಂದರೆ ದೇಗುಲ ಎಲ್ಲಿಗೆ ಯಾಕೆ ಹೇಗೆ ಓಡುವುದು? ಮೇಲ್ನೋಟಕ್ಕೆ ಏನೂ ಅರ್ಥವಾಗದು.

ಈ ಬೆಡಗಿನ ವಚನವನ್ನು ಕೆಳಗಿನ ತರ ಅರ್ಥಮಾಡ್ಕೊಳ್ಳಬಹುದು.

೧. ತುಂಬಿ ಬಂದರೆ ಪರಿಪಳ ಓಡಿತ್ತು: "
ತುಂಬು, ಪರಿಪೂರ್ಣ, complete ಎಲ್ಲವೂ ಒಂದೇ ಹುರುಳಿನ ಪದಗಳು.
"ತುಂಬಿ ಬರುವುದು" ಎಂದರೆ ಪರಿಪೂರ್ಣರಾಗುವುದು. ಪರಿಮಳ ಎಂದರೆ ದೇಹವಾಸನೆ, ಭವವಾಸನೆ, ಹಳೆಯ ಜನ್ಮದ ವಾಸನೆಗಳು, ನಮ್ಮನ್ನು ಭವಕ್ಕೆ ಅಂಟಿಸಿರುವ ವಾಸನೆಗಳು. ಶಿವಗುಣಗಳು ಪರಿಪೂರ್ಣವಾಗಿ ಅಳವಟ್ಟರೆ ದೇಹವಾಸನೆ ಓಡಿಹೋಗುವುದು. 

"ಸಮತೆಯೆಂಬ ಕಂಥೆ, ಅಮಿತವೆಂಬ ಭಸ್ಮ, ಲಿಂಗವೆಂಬ ಕರ್ಪರ, ಸರ್ವಜೀವದಯಾಪಾರಿ ಎಂಬ ವಿಮಲರುದ್ರಾಕ್ಷಿ, ನಿರ್ಮೋಹವೆಂಬ ಕೌಪೀನ, ನಿಸ್ಸಂದೇಹವೆಂಬ ಮೇಖಲಾ" ಹೊದ್ದವನು "#ಪರಿಪೂರ್ಣ ನೋಡಾ ನಮ್ಮ ಜಂಗಮನು” ಎಂಬ ಸಿದ್ಧರಾಮೇಶ್ವರದೇವರ ಉಕ್ತಿಯು ಯಾರು ಪರಿಪೂರ್ಣನು / ತುಂಬಿದವನು ಎಂಬ ಪದಕ್ಕೆ ವಿವರಣೆ ನೀಡುವುದು.‌‌ 

ಜಂಗಮಮೂರ್ತಿಯು ಅಂಗಗುಣಗಳ ಭಂಗಿಸಿ "ಲಿಂಗಗುಣ ಗಳನ್ನು ಆಂಗವಿಸಿಕೊಂಡ ಕೂಡಲಸಂಗಮವಾಗಬೇಕು". ಸರ್ವಾಂಗಲಿಂಗಿಯಾಗಬೇಕು, ಸರ್ವಾಂಗ ಲಿಂಗಸಾಹಿತ್ಯ ಉಳ್ಳವರಾಗಬೇಕು. ಇಂತರವರಲ್ಲಿ ಭವವಾಸನೆ ಅಳಿದು ಶಿವವಾಸನೆ ತುಂಬಿ ತುಳುಕುವದು.

೨. ಮನ ಬಂದಡೆ ಬುದ್ದಿ ಓಡಿತ್ತು:  
"ಅತ್ತಲಿತ್ತ ಹರಿವ ಮನವ ಚಿತ್ತದಲ್ಲಿ ನಿಲಿಸಬಲ್ಲಡೆ ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು" ಎನ್ನುವ ಅನುಭಾವ ಅಲ್ಲಮರದ್ದು. ನನ್ನ ನೋಟದಲ್ಲಿ ಈ ಸಾಲು ಇಡೀ #ಷಟ್‍ಸ್ಥಲ ಸಿದ್ದಾಂತದ ಸಾರಾಂಶ. #ಶಿವಯೋಗ ದ ಪರಮಗುರಿ. ಮನಬಂದಡೆ ಎನ್ನುವ ಮಾತೂ ಇದನ್ನೇ ಸೂಚಿಸುವುದು.. ಬಚ್ಚ ಬರಿಯ‌ ಬೆಳಗಿನ ಅನುಭಾವವನ್ನು! ಬುದ್ದಿ ಅನುಮಾನವನ್ನು, ದ್ವೈತಬಿದ್ದಿಯ ಕುರಿತು. ಮನ ನಿಂದಡೆ, ನಿಷ್ಠೆ ನೆಲೆಗೊಳ್ಳುವುದು.

೩. ದೇವ ಬಂದರೆ ದೇಗುಲ ಓಡಿತ್ತು: 
ದೇವಬಂದರೆ = ಆತ್ಮಸಾಕ್ಷಾತ್ಕಾರ, 
ದೇಗುಲ ಓಡಿತ್ತು = ದೇಹಭಾವನೆಯು ಹೊರಟುಹೋಯಿತು. 

ಕಾಯ ಕೈಲಾಸವಾದ ಮೇಲೆ, ದೇಹ ದೇವಾಲಯ ವಾದ ಮೇಲೆ ಮತ್ತೆಲ್ಲಿಯ ದೇಗುಲಭಾವನೆ?! ಅಂಗವೆಲ್ಲ ಲಿಂಗವಾಗಲು ಅಂದರೆ ಸಂಗಸಮರಸವಿರಲು ದೇಹದೇಗುಲವಿರದು. ಅಂಗವು ಲಿಂಗವೇಧೆಯಾದ ಬಳಿಕ ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ? ಇದು ಕಾರಣ ಶರಣರು #ನಿರ್ದೇಹಿ ಗಳು. ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ? ಎರಡಕ್ಕೆ ಹೇಳಲಿಲ್ಲಯ್ಯಾ. ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪೆನು? ಅಂಬುಧಿಗೆ ಸೀಮೆಯಲ್ಲದೆ ಹರಿವ ನದಿಗೆ ಸೀಮೆ ಯುಂಟೇ? ಭಕ್ತಂಗೆ ಸೀಮೆಯಲ್ಲದೆ ಪರಾತ್ಪರ ಜಂಗಮಕ್ಕೆ ಸೀಮೆಯುಂಟೇ? ಕೂಡಲಸಂಗಮದೇವ.

ಮಾನವ ಭಕ್ತನಾಗುವುದು, ಭಕ್ತ ಶರಣನಾಗುವುದು ಒಂದೆರಡು ಹಂತಗಳಾದರೆ, ಮೇಲಿನದ್ದು ಶರಣ ಶಿವನಾಗುವುದು! ಬಯಲಾಗುವುದು

#ಬಯಲು, #ಬೆಡಗಿನವಚನ #ಅಲ್ಲಮ #ಅರಿವಿನಗುರು‌

ಬುಧವಾರ, ಸೆಪ್ಟೆಂಬರ್ 25, 2024

ಆನು ಮುತ್ತೈದೆ, ಆನು ನಿಟ್ಟೈದೆ!

ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು:
ಆನು ಮುತ್ತೈದೆ, ಆನು ನಿಟ್ಟೈದೆ.
ಕೂಡಲಸಂಗಯ್ಯನಂತಪ್ಪ ಎನಗೊಬ್ಬ ಗಂಡನುಂಟು!

ಬಸವಣ್ಣನವರ ಈ ವಚನದಲ್ಲಿ "ಶರಣಸತಿ-ಲಿಂಗಪತಿ" ಭಾವ ಕಾಣಬಹುದು.‌ ಶರಣಸ್ಥಲದಲ್ಲಿ ಎದ್ದು ಕಾಣುವ ಅನುಭವ ಇದು. ಮೇಲಿನ ವಚನವು ಭಕ್ತನಶರಣಸ್ತಲ ದ ವಚನ. 

