ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ!
ಇದೇನು ಸೋಜಿಗ ಹೇಳಾ? ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ,
ದೇವ ಬಂದಡೆ ದೇಗುಲ ಓಡಿತ್ತ ಕಂಡೆ, ಗುಹೇಶ್ವರಾ.
--- #ಅಲ್ಲಮಪ್ರಭು ಗಳು.
--
ವಾಚ್ಯಾರ್ಥ: ತುಂಬಿ ಎಂದರೆ ದುಂಬಿ ಎಂದು. ತುಂಬಿ ಬಂದರೆ ಪರಿಮಳ ಹೇಗೆ ಓಡುವುದು? ಮನವು ಬಂದಡೆ ಬುದ್ದಿ ಓಡುವುದು ಎಂದರೆ ಏನು? ಎಲ್ಲಿಗೆ ಓಡುವುದು? ದೇವ ಬಂದರೆ ದೇಗುಲ ಎಲ್ಲಿಗೆ ಯಾಕೆ ಹೇಗೆ ಓಡುವುದು? ಮೇಲ್ನೋಟಕ್ಕೆ ಏನೂ ಅರ್ಥವಾಗದು.
ಈ ಬೆಡಗಿನ ವಚನವನ್ನು ಕೆಳಗಿನ ತರ ಅರ್ಥಮಾಡ್ಕೊಳ್ಳಬಹುದು.
೧. ತುಂಬಿ ಬಂದರೆ ಪರಿಪಳ ಓಡಿತ್ತು: "
ತುಂಬು, ಪರಿಪೂರ್ಣ, complete ಎಲ್ಲವೂ ಒಂದೇ ಹುರುಳಿನ ಪದಗಳು.
"ತುಂಬಿ ಬರುವುದು" ಎಂದರೆ ಪರಿಪೂರ್ಣರಾಗುವುದು. ಪರಿಮಳ ಎಂದರೆ ದೇಹವಾಸನೆ, ಭವವಾಸನೆ, ಹಳೆಯ ಜನ್ಮದ ವಾಸನೆಗಳು, ನಮ್ಮನ್ನು ಭವಕ್ಕೆ ಅಂಟಿಸಿರುವ ವಾಸನೆಗಳು. ಶಿವಗುಣಗಳು ಪರಿಪೂರ್ಣವಾಗಿ ಅಳವಟ್ಟರೆ ದೇಹವಾಸನೆ ಓಡಿಹೋಗುವುದು.
"ಸಮತೆಯೆಂಬ ಕಂಥೆ, ಅಮಿತವೆಂಬ ಭಸ್ಮ, ಲಿಂಗವೆಂಬ ಕರ್ಪರ, ಸರ್ವಜೀವದಯಾಪಾರಿ ಎಂಬ ವಿಮಲರುದ್ರಾಕ್ಷಿ, ನಿರ್ಮೋಹವೆಂಬ ಕೌಪೀನ, ನಿಸ್ಸಂದೇಹವೆಂಬ ಮೇಖಲಾ" ಹೊದ್ದವನು "#ಪರಿಪೂರ್ಣ ನೋಡಾ ನಮ್ಮ ಜಂಗಮನು” ಎಂಬ ಸಿದ್ಧರಾಮೇಶ್ವರದೇವರ ಉಕ್ತಿಯು ಯಾರು ಪರಿಪೂರ್ಣನು / ತುಂಬಿದವನು ಎಂಬ ಪದಕ್ಕೆ ವಿವರಣೆ ನೀಡುವುದು.
ಜಂಗಮಮೂರ್ತಿಯು ಅಂಗಗುಣಗಳ ಭಂಗಿಸಿ "ಲಿಂಗಗುಣ ಗಳನ್ನು ಆಂಗವಿಸಿಕೊಂಡ ಕೂಡಲಸಂಗಮವಾಗಬೇಕು". ಸರ್ವಾಂಗಲಿಂಗಿಯಾಗಬೇಕು, ಸರ್ವಾಂಗ ಲಿಂಗಸಾಹಿತ್ಯ ಉಳ್ಳವರಾಗಬೇಕು. ಇಂತರವರಲ್ಲಿ ಭವವಾಸನೆ ಅಳಿದು ಶಿವವಾಸನೆ ತುಂಬಿ ತುಳುಕುವದು.
