ಭಾನುವಾರ, ಡಿಸೆಂಬರ್ 26, 2010

ವಚನಗಳಲ್ಲಿ ಪ್ರಣವ -3

ಆ ಪರಬ್ರಹ್ಮವೆ ಓಂಕಾರವಪ್ಪ ಪ್ರಣವಸ್ವರೂಪು, ಪರಮಾತ್ಮನೆನಿಸಿ
ಪರಶಿವನಾಮದಿಂ ಪರಶಕ್ತಿಸಂಯುಕ್ತವಾಗಿ,
ಆಕಾರ ಉಕಾರ ಮಕಾರವೆಂಬ ಬೀಜಾಕ್ಷರಂಗಳಿಂ ನಾದಬಿಂದುಕಳೆಯಾಗಿ,
ದಶನಾಡಿ ದಶವಾಯು ದಶವಿಧೇಂದ್ರಿಯ
ಸಪ್ತಧಾತು ಷಡುಚಕ್ರ ಷಡುವರ್ಗ ಪಂಚಭೂತ
ಚತುರಂತಃಕರಣ, ತ್ರಿದೋಷಪ್ರಕೃತಿ,
ತ್ರಯಾವಸ್ಥೆ, ಸತ್ವ ರಜ ತಮ, ಅಂಗ ಪ್ರಾಣ, ಅರಿವು ಭಾವ ಜ್ಞಾನ,
ಮೊದಲಾದ ಬಾಹತ್ತರ ವಿನಿಯೋಗಮಂ ತಿಳಿದು
ಭೂಲೋಕ ಭುವರ್ಲೋಕ ಸ್ವರ್ಲೋಕ ಮಹರ್ಲೋಕ ಜನಲೋಕ
ತಪೋಲೋಕ, ಸತ್ಯಲೋಕ,
ಅತಳ, ವಿತಳ, ಸುತಳ, ಮಹಾತಳ, ರಸಾತಳ, ತಳಾತಳ, ಪಾತಾಳಂಗಳೊಳಗಾದ
ಚತುರ್ದಶಭುವನಂಗಳೊಳಹೊರಗೆ ಅಂತರ್ಗತ ಬಹಿರ್ಗತವಾಗಿ,
ನಾದಮಂ ತೋರಿ ಭರ್ಗೊದೇವನೆಂಬ ನಾಮಮಂ ತಳೆದು
ಊಧ್ರ್ವರೇತುವೆನಿಸಿ,
ವಿಶ್ವತೋಮುಖ, ವಿಶ್ವತಶ್ಚಕ್ಷು, ವಿಶ್ವತೋ ಬಾಹು, ವಿಶ್ವತಃಪಾದದಿಂ
ವಿಶ್ವಗರ್ಭೀಕೃತವಾಗಿ,
ಉತ್ಪತ್ತ್ಯಸ್ಥಿತಿಲಯಂಗಳನೆಣಿಕೆಗೆಯ್ಯದೆ
ದೇವತಾಂತರದಿಂ ಮಾನಸಾಂತರವನನುಕರಿಸಿ,
ಮಾನಸದಲ್ಲಿ ರವಿಕೋಟಿತೇಜದಿಂ ಸಕಲಪಾಪಾಂಧಕೂಪಮಂ ತೊಳೆದು
ಸುರಕ್ಷಿತದಿಂ ಪ[ರಾ] ಪಶ್ಯಂತಿ ಸುಮಧ್ಯ ವೈಖರಿಯೆಂಬ ಚತುವರ್ಿಧದಿಂ
ದುರಿತ ದುರ್ಮದ ಕಾಲಮೂಲಾದಿಮೂಲಮಂ ಬಗೆಗೊಳ್ಳದೆ,
ಚಿತ್ಸುಧಾಮೃತವೆ ಅಂಗವಾಗಿ
ಚಿದರ್ಕಪ್ರಭಾಕರವೆ ಪ್ರಾಣವಾಗಿ,
ಸೌರಾಷ್ಟ್ರ ಸೋಮೇಶ್ವರನಿಂತಿಂತು ಕರ್ತನು-ಭರ್ತನು ತಾನೆ ಆಗಿ,
ಪರಮಸ್ವಯಂಭೂ ಸ್ವತಃಸಿದ್ಧದಿಂ ಸಚ್ಚಿದಾನಂದಸ್ವರೂಪದಿಂ
ನಿತ್ಯಪರಿಪೂರ್ಣತ್ವದಿಂದೆಡದೆರಹಿಲ್ಲದಿರ್ಪನಯ್ಯಾ.
................

೫. ಜೀವಭಾವದ ಹಂಸ ಜಪದಲ್ಲಿ ದ್ವಾದಶಾಂತ ಕೂಡಿ ಶಿವಜಪವಾಯಿತ್ತು.
ಆ ಶಿವಜಪದಲ್ಲಿಯೇ ಪ್ರಣವವಡಕವಾಗಿಪ್ಪುದು.
ಇದಕ್ಕೆ ಶ್ರುತಿ:
`ತದ್ಯೋ ಹಂಸಃ ಸೋಹಂ ಯೋಸೌಸೋಹಂ'
ಆ ಪ್ರಣವದ ನಿರಾಳದಾದಿಬಿಂದು,
ಆ ಬಿಂದುವಿನ ಸ್ವಯಂಪ್ರಕಾಶಲಿಂಗವೇ ತಾವಾಗಿಪ್ಪರಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.

                                                             ...............ಆದಯ್ಯ



ವಚನದಲ್ಲಿ ಪ್ರಣವ 2

ಆ ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣಮದ
ಜ್ಯೋತಿಸ್ವರೂಪದಲ್ಲಿ ಮನಸ್ಸು ಪುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶ್ರೋತ್ರ ಪುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ತ್ವಕ್ಕು  ಪುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನೇತ್ರ  ಪುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಜಿಹ್ವೆ  ಪುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಘ್ರಾಣ  ಪುಟ್ಟಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ :
ಓಂಕಾರ ಜ್ಯೋತಿರೂಪೇ ಚ ಮಾನಸಂ ಚ ಸಮುದ್ಭವಂ |
ಓಂಕಾರ ದರ್ಪಣಾಕಾರೇ ಶ್ರೋತ್ರಂ ಚೈವ ಸಮುದ್ಭವಂ ||
ಓಂಕಾರರಾರ್ಧಚಂದ್ರೇ ಚ ತ್ವಕ್  ಚೈವ ಸಮುದ್ಭವಂ |
ಓಂಕಾರ ಕುಂಡಲಾಕಾರೇ ನೇತ್ರಂ ಚೈವ ಸಮುದ್ಭವಂ ||
ಓಂಕಾರ ದಂಡಕರೂಪೇ ಚ ಜಿಹ್ವಾ ಚೈವ ಸಮುದ್ಭವಂ |
ಓಂಕಾರ ತಾರಕರೂಪೇ ಘ್ರಾಣಂ ಚೈವ ಸಮುದ್ಭವಂ |
ಇತಿ ಷಷ್ಠಮುಖಂ ದೇವಿ ಸ್ಥಾನಸ್ಥಾನೇಷು ಜಾಯತೇ ||
ಎಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.

