ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ.
ಬಂದಹರಯ್ಯ ಪುರಾತರೆನ್ನ ಮನೆಗೆ! ಬಂದಹರಯ್ಯ ಶರಣರೆನ್ನ ಮನೆಗೆ!
ಕಂಡ ಕನಸು ದಿಟವಾಗಿ, ಜಂಗಮ ಮನೆಗೆ ಬಂದರೆ
ಶಿವಾರ್ಚನೆಯ ಮಾಡಿಸುವೆ ಕೂಡಲಸಂಗಮದೇವಾ ನಿಮ್ಮ ಮುಂದೆ.
--- ಬಸವಣ್ಣ - Basavanna
---
ಅಂಗೈ ತಿಂದುದು = ಕೈಯಲ್ಲಿ ನವೆಯಾದುದು
ಅಂಗೈ, ಅಂಗಾಲು, ಅಂಗಾತ ಮುಂತಾದ ಅನ್ ಬೇರಿನ ಪದಗಳಿವೆ. ಇದೇ ರೀತಿ ಅಂಗೈ ಮುಂಗೈ ಹಿಂಗೈ ಮೇಲುಗೈ ಈ ತರದ ಕಯ್ ಎನ್ನುವ ಬೇರು ಪದದ ಸುತ್ತ ಹುಟ್ಟಿದ ಪದಗಳೂ ಇವೆ.
ಕೈನ ನ ಅಡಿ > ಅಂಗೈ (ಅಂಶಿಸಮಾಸ) ಎನ್ನುವರು. ಸರಳವಾಗಿ ಅಡಿಯ ಕೈ > ಅಡಿಗೈ > ಅಂಗೈ ಆಗಿದೆ ಅನ್ನುವೆ.
ಕೊಡುವಾಗ, ಆಣೆ ಇಡುವಾಗ, ನೆಲಕ್ಕೆ ಕೈ ಊರುವಾಗ, ವಸ್ತುಗಳನ್ನು ಎತ್ತಿಕೊಳ್ಳುವಾಗ ಕೈನ ಬಿಳಿಭಾಗವನ್ನು ಕೆಳಗೆ (ಅಡಿಯಲ್ಲಿ) ಮಾಡುವೆವು. (ಈ ಬಿಳಿ ಭಾಗದ ಕಡೆಗೇ ಬೆರಳಿಗಳು ಮಡಚುವವು ಹಾಗಾಗಿ). ಹಾಗಾಗಿ ಈ ಕೈನ ಬಿಳಿಬಾಗ ಅಂಗೈ.
--
ತೀಂಟೆ, ತಂಟೆ, #ತೀಟೆ, ತೀಟ, ತಿಂತಿ, ತಿಂತೆ, ತೀಂತೆ, #ತಿಂದೆ, ತೀಂದೆ, #ತಿಂಡಿ, ತಿಂಡೆ, ತಂಟೆ, ಇವುಗಳೆಲ್ಲ "ತೀನ್" ಎಂಬ ಒಂದೇ ಬೇರಿನ ಪದಗಳು. ಇದರ ಹುರುಳು ತುರಿಕೆ, ಕಡಿಯುವಿಕೆ, ಕೆರೆಯುವಿಕೆ, itching, arrogance, ಚೇಷ್ಟೆ ಮುಂತಾದವು. the sensation of itching. (fig.) the tendency of an arrogant person; arrogance.
ನಮ್ಮ ಕಡೆಯ ತಿಂಡಿ ಪದವು "ತಿನ್" ಎಂಬ ಬೇರಿನಿಂದ ಬಂದಿದೆ. ತಿನ್ನು, ತಿನಿಸು, ತಿಂಡಿ (ತಿಂಡಿಯನ್ನು ತಿನ್ನುವೆವು), ತೀನಿ (ಊಟ, ತೀನಿ ತಿನ್ನು) ಮುಂತಾದವು ಈ ಬೇರಿನವು.
"ಯಾಕೆ? ಏನು? ಕೈ ಕಡಿಯುತ್ತಾ?" ಅನ್ನುವ ಬೈಗುಳ ನಮ್ಮ ಕಡೆ ಇದೆ. ಇದಕ್ಕೆ ಸರಿಸಾಟಿಯಾಗಿ ಉತ್ತರಕರ್ನಾಟದ ಭಾಗದಲ್ಲಿ #ತಿಂಡಿ ಎಂಬ ಬಳಕೆ ಇದೆ. ಇದರ ಹುರುಳು "ತುರಿಕೆ", ನವೆ, ಕಡಿತ.