ಪದಗಳ ಬಗ್ಗೆ: 
ಮುತ್ತು ಐದೆ ~ ಮುತ್ತೈದೆ  An elderly woman whose husband is alive. ಮದುವೆಯಾದ ಹೆಣ್ಣು.
ನಿಡಿದು ಐದೆ ~ ನಿಟ್ಟೈದೆ An aged woman, whose husband is alive (whose state is regarded as auspicious). - ದೀರ್ಘ ಸುಮಂಗಲೆ. 
ಗಂಡ ~ husband . ಕನ್ನಡದ ಈ ಪದ (ಗಂಡ) ಸಂಸ್ಕೃತಕ್ಕೂ ಹೋಗಿ ಕಾಂತ ನಾಗಿ ಬಳಕೆಯಲ್ಲಿದೆ.

ಮುತ್ತು, ಮುದಿ : advanced age, oldness, old age, priority; 
ಮುದುಕ / ಮುದುಕು : old man; 
ಮುದಕಿ ಮುದಿಕಿ ಮುದುಕಿ : old women
ಮುತ್ತ / ಮುದುಪ : old man; 
ಮುದು / ಮುತ್ತ್ :  mode to advance in growth, increase, become full-grown, mature, advance in years, become old; n. old age,
ಮುದುಕುತನ , ಮುಪ್ಪು :  old age;
ಮೂದೇವಿ : elder sister of Lakṣmī, goddess of misfortune. 

ನಿಡಿದು ~ ನೀಳ, ನಿಡುಪು, ಉದ್ದ, long, stretched

ಹೈದ ಹೈದೆ ಅಚ್ಚಗನ್ನಡದ ಪದಗಳು. ಇವೇ ಆಡುನುಡಿಯಲ್ಲಿ ಅಯ್ದ ಅಯ್ದೆ ಗಳಾಗಿವೆ. ಹುಡುಗ ಹುಡುಗಿ ಎಂದು ಹುರುಳು. ಅಯ್ದೆ / ಐದೆ ಎಂದರೆ a woman whose husband is alive ಎಂದು‌ ಕೂಡ.

ಮನಮುಟ್ಟದೆ ಸಂಗಯ್ಯನೊಲಿಯ

ಹೊರಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಾಗದನ್ನಕ್ಕ?
ಮಣಿಯ ಕಟ್ಟಿ ಏವೆನಯ್ಯಾ, ಮನ ಮುಟ್ಟದನ್ನಕ್ಕ?
ನೂರನೋದಿ ಏವೆನಯ್ಯಾ,
ನಮ್ಮ ಕೂಡಲಸಂಗಮದೇವರ ಮನಮುಟ್ಟಿ ನೆನೆಯದನ್ನಕ್ಕ?
ಶುದ್ದಿಯಿಲ್ಲದೆ ಸಂಗಯ್ಯನೊಲಿಯ‌! ಮನಮುಟ್ಟದೆ ಸಂಗಯ್ಯನೊಲಿಯ!! ಮನಮುಟ್ಟಿ ನೆನೆಯದೆ ಸಂಗಯ್ಯನೊಲಿಯ!!

ಆದರೆ‌ ಇವಾವೂ ಸಾಧ್ಯವಾಗದೆ - ಶುದ್ಧಿಗಾಗಿ- ಸುಗಂಧ ಗಳಿಂದ ಹೊರಮೈಯನ್ನು ಹೂಸಿ, -ನೆನೆಯಲು- ಎಣಿಸಲು ಜಪಮಣಿ ಕೈಗೆ ಕೊರಳಿಗೆ ಮಣಿಯ ಕಟ್ಟಿ,  -ಮನಮುಟ್ಟಲು-  ಅಷ್ಟೋತ್ತರ ಶತನಾಮಾವಳಿ (ನೂರೆಂಟು) ಹೆಸರುಗಳನ್ನು ಓದಿ, ಏನೂ ಸಾಧನೆ ದಕ್ಕದೆ ಏಗುತ್ತಿರುವೆ. Struggling to manage. ಇವೆಲ್ಲವೂ ಬಹಿರಂಗದ ತೋರಿಕೆಗಳು. 

ಸಾಧಕನ ಆತ್ಮನಿವೇದನೆ ಇಲ್ಲದೆ. 
---
ಏವೆ ಎಂಬುದನ್ನು ಕನ್ನಡದ ಒಂದು #ಆಖ್ಯಾತಪ್ರತ್ಯಯ ಎಂದು ಪಟ್ಟಿಮಾಡಲಾಗಿದೆ. ಬರುತ್ತಾನೆ, ಬರುತ್ತಾವೆ, ಬರುತ್ತಾರೆ, ಬರುತ್ತೇನೆ, ಬರುತ್ತೇವೆ, ಬರುತ್ತಾಳೆ, ಬರುತ್ತೀಯ ಗಳ ಕೊನೆಗೆ ಬರುವ ಆನೆ, ಆವೆ, ಆರೆ, ಏನೆ, #ಏವೆ, ಆಳೆ, ಈಯ ಗಳು ಕನ್ನಡದಲ್ಲಿನ ಅಂತಹ ಕೆಲ ಹಿನ್ನೊಟ್ಟು ಗಳು. 

ಸಂಸ್ಕೃತ ಮುಂತಾದ ಇಂಡೋಯುರೋಪಿಯನ್ ನುಡಿಗಳಲ್ಲಿ ಇಂತ ಪ್ರತ್ಯಯ ಗಳಿಗೆ ತನ್ನದೇ ಆದ ಅರ್ಥ ಇರಲ್ಲ. ಆದರೆ ಕನ್ನಡ  ನುಡಿಯಲ್ಲಿ ಈ ಪ್ರತ್ಯಯ ಗಳಿಗೆ ತನ್ನದೇ ಆದರ ಹುರಳು ಇರುವುದು. 
ಏವು ಏಗು ಎಗರು ಒಂದೇ ಬೇರಿನ ಅಚ್ಚಕನ್ನಡ ಪದಗಳು ಎನ್ನುವೆ.
ಎಗರು : to rise, fly, jump;  ಎಗರಿಸು : to cause to rise, cause to fly, cause to jump, shoplift; 
ಎಗರಿಕೆ :  jumping;     ಎಗು : rising, embarkation; 
ಎಗಡಿಗ : up and down;     ಏಳು : raise, get up
ಏವು ಎಂಬ ಪದವನ್ನು ನಾನು ಏಗು ಎಂದು ತೆಗೆದುಕೊಳ್ಳುವೆ. 
ಏಗು : manage, to find ways to go on functioning; to get along somehow; to succeed in handling matters; to cope with; to manage; to struggle to manage.

ವಚನಕಾರರು ಮತ್ತೆಮತ್ತೆ ಏವೆನಯ್ಯ! ಏವೆನೇವೆನಯ್ಯಾ! ಎಂದು ಬಳಸುವರು. ಏಗುವೆನಯ್ಯಾ ಎಂದರೂ ಇದೇ ಅರ್ಥ ಬರುವುದು.

ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ

ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ. 
ಬಂದಹರಯ್ಯ ಪುರಾತರೆನ್ನ ಮನೆಗೆ!  ಬಂದಹರಯ್ಯ ಶರಣರೆನ್ನ ಮನೆಗೆ! 
ಕಂಡ ಕನಸು ದಿಟವಾಗಿ, ಜಂಗಮ ಮನೆಗೆ ಬಂದರೆ 
ಶಿವಾರ್ಚನೆಯ ಮಾಡಿಸುವೆ ಕೂಡಲಸಂಗಮದೇವಾ ನಿಮ್ಮ ಮುಂದೆ.
          --- ಬಸವಣ್ಣ - Basavanna 
---
ಅಂಗೈ ತಿಂದುದು = ಕೈಯಲ್ಲಿ ನವೆಯಾದುದು

ಅಂಗೈ, ಅಂಗಾಲು, ಅಂಗಾತ ಮುಂತಾದ ಅನ್ ಬೇರಿನ ಪದಗಳಿವೆ. ಇದೇ ರೀತಿ ಅಂಗೈ ಮುಂಗೈ ಹಿಂಗೈ ಮೇಲುಗೈ ಈ ತರದ ಕಯ್ ಎನ್ನುವ ಬೇರು ಪದದ ಸುತ್ತ ಹುಟ್ಟಿದ ಪದಗಳೂ ಇವೆ.

