ಅಂಕ ಕಳನೇರಿ ಕೈ ಮರೆದಿರ್ದೊಡೆ ಮಾರಂಕ ಬಂದಿರುವುದ ಮಾಣ್ಬನೆ?
ನಿಮ್ಮ ನೆನಹ ಮತಿ ಮರೆದಿರ್ದೊಡೆ, ಪಾಪ ತನುವನಂಡಲೆವುದ ಮಾಣ್ಬುದೆ?
ಕೂಡಲಸಂಗಯ್ಯನ ನೆನೆದರೆ,ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ. - #ಬಸವಣ್ಣ
ಪದಗಳು;
ಅಂಕೆ (ಹಿಡಿತ) ಯಲ್ಲಿಡುವವ ಅಂಕ. ಸೈನಿಕ. ಅಂಕುಶವೂ ಇದೇ ಬೇರಿನ ಪದ. ಅಂಕ/ಮಾರಂಕ - ಸೈನಿಕ / ಎದುರುಪಡೆಯ ಸೈನಿಕ.
ಕಣ/ ಕಳ - ಅಂಗಣ / ಅಂಗಳ / ಅಂಕಲು ದಲ್ಲೂ ಈ ಕಳ ಪದವಿದೆ. War-ground / playground. A wide area where a battle is fought; a battlefield. A place where game or games are played;
ಕಾದುವುದರಿಂದ ಕದನ. ಕಳದಲ್ಲಿ ಕಾದುವುದೇ ಕಾಳಗ.
ಕೈಮರೆ ಮೈಮರೆ ಮುಂತಾದ ಪದಗಳಿವೆ. ಕಾಳಗದಲ್ಲಿ ಕತ್ತಿ/ಗುರಾಣಿ, ಬಿಲ್ಲು/ಬಾಣ ಗಳನ್ನು ಹಿಡಿದ ಅಂಕನು ಎಚ್ಚರ ತಪ್ಪಬಾರದು. #ಕೈಮರೆ ತರೆ ಇದಿರಾಳು / ಮಾರಂಕ ನು ಬಂದು ಇರಿಯದೆ ಬಿಡನು!
ಭಕ್ತಿಯೂ ಕಾಳಗದ ರೀತಿ. #ಮತಿಮರೆ ಯಬಾರದು. ಮರೆತರೆ ಪಾಪವು ತನುವನ್ನು ಅಂಡಲೆವುದ ಮಾಡದೆ ಬಿಡದು. ಅಂಡಲೆ ಎಂದರೆ ೧ ಕಾಡು, ಪೀಡಿಸು ೨ ಕಷ್ಟಕ್ಕೆ ಒಳಗು ಮಾಡು, ೩ ಪೀಡೆ ೪ ಹಿಂಸೆ. ಕೆಲವೆಡೆ "ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!" ಎನ್ನುವರು ಬಸವಣ್ಣ.
ಕಾಳಗಕ್ಕೂ ಭಕ್ತಿಗೂ ಹೋಲಿಕೆಯಿದೆ. ಭಕ್ತನಿಗೂ ಸೈನಿಕನಿಗೂ ಅಬೇಧವಿದೆ.
ಕಾಳಗದಲ್ಲಿ ಕೈ ಮರೆಯಬಾರದು. ಭಕ್ತಿಯಲ್ಲಿ ಮತಿಮರೆಯಬಾರದು.
ಪಾಪಕ್ಕೂ ಕತ್ತಿಗೆ ಹೊಲಿಕೆಯಿದೆ. ಕಾಳಗದಲ್ಲಿ ಸದಾ ಶಸ್ತ್ರಗಳು ಆಡುತ್ತಿರಬೇಕು. ಭಕ್ತಿಯಲ್ಲಿ ಸದಾ ಕೂಡಲಸಂಗನ ನೆನಹು ಗುನುಗುನುಸಿತರಬೇಕು. ಇಲ್ಲದಿದ್ದರೆ ಕಾಳಗದಲ್ಲಿ ಎದುರಾಳಿಯ ಕತ್ತಿ ಮೈಯನ್ನು ಇರಿದು ಹಿಂಸೆಯಾಗುವುದು .. ಭಕ್ತಿಯಲಿ ಪಾಪವು ತನುವನ್ನು ಪೀಡಿಸುವುದು.
#ಹಂಡಲೆ ಯುವುದು ಎನ್ನುವ ಪದ ಇದೆ.. ನಾವೆಲ್ಲ ಹುಡುಗರಾಗಿದ್ದಾಗ.. "ಓದಲ್ಲ ಪಾದಲ್ಲ ಕೆಲಸ ಮಾಡಲ್ಲ.. ಬರೇ ಹಂಡಲೆಯುತ್ತಾನೆ" ಅಂತ ಬೈಸಿಕೊಂಡವರೇ.. ಈ ವಚನ ದಲ್ಲಿ ಪಾಪವು ಒಂದು ಹುಟ್ಟಿನಿಂದ ಇನ್ನೊಂದು ಹುಟ್ಟಿಗೆ ಹಂಡಲೆಯುವಂತೆ ಮಾಡುವುದು ಎಂಬ ಅರ್ಥ ಕೊಡುವುದು. ಮುಕ್ತಿಗೆ ಮದ್ದು ಓಂ ನಮಃ ಶಿವಾಯ ಎಂಬ ಮಂತ್ರ ಎನ್ನುವುದನ್ನು ಬಸವಣ್ಣ ಈ ತರ ಹೇಳಿದ್ದಾರೆ.
ಕೂಡಲಸಂಗಯ್ಯನ ನೆನೆದರೆ ಪಾಪವು ಉರಿಗೆ ಒಡ್ಡಿದ ಅರಗಿನಂತೆ ಕರಗುವುದು. ಇಲ್ಲಿ ಕರ್ಪುರಕ್ಕೂ ಒಂದು ವಿಶೇಷತೆ ಇದೆ. #ಶಿಖಿಕರ್ಪುರಯೋಗ ಎಂದು ಶರಣರು ಆಗಾಗ್ಗೆ ಬಳಸುವರು. ಕರ್ಪೂರ ಕರಗಿದರೆ ಅಲ್ಲಿ ಬೂದಿ /ಕಲೆ ಮುಂತಾದವೇನೂ ಉಳಿಯುವುದಲ್ಲ. ಕೂಡಲಸಂಗಯ್ಯನನ್ನು ನೆನದರೆ ಪಾಪವೂ ಕರ್ಪುರದಂತೆ ಸಂಪೂರ್ಣ ಮಾಯವಾಗುವುದು. ಏನೂ ಉಳಿಯದು
ಈ ವಚನದಲ್ಲಿ #ಉಪಮೆ ಇದೆ .ದೃಷ್ಟಾಂತ ವಿದೆ. ಬಸವಣ್ಣನ ವಚನಗಳಲ್ಲಿನ #ಅಲಂಕಾರ ಗಳ ಬಗ್ಗೆ ಮಾತಾಡ್ತಾಲೇ ಹೋಗಬಹುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