............ ಬಾಲಸಂಗಯ್ಯ ಅಪ್ರಮಾಣದೇವ

ವಚನಗಳಲ್ಲಿ ಪ್ರಣವ!

ಪ್ರಣವದ ಚಿನ್ನಾದವೆ ಅಕಾರ,
ಪ್ರಣವದ ಚಿದ್ಬಿಂದುವೆ ಉಕಾರ,
ಪ್ರಣವದ ಚಿತ್ಕಲೆಯೆ ಮಕಾರ.
ಪ್ರಣವದ ಬಟ್ಟೆಯೆ ಬಕಾರ,
ಪ್ರಣವದ ಸೋಪಾನವೆ ಸಕಾರ,
ಪ್ರಣವದ ವರ್ತನೆಯೆ ವಕಾರ.
ಪ್ರಣವದ ಬಹಳಾಕಾರವೆ ಬಕಾರ
ಪ್ರಣವದ ಸಾಹಸವೆ ಸಕಾರ,
ಪ್ರಣವದ ವಶವೆ ವಕಾರ.
ಪ್ರಣವದ ಬರವೆ ಬಕಾರ,
ಪ್ರಣವದ ಸರವೆ ಸಕಾರ,
ಪ್ರಣವದ ಇರವೆ ವಕಾರ.
ಪ್ರಣವದ ಬಲ್ಮೆಯೆ ಬಕಾರ,
ಪ್ರಣವದ ಸಲ್ಮೆಯೆ ಸಕಾರ,
ಪ್ರಣವದ ಒಲ್ಮೆಯೆ ವಕಾರ.
ಪ್ರಣವದ ಪಶ್ಯಂತಿವಾಕೇ ಬಕಾರ,
ಪ್ರಣವದ ಸೂಕ್ಷ್ಮವಾಕೇ ಸಕಾರ,
ಪ್ರಣವದ ವೈಕಲ್ಯವಾಕೇ ವಕಾರ.
ಪ್ರಣವದ ಬಹಳ ಜ್ಞಾನವೆ ಬಕಾರ,
ಪ್ರಣವದ ಸಹಜ ಜ್ಞಾನವೆ ಸಕಾರ,
ಪ್ರಣವದ ಶುದ್ಧ ಜ್ಞಾನದೀಪ್ತಿಯೆ ವಕಾರ.
ಪ್ರಣವದ ಮೂಲವೆ ಬಕಾರ,
ಪ್ರಣವದ ಶಾಖೆಯೆ ಸಕಾರ,
ಪ್ರಣವದ ಫಲವೆ ವಕಾರ.
ಪ್ರಣವದ ಬಹಳ ನಾದವೆ ಬಕಾರ,
ಪ್ರಣವದ ಸನಾದವೆ ಸಕಾರ,
ಪ್ರಣವದ ಸುನಾದವೆ ವಕಾರ.
ಪ್ರಣವದ ಭಕ್ತಿಯೆ ಬಕಾರ,
ಪ್ರಣವದ ಸುಜ್ಞಾನವೆ ಸಕಾರ,
ಪ್ರಣವದ ವೈರಾಗೈವೆ ವಕಾರ.
ಪ್ರಣವದ ಶಬ್ದವೆ ಬಕಾರ,
ಪ್ರಣವದ ನಿಃಶಬ್ದವೆ ಸಕಾರ,
ಪ್ರಣವದ ಶಬ್ದ ನಿಶಬ್ದದ ವಾಕುಗಳೆ ವಕಾರ.
ಇಂತಪ್ಪ ಪ್ರಣವ ಮಂತ್ರಂಗಳೇ
ಬಸವಾ ಎಂಬ ಪ್ರಣವ ನಾದತ್ರಯಸಂಬಂಧವಾದುದಂ
ತ್ರಿಪುರಾಂತಕಲಿಂಗದಲ್ಲಿ ಅರಿದು ಸುಖಿಯಾಗಿ
ಆನು  ಬಸವಾ, ಬಸವಾ, ಬಸವಾ, ಎಂದು
ಜಪಿಸುತ್ತಿದ್ದೆನಯ್ಯಾ.

                                         ....................ಕಿನ್ನರಿ ಬ್ರಹ್ಮಯ್ಯ

ಸೋಮವಾರ, ಡಿಸೆಂಬರ್ 13, 2010

ಕುರುಹು ಹಿಡಿದ ಕಾರಣ!

ಅರಿಯದ ಕಾರಣ ಕುರುಹುವಿಡಿವೆನಲ್ಲದೆ
ಅರಿದ ಬಳಿಕ ಇನ್ನೇನೊ ?
ಬಿಟ್ಟಡೆ ಸಮಯವಿರೋಧ, ಬಿಡದಿದ್ದರೆ ಜ್ಞಾನವಿರೋಧ.
ಗುಹೇಶ್ವರಲಿಂಗವು ಉಭಯ ದಳದ ಮೇಲೈದಾನೆ ಕಾಣಾ ಸಿದ್ಧರಾಮಯ್ಯಾ
                                                                        ............................ಅಲ್ಲಮ ಪ್ರಭು


ಇದು ಶರಣರ ತತ್ವದ ಪ್ರಮುಖ ಅಂಶ. ಇಷ್ಟ ಲಿಂಗದ ಅವಶ್ಯಕತೆಯ ಬಗ್ಗೆ ಸ್ಪಷ್ಟತೆ ನೀಡುತ್ತೆ.

ಸೋಮವಾರ, ಸೆಪ್ಟೆಂಬರ್ 13, 2010

ಮನದೊಳಗಣ ಕಿಚ್ಚು!

ಮನದೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ
ನೆರೆಮನೆಯ ಸುಡದೋ
ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಕೇಡೇನು (ಛೇಗೇನು)
ತನುವಿನ ಕೋಪ ತನ್ನ ಹಿರಿಯತನದ ಕೇಡು
ಮನದ ಕೋಪ ತನ್ನರಿವಿನ ಕೇಡು ಕೂಡಲಸಂಗಮದೇವ
                                    ............... ಬಸವಣ್ಣ


Get this widget | Track details | eSnips Social DNA

ಭಾನುವಾರ, ಜುಲೈ 18, 2010

ತನ್ನ ತಾನು ತಿಳಿದ ಮೇಲೆ ಇನ್ನೇನೋ ?