ಕೈನ ನ ಅಡಿ > ಅಂಗೈ (ಅಂಶಿಸಮಾಸ) ಎನ್ನುವರು. ಸರಳವಾಗಿ ಅಡಿಯ ಕೈ > ಅಡಿಗೈ > ಅಂಗೈ ಆಗಿದೆ ಅನ್ನುವೆ.  

ಕೊಡುವಾಗ, ಆಣೆ‌ ಇಡುವಾಗ, ನೆಲಕ್ಕೆ ಕೈ ಊರುವಾಗ‌, ವಸ್ತುಗಳನ್ನು ಎತ್ತಿಕೊಳ್ಳುವಾಗ ಕೈನ ಬಿಳಿಭಾಗವನ್ನು ಕೆಳಗೆ (ಅಡಿಯಲ್ಲಿ) ಮಾಡುವೆವು. (ಈ ಬಿಳಿ ಭಾಗದ ಕಡೆಗೇ ಬೆರಳಿಗಳು ಮಡಚುವವು ಹಾಗಾಗಿ). ಹಾಗಾಗಿ ಈ ಕೈನ ಬಿಳಿಬಾಗ ಅಂಗೈ. 
--
ತೀಂಟೆ, ತಂಟೆ, #ತೀಟೆ, ತೀಟ, ತಿಂತಿ, ತಿಂತೆ, ತೀಂತೆ, #ತಿಂದೆ, ತೀಂದೆ‌, #ತಿಂಡಿ, ತಿಂಡೆ, ತಂಟೆ, ಇವುಗಳೆಲ್ಲ "ತೀನ್" ಎಂಬ ಒಂದೇ ಬೇರಿನ ಪದಗಳು. ಇದರ ಹುರುಳು ತುರಿಕೆ, ಕಡಿಯುವಿಕೆ, ಕೆರೆಯುವಿಕೆ, itching, arrogance, ಚೇಷ್ಟೆ ಮುಂತಾದವು. the sensation of itching. (fig.) the tendency of an arrogant person; arrogance.

ನಮ್ಮ ಕಡೆಯ ತಿಂಡಿ ಪದವು "ತಿನ್" ಎಂಬ ಬೇರಿನಿಂದ ಬಂದಿದೆ. ತಿನ್ನು, ತಿನಿಸು, ತಿಂಡಿ (ತಿಂಡಿಯನ್ನು ತಿನ್ನುವೆವು), ತೀನಿ (ಊಟ, ತೀನಿ ತಿನ್ನು) ಮುಂತಾದವು ಈ ಬೇರಿನವು.

"ಯಾಕೆ? ಏನು? ಕೈ ಕಡಿಯುತ್ತಾ?" ಅನ್ನುವ ಬೈಗುಳ ನಮ್ಮ ಕಡೆ‌ ಇದೆ. ಇದಕ್ಕೆ ಸರಿಸಾಟಿಯಾಗಿ ಉತ್ತರಕರ್ನಾಟದ ಭಾಗದಲ್ಲಿ #ತಿಂಡಿ ಎಂಬ ಬಳಕೆ ಇದೆ. ಇದರ ಹುರುಳು "ತುರಿಕೆ", ನವೆ, ಕಡಿತ. 
--

ಕಂಗಳು ಕೆತ್ತಿಹವು: 
ಊಟ ಮಾಡುವಾಗ ತುತ್ತು ಕೆಳಗೆಬಿದ್ದರೆ, ಮನೆ ಮೇಲೆ/ಎದುರು ಕಾಗೆ ಕೂಗಿದರೆ ನೆಂಟರು ಬರುವರು ಎಂಬ ಶಕುನಗಳಿವೆ. ಇದೇ ರೀತಿ ಬಲ ಅಂಗೈ ತುರಿಕೆಯಾದರೆ ಹಣ ಕೈ ಸೇರುತ್ತದೆ ಎನ್ನುವ ನಂಬಿಕೆಯ ಜೊತೆಗೆ ಎಡ ಅಂಗೈ ತುರಿಕೆಯಾದರೆ ಏನೋ ಕೆಟ್ಟ ಶಕುನ ಸಂಭವಿಸಲಿದೆ ಎನ್ನುವ ನಂಬಿಕೆಗಳೂ ಇವೆ.

#ಕೆತ್ತು ಅನ್ನುವ ಪದಕ್ಕೆ ಅದುರು (ಕಣ್ಣು ಅದುರುವವು) ನಡುಗು, ಹಾರು (ಹುಬ್ಬು ಹಾರುವವು) , shiver ಮುಂತಾದ ಹುರುಳಿದೆ. 
ಕಣ್ + ಕಳು > ಕಣ್‍ಗಳು > ಕಂಗಳು. 
ಕಂಗಳು ಕೆತ್ತಿಹವಯ್ಯ = ಕಣ್ಣಗಳು ಅದುರುತಿಹವು ಅಯ್ಯ.

ಬಲಗೈ ಕಡಿಯುವುದು, ಬಲಗಣ್ಣು ಹಾರುವುದು ಶುಭಶಕುನ. ಪುರಾತರು, ಶರಣರು, ಶಿವಭಕ್ತರು ಮನೆಗೆ ಬರುವುದರ ಶುಭ ಶಕುನ. ಬಸವಣ್ಣ ಕಂಡ ಕನಸೂ, ಕಾಣುವ ಕನಸೂ, ಎದುರು ನೋಡುವುದೂ ಇದನ್ನೇ. 
--

ಕಂಡ ಕನಸು, ತೋರಿದ ಶಕುನಗಳು ನಿಜವಾಗಿ ಜಂಗಮ ರೂಪದಲ್ಲಿ ಶರಣರು ಪುರಾತರು ಮನಗೆ ಬಂದರೆ ಅವರಿಂದ ಶಿವಾರ್ಚನೆ ಮಾಡಿಸುವೆ ಎನ್ನುವರು. ಬಸವಧರ್ಮದಲ್ಲಿ ಎದೆಯಲ್ಲಿನ ಲಿಂಗಕ್ಕೆ ನಮಗಿಂತ ದೊಡ್ಡವರು (ಗುರುಗಳು, ಸ್ವಾಮಿಗಳು, ಅಯ್ನರು) ಸಿಕ್ಕಾಗ ಅವರಿಂದಲೂ ಒಂದು ಪೂಜೆ ಮಾಡಿಸುವುದು ಸಂಪ್ರದಾಯ. ಬಸವಣ್ಣ ತನ್ನ ಮೈಮೇಲಿನ ಕೂಡಲಸಂಗಯ್ಯನಿಗೂ ಮನಗೆ ಬಂದ ಜಂಗಮ / ಪುರಾತ / ಶರಣರಿಂದ ಅರ್ಚನೆ ಮಾಡಿಸಲು ಎದುರು ನೋಡುತ್ತಿದ್ದಾರೆ. 
--

ಕನಸಲ್ಲೂ ಮನಸಲ್ಲೂ ನನಸಲ್ಲೂ ನೆನಪಲ್ಲೂ ಬದುಕಲ್ಲೂ ಬರೀ ಶರಣರೇ ಬಸವಣ್ಣನಿಗೆ!