೨. ಮನ ಬಂದಡೆ ಬುದ್ದಿ ಓಡಿತ್ತು:
"ಅತ್ತಲಿತ್ತ ಹರಿವ ಮನವ ಚಿತ್ತದಲ್ಲಿ ನಿಲಿಸಬಲ್ಲಡೆ ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು" ಎನ್ನುವ ಅನುಭಾವ ಅಲ್ಲಮರದ್ದು. ನನ್ನ ನೋಟದಲ್ಲಿ ಈ ಸಾಲು ಇಡೀ #ಷಟ್‍ಸ್ಥಲ ಸಿದ್ದಾಂತದ ಸಾರಾಂಶ. #ಶಿವಯೋಗ ದ ಪರಮಗುರಿ. ಮನಬಂದಡೆ ಎನ್ನುವ ಮಾತೂ ಇದನ್ನೇ ಸೂಚಿಸುವುದು.. ಬಚ್ಚ ಬರಿಯ ಬೆಳಗಿನ ಅನುಭಾವವನ್ನು! ಬುದ್ದಿ ಅನುಮಾನವನ್ನು, ದ್ವೈತಬಿದ್ದಿಯ ಕುರಿತು. ಮನ ನಿಂದಡೆ, ನಿಷ್ಠೆ ನೆಲೆಗೊಳ್ಳುವುದು.
೩. ದೇವ ಬಂದರೆ ದೇಗುಲ ಓಡಿತ್ತು:
ದೇವಬಂದರೆ = ಆತ್ಮಸಾಕ್ಷಾತ್ಕಾರ,
ದೇಗುಲ ಓಡಿತ್ತು = ದೇಹಭಾವನೆಯು ಹೊರಟುಹೋಯಿತು.
ಕಾಯ ಕೈಲಾಸವಾದ ಮೇಲೆ, ದೇಹ ದೇವಾಲಯ ವಾದ ಮೇಲೆ ಮತ್ತೆಲ್ಲಿಯ ದೇಗುಲಭಾವನೆ?! ಅಂಗವೆಲ್ಲ ಲಿಂಗವಾಗಲು ಅಂದರೆ ಸಂಗಸಮರಸವಿರಲು ದೇಹದೇಗುಲವಿರದು. ಅಂಗವು ಲಿಂಗವೇಧೆಯಾದ ಬಳಿಕ ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ? ಇದು ಕಾರಣ ಶರಣರು #ನಿರ್ದೇಹಿ ಗಳು. ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ? ಎರಡಕ್ಕೆ ಹೇಳಲಿಲ್ಲಯ್ಯಾ. ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪೆನು? ಅಂಬುಧಿಗೆ ಸೀಮೆಯಲ್ಲದೆ ಹರಿವ ನದಿಗೆ ಸೀಮೆ ಯುಂಟೇ? ಭಕ್ತಂಗೆ ಸೀಮೆಯಲ್ಲದೆ ಪರಾತ್ಪರ ಜಂಗಮಕ್ಕೆ ಸೀಮೆಯುಂಟೇ? ಕೂಡಲಸಂಗಮದೇವ.
ಮಾನವ ಭಕ್ತನಾಗುವುದು, ಭಕ್ತ ಶರಣನಾಗುವುದು ಒಂದೆರಡು ಹಂತಗಳಾದರೆ, ಮೇಲಿನದ್ದು ಶರಣ ಶಿವನಾಗುವುದು! ಬಯಲಾಗುವುದು.
#ಬಯಲು, #ಬೆಡಗಿನವಚನ #ಅಲ್ಲಮ #ಅರಿವಿನಗುರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