ತನ್ನ ತಾನು ತಿಳಿದ ಮೇಲೆ ಇನ್ನೇನ್ ಇನ್ನೇನೋ
ತನ್ನಂತೆ ಸರ್ವರ ಜೀವ ಮನ್ನಿಸಿ ಮೂಖಾದ ಮೇಲೆ

ತಾನೇ ಪೃಥ್ವಿ ತೇಜವಾಯು ಆಕಾಶ
ತಾನೇ ಸೂರ್ಯ ಚಂದ್ರ ತಾರೆ
ತಾನೆ ಬ್ರಹ್ಮಾಂಡದ ಮೇಲೆ

ತಾನೇ ಪ್ರಾಣಜಿಹ್ವೆ ನೇತ್ರ ವಾಕ್ಕು ಶ್ರೋತೃ ಹೃದಯ
ತಾನೇ ಕಾಯ ಕರಣ ಹರಣ
ತಾನೇ ಪಿಂಡಾಂಡದ ಮೇಲೆ

ತಾನೇ ಹೆತ್ತ ಸತ್ತ ಅಕ್ಕ ತಾನೇ ನಿತ್ಯ ಮುಖ್ಯ ಸತ್ಯ
ತಾನೇ ಅಕ್ಕ ಬೆರ್ತ ಮರ್ತ
ತನ್ನೆ ಸರ್ವನಾದ ಮೇಲೆ

ತಾನೇ ಲಕ್ಷ್ಯ ಸಾವಿರ ನೂರು ಹತ್ತೊಂಬತ್ತೆಂಟ್ಏಳು
ತಾನೇ ಆರೈದು ನಾಲ್ಕು ಮೂರು
ತಾನೇ ಎರಡೊಂದಾದಮೇಲೆ

ತಾನೇ ನೀನು ನೀನೆ ತಾನು ತಾನೇ ಅಲ್ಲ ತಾನೇ ಇಲ್ಲ
ತಾನೇ ಮಹಾಂತ ತಾನೇ ತಾನು
ಏನೋ ಏನೊಂದಾದ ಮೇಲೆ

ತನ್ನ ತಾನು ತಿಳಿದ ಮೇಲೆ ಇನ್ನೇನ್ ಇನ್ನೇನೋ
ತನ್ನಂತೆ ಸರ್ವರ ಜೀವ ಮನ್ನಿಸಿ ಮೂಖಾದ ಮೇಲೆ

                     ............. ಕಡಕೋಳ ಮಡಿವಾಳಪ್ಪ


ಎತ್ತನೇರಿ ಎತ್ತನೆರಸುವರು

ಭಾವದೊಲ್ಲಬ್ಬ ದೇವರ ಮಾಡಿ
ಮನದೊಲ್ಲೊಂದು ಭಕ್ತಿಯ ಮಾಡಿ
ಕಾಯದ ಕೈಯಲಿ ಕಾಯ ಉಂಟೆ
ವಾಯಕ್ಕೆ ಬಳಲುವರು ನೋಡ
ಎತ್ತನೇರಿ ಎತ್ತನೆರಸುವರು
ಎತ್ತ ಹೋದರಯ್ಯ ಗುಹೇಶ್ವರಾ

............. ಅಲ್ಲಮ ಪ್ರಭು

http://www.raaga.com/player4/?id=72718&mode=100&rand=0.18715097568929195

ಕುರುಹಳಿದು.. ಅರಿವರಿದು!

ದೇಹಭಾವವಳಿದಲ್ಲದೆ ಜೀವ ಭಾವವಳಿಯದು
ಜೀವ ಭಾವವಳಿದಲ್ಲದೆ ಭಕ್ತಿ ಭಾವವಳವಡದು
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು
ಕುರುಹು ನಷ್ಟವಾಗಲ್ಲದೆ ಮಾಯೆ ಹಿಂಗದು
ಇದು ಕಾರಣ ಕಾಯದ ಜೀವದ ಹೊಲಿಗೆ ಅಳಿದ ಭೇಧವ ತಿಳಿಯಬಲ್ಲರೆ
ಗುಹೇಶ್ವರಲಿಂಗದ ಅರಿವು ಸಾಧ್ಯಬಹುದು ಸಿದ್ದರಾಮಯ್ಯ

..................ಅಲ್ಲಮ ಪ್ರಭು

http://www.raaga.com/player4/?id=72720&mode=100&rand=0.4384112348780036

.......................



ಸೋಮವಾರ, ಜುಲೈ 05, 2010

ಬಯಲು












೧.
ಬಯಲ ರೂಪ ಮಾಡಬಲ್ಲಾತನೆ ಶರಣನು,
ಅ ರೂಪ ಬಯಲ ಮಾಡ ಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುನ್ಟೆ ಕೂಡಲಸಂಗಮದೇವ !

೨.
ಮೇಲನರಿತಲ್ಲಿ ಕೀಳಿಲ್ಲ
ಕೀಳನರಿತಲ್ಲಿ ಮೇಲಿಲ್ಲ
ಮೇಲುಕೀಳೆಂಬ ಬೋಳು ಮಾಡಿ
ಧೂಳಾಗಬಲ್ಲರೆ ಹೇಳಲಿಲ್ಲ ಕೇಳಲಿಲ್ಲ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಮಿಗೆ ಮಿಗೆ ಬಯಲು

೩.
ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವಿರಯ್ಯ !
ಬಯಲು ಬತ್ತಲೆಯಾದಡೆ
ಏನನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ - ಗುಹೇಶ್ವರ ?

೪.
ಎನ್ನ ಕಾಯ ಮಣ್ಣು ಜೀವ ಬಯಲು
ಆವುದ ಹಿಡಿವೆನಯ್ಯ ದೇವ
ನಿನ್ನನಾವ ಪರಿಯಲಿ ನಾ ನೆನೆವೆನಯ್ಯ
ಎನ್ನ ಮಾಯೆಯನ್ನು ಮಾಣಿಸಯ್ಯ
ಚೆನ್ನ ಮಲ್ಲಿಕಾರ್ಜುನಯ್ಯ

೫.
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ
ಆತನ ವಿದ್ಯಾಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ
ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು
ಆತನ ಕೋಪಕ್ರೋಧದಿಂದ ಹುಟ್ಟಿದಾತ ರುದ್ರ
ಈ ಮೂವರ ಪೀಠವಂತಿರಲಿ
ಆ ಶರಣನನರಿದು ಶರಣೆನುತ್ತಿದ್ದೆನು ಕೂಡಲಚೆನ್ನಸಂಗಮದೇ

೬.
ಬಯಲು ಲಿಂಗವೆಂಬೆನೆ? ಬಗಿದು ನಡೆದಲ್ಲಿ ಹೋಯಿತ್ತು
ಬೆಟ್ಟ ಲಿಂಗವೆಂಬೆನೆ? ಮೆಟ್ಟಿ ನಿಂದಲ್ಲಿ ಹೋಯಿತ್ತು
ತರುಮರಾದಿಗಳು ಲಿಂಗವೆಂಬೆನೆ! ತರಿದಲ್ಲಿ ಹೋಯಿತ್ತು
ಲಿಂಗ-ಜಂಗಮದ ಪಾದವೆ ಗತಿಯೆಂದು ನಂಬಿದ ಸಂಗನ ಬಸವಣ್ಣನ
ಮಾತು ಕೇಳದೆ ಕೆಟ್ಟೆನಯ್ಯ, ಚೆನ್ನಮಲ್ಲಿಕಾರ್ಜುನ

೭.
ಸತ್ಯವೂ ಅಲ್ಲ, ಅಸತ್ಯವೂ ಅಲ್ಲ, ಸಹಜವೂ ಇಲ್ಲ
ಅಸಹಜವೂ ಇಲ್ಲ, ನಾನು ಇಲ್ಲ, ನೀನೂ ಇಲ್ಲ,
ಇಲ್ಲ ಇಲ್ಲ ಎಂಬುವುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು.