ಕಾಯಗುಣಂಗಳ ಕಳೆದವರಿಗೆ ಶರಣೆಂಬೆ

ಅಭ್ಯಾಸವೆನ್ನ ವರ್ತಿಸಿತ್ತಯ್ಯಾ, ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ
ಅನು ನಿಮ್ಮ ಮನಂಬೊಗುವನ್ನಕ್ಕ ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ

*ಅಭ್ಯಾಸ* ಎಂಬ ಪದವು ವ್ಯಾಕರಣ/ಪುರಾಣ/ಇತಿಹಾಸ/ಆಯುರ್ವೇದ/ಮೀಮಾಂಸೆ/ಯೋಗ/ಶೈವದರ್ಶನ ಗಳೆಲ್ಲದರಲ್ಲೂ ಮತ್ತೆ‌ಮತ್ತೆ ಬಳಸುವ technical word. ಈಗಿನ‌ ಬಳಕೆಯಲ್ಲಿ ಈ ಪದದ ಸರಳ ಹುರುಳು practice, regular habit, repetition ಮುಂತಾಗಿ ಹೇಳಬಹುದು.  

ಕರ್ಮಿ,ಮುಮುಕ್ಷು, ಅಭ್ಯಾಸಿ, ಅನುಭಾವಿ, ಆರೂಡರೆಂದು ಹಲವು ತೆರನ ರನ್ನು ಸಿದ್ದರಾಮೇಶ್ವರರು ಪಟ್ಟಿ ಮಾಡುವರು‌. ಇವರೆಲ್ಲರೂ ಹತ್ತಿರಿಂದ ನೋಡಿದರೆ ಬೇರೆ ಬೇರೆಯೇ ಮತ್ತು ಇವರೆಲ್ಲ ಮುಕ್ತಿಯ ಮಾರ್ಗದಲ್ಲಿ ಕ್ರಮವಾಗಿ ಜೋಡಿಸಲ್ಪಟ್ಟವರು. 

ಈ ವಚನವು ಬಸವಣ್ಣನ #ಆತ್ಮನಿವೇದನೆ ಯ ವಚನಗಳಲ್ಲೊಂದು. Practitioner ಹಂತದಲ್ಲಿದ್ದಾಗ ಬಸವಣ್ಣ ತಾನು ಪಟ್ಟ ತೊಳಲಾಟವನ್ನು ಈ ವಚನದಲ್ಲಿ ಹಿಡಿದಿಟ್ಟು ಕೊಟ್ಟಿದ್ದಾನೆ ಎನ್ನುವೆ. ಶರಣಮಾರ್ಗದ ಮೊದಲ ಹಂತವಾದ ಭಕ್ತಿ ಸಾಧನೆಯೇ ತನ್ನ ಕೈಲಿ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ತೊಳಲಾಟ ಇಲ್ಲಿದೆ.  ಈಗಿನ ಕಾಲದ, ಸಾಧನೆಯ ದಾರಿಯಲ್ಲಿನ ಭಕ್ತರಿಗೆ ಬಸವಣ್ಣ ನಡೆದ ದಾರಿಯ ಅನುಭವಗಳು‌ ದಾರಿದೀಪಗಳು.

ಮನಂ + ಪೊಗು > ಮನಂಬೊಗು ~ ಮನಂಬುಗು; 
ಹುಗಿ/ಪುಗಿ, ಹೊಕ್ಕು / ಪೊಕ್ಕು ಹೊಗು /ಪೊಗು ಇವೆಲ್ಲವೂ ಒಂದೇ ಬೇರಿನ ಪದಗಳು. ಮನಂಬೊಗು ಎಂದರೆ ಮನಸ್ಸಿಗೆ ನಾಟುವುದು, ಮನಸ್ಸಿಗೆ ‌ಇಳಿಯುವುದು, ಮನಸ್ಸಿಗೆ ಹೊಕ್ಕುವುದು. ಸಂಗಯ್ಯ-ಬಸವಯ್ಯರು ಒಬ್ಬರಮನದೊಳಗಿನ್ನೊಬ್ಬರಾಗದೆ ಈ ಕಾಯಗುಣಗಳು ಕಳೆಯವು. 

ಶರಣರು ಕಾಯಗುಣ-ಜೀವಗುಣ ಗಳ ಬಗ್ಗೆ‌ ಮತ್ತೆ‌ಮತ್ತೆ ಮಾತಾಡುವರು. ಮತ್ತು ಬಯಲಿಗೆ ಇವುಗಳ ಅಳಿವು‌ ಮುಖ್ಯವೆನ್ನುವರು. "ಬೇಕೆಂಬುದು ಕಾಯಗುಣ" ಎನ್ನುವರು ಚನ್ನಬಸವಣ್ಣ. "ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ - ಜೀವಗುಣದಿಂದ ಭವಕ್ಕೆ ಬೀಜವಾಗಿ" ಎನ್ನವರು ನಿಜಗುಣ ಶಿವಯೋಗಿಗಳು. "ಶರಣಸತಿ ಲಿಂಗಪತಿಯಾದಲ್ಲಿಯೆ ಕಾಯಗುಣ ನಿಂದಿತ್ತು - ಆತ್ಮಸತಿ ಅರಿವು ಪುರುಷನಾದಲ್ಲಿಯೇ ಜೀವಗುಣ ನಿಂದಿತ್ತು." ಎನ್ನವನು‌ ಢಕ್ಕೆಯ ಬೊಮ್ಮಣ್ಣ. ಕಾಯಗುಣವಳಿದು ಕಾಯ ಲಿಂಗವಾಗುವುದು.
 
ಇಂತ ಕಾಯಗುಣವಳಿದವರ ತೋರಾ, ಅವರಿಗೆ ಶರಣೆಂಬೆ ಎಂಬ ಮಾತು ಬಸವಣ್ಣನವರದ್ದು. ಇಂತವರನ್ನು ಆರಿಸಿ ಆರಿಸಿಕೊಂಡು ಸೇರಿಸಿಕೊಂಡೇ ಬಸವಣ್ಣ‌ #ಅನುಭವಮಂಟಪ ಕಟ್ಟಿದ್ದು ಮತ್ತು #ಅನುಭಾವಿ ಗಳನ್ನು ಹುಟ್ಟುಹಾಕಿದ್ದು.

ಕೂಡಲಸಂಗನ ಶರಣರನಗಲುವ ದಾವತಿಯಿಂದ ಮರಣವೇ ಲೇಸು ಕಂಡಯ್ಯಾ

ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ! ನೋಡಯ್ಯಾ!
ಹಗಲಿರುಳಹುದು, ಇರುಳು ಹಗಲಹುದು!
ಎಂತಯ್ಯಾ! ಆಳವಾಡಿ ಕಳೆವೆನು?
ಒಂದು ಜುಗ ಮೇಲೆ ಕೆಡೆದಂತೆ!
ಕೂಡಲಸಂಗನ ಶರಣರನಗಲುವ ದಾವತಿಯಿಂದ
ಮರಣವೇ ಲೇಸು ಕಂಡಯ್ಯಾ.
-- ಬಸವಣ್ಣ - Basavanna 

"ಕಂಡರೆ" ಮತ್ತು "ಕಾಣದಿದ್ದರೆ" ಎಂಬುವು ಶರಣರ ಬಗೆಗಿನ‌ ಮಾತುಗಳು. ಬಸವಣ್ಣನವರಿಗೆ ಶರಣರನ್ನು ಕಂಡರೆ ಮನೋಹರ, ಕಾಣದಿದ್ದರೆ ಅವಸ್ಥೆ. ಶರಣರನ್ನು ಕಾಣದಿದ್ದರೆ ಹಗಲು‌ ಇರುಳಾಗಿ, ಇರುಳು ಹಗಲಾಗಿ ಕಂಡು, ಎಲ್ಲವೂ ಅಯೋಮಯ ಬಸವಣ್ಣನವರಿಗೆ. ಮಂಕು ಕವಿದಂತಾಗಿ ಮರುಳು ಮಾತುಗಳನ್ನಾಡುತ್ತಾ ಕಾಲ ಕಳೆವಂತಾಗುವುದು, ಯುಗವೇ (ಕಾಲವೇ) ಮೇಲೆ ತಿರುಗಿ ಬಿದ್ದಂತೆ ಅನ್ನಿಸುವುದು. ಶರಣರನ್ನು ಅಗಲಿ‌ ಇರುವುದು ಬಳಲಿಕೆ (ದಾವತಿ) ಬಸವಣ್ಣನಿಗೆ. ಈ ಬಳಲಿಕೆಗಿಂತ ಮರಣವೇ ಲೇಸು ಎಂಬುದು ಬಸವಣ್ಣನ ಅನುಭವ. ಶರಣರೊಡನೆ ಬೆರೆತು ಕಲೆತು ಬದುಕುವ ಬಸವಣ್ಣನ ಅಪೇಕ್ಷೆ ಬೆಲೆಕಟ್ಟಲಾಗದ್ದು.