--
ಕಂಗಳು ಕೆತ್ತಿಹವು:
ಊಟ ಮಾಡುವಾಗ ತುತ್ತು ಕೆಳಗೆಬಿದ್ದರೆ, ಮನೆ ಮೇಲೆ/ಎದುರು ಕಾಗೆ ಕೂಗಿದರೆ ನೆಂಟರು ಬರುವರು ಎಂಬ ಶಕುನಗಳಿವೆ. ಇದೇ ರೀತಿ ಬಲ ಅಂಗೈ ತುರಿಕೆಯಾದರೆ ಹಣ ಕೈ ಸೇರುತ್ತದೆ ಎನ್ನುವ ನಂಬಿಕೆಯ ಜೊತೆಗೆ ಎಡ ಅಂಗೈ ತುರಿಕೆಯಾದರೆ ಏನೋ ಕೆಟ್ಟ ಶಕುನ ಸಂಭವಿಸಲಿದೆ ಎನ್ನುವ ನಂಬಿಕೆಗಳೂ ಇವೆ.
#ಕೆತ್ತು ಅನ್ನುವ ಪದಕ್ಕೆ ಅದುರು (ಕಣ್ಣು ಅದುರುವವು) ನಡುಗು, ಹಾರು (ಹುಬ್ಬು ಹಾರುವವು) , shiver ಮುಂತಾದ ಹುರುಳಿದೆ.
ಕಣ್ + ಕಳು > ಕಣ್‍ಗಳು > ಕಂಗಳು.
ಕಂಗಳು ಕೆತ್ತಿಹವಯ್ಯ = ಕಣ್ಣಗಳು ಅದುರುತಿಹವು ಅಯ್ಯ.
ಬಲಗೈ ಕಡಿಯುವುದು, ಬಲಗಣ್ಣು ಹಾರುವುದು ಶುಭಶಕುನ. ಪುರಾತರು, ಶರಣರು, ಶಿವಭಕ್ತರು ಮನೆಗೆ ಬರುವುದರ ಶುಭ ಶಕುನ. ಬಸವಣ್ಣ ಕಂಡ ಕನಸೂ, ಕಾಣುವ ಕನಸೂ, ಎದುರು ನೋಡುವುದೂ ಇದನ್ನೇ.
--
ಕಂಡ ಕನಸು, ತೋರಿದ ಶಕುನಗಳು ನಿಜವಾಗಿ ಜಂಗಮ ರೂಪದಲ್ಲಿ ಶರಣರು ಪುರಾತರು ಮನಗೆ ಬಂದರೆ ಅವರಿಂದ ಶಿವಾರ್ಚನೆ ಮಾಡಿಸುವೆ ಎನ್ನುವರು. ಬಸವಧರ್ಮದಲ್ಲಿ ಎದೆಯಲ್ಲಿನ ಲಿಂಗಕ್ಕೆ ನಮಗಿಂತ ದೊಡ್ಡವರು (ಗುರುಗಳು, ಸ್ವಾಮಿಗಳು, ಅಯ್ನರು) ಸಿಕ್ಕಾಗ ಅವರಿಂದಲೂ ಒಂದು ಪೂಜೆ ಮಾಡಿಸುವುದು ಸಂಪ್ರದಾಯ. ಬಸವಣ್ಣ ತನ್ನ ಮೈಮೇಲಿನ ಕೂಡಲಸಂಗಯ್ಯನಿಗೂ ಮನಗೆ ಬಂದ ಜಂಗಮ / ಪುರಾತ / ಶರಣರಿಂದ ಅರ್ಚನೆ ಮಾಡಿಸಲು ಎದುರು ನೋಡುತ್ತಿದ್ದಾರೆ.
--
ಕನಸಲ್ಲೂ ಮನಸಲ್ಲೂ ನನಸಲ್ಲೂ ನೆನಪಲ್ಲೂ ಬದುಕಲ್ಲೂ ಬರೀ ಶರಣರೇ ಬಸವಣ್ಣನಿಗೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