೮.
ಕಳಾಧರ ಧರೆ ವಾರಿಧಿ ಸಹಿತ ಆರೂ ಇಲ್ಲದಂದು,
ಧರೆ ಅಂಬರ ವಾರಿಧಿ ಸಹಿತ ಆರೂ ಇಲ್ಲದಂದು
ಪ್ರಥಮನೊಬ್ಬನಿದ್ದನು ಓಂದನಂತ ಕಾಲ.
ನಿರವಯ ನಿರ್ಮಾಯನಾಗಿದ್ದನೊಂದು ಕೋಟ್ಯಾನುಕೋಟಿ ವರುಷ
ಅಲ್ಲಿ ಅನಾಗತವುಂಟು...
ಮತ್ತಂತಲ್ಲಿಯೆ ನಿರಾಳವ ಬೆರಸಿ, ಬಯಲು ಬೆಸಲಾಯಿತ್ತು ...

೯.
ತನುವೆಲ್ಲ ಜರಿದು, ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯ ಎನಗೆ
ಭಾವವಿಲ್ಲದ ಬಯಲ ಸುಖವು ಭಾವಿಸಿದಡೆಂತಹುದು
ಬಹುಮುಖರುಗಳಿಗೆ
ಕೇಳಯ್ಯ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವ
ನಾನಳಿದು ನೀನುಳಿದ ಪರಿಯ ತೋರಯ್ಯ ಪ್ರಭುವೆ

೧೦.
ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ ||ಪಲ್ಲವ||
ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ ||೧||
ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ ||೨||
ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು ||೩||

೧೧.
ಅರಸಿ ಮರೆವೊಕ್ಕೊಡೆ ಕಾವ ಗುರುವೇ,
ಜಯ ಜಯ ಗುರುವೇ
ಆರೂ ಅರಿಯದ ಬಯಲೊಳಗೆ ಬಯಲಾಗಿ
ನಿಂದ ನಿಲವ ಹಿಡಿದೆನ್ನ ಕರದಲ್ಲಿ ತೋರಿದ ಗುರುವೇ
ಚೆನ್ನಮಲ್ಲಿಕಾರ್ಜುನ ಗುರುವೇ, ಜಯ ಜಯ ಗುರುವೇ.

೧೨ .
ವೇದಶಾಸ್ತ್ರಾಗಮ ಪುರಾಣಗಳೆಂಬುವ
ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿ ಭೋ!
ಅವ ಕುಟ್ಟಲೇಕೆ?
ಅತ್ತಲಿತ್ತ ಹರಿವ ಮನದ ಶಿವನರಿಯಬಲ್ಲಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ.

೧೩.
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
ಐವರು ಮಕ್ಕಳು ಜನಿಸಿದರೆಂತೆಂಬೆ?!
ಒಬ್ಬ ಭಾವದರೂಪ, ಒಬ್ಬ ಪ್ರಾಣದರೂಪ,
ಒಬ್ಬನೈಮುಖನಾಗಿ ವಿಶ್ವಕ್ಕೆ ಕಾಯರೂಪಾದ
ಇಬ್ಬರು ಉತ್ಪತ್ತಿಸ್ಥಿತಿಗೆ ಕಾರಣರಾದರು
ಐಮುಗನರಮನೆ ಸುಖವಿಲ್ಲೆಂದರಿದವನಾಗಿ
ಇನ್ನು ಕೈಲಾಸವನು ಹೊಗೆ ಹೊಗೆ!
ಮರ್ತ್ಯಕ್ಕೆ ಅಡಿಯಿಡೆನು
ಚೆನ್ನಮಲ್ಲಿಕಾರ್ಜುನದೇವ ನೀನೆ ಸಾಕ್ಷಿ!

೧೪.
ಶಿವಶಿವಾ ಆದಿಅನಾದಿಯೆಂಬೆರಡೂ ಇಲ್ಲದೆ
ನಿರವಯವಾಗಿಪ್ಪ ಶಿವನೇ, ನಿಮ್ಮ ನಿಜವನಾರು ಬಲ್ಲರಯ್ಯ?
ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು,
ಪುರಾಣಕ್ಕಗಮ್ಯನು, ಆಗಮಕ್ಕಗೋಚರನು, ತರ್ಕಕ್ಕತರ್ಕ್ಯನು
ವಾಙ್ಮನಕ್ಕತೀತವೆನಿಪ ಪರಶಿವಲಿಂಗನು
ಕೆಲಬರು ಸಕಲನೆಂಬರು, ಕೆಲಬರು ನಿಷ್ಕಲನೆಂಬರು
ಕೆಲವರು ಸೂಕ್ಷ್ಮನೆಂಬರು, ಕೆಲವರು ಸ್ಥೂಲನೆಂಬರು
ಈ ಬಗೆಯ ಭಾವದಿಂ ಹರಿ-ಬ್ರಹ್ಮ-ಇಂದ್ರ-ಚಂದ್ರ
ರವಿ-ಕಾಲ-ಕಾಮ-ದಕ್ಷ-ದೇವ-ದಾನವ-ಮಾನವರೊಳಗಾದವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾಗಿ ಹೋದರು
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು
ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಬಂದು
ವೀರಶೈವಮಾರ್ಗವರಿಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನು ಅದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿರುದ್ರಾಕ್ಷಿಧಾರಕನು
ಪಂಚಾಕ್ಷರಿಭಾಷಾಸಮೇತನು, ಲಿಂಗಾಂಗಸಂಬಂಧಿ,
ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣ ಸಂಗಮೇಶ್ವರನು, ತ್ರಿವಿಧದಲ್ಲಿ ಆಯತನು,
ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವಸ್ಮರಣೆಯ ಹೊದ್ದ
ಭವಿಸಂಗವ ಮಾಡ, ಭವಪಾಶವ ಕೊಳ್ಳ,
ಪರಸತಿಯ ಬೆರೆಸ, ಪರಧನವನೊಲ್ಲ,
ಪರನಿಂದೆಯನಾಡ, ಅನೃತವ ನುಡಿಯ, ಹಿಂಸೆಯ ಮಾಡ,
ತಾಮಸಭಕ್ತಸಂಗವ ಮಾಡ,
ಅರ್ಥ-ಪ್ರಾಣಾಭಿಮಾನ ಮುಂತಾಗಿ ಗುರುಲಿಂಗಜಂಗಮಕ್ಕೆ ಅರ್ಪಿಸಿ
ಪ್ರಸಾದ ಮುಂತಾಗಿ ಭೋಗಿಸುವ,
ಜಂಗಮನಿಂದೆಯ ಸೈರಿಸ, ಪ್ರಸಾದನಿಂದೆಯ ಕೇಳ,
ಅನ್ಯರನಾಶೆಗೈಯ್ಯ ಪಾತ್ರಾಪಾತ್ರವನರಿದೀವ
ಚತುರ್ವಿಧ ಪದವಿಯ ಹಾರ, ಅರಿಷಡ್ವರ್ಗಕ್ಕಳುಕ
ಕುಲಾದಿ ಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ
ಸಂಕಲ್ಪ ವಿಕಲ್ಪವ ಮಾದುವನಲ್ಲ, ಕಾಲೋಚಿತವ ಬಲ್ಲ,
ಕ್ರಮಯುಕ್ತವಾಗಿ ಷಟ್ಝಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ-
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆವ ನಮ್ಮ ಬಸವಣ್ಣನು
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನ

೧೫.
ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ಬಯಲಾಯಿತ್ತು
ಪ್ರುಭುವೆ ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನ್ನ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನದೇವಯ್ಯ,
ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗೆ ಮತ್ತಾವುದಿಲ್ಲವಯ್ಯ ಪ್ರಭುವೆ

೧೬.
ಕಾಯದ ಕಾರ್ಪಣ್ಯವರತಿತ್ತು
ಕರಣಂಗಳ ಕಳವಳವಳಿದಿತ್ತು
ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು
ಇನ್ನೇವೆನಿನ್ನೇವೆನಯ್ಯ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ
ಬಯಕೆ ಬಯಲಾಗದು!
ಇನ್ನೇವೆನಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನ

೧೭.
ತನುವೆಲ್ಲ ಜರಿದು, ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯ ಎನಗೆ
ಭಾವವಿಲ್ಲದ ಬಯಲ ಸುಖವು ಭಾವಿಸಿದಡೆಂತಹುದು
ಬಹುಮುಖರುಗಳಿಗೆ
ಕೇಳಯ್ಯ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವ
ನಾನಳಿದು ನೀನುಳಿದ ಪರಿಯ ತೋರಯ್ಯ ಪ್ರಭುವೆ

೧೮.
ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ ||ಪಲ್ಲವ||
ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ ||೧||
ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ ||೨||
ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು ||೩||

























ಶನಿವಾರ, ಜೂನ್ 12, 2010

ನಂಬಿ ಕರೆದಡೆ ಓ ಎನ್ನನೇ?!


ನಂಬರು, ನೆಚ್ಚರು; ಬರಿದೆ ಕರೆವರು;
ನಂಬಲರಿಯರೀ ಲೋಕದ ಮನುಜರು!
ನಂಬಿ ಕರೆದಡೆ, ಓ ಎನ್ನನೇ ಶಿವನು ?
ನಂಬದೆ, ನೆಚ್ಚದೆ, ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ.

                                                 ........................ ಬಸವಣ್ಣ 

nambaru nechcharu....

ಭಾನುವಾರ, ಮೇ 30, 2010

ಅರಿದರಿದು ವಾದಿಸಿದರೆ!

ಆನೆಯ ಜರಿದು ಕೋಣವನೇರಿದರೆ ಆರೇನು ಮಾಡುವರು?|
ಕಸ್ತೂರಿ ಬಿಟ್ಟು ಜರಿದು ಕೆಸರ ಪೂಸಿದೊಡೆ ಆರೇನು ಮಾಡುವರು?
ಪಾಯಸ ಜರಿದು ಮದ್ಯವ ಕುಡಿದರೆ ಆರೇನು ಮಾಡುವರು?
ಅರಿದರಿದು ಗುಹೇಶ್ವರನ ಶರಣರಲಿ ವಾದಿಸಿದರೆ ಆರೇನು ಮಾಡುವರು!!
                              --- ಅಲ್ಲಮಪ್ರಭು





Get this widget | Track details | eSnips Social DNA

ಹಂಸೆ ಹಾರಿತ್ತು!

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ
ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು
ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ


.................ಅಲ್ಲಮ ಪ್ರಭು


Get this widget | Track details | eSnips Social DNA

ಶನಿವಾರ, ಮೇ 08, 2010

ವಚನದಲ್ಲಿ ಪ್ರಣವ

ಪ್ರಣವ ನನಗೆ  ತುಂಬಾ ಇಷ್ಟವಾಗುವ ಹೆಸರು. ಅಲ್ಲದೆ ವಚನಗಳೂ ಕೂಡ.  ಸುಮ್ಮನೆ ಪ್ರಣವದ ಬಗ್ಗೆ ವಚನಗಳು ಏನು ಮಾತಾಡುತ್ತವೆ ಅಂತ ಗೂಗಲಿಸಿದಾಗ ನನಗೆ ಕಂಡ ಕೆಲ ವಚನಗಳು.  ಇವು ಇಂಟರ್ನೆಟ್ ನಲ್ಲಿ ಸಿಕ್ಕ ಕೆಲವಷ್ಟೇ. ಮುಂದೆ ಸಿಕ್ಕಿದರೆ ಸೇರಿಸುತ್ತೇನೆ.

೧.
ಪ್ರಣವಾರೂಢನು ಪ್ರಣವ ಸ್ವರೂಪನು ಪ್ರಕೃತಿ ಸೌಂಜ್ಞನು ಷಢಂಗ ಸಮರಸ ನಮ್ಮ ಕೂಡಲಸಂಗಮ ದೇವ

೨.
ಪ್ರಣವವನುಚ್ಚರಿಸುವ ಅಪ್ರಾಮಾಣಿಕರೆಲ್ಲರೂ
ಪ್ರಣವಮಂತ್ರಾರ್ಥವನೋದಿ ಮಂತ್ರಾರ್ಥವನರಿಯರು
ಪ್ರಣವ ಓಂ ನಮಃ ಶಿವಾಯ ಪ್ರಣವ ಓಂ ನಮಃ ಶಿವಾಯ
ಪ್ರಣವ ಓಂ ನಮಃ ಶಿವಾಯ ಎಂದುವು ಶ್ರುತಿಗಳೆಲ್ಲಾ
ಪ್ರಣವ ಓಂ ಭರ್ಗೋ ದೇವ ಎಂದುವು ಶ್ರುತಿಗಳೆಲ್ಲಾ
ಕೂಡಲಸಂಗನನರಿಯದ ದ್ವಿಜರೆಲ್ಲಾ ಭ್ರಮಿತರು

೩.
ಸುನಾದ ಬಿಂದು ಪ್ರಣವಮಂತ್ರದಗ್ರದ ಕೊನೆಯಲೈದುವುದೆ
ಸೋಹಂ ಸೋಹಂ ಎಂದೆನುತ್ತಿದ್ದಿತ್ತು
ಕೋಹಂ ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ
ಯತೋ ವಾಚೋ ನಿವರ್ತಂತೆ ಅಪ್ರಾಪ್ಯ ಮನಸಾ ಸಹ
ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ
ಇಂತೆಂದುದಾಗಿ
ಅಗಮ್ಯ ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲ


೪.