--
ಮನೋಹರ ಅನ್ನುವುದಕ್ಕೆ ಹಲವು ಹುರುಳುಗಳನ್ನು ಹೇಳಬಹುದು.
೧. 
ಮನೋಹರ ~ ಮನ: ಹರ.  ಹರ ಎಂದರೆ‌‌ ಇಲ್ಲ ವಾಗಿಸುವುದು. ಲಯಸ್ತಿತಿ. ಯೋಗದ ಗುರಿಯೇ ಮನದ ಲಯ. Thoughtless state. #ಮನೋಹರಸ್ತಿತಿ ಯು ಯೋಗದ ಎತ್ತರದ ನೆಲೆ. ಶಿವನ ನೆಲೆಯೇ. 

೨. ಹರ ಎಂದರೆ ಸೆಳೆಯುವುದು, ಆಕರ್ಷಣೆ. ಮನಸ್ಸನ್ನು ಸೆಳೆಯುವದು. attractive; fascinating; charming; beautiful. ಹಾಗಾಗೇ ಶಿವನು‌ #ಮನೋಹರ.

೩. ಮನೋಹರ ಎಂದರೆ bliss, ಶಿವಾನಂದ.
"ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ ಆ ಪ್ರಾಣದ ಮಧ್ಯದಲ್ಲಿ #ಮನೋಹರಮೂರ್ತಿ ಇರವಿರಲು" -- ನೀಲಮ್ಮ

೪. 
ಆದಿ ಅನಾದಿಯೆ ಹಾವುಗೆ, ಶುದ್ಧ ಸಿದ್ಧವೆ ಪಾದದ ಜಂಗು,
ಪ್ರಸಿದ್ಧವೆ ಗಮನ, #ಮನೋಹರವೆ ಕಟಿ,
ಸದಾಸನ್ನಹಿತವೆ ಕೌಪ, ನಿಶ್ಚಿಂತವೆ ಯೋಗವಟ್ಟಿಗೆ,
ನಿರಾಕುಳವೆ ಜೋಳಿಗೆ, ನಿರ್ಭರಿತವೆ ದಂಡಕೋಲು ... ಜಕ್ಕಣಯ್ಯ

೫. ದೇಗುಲದೊಳಗಣ ಲಿಂಗಕ್ಕೆ ಒಂಬತ್ತು ಶಿಖರ, ಆರು ಬಾಗಿಲು, ಮೂರು ಮಂಟಪವು, #ಮನೋಹರನೆಂಬ ಪೂಜಾರಿ

ಇನ್ನೂ ಹಲವು ಅರ್ಥಗಳನ್ನು ಹೇಳಬಹುದಾದರೂ‌ ಇಲ್ಲಿ ಮನೋಹರ ಎಂದರೆ ನಲಿವು, ಸುಂದರ , ಸೊಗಸು, attractive; fascinating; charming; beautiful ಎನ್ನುವುದು ಹೊಂದುವುದು.

--
ಅವಸ್ಥೆ ಎಂದರೆ ಪಾಡು, ಇರವು. ವಿಶೇಷವಾದ ಅವಸ್ಥೆ ~ ವ್ಯವಸ್ಥೆ - ಏರ್ಪಾಡು.
"ಭವವುಳ್ಳನ್ನಕ್ಕ ಧಾವತಿ ಮಾಣದು, ಶರೀರವುಳ್ಳನ್ನಕ್ಕ #ಅವಸ್ಥೆ ಮಾಣದು" - ಅಲ್ಲಮ
#ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ, ಕಳೆ ಕಳೆಗಳು ಒಂದಾದ ಪರಿಯ ನೋಡಾ! - ಅಲ್ಲಮ
ಅಂಗದ ಅವಸ್ಥೆಯಲ್ಲದೆ ಲಿಂಗದ #ಅವಸ್ಥೆ ಆರಿಗೂ ಇಲ್ಲ ಗುಹೇಶ್ವರಾ - ಅಲ್ಲಮ
ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. -- ಮುಕ್ತನಾಥಯ್ಯ.

ಅವಸ್ಥೆ ಎಂಬ ಪದಕ್ಕೆ ‌negative ಅರ್ಥಗಳೇ ಸಿಕ್ಕಿರುವಂತಿದೆ. ದುರ್ದೆಸೆ, ಕೆಟ್ಟಸ್ತಿತಿ, ಒಳ್ಳೆಯದಲ್ಲದ ಪಾಡು. ಶರಣರನ್ನು ಕಾಣದಿದ್ದರೆ ಸಹಜವಲ್ಲದ ಪಾಡು ಬಸವಣ್ಣನವರದ್ದು. ಹಗಲು ಇರುಳಂತೆ (ಒಳಗೆ / ಮನಕ್ಕೆ ಮಂಕು, ಹೊರಗೆ ಮೋಡ ಕವಿದು ಕತ್ತಲಾದಂತೆ), ಇರುಳು ಹಗಲಂತೆ (ನಿದ್ದೆ ಬಾರದೆ ಅದೇ ಹಗಲಂತೆ) ಎಲ್ಲವೂ ಅಯೋಮಯವಾದಂತೆ ಬಸವಣ್ಣನವರಿಗೆ.

ಆಳವಾಡು ಎಂದರೆ ಬುಗುಲು ಮಾತು, ತೋರಿಕೆ ಹಾರಿಕೆಯ ಮಾತು, ವಟವಟಮಾತು. ಅಳುತ್ತಾ, ಮರುಗುತ್ತಾ ಇರು.
ಅಳ್ಳಪ a chatterer; ಅಳಪ್ಪು  to chatter, prattle, talk nonsense; ಅಳವಳಿಮೆ babbling;

ಕೊಡನ ತುಂಬಿದ ಹಾಲ ಕೆಡಹಿ, ಉಡುಗಲೆನ್ನಳವೆ

ಮುನ್ನೂರರವತ್ತು ದಿನ ಶ್ರವವ ಮಾಡಿ, ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!
ಎನಿಸು ಕಾಲ ಲಿಂಗಾರ್ಚನೆಯ ಮಾಡಿ ಏವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕ?
ಕೊಡನ ತುಂಬಿದ ಹಾಲ ಕೆಡಹಿ, ಉಡುಗಲೆನ್ನಳವೆ ಕೂಡಲಸಂಗಮದೇವಾ? 
- ಬಸವಣ್ಣ - Basavanna 

