ಶುಕ್ರವಾರ, ಮಾರ್ಚ್ 07, 2014

ಪ್ರಭುದೇವರ ವಚನಗಳಲ್ಲಿ ಪ್ರಣವ

ಪ್ರಣವದರ್ಥ 
ಪ್ರಣಮವನುಚ್ಚರಿಸುವ ಪ್ರಮಾಣಿಕರೆಲ್ಲರು,
ಪ್ರಣವಮಂತ್ರದರ್ಥವ ತಿಳಿದು ನೋಡಿರೆ.
ಪ್ರಣವ `ನಾಹಂ' ಎಂದುದೆ ?
ಪ್ರಣವ `ಕೋಹಂ' ಎಂದುದೆ ?
ಪ್ರಣವ `ಸೋಹಂ' ಎಂದುದೆ ?
ಪ್ರಣವ `ಚಿದಹಂ' ಎಂದುದೆ ? ಎನ್ನದಾಗಿ,
ಪ್ರಣವ `ಭರ್ಗೋದೇವಸ್ಯ ಧೀಮಹಿ' ಎಂದುದು.
``
ಸವಿತುಃ ಪದಮಂಗಃ ಸ್ಯಾತ್ ಭರ್ಗಸ್ತು ಲಿಂಗಮೇವ ಚ
ಧೀಮಹಿ ಪದಮಿತ್ಯೇಷಾಂ ಗಾಯತ್ರ್ಯಾಂ ಲಿಂಗಸಂಬಂಧಃ '' ಎಂದುದಾಗಿ
ಪ್ರಣವದರ್ಥ ತಾನೆ ನಿಮ್ಮ ಮಯವು ಗುಹೇಶ್ವರಾ.


ಪ್ರಣವ ರೂಪ
ಬಿಂದುವೆ ಪೀಠವಾಗಿ, ನಾದವೇ ಲಿಂಗವಾದಡೆ
ಅದು ಭಿನ್ನಲಿಂಗ ನೋಡಾ.
ಕಳೆ ಎಂಬ ಪೂಜೆ ನಿರ್ಮಾಲ್ಯವಾಗಿ,
ನಾದಬಿಂದುಕಳಾತೀತ ನೋಡಾ ಮಹಾಘನವು.
ಅಲ್ಲಿ ಇಲ್ಲಿ ಸಿಲುಕಿದ ಅಚಲವಪ್ಪ ನಿರಾಳವ
ಪ್ರಣವರೂಪೆಂದು ಹೆಸರಿಡಬಹುದೆ ?
ನಮ್ಮ ಗುಹೇಶ್ವರನ ನಿಲುವು `ನಿಶ್ಯಬ್ದಂ ಬ್ರಹ್ಮ ಉಚ್ಯತೇ'
ಎಂಬುದನರಿಯಾ ಸಿದ್ಧರಾಮಯ್ಯಾ ?

ಪ್ರಣವ ಬೆಳಗು
ಪಂಚಬ್ರಹ್ಮಮೂರ್ತಿ ಪ್ರಣವ ಮಂತ್ರರೂಪ
ಪಂಚಮುಖ ದಶಭುಜ ಫಣಿಯ ಮಣಿಯ ಮೇಲೆ ನೋಡುತ್ತೈದಾನೆ!
ಸಮತೆ ಸಮಾಧಿಯೆಂಬ ಸಮರಸದೊಳಗೆ;
ಚಂದ್ರಕಾಂತಕೊಡದಲ್ಲಿ ಅಮೃತವ ತುಂಬಿ,
ಕೊಡನೊಡೆಯದೆ ಬೆಳಗುತ್ತಿದೆ, ಗುಹೇಶ್ವರಾ.
ಪ್ರಣವಮಂತ್ರ
ಪ್ರಣವಮಂತ್ರವ ಕರ್ಣದಲ್ಲಿ ಹೇಳಿ,
ಶ್ರೀಗುರು ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷ್ಟೆಯ ಮಾಡಿದ ಬಳಿಕ,
ಪ್ರಾಣದಲ್ಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೆ ಲಿಂಗದೇವನು ಮಲ ಮೂತ್ರ ಮಾಂಸದ ಹೇಸಿಗೆಯೊಳಗೆ ?
ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ ?
ಆ ಪ್ರಾಣವ ತಂದು ತನ್ನ ಇಷ್ಟಲಿಂಗದಲ್ಲಿ ಇರಿಸಿ ನೆರೆಯ ಬಲ್ಲಡೆ,
ಆತನೆ ಪ್ರಾಣಲಿಂಗಸಂಬಂಧಿ.
ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು



ಪ್ರಣವ ಪ್ರಭೆ 
ಪ್ರಾಣಲಿಂಗ ಪರಾಪರವೆಂದರಿದು,
ಅಣು ರೇಣು ತೃಣ ಕಾಷ್ಠದಲ್ಲಿ ಕೂಡಿ ಪರಿಪೂರ್ಣಶಿವನೆಂದರಿದು,
ಇಂತು ಕ್ಷಣವೇದಿ ಅಂತರಂಗವ ವೇಧಿಸಲ್ಕೆ
ಅಗಣಿತ ಅಕ್ಷೇಶ್ವರ ತಾನೆಂದರಿದು
ಪ್ರಣವಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ,
ಗುಹೇಶ್ವರಾ ನಿಮ್ಮ ಶರಣನುಪಮಾತೀತನು.

ಮೂರು ಪ್ರಣವ
ನಾನು ಗುರುಲಿಂಗಜಂಗಮದಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಪಾದೋದಕ ಪ್ರಸಾದದಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಮೂರು ಪ್ರಣವಗಳಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಪುರಾತನರ ಮೇಲುಪಂಕ್ತಿಗಳಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಶರಣರುಗಳಲ್ಲಿ ನಿಷ್ಠೆವಿಡಿದು,
ಬೇಡಿ ಹಾಡಿ ಹೊಗಳಿ ಐದು ಬಗೆಯ ಜಪವ ಜಪಿಸಿ
ಬೇಡಿಕೊಂಡು ಬದುಕಿದೆನಯ್ಯಾ.
ಗುಹೇಶ್ವರಾ ನಿಮ್ಮ ಶರಣ ಬಸವಣ್ಣನ ಸನ್ನಿಧಿಯಿಂದ
ನಾನು ಕೃತಾರ್ಥನಾದೆನಯ್ಯಾ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