ಪೃಥ್ವೀ ಅಪ್ಪು ತೇಜ ವಾಯು ಆಕಾಶ ನಿರಂಜನದೇವಾ
ನಿಮ್ಮ ಮಹಿಮೆಯ ಪ್ರಣವಸ್ವರೂಪಂಗಲ್ಲದೆ
ಕಾಣಲಾರಿಗೆಯೂ ಬಾರದಯ್ಯಾ
ಜ್ಞಾನ ಜ್ಯೋತಿ ಧ್ಯಾನದಿಂದ ನಾಳಶುದ್ಧದ್ವಾರನಾಗಿ
ಆರಾಧಿಸಿ ಕಂಡೆ ನಮ್ಮ ಕೂಡಲಸಂಗಮದೇವನ

೫.
ಅಣು ರೇಣು ಮಧ್ಯದ ಪ್ರಣವದಾಧಾರ
ಭುವನಾಧೀಶನೊಬ್ಬನೆಯಯ್ಯಾ. 
ಇದೆ ಪರಿಪೂರ್ಣ ವೆಂದೆನ್ನದನ್ಯದೈವವ ಸ್ಮರಿಸುವ
ಭವಿಯನೆಂತು ಭಕ್ತನೆಂಬೆನೈ ರಾಮನಾಥ ?
........................................ಜೇಡರ ದಾಸಿಮಯ್ಯ

ಶನಿವಾರ, ಏಪ್ರಿಲ್ 17, 2010

ಪ್ರಣವ - ಸವಿತೃ - ಇಷ್ಟಲಿಂಗ

"ಪ್ರಣವ - ಸವಿತೃ - ಇಷ್ಟಲಿಂಗ" ಗಳ ಸಂಬಂಧವನ್ನು ಹೇಳುವ ಒಂದು ವಚನವನ್ನು ತುಂಬಾ ಹಿಂದೆ ರಾಜಾಜಿನಗರದ ಲೈಬ್ರರಿಯಲ್ಲಿ ನೋಡಿದ್ದೆ. ನನ್ನ ನೆನಪಿನಿಂದ ಅದು ಹಾರಿ ಹೋಗಿತ್ತು. ಅದಕ್ಕಾಗಿ ಹುಡುಕ್ತ ಇದ್ದೆ. ಇಂದು ವಿಜಯನಗರದ ಲೈಬ್ರರಿಯಲ್ಲಿ  ಸಿಕ್ತು. ಇದು ಅಂದು ನಾನು ಓದಿದ ವಚನಕ್ಕಿಂತ ಪಾಠದಲ್ಲಿ ಭಿನ್ನವಾಗಿ ಕಂಡರೂ ಒಳಾರ್ಥ ಒಂದೇ ಅನ್ನಿಸುತ್ತಿದೆ.

ಪ್ರಣವದ ಅರ್ಥವನ್ನು ಗಾಯತ್ರಿ ಮಂತ್ರದ ಉದಾಹರಣೆಯನ್ನು ತೆಗೆದುಕೊಂಡು ಅದು ಇಷ್ತಲಿನ್ಗೊಪಾಸನೆಯಲ್ಲೇ ಒಳಗೊಳ್ಳುತ್ತೆ ಅಂತ ಅಲ್ಲಮ ಪ್ರಭುಗಳು ಹೇಳ್ತಾ ಇದ್ದಾರೆ.



ಪ್ರಣವವನುಚ್ಚರಿಸುವ ಪ್ರಾಮಾಣಿಕರೆಲ್ಲರೂ
ಪ್ರಣವ ಮಂತ್ರದರ್ಥವ ತಿಳಿದು ನೋಡಿರೇ


ಪ್ರಣವ ನಾಹಂ ಎಂದುದೇ ?
ಪ್ರಣವ ಸೋಹಂ ಎಂದುದೇ?
ಪ್ರಣವ ಕೋಹಂ ಎಂದುದೇ ?
ಪ್ರಣವ ಚಿದಹಂ ಎಂದುದೇ ಎನ್ನಲಾಗಿ
ಪ್ರಣವ ಇದಹಂ ಎಂದುದೇ ಎನ್ನಲಾಗಿ


ಪ್ರಣವ ಭರ್ಗೋ ದೇವಸ್ಯ ಧೀಮಹಿ ಎಂದುದು
ಸವಿತ: ಪದಮಂಗ:ಸ್ಯಾತ್ ಭರ್ಗಸ್ತು ಲಿಂಗಮೇವ ಚ
ಧೀಮಹಿ ಪದವಿತ್ರೇಷಾಂ ಗಾಯತ್ಯ್ರಾಂ ಲಿಂಗಸಂಬಂಧ: ಎಂಬುದಾಗಿ
ಪ್ರಣವದರ್ಥ ತಾನೇ ನಿಮ್ಮ ಮಯವು ಗುಹೇಶ್ವರಾ!



........................................


ಅಥರ್ವಶಿರೋಪನಿಷತ್ತಿನಲ್ಲಿ ಈ ಕೆಳಗಿನಂತೆ ಹೇಳಿದ್ದಾರೆ.

"ಪ್ರಾಣಾನ್ ಸರ್ವಾನ್ ಪರಮಾತ್ಮನಿ ಪ್ರಣಾಮಯತೀತಿ ತಸ್ಮಾತ್ ಪ್ರಣವ: "
ಯಾವುದರಿಂದ ಸಮಸ್ತ ಪ್ರಾಣ ವೃತ್ತಿಯು ಪರಮಾತ್ಮನಲ್ಲಿ ಲೀನವಾಗುವುದೋ ಅದು ಪ್ರಣವ.


ಪಾಣಿನಿಯು ಪ್ರಣವಕ್ಕೆ "ಅಫಲು" ಅನ್ನೋ ಅರ್ಥ ಹೇಳಿದ್ದಾನೆ. ಅಂದರೆ ವ್ಯಾಪಕವಾದದ್ದು.


ಇತರ ಅರ್ಥಗಳು / ವಿವರಣೆಗಳು 

........................................

It is known as the pranav mantra which means, something that pervades life or runs through prana or breath

........................................

The sound of AUM/OM is also called ‘Pranava’, meaning, that it is something that pervades life, existent as a vibration (dwani) - throughout creation and the universe - in every single minutest atom and runs through our prana or breath.  
........................................

Maharshi Patanjali also says in his Yog Sootr:


Tasya vachakha Pranavha -- " The indicator of
Parmatama i.e his name is Pranav (OM).

.......................................

Pranav means humming. The sound of one’s own nerve system. This sound is like a swarms  of bees, or a thousand Vinas playing in the distance. It is strong , inner experience. The meditator is taught to inwardly transform the sound  into inner light which lights up one’s thoughts  and bask in blissful consciousness of light.

Pranav is also known as the sound of nadnadi sakti.

.......................................

ಪ್ರಣವ ಅಂದಾಕ್ಷಣ ಓಂ ಅಂತಾನೆ ನೆನಪಾಗುವುದರಿಂದ ಈ ಕೆಳಗಿನ ಕೆಲ ಸಾಲುಗಳು.

ಅವತ: ಇತಿ ಓಂ,

"ಅವ" ಧಾತುವಿಂದ ಓಂ ಹುಟ್ಟಿದೆ ಅಂತ ಹೇಳುತ್ತಾರೆ. ಹಾಗಾಗಿ
>ಸಂಸಾರ ಸಾಗರದಿಂದ "ಪಾರು ಗಾಣಿಸು"ವುದು ಯಾವುದೋ ಅದು ಪ್ರಣವ.
>ಅವಿದ್ಯೆ ಮತ್ತು ಅದರ ದುಷ್ಪರಿಣಾಮಗಳಿಂದ ಯಾವುದು ರಕ್ಷಿಸುವುದೋ ಅದು ಓಂ.