ಇದು ಭಕ್ತನ #ಭಕ್ತಸ್ಥಲ ದ ವಚನ. ಈ ವಚನದಲ್ಲೂ ಕೂಡ ಭಕ್ತಿಯನ್ನು ಕಾಳಗಕ್ಕೆ ಹೋಲಿಸಿದ್ದಾರೆ. 
ಶ್ರವದ ಉದ್ದೇಶವೇ ಯುದ್ದದಲ್ಲಿ ಗೆಲ್ಲುವುದು. ವರ್ಷಪೂರ್ತಿ ಯುದ್ದಾಭ್ಯಾಸ ಮಾಡಿ ಯುದ್ಧರಂಗದಲ್ಲಿ ಶಸ್ತ್ರ ಬಳಸುವುದನ್ನು ಮರೆತರೆ ಏನು ಪ್ರಯೋಜನ? ಲಿಂಗಾರ್ಚನೆಯ ಉದ್ದೇಶವೇ ಮನ ದೃಡವಾಗುವುದು. ಲೆಕ್ಕವಿಲ್ಲದಷ್ಟು ಕಾಲ ಲಿಂಗಾರ್ಚನೆ ಮಾಡಿ ಮನ ದೃಡವಾಗದಿದ್ದರೆ ಏನು‌ ಪ್ರಯೋಜನ?. ತುಂಬಿದ ಕೊಡದ ಹಾಲನ್ನು ಅಜಾಗರೂಕತೆಯಿಂದ ಚೆಲ್ಲಿ.. ‌ಮತ್ತೆ ಆ ಹಾಲನ್ನು ಮರಳಿ ಬಳಿದು ಕೊಡಕ್ಕೆ ತುಂಬಲು ತನ್ನಿಂದ ಆಗದು‌ ಎನ್ನುವರು ಬಸವಣ್ಣ.

ಒಂದು ಸಣ್ಣ ತಪ್ಪು/ಕೈಮರೆವು /ಮೈಮರೆವು/ಮತಿಮರೆವು ನಿಂದ ಹಿಂದೆ ಮಾಡಿದ ಸಾಧನೆಗಳಲ್ಲಾ ವ್ಯರ್ಥವಾಗುವುದು. ಕೊನೆ ಕ್ಷಣದಲ್ಲಿ ಕೈ ಸೋಲುವ, ಅವಶ್ಯಕತೆ ಬಿದ್ದಾಗಲೇ ನಡೆಸಿದ ತಯಾರಿ ಕೈ ಕೊಡುವುದರ ಬಗ್ಗೆ ಈ ಮಾತುಗಳು. ಇಲ್ಲೆಲ್ಲಾ ಮನಸ್ಸಿನ ದೃಡತೆ ಮುಖ್ಯ. ದೃಡಭಕ್ತಿ, ದೃಡಭಾವ, ದೃಡಚಿತ್ತ, ದೃಡತಪ‌ ಗಳ ಬಗ್ಗೆ ಶರಣರು ಮಾತಾಡುವರು.

ಸಾಧನೆಯ ಹಾದಿಯಲ್ಲಿ ಒಂದು ಕ್ಷಣವೂ ಮೈಮರೆಯಬಾರದು ಎನ್ನುವ ಕಿವಿಮಾತುಗಳಿವೆ ಈ ವಚನದಲ್ಲಿ. ಬುದ್ದಿ ಮಾತುಗಳನ್ನು ತನಗೇನೆ ಅನ್ವಯಿಸಿಕೊಂಡು ಹೇಳುವ ದೊಡ್ಡತನ ಬಸವಣ್ಣನವರದ್ದು. 

ಪದಗಳ ಬಗ್ಗೆ: 
ಮುನ್ನೂರರವತ್ತು:  ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ ವರ್ಷಕ್ಕೆ‌ 360 ದಿನಗಳು. ಬಸವಣ್ಣನ ವಚನವು ಆಗ ಚಾಂದ್ರಮಾನ ‌ಪಂಚಾಂಗದ ಬಳಕೆಯನ್ನು ತೋರುತ್ತಿದೆ. 
ಶ್ರವ‌:  A training in using weapons.
ಕಳ : battle ground, ಅಂಕ, ಯುದ್ದಭೂಮಿ.      ಕಳನೇರಿ : ಕಾಳಗಕ್ಕೆ ಇಳಿದು.
ಕೈಮರೆ : ಕತ್ತಿ/ಗುರಾಣಿ/ಬಿಲ್ಲು/ಬಾಣ/ ಶಸ್ತ್ರ ಗಳನ್ನು ಬಳಸುವುದನ್ನು ಮರೆಯುವುದು.
ಏವು : what to do.  ಏವಯಿಸು : to be dissatisfied; to have displeasure; to sorrow; to feel agony; to grieve.   ಏವೆ : ನೋವು‌ ಪಡುವೆ, ಹೇಗುವೆ
ದೃಡ : firmly established. ಈ ಪದ ಮನಸ್ಸಿನ ಬಗ್ಗೆ. 
ಉಡುಗು : The act or process of brooming; a sweeping. to withdraw - a) to take back or draw back; b) to remove from use; c) to retract or recall.   ಇಡುಗಲು / ಉಡುಗಲು : ಕಸಬರಿಕೆ, broom.

ಜೀಯ-ಜೀವ ನ್ಯಾಯಗಳು

ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯಾ, 
ಕಾದಿ ಗೆಲಿಸಯ್ಯಾ ಎನ್ನನು
ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ, 
ಎನ್ನ ತನು-ಮನ -ಧನದಲ್ಲಿ ವಂಚನೆಯಿಲ್ಲದೆ - #ಬಸವಣ್ಣ 
--

ಜೀಯ/ಜೀವ ರ ನಡುವೆ ಮೂರು ನ್ಯಾಯಗಳನ್ನು  ಗುರುತಿಸಿರುವರು. ಮಾರ್ಜಾಲ ಕಿಶೋರ ನ್ಯಾಯ, ಮರ್ಕಟ ಕಿಶೋರ ನ್ಯಾಯ ಮತ್ತು ಮತ್ಸ್ಯ ಕಿಶೋರ ನ್ಯಾಯ. 

೧. ಮಾರ್ಜಾಲ ಕಿಶೋರ ನ್ಯಾಯ:  ಬೆಕ್ಕು ತನ್ನ ಮರಿಯನ್ನು ತಾನೇ ಕಚ್ಚಿ ಹಿಡಿದು ಒಂದ ನೆಲೆಯಿಂದ ಇನ್ನೊಂದು ನೆಲೆಗೆ ಸಾಗಿಸಿ ಕಾಪಾಡುವುದು. ಮರಿಯ ಪ್ರಯತ್ನ ‌ಏನೂ‌ ಇಲ್ಲ.

೨. ಮರ್ಕಟ ಕಿಶೋರ ನ್ಯಾಯ: ತಾಯಿ‌ಮಂಗವು ತನ್ನ ಮರಿಯನ್ನು ತಾನೇ ಹಿಡಿದುಕೊಳ್ಳುವುದಿಲ್ಲ. ಮರಿಯೇ ತನ್ನ ತಾಯಿಯನ್ನು ಗಟ್ಟಿಯಾಗಿ ಅವುಚಿಕೊಳ್ಳುವುದು. ತಾಯಿ ಪಾತ್ರ ರಕ್ಷಣೆಯಲ್ಲಿ ಇಲ್ಲ. ಎಲ್ಲ ಪ್ರಯತ್ನ ವೂ ಮರಿಯದ್ದೇ.

೩. ಮತ್ಸ್ಯ ಕಿಶೋರ ನ್ಯಾಯ : ಮರಿ‌ಮೀನು‌ ನೆನೆದರೆ ತಾಯಿ‌ಮೀನು ಆಸರೆಗೆ ಓಡಿಬರುವುದು. ಇಬ್ಬರ ಪ್ರಯತ್ನವೂ ಇದೆ..

ಈ ವಚನದಲ್ಲಿ ಬಸವಣ್ಣ ತನ್ನ ಇಡೀ ಭಾರವನ್ನು ಕೂಡಲಸಂಗಯ್ಯನ ಮೇಲೆ ಹಾಕಿದ್ದಾರೆ. #ಮತ್ಸ್ಯ_ಕಿಶೋರ_ನ್ಯಾಯ ಇಲ್ಲಿದೆ ಎನ್ನಬಹುದು.

ಕೂಡಲಸಂಗಯ್ಯನ ನೆನೆದರೆ,ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ.

ಅಂಕ ಕಳನೇರಿ ಕೈ ಮರೆದಿರ್ದೊಡೆ ಮಾರಂಕ ಬಂದಿರುವುದ ಮಾಣ್ಬನೆ?
ನಿಮ್ಮ ನೆನಹ ಮತಿ ಮರೆದಿರ್ದೊಡೆ, ಪಾಪ ತನುವನಂಡಲೆವುದ ಮಾಣ್ಬುದೆ?
ಕೂಡಲಸಂಗಯ್ಯನ ನೆನೆದರೆ,ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ. - #ಬಸವಣ್ಣ 

ಪದಗಳು; 
ಅಂಕೆ (ಹಿಡಿತ) ಯಲ್ಲಿಡುವವ ಅಂಕ. ಸೈನಿಕ. ಅಂಕುಶವೂ ಇದೇ ಬೇರಿನ ಪದ. ಅಂಕ/ಮಾರಂಕ - ಸೈನಿಕ / ಎದುರುಪಡೆಯ ಸೈನಿಕ. 
ಕಣ/ ಕಳ - ಅಂಗಣ / ಅಂಗಳ / ಅಂಕಲು ದಲ್ಲೂ ಈ‌ ಕಳ ಪದವಿದೆ. War-ground / playground. A wide area where a battle is fought; a battlefield. A place where game or games are played; 
ಕಾದುವುದರಿಂದ ಕದನ. ಕಳದಲ್ಲಿ ಕಾದುವುದೇ ಕಾಳಗ.
ಕೈಮರೆ ಮೈಮರೆ ಮುಂತಾದ ಪದಗಳಿವೆ. ಕಾಳಗದಲ್ಲಿ ಕತ್ತಿ/ಗುರಾಣಿ, ಬಿಲ್ಲು/ಬಾಣ ಗಳನ್ನು ಹಿಡಿದ ಅಂಕನು ಎಚ್ಚರ ತಪ್ಪಬಾರದು. #ಕೈಮರೆ ತರೆ ಇದಿರಾಳು / ಮಾರಂಕ ನು ಬಂದು ಇರಿಯದೆ ಬಿಡನು!

ಭಕ್ತಿಯೂ ಕಾಳಗದ ರೀತಿ. #ಮತಿಮರೆ ಯಬಾರದು. ಮರೆತರೆ ಪಾಪವು ತನುವನ್ನು ಅಂಡಲೆವುದ ಮಾಡದೆ‌ ಬಿಡದು. ಅಂಡಲೆ ಎಂದರೆ  ೧ ಕಾಡು, ಪೀಡಿಸು ೨ ಕಷ್ಟಕ್ಕೆ ಒಳಗು ಮಾಡು, ೩ ಪೀಡೆ ೪ ಹಿಂಸೆ. ಕೆಲವೆಡೆ "ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!" ಎನ್ನುವರು ಬಸವಣ್ಣ.

ಕಾಳಗಕ್ಕೂ ಭಕ್ತಿಗೂ ಹೋಲಿಕೆಯಿದೆ.  ಭಕ್ತನಿಗೂ ಸೈನಿಕನಿಗೂ ಅಬೇಧವಿದೆ. 
ಕಾಳಗದಲ್ಲಿ ಕೈ ಮರೆಯಬಾರದು. ಭಕ್ತಿಯಲ್ಲಿ ಮತಿಮರೆಯಬಾರದು. 
ಪಾಪಕ್ಕೂ ಕತ್ತಿಗೆ ಹೊಲಿಕೆಯಿದೆ. ಕಾಳಗದಲ್ಲಿ ಸದಾ ಶಸ್ತ್ರಗಳು ಆಡುತ್ತಿರಬೇಕು. ಭಕ್ತಿಯಲ್ಲಿ ಸದಾ ಕೂಡಲಸಂಗನ ನೆನಹು ಗುನುಗುನುಸಿತರಬೇಕು. ಇಲ್ಲದಿದ್ದರೆ ಕಾಳಗದಲ್ಲಿ ಎದುರಾಳಿಯ ಕತ್ತಿ ಮೈಯನ್ನು ಇರಿದು ಹಿಂಸೆಯಾಗುವುದು .. ಭಕ್ತಿಯಲಿ ಪಾಪವು ತನುವನ್ನು ಪೀಡಿಸುವುದು. 

#ಹಂಡಲೆ ಯುವುದು ಎನ್ನುವ ಪದ‌ ಇದೆ.. ನಾವೆಲ್ಲ ಹುಡುಗರಾಗಿದ್ದಾಗ..  "ಓದಲ್ಲ ಪಾದಲ್ಲ ಕೆಲಸ ಮಾಡಲ್ಲ.. ಬರೇ ಹಂಡಲೆಯುತ್ತಾನೆ" ಅಂತ ಬೈಸಿಕೊಂಡವರೇ..  ಈ ವಚನ ದಲ್ಲಿ ಪಾಪವು ಒಂದು ಹುಟ್ಟಿನಿಂದ ಇನ್ನೊಂದು ಹುಟ್ಟಿಗೆ ಹಂಡಲೆಯುವಂತೆ ಮಾಡುವುದು ಎಂಬ ಅರ್ಥ ಕೊಡುವುದು. ಮುಕ್ತಿಗೆ ಮದ್ದು ಓಂ ನಮಃ ಶಿವಾಯ ಎಂಬ ಮಂತ್ರ ಎನ್ನುವುದನ್ನು ಬಸವಣ್ಣ ಈ ತರ ಹೇಳಿದ್ದಾರೆ.

ಕೂಡಲಸಂಗಯ್ಯನ ನೆನೆದರೆ ಪಾಪವು ಉರಿಗೆ ಒಡ್ಡಿದ ಅರಗಿನಂತೆ ಕರಗುವುದು. ಇಲ್ಲಿ ಕರ್ಪುರಕ್ಕೂ ಒಂದು ವಿಶೇಷತೆ ಇದೆ. #ಶಿಖಿಕರ್ಪುರಯೋಗ ಎಂದು ಶರಣರು ಆಗಾಗ್ಗೆ ಬಳಸುವರು. ಕರ್ಪೂರ ಕರಗಿದರೆ ಅಲ್ಲಿ ಬೂದಿ /ಕಲೆ ಮುಂತಾದವೇನೂ ಉಳಿಯುವುದಲ್ಲ. ಕೂಡಲಸಂಗಯ್ಯನನ್ನು ನೆನದರೆ ಪಾಪವೂ ಕರ್ಪುರದಂತೆ ಸಂಪೂರ್ಣ ಮಾಯವಾಗುವುದು. ಏನೂ ಉಳಿಯದು

ಈ ವಚನದಲ್ಲಿ #ಉಪಮೆ ಇದೆ .ದೃಷ್ಟಾಂತ ವಿದೆ. ಬಸವಣ್ಣನ ವಚನಗಳಲ್ಲಿನ #ಅಲಂಕಾರ ಗಳ ಬಗ್ಗೆ ಮಾತಾಡ್ತಾಲೇ ಹೋಗಬಹುದು.

ವಚನಗಳಲ್ಲಿ ಸಿದ್ದಾಂತಶಿಖಾಮಣಿ

ಹಗಹದಲ್ಲಿ ಬಿದ್ದವರ ಮೇಲೆ ಒರಳ ನೂಂಕುವರೆ?
ಕೋಳದ ಮೇಲೆ ಸಂಕಲೆಯನಿಕ್ಕುವರೆ?
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ?
ಕೂಡಲಸಂಗಯ್ಯನ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೇ?        
                  - ಬಸವಣ್ಣ - Basavanna 

ಸಿರಿಯಾಳ 63 ಜನ #ಪುರಾತನ ರಲ್ಲಿ ಒಬ್ಬ. ಈ ಪುರಾತನ ರು ದೊಡ್ಡ ಶಿವಭಕ್ತರು. ಆದರೆ ಇಷ್ಟಲಿಂಗಧಾರಿಗಳಲ್ಲ. ಶರಣರಿಗೆ ಇವರ ಬಗ್ಗೆ ತುಂಬಾ ಪ್ರೀತಿ - ಮತ್ತೆ ಮತ್ತೆ ನೆನೆವರು.