ಈ ಮೂಲ ಧಾತುವಿನ ಆಧಾರದ ಮೇಲೆ ಈ ಕೆಳಗಿನಂತೆ ಓಂ ನ ವ್ಯಾಖ್ಯಾನವನ್ನು ಮಾಡಿದ್ದಾರೆ.
೧. ರಕ್ಷಣ
೨. ಗತಿ,
೩. ಕಾಂತಿ
೪. ಪ್ರೀತಿ
೫. ತೃಪ್ತಿ
೬. ಅವಗಮ ಪ್ರವೇಶ
೮. ಶ್ರವಣ
೯. ಸ್ವಮಯರ್ಥ
೧೦.ಯಾಚನ
೧೧. ಇಚ್ಚಾಕ್ರಿಯ
೧೨. ಇಚ್ಚಾಯಾಮ
೧೩. ದೀಪ್ತಿ
೧೪. ವ್ಯಾಪ್ತಿ
೧೫. ಆಲಿಂಗನ
೧೬. ಅವಹಿಂಸಾಯಾತ್
೧೮. ಅವದಾಸೆ
೧೯. ಭೋಗ
೨೦. ವೃದ್ದಿ

ಇನ್ನು ಓಂ ಅನ್ನುವ ಅಕ್ಷರ ಅ ಉ ಮ ಎಂಬ ಅಕ್ಷರಗಳು ಸೇರಿ ಲೋಪ ಸಂಧಿಯಾಗಿ ಓಂ ಆಗಿದೆ ಅನ್ನುವುದು, ಅನುಭವಕ್ಕಷ್ಟೇ ಸಿಗಬಲ್ಲ ತುರ್ಯಾವನ್ನೂ ಸೇರಿಸಿಕೊಂಡು ಮೂರೂವರೆ ಮಾತ್ರೆಯ ಅಕ್ಷರ ಅನ್ನುವುದು ಬಹು ಪ್ರಸಿದ್ದ ವಿವರಣೆ.

ಶನಿವಾರ, ಏಪ್ರಿಲ್ 03, 2010

ಬಯಲು

ಬಯಲು ಬಯಲನೆ ಬಿತ್ತಿ
ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯ
ಬಯಲು ಜೀವನ ಬಯಲು ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯ
ನಿಮ್ಮಯ ಪೂಜಿಸಿದವರು ಮುನ್ನವೇ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆನು ಗುಹೇಶ್ವರಾ
                    ..........ಅಲ್ಲಮ ಪ್ರಭು

Get this widget |Track details |eSnips Social DNA

ಶುಕ್ರವಾರ, ಏಪ್ರಿಲ್ 02, 2010

ದೇವಲೋಕ - ಮರ್ತ್ಯಲೋಕ

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ.

ನುಡಿದರೆ?!

ನುಡಿದರೆ ಮುತ್ತಿನ ಹಾರದ೦ತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯ೦ತಿರಬೇಕು,
ನುಡಿದರೆ ಲಿ೦ಗ ಮಚ್ಚಿ ಅಹುದುದಹುದೆನ್ನಬೇಕು,
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸ೦ಗಮದೇವ ನೆಂತೊಲಿವನಯ್ಯಾ ?
 ............ಬಸವಣ್ಣ   

Get this widget |Track details |eSnips Social DNA

ಶನಿವಾರ, ಜನವರಿ 09, 2010

ಘನ ಪಾಠ

ವೇದಗಳು ಬರವಣಿಗೆ ಪ್ರೌಡಾವಸ್ಥೆಗೆ ಬರುವ ಮುಂಚೆಯೇ  ಹುಟ್ಟಿದವು ಅನ್ನೋದು ಒಂದು ಜನಪ್ರಿಯ ವಾದ.


ವೇದಗಳು ಮೊದಲು ಮೊದಲು ಆರಂಭವಾಗಿದ್ದು ಯಜ್ಞಕಾಗಿಯೇ. ( ನಂತರದ ಕಾಲಘಟ್ಟದಲ್ಲಿ ವೇದಗಳನ್ನು "ವಿಶೇಷ" ವಾಗಿ ಅರ್ಥ ಮಾಡಿಕೊಳ್ಳಲಾಯಿತು! ). ಈ ಯಜ್ಞಗಳು ಅಂದಿನ ಅನೇಕರಿಗೆ ಹೊಟ್ಟೆ ಪಾಡಿನ ಕಾಯಕವಾದದ್ದರಿಂದ , ವೇದಗಳನ್ನು ಅಂದರೆ ತನ್ನ ಕುಲಕಸುಬಿನ ಮೂಲ ಸಾಮಗ್ರಿಯನ್ನು ಉಳಿಸಿಕೊಳ್ಳುವುಸು ಅಂದಿನ ಜನರಿಗೆ ತುಂಬಾ ಅವಶ್ಯವಾಗಿತ್ತು. 


ಆದರೆ ಬರವಣಿಗೆ ರೂಡಿ ಇಲ್ಲದ ಸಮಯದಲ್ಲಿ ಈ ವೇದಗಳನ್ನೂ ಹೇಗೆ ಉಳಿಸಿಕೊಳ್ಳುವುದು? ಪೀಳಿಗೆಯಿಂದ ಪೀಳಿಗೆಗೆ 'ಮಾತಿನ ಮೂಲಕ' ದಾಟಿಸಿಯೇ ಉಳಿಸಿಕೊಳ್ಳಬೇಕಾದಂತ ಪರಿಸ್ಥಿತಿ ಅಂದಿನ ಜನರಿಗಿತ್ತು. 


ಹಾಗಾಗಿ ಪೀಳಿಗೆಯಿಂದ ನಂತರದ ಪೀಳಿಗೆ, ಗುರುವಿಂದ ಶಿಷ್ಯ ಕೇವಲ ಕೇಳಿಯೇ ಕಲಿತಿದ್ದರಿಂದ ಕಾಲಾಂತರದಲ್ಲಿ ಈ ವೇದಗಳನ್ನು ಶ್ರುತಿ ಅಂತ ಕರೆಯೋ ಅಭ್ಯಾಸವೂ ಶುರು ಆಯ್ತು. 


ಬರು ಬರುತ್ತಾ ವೇದಗಳ ಮೂಲ ಉಚ್ಚಾರ ಬದಲಾಗುತ್ತಿದ್ದಂತೆ , ವೇದಗಳನ್ನು / ವೇದಗಳ ಶಬ್ದಗಳ ಸ್ಪಷ್ಟತೆ ಮತ್ತು ಶೈಲಿಯನ್ನು ಮೂಲ ರೂಪವಾಗಿಯೇ ಉಳಿಸಿಕೊಳ್ಳುವ ಅವಶ್ಯಕತೆ ಅಂದಿನ ಜನರಿಗೆ ಬಿತ್ತು. 


ಈ ಕಾರಣವಾಗಿಯೇ ವೇದಗಳನ್ನು ಕಲಿಯಲು / ಅರ್ಥ ಮಾಡಿಕೊಳ್ಳಲು ಊರು ಗೋಲುಗಳಾದ ವೇದಾಂಗ ಗಳು ಹುಟ್ಟಿದವು. 


ಯಾವುದೇ ಸ್ವರಗಳೂ ಬದಲಾಗದಂತೆ ಯಾವುದೇ ಶಬ್ದ / ಅಕ್ಷರಗಳನ್ನೂ ಕಳೆದುಕೊಳ್ಳದಂತೆ ವೇದಗಳನ್ನು ಕಾಪಾಡಿಕೊಂಡು ಬರಲು ಕೆಲ ನೀತಿ ನಿಯಮಗಳನ್ನು ಅವರು ಮಾಡಿದರು.  


ಪ್ರತಿ ಪದದ ಒಂದೊಂದು ಅಕ್ಷರವನ್ನು ಉಚ್ಚರಿಸಲು 'ಇಂತಿಷ್ಟು ಸಮಯ' ಬೇಕು ಅನ್ನೋ ಮಾನದಂಡವನ್ನು ಅವರು ನಿಗದಿಪಡಿಸಿದರು.ಮತ್ತು ಈ ಸಮಯದ basic unit ಅನ್ನು ಅವರು 'ಮಾತ್ರೆ' ಅಂತ ಕರೆದರು. ಒಂದು ಪದ / ಅಕ್ಷರ ತನ್ನ ಮೂಲ ರೀತಿಯಲ್ಲೇ ಹುಟ್ಟಲು ಅದು ದೇಹದ ಯಾವ ಭಾಗದಿಂದ ಹುಟ್ಟುತ್ತೆ / ಹುಟ್ಟಬೇಕು ಮತ್ತು ಆಗ ಉಸಿರಿನ ಪ್ರಮಾಣ ಎಷ್ಟಿರಬೇಕು ಅನ್ನೋದನ್ನು ಗಮನಿಸಿದರು.  


ಮಂತ್ರಗಳು ತಮ್ಮ ಮೂಲ ಉಚ್ಚಾರಣೆ ಶೈಲಿಯನ್ನು ಕಳೆದುಕೊಳ್ಳದಂತೆ ಉಳಿಸಿಕೊಳ್ಳಲು ಮಾಡಿದ ಅನೇಕ ಪ್ರಯತ್ನಗಳಲ್ಲಿ "ಪಾಠ" ಗಳೂ ಒಂದು. 


ವಾಕ್ಯ, ಪದ, ಕ್ರಮ, ಜಟ , ಮಾಲ, ಶಿಖಾ, ರೇಖಾ, ಧ್ವಜ, ದಂಡ, ರಥ,ಘನ , ಇತ್ಯಾದಿ 



ಪದ ಪಾಠ ಮತ್ತು ವಾಕ್ಯ ಪಾಠಗಳು "ಪ್ರಕೃತಿ" ಪಾಠಗಳು ಅಂತಾರೆ. ಅಂದ್ರೆ ಸಹಜವಾಗಿ ಪದಗಳನ್ನು ಹಿಂದೆ ಮುಂದೆ ಮಾಡದೆ ನೇರವಾಗಿ ಹೇಳುವುದು.  


ಉಳಿದವು, ಸರಳೀಕರಿಸಿ ಹೇಳಬೇಕು ಅಂದ್ರೆ 'ವಿಕೃತಿ' ಪಾಠಗಳು. ಅಂದ್ರೆ ಪದಗಳನ್ನು ಮತ್ತೆ ಮತ್ತೆ ಹಿಂದೆ ಮುಂದೆ ಮಾಡಿ ಹೇಳುತ್ತಾರೆ. 


ಮೇಲಿನವುಗಳಲ್ಲಿ  ನನ್ನ ಗಮನ ಸೆಳೆದ ಪಾಠಗಳು ಅಂದ್ರೆ 'ಜಟಾ ಪಾಠ' ಮತ್ತು "ಗಣ ಪಾಠ". 


ವೇದಗಳನ್ನು  "ಜಟಾ ಪಾಠ " ಶೈಲಿಯಲ್ಲಿ ಪಠನೆ ಮಾಡಬಲ್ಲಂತ ಕೌಶಲ್ಯವನ್ನು ಗಳಿಸಿಕೊಂಡಾತನಿಗೆ "ಜಟಾ ವಲ್ಲಭ" ಅನ್ನೋ ಬಿರುದು ಇರ್ತ ಇತ್ತು. ( ನನ್ನ collegue ಸರ್ ನೇಮ್ "ಜಟಾ ವಲ್ಲಭುಲು" ಮತ್ತ ಈ ವ್ಯಕ್ತಿಯ ಸರ್ನೇಮ್ ಎ ನನಗೆ ಈ ಪಾಠಗಳ ಬಗ್ಗೆ ತಿಳಿದುಕೊಳ್ಳಲು ಟ್ರಿಗ್ಗೆರ್ ಪಾಯಿಂಟ್! ). 


'ಜಟಾಪಾಠ' ಕ್ಕಿಂತ ಇನ್ನೂ ಹೆಚ್ಚಿನ ಎತ್ತರದ / ಕಷ್ಟದ ಶೈಲಿ ಅಂದ್ರೆ 'ಗಣ ಪಾಠ'. ಈ ಶೈಲಿಯನ್ನು ಕರಗತ ಮಾಡಿ ಕೊಂಡವನಿಗೆ "ಗಣಪಾಠಿ" ಅನ್ನೋ ಬಿರುದು ಇರ್ತ ಇತ್ತು. ಇದನ್ನು ಅತ್ಯುನ್ನತ ಮಟ್ಟದ ವೇದ ಪಠಣ ಶೈಲಿ ಅಂತ ಅನೇಕರು ಹೇಳುತ್ತಾರೆ. 


ಉದಾಹರಣೆಗೆ ಈ ಕೆಲ ನಮಕದ ಸಾಲುಗಳು. 


ನಮಃ ತಾರಾಯ  
ನಮಃ ಶಂಭವೇ ಚ ಮಯೋ ಭವೇ ಚ 
ನಮಃ ಶಂಕರಾಯ ಚ ಮಯಸ್ಕರಾಯ ಚ 
ನಮಃ ಶಿವಾಯ ಚ ಶಿವತರಾಯ ಚ


ಘನಪಾಠ ದಲ್ಲಿ ಹಾಡಿದಾಗ ಕೆಳಗಿನಂತೆ ಸುಂದರವಾಗಿ ಮೂಡಿ ಬರುತ್ತೆ. 


Get this widget | Track details | eSnips Social DNA
ಘನ ಪಾಠ ದಲ್ಲಿ ಗಾಯತ್ರಿಯೂ ಇಷ್ಟವಾಯಿತು. (ಕೆಳಗೆ ಕೇಳಬಹುದು)

Get this widget | Track details | eSnips Social DNA