ಶರಣರು ಅಲ್ಲಲ್ಲಿ ಶಿವ #ಗಣ ಗಳನ್ನೂ ನೆನೆವರು‌. ಇವರೂ ಕೂಡೂ ಲಿಂಗಧಾರಿಗಳಲ್ಲ.

ಕೇವಲ ಶಿವಭಕ್ತಿ ಇದ್ದ ಕಾರಣಕ್ಕಾಗಿಯೇ ಲಿಂಗಧಾರಿಗಳಲ್ಲದವರನ್ನೂ ನೆನೆವ ಶರಣರು ಅದೇಕೆ ಲಿಂಗಧಾರಿಗಳಾದವರನ್ನೇ - ಮತ್ತು ಜಗತ್ತಿಗೆ ಈ‌ ಇಷ್ಟಲಿಂಗದ ಕಲ್ಪನೆ ಕೊಟ್ಟವರನ್ನೇ ನೆನೆಯಲಿಲ್ಲ?!
ಉತ್ತರ ಸ್ಪಷ್ಟ: ೧೨ ನೇ ಶತಮಾನಕ್ಕಿನ್ನೂ ಈ ನಾಲಕ್ಕು ಅತ್ವಾ ಐದು ಜನರು ಇರಲಿಲ್ಲ. 

ಜೈನ ಬೌದ್ದ ವೇದ ಉಪನಿಷತ್ತು ಆಗಮ (ಇವು ಯಾವೂ ಶರಣರ ಸಂಪ್ರದಾಯ ಅಲ್ಲದಿದ್ದರೂ) ಗಳನ್ನು ಉಲ್ಲೇಖಿಸುವ ಶರಣರು ತನ್ನದೇ ಸಂಪ್ರದಾಯವಾದ ಸಿದ್ದಾಂತಶಿಖಾಮಣಿ ಯ ಒಂದು ಸಾಲನ್ನೂ ಯಾಕೆ ಉಲ್ಲೇಖಿಸಿಲ್ಲ..  
ಕಾರಣ ಸ್ಪಷ್ಟ.. ಆಗಿನ್ನೂ ಈ‌ ಪುಸ್ತಕ ಸಂಕಲನ ಗೊಂಡಿರಲಿಲ್ಲ.

ಭವತಿ ಭಿಕ್ಷಾಂ ದೇಹಿ!

ಭವತಿ ಭಿಕ್ಷಾಂ ದೇಹಿ! ಎಂಬ ಮಾತನ್ನು ಹಳೆಯ ನಾಟಕ ಸಿನಿಮಾಗಳಲ್ಲಿ ಶಿವಯೋಗಿಗಳ ಬಾಯಲ್ಲಿ ಕೇಳೇ ಇರುತ್ತೇವೆ.  ಶಂಕರನೇ ಬ್ರಹ್ಮಕಪಾಲ ವನ್ನು ಹಿಡಿದು ಭಿಕ್ಷೆ ಬೇಡುವಂತ ಪರಿಸ್ಥಿತಿ ಬಂತು. ಕೊನೆಗೆ ಅನ್ನಪೂರ್ಣೆ ನೀಡಿದ ಭಿಕ್ಷೆಯಿಂದ ಅವನ ಭಿಕ್ಷಾಟನೆ ನಿಂತಿತು.

#ಭವತಿ : ಭವ ಎಂದರೆ ಇರುವು. ಭವತಿ ಎಂದರೆ ಆಗು, to become. ಆದರೆ ಇಲ್ಲಿ ಭವತಿ ಎನ್ನುವ ಪದದ ಹೋಲಿಕೆ "ಶ್ರೀಮತಿ" ಅನ್ನುವ ಪದದೊಂದಿಗೆ ಇದೆ. ಭವತಿ ಎಂದರೆ ಒಡತಿ,‌ lady, your ladyship, lady, ಪೂಜ್ಯೆ, ಪೂಜ್ಯಳೇ ಎಂದಾಗುವುದು.

#ದೇಹಿ : ದೇಹವುಳ್ಳದ್ದು ದೇಹಿ. ದೇಹವಿರುವ ಕಾರಣಕ್ಕೇ ಅಲ್ಲವೇ ದೇಹಿ ಎಂದು ಬೇಡುತ್ತಿರುವುದು!! ಈ ಸಂದರ್ಭದಲ್ಲಿ ಜೇಡರ ದಾಸಿಮಯ್ಯ ನ ಈ ವಚನ ನೆನಪಾಗುವುದು.
"ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ. ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ."

ಪ್ರಜಾಪತಿಯ ದ ಎಂಬ ಅಕ್ಷರ ವನ್ನು ಮನುಷ್ಯರು ದಾನ, ದೇವತೆಗಳು ದಮ (ಇಂದ್ರಿಯ ನಿಗ್ರಹ), ದಾನವರು ದಯೆ‌ ಎಂದೂ ತೆಗೆದುಕೊಂಡು ಅರ್ಥಮಾಡಿಕೊಳ್ಳುವಂತಾಯಿತು. 

ಇಲ್ಲಿನ ದೇಹಿ ಯ ಬೇರು ಬೇರೆ. ದೇಹಿ ಅನ್ನುವುದು an indeclinable used in begging alms. ದಾ ಎಂದರೆ‌ ಕೊಡು.‌ ಹಿಂದಿಯ ದೇ (ಕೊಡು) ಕೂಡ ಇದರ ಇನ್ನೊಂದು‌ ರೂಪವೆ. ದಾನ ಮತ್ತು ದೇಹಿ ಒಂದೇ ಬೇರಿನ ಪದಗಳಾಗಿರಲು ಸಾಧ್ಯ. ಲೇವಾದೇವಿ ಯಲ್ಲಿನ ದೇವಿ ಇದೇ ದೇಹಿ. 

#ಭಿಕ್ಷೆ : ೧. Asking, begging, soliciting, ೨. anything given as alms, alms; ೩. Wages, hire. ೪. Service. ೫. A means of subsistence, ಬದುಕಿರಲು ಬಳಸುತ್ತಿದ್ದ ದಾರಿ. ಭಿಕ್ಷು, ಭಿಕ್ಷಾಟನೆ, ಭಿಕ್ಷಾನ್ನ, ಭಿಕ್ಷಾರ್ಥಿ, ಭಿಕ್ಷಾಪಾತ್ರೆ, ಭಿಕ್ಷಾವೃತ್ತಿ  ಮುಂತಾದ ಪದಗಳಿವೆ.

ಸಂಸ್ಕೃತ ಮತ್ತು ಇಂಗ್ಲಿಷ್ ಗಳು ಒಂದೇ ನುಡಿಗುಂಪಿಗೆ ಸೇರಿದ ನುಡಿಗಳು. ಸಂಸ್ಕೃತದ "ಭಿಕ್ಷ್" ಮತ್ತು ಇಂಗ್ಲಿಷ್ ನ "beg" ಒಂದೇ ಬೇರಿನವು. ಎರಡಕ್ಕೂ "ಭೆಗ್ / ಭೆಕ್" ಎಂಬ ಒಂದೇ ಬೇರಿದೆ.

ಕನ್ನಡದಲ್ಲಿ ಭಿಕ್ಷ್ ಎಂದರೆ "ಬೇಡು", ಭಿಕ್ಷೆ ಎಂದರೆ "ಬೇಡಿದ ಅನ್ನ